ಮಹಾರಾಷ್ಟ್ರ ಪಾಲಿಕೆ ಚುನಾವಣೆಯ ಫಲಿತಾಂಶ ನಿನ್ನೆ ಹೊರಬಿದ್ದಿದೆ. ಚುನಾವಣೆಯಲ್ಲಿ ಗೌರಿ ಲಂಕೇಶ್ ಹತ್ಯೆ ಆರೋಪಿ, ಗ್ಯಾಂಗ್‌ಸ್ಟರ್‌ಗಳ ಸಂಬಂಧಿಕರು ಸೇರಿದಂತೆ ದೋಷಪೂರಿತರು ಗೆಲುವು ಕಂಡಿರುವುದು, ಭರ್ಜರಿ ಮತ ಗಳಿಸಿರುವುದು ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೆಲವು ವಿಜೇತರು ಜೈಲಿನಲ್ಲೇ ತಮ್ಮ ವಿಜಯದ ಸಂಭ್ರಮಾಚರಣೆ ಮಾಡಿದ್ದಾರೆ!
ಪುಣೆಯಲ್ಲಿ, ಮೊಮ್ಮಗನ ಹತ್ಯೆಗೆ ಸಂಬಂಧಿಸಿದಂತೆ ಪ್ರಸ್ತುತ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಸೂರ್ಯಕಾಂತ್ ಅಲಿಯಾಸ್ ಬಂಡು ಅಂಡೆಕರ್ ಅವರ ಇಬ್ಬರು ಸಂಬಂಧಿಕರು ಪಾಲಿಕೆ ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. ಪುಣೆಯಲ್ಲಿ, ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಬಂಡು ಅಂಡೆಕರ್ ಅವರ ಸೊಸೆ ಸೋನಾಲಿ ಅಂಡೆಕರ್ ಮತ್ತು ಅವರ ಅತ್ತಿಗೆ ಲಕ್ಷ್ಮಿ ಅಂಡೆಕರ್ ಅವರನ್ನು ಕಣಕ್ಕಿಳಿಸಿತ್ತು. ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಕ್ಕಾಗಿ ಅಜಿತ್ ಪವಾರ್ ಅವರ ಎನ್‌ಸಿಪಿ ಟೀಕೆಗೆ ಗುರಿಯಾಗಿತ್ತು.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ | ಗೌರಿ ಲಂಕೇಶ್ ಹತ್ಯೆ ಪ್ರಮುಖ ಆರೋಪಿ ಕಣದಲ್ಲಿ; ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ!
ಸೋನಾಲಿ ಅಂಡೆಕರ್ ಎನ್‌ಸಿಪಿಯ ಮಾಜಿ ಕಾರ್ಪೊರೇಟರ್ ವನರಾಜ್ ಅಂಡೆಕರ್ ಪತ್ನಿ. 2024ರ ಸೆಪ್ಟೆಂಬರ್ 1ರಂದು ಪುಣೆಯ ನಾನಾ ಪೇಠ್ ಪ್ರದೇಶದಲ್ಲಿ ವನರಾಜ್ ಅಂಡೆಕರ್ ಹತ್ಯೆಯಾಗಿದೆ. ಆಸ್ತಿ ವಿವಾದದ ಕಾರಣ ವನರಾಜ್ ಅವರ ಇಬ್ಬರು ಸಹೋದರಿಯರಲ್ಲಿ ಒಬ್ಬರ ಪತಿ ಗಣೇಶ್ ಕೊಮ್ಕರ್ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದಾದ ಒಂದು ವರ್ಷದಲ್ಲೇ 2025ರಲ್ಲಿ ಗಣೇಶ್ ಕೊಮ್ಕರ್ ಅವರ 19 ವರ್ಷದ ಮಗ ಆಯುಷ್ ಕೊಮ್ಕರ್ ಅವರನ್ನು ಕೊಲೆ ಮಾಡಿ ಸೇಡು ತೀರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಆಯುಷ್ ಕೊಮ್ಕರ್ ಕೊಲೆ ಪ್ರಕರಣದಲ್ಲಿ ಬಂಡು ಅಂಡೆಕರ್, ಅವರ ಮಗ ಕೃಷ್ಣ ಅಂಡೆಕರ್, ಸೋನಾಲಿ ಅಂಡೆಕರ್, ಲಕ್ಷ್ಮಿ ಅಂಡೆಕರ್ ಮತ್ತು ಇತರರನ್ನು ಬಂಧಿಸಲಾಗಿತ್ತು. ಬಂಡು, ಸೋನಾಲಿ ಮತ್ತು ಲಕ್ಷ್ಮಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ ಎನ್‌ಸಿಪಿ ಇಬ್ಬರು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಆದರೆ ಇಬ್ಬರೂ ಗೆಲುವು ಕಂಡಿದ್ದಾರೆ!
ಸೋನಾಲಿ ಅಂಡೆಕರ್ ಮಾಜಿ ಶಾಸಕ ಮತ್ತು ಶಿವಸೇನಾ ನಾಯಕ ರವೀಂದ್ರ ಧಾಂಗೇಕರ್ ಅವರ ಪತ್ನಿ ಪ್ರತಿಭಾ ಧಾಂಗೇಕರ್ ಅವರನ್ನು ಸೋಲಿಸಿದ್ದರೆ, ಲಕ್ಷ್ಮಿ ಬಿಜೆಪಿ ಅಭ್ಯರ್ಥಿ ರುತುಜಾ ಗಡಾಲೆ ಅವರನ್ನು ಅಲ್ಪ ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದಾರೆ. ಇನ್ನು ಈ ಗೆಲುವಿನ ಬಗ್ಗೆ ಮಾತನಾಡಿರುವ ಈ ಕುಟುಂಬದ ವಕೀಲ ಮಿಥುನ್ ಚವಾಣ್, “ಕುಟುಂಬವು ವರ್ಷಗಳಲ್ಲಿ ನಡೆಸಿದ ಸಾಮಾಜಿಕ ಕಾರ್ಯಗಳೇ ಈ ಗೆಲುವಿಗೆ ಕಾರಣ” ಎಂದು ಹೇಳಿಕೊಂಡಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಆರೋಪಿಗೆ ಗೆಲುವು!
ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಇತರ ಹಲವು ಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸಿ ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಗೆಲುವು ಕಂಡಿದ್ದಾರೆ. 2024ರ ನವೆಂಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ, ಪಂಗಾರ್ಕರ್ ಶಿವಸೇನೆಗೆ ಸೇರಿದ್ದು, ಆದರೆ ಕೊಲೆ ಆರೋಪಿಯನ್ನು ಪಕ್ಷಕ್ಕೆ ಸೇರಿಸಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅದಾದ ಬಳಿಕ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಪಕ್ಷ ಪಂಗಾರ್ಕರ್ ಅನ್ನು ಪಕ್ಷಕ್ಕೆ ಸೇರಿಸಿರಲಿಲ್ಲ. ಆದರೆ ಈ ಸ್ಥಳೀಯ ಚುನಾವಣೆಯಲ್ಲಿ ಶಿಂದೆ ನೇತೃತ್ವದ ಶಿವಸೇನೆ ಮಾತ್ರ ಈ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಈ ಮೂಲಕ ಪಂಗಾರ್ಕರ್‌ಗೆ ಬೆಂಬಲ ನೀಡುತ್ತಿದೆಯೇ ಎಂಬ ಚರ್ಚೆಯೂ ಇತ್ತು. ಇದೀಗ ಪಂಗಾರ್ಕರ್ ಗೆಲುವು ಕಂಡಿದ್ದಾರೆ.
ಇದನ್ನು ಓದಿದ್ದೀರಾ? ಅಮೆರಿಕ ಪತ್ರಕರ್ತ ರೋಲೋ ರೋಮಿಗ್ ಬರೆದ ‘ಗೌರಿ ಲಂಕೇಶ್’ ಹತ್ಯೆ ಕುರಿತ ಕೃತಿ ಪುಲಿಟ್ಜರ್ ಪ್ರಶಸ್ತಿಗೆ ನಾಮಿನೇಟ್
ಈ ಹಿಂದೆ 2001ರಿಂದ 2006ರವರೆಗೆ ಅವಿಭಜಿತ ಶಿವಸೇನೆಯ ಜಲ್ನಾ ಪುರಸಭೆಯ ಸದಸ್ಯರಾಗಿದ್ದರು. 2011ರಲ್ಲಿ ಟಿಕೆಟ್ ನಿರಾಕರಿಸಿದ ನಂತರ, ಬಲಪಂಥೀಯ ಹಿಂದೂ ಜನಜಾಗೃತಿ ಸಮಿತಿಗೆ ಸೇರಿದ್ದರು. 2018ರ ಆಗಸ್ಟ್‌ನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಕಚ್ಚಾ ಬಾಂಬ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಪಂಗಾರ್ಕರ್ ಬಂಧನ ಮಾಡಿತ್ತು.
ಸ್ಫೋಟಕ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದಾರೆ.
ಗೌರಿ ಲಂಕೇಶ್ ಹತ್ಯೆಯ ಸಂಚಿನಲ್ಲಿ ಭಾಗಿಯಾದ, ಹಂತಕರಿಗೆ ಶಸ್ತ್ರಾಸ್ತ್ರ ಒದಗಿಸಿದ ಹಾಗೂ ತರಬೇತಿ ನೀಡಿದ ಆರೋಪವೂ ಪಂಗಾರ್ಕರ್ ಮೇಲಿದೆ. ಗೌರಿ ಹತ್ಯೆ ಆರೋಪಿ ಪಂಗಾರ್ಕರ್‌ಗೆ 2024ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ. ಪ್ರಸ್ತುತ ಪ್ರಕರಣದ ವಿಚಾರಣೆ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ.





