ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ. ಈ ಮಧ್ಯೆಯೇ ಪುನರ್ವಸತಿ ಪರಿಹಾರ ಕಲ್ಪಿಸಿಕೊಡುವಂತೆ ನಿರಾಶ್ರಿತರು ಹೈಕೋರ್ಟ್ ಮೆಟ್ಟಿಲೇರಿರುವುದಾಗಿ ತಿಳಿದುಬಂದಿದೆ.
ಕೋಗಿಲು ಲೇಔಟ್ನಲ್ಲಿ ಅಕ್ರಮ ಶೆಡ್ಗಳನ್ನು ಜಿಬಿಎ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಇದೀಗ ಅಲ್ಲಿದ್ದ ನಿರಾಶ್ರಿತರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸ್ಥಳೀಯ ಸಾಮಾಜಿಕ ಕಾರ್ಯಕರ್ತೆ ಜೈಬಾ ತಬಸ್ಸುಮ್ ಸೇರಿದಂತೆ ಸಂತ್ರಸ್ತರು ಹೈಕೋರ್ಟಿಗೆ ಪಿಐಎಲ್ ಸಲ್ಲಿಸಿದ್ದು, ಪುನರ್ವಸತಿ ಪರಿಹಾರ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ.
“30 ವರ್ಷಗಳಿಂದ ಕೋಗಿಲು ಬಡಾವಣೆಯಲ್ಲಿ ವಾಸಿಸುತ್ತಿದ್ದು, ಇದೀಗ ವಸೀಂ, ಫಕೀರ್ ಕಾಲೋನಿಗಳ ತೆರವಿನಿಂದಾಗಿ ಇಲ್ಲಿನ ಜನರು ವಸತಿ ಕಳೆದುಕೊಂಡಿದ್ದಾರೆ. ಯಾವುದೇ ನೋಟಿಸ್ ನೀಡದೆ ಏಕಾಏಕಿ ಬಂದು ಮನೆಗಳಲ್ಲಿದ್ದ ಗ್ಯಾಸ್ ಸಿಲಿಂಡರ್ ಅನ್ನು ಮಾತ್ರ ತೆಗೆಯಲು ಬಿಟ್ಟಿದ್ದಾರೆ. ಮೂಲಭೂತ ಅವಶ್ಯಕತೆಗಳಾದ ಬಟ್ಟೆ, ಪಾತ್ರೆಗಳನ್ನು ಕೂಡ ತೆಗೆಯಲು ಜಿಬಿಎ ಅಧಿಕಾರಿಗಳು ಬಿಟ್ಟಿಲ್ಲ. ಮಕ್ಕಳ ಪುಸ್ತಕ, ಬ್ಯಾಗ್ಗಳು ಕೂಡ ಅವಶೇಷಗಳ ಅಡಿಯಲ್ಲಿ ಸಿಲುಕಿದೆ. ಇದರಿಂದಾಗಿ 300ಕ್ಕೂ ಅಧಿಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ಪರ್ಯಾಯ ಸೌಕರ್ಯ ಕೂಡ ಕಲ್ಪಿಸಲು ಮುಂದಾಗಿಲ್ಲ. ಏಕಾಏಕಿ ಬಂದು ತೆರವುಗೊಳಿಸಿದ್ದಾರೆ. ಯಾವುದೇ ಕಟ್ಟಡಗಳನ್ನು ತೆರವುಗೊಳಿಸುವುದಕ್ಕೂ ಮುನ್ನ ಮಾಹಿತಿ ನೀಡಬೇಕು ಎಂಬ ಮಾರ್ಗಸೂಚಿಯನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಸೂಚಿಸಿದೆ. ಆದರೆ, ಜಿಬಿಎ ಅಧಿಕಾರಿಗಳು ಸುಪ್ರೀಂ ಕೋರ್ಟಿನ ಮಾರ್ಗಸೂಚಿಗಳನ್ನು ಧಿಕ್ಕರಿಸಿ ಏಕಾಏಕಿ ಜೆಸಿಬಿ ತಂದು ತೆರವುಗೊಳಿಸಿದ್ದಾರೆ. ಇದರಿಂದಾಗಿ ಮೂಲಭೂತ ಹಕ್ಕಿಗೂ ಘನತೆ ಉಂಟಾಗಿದೆ. ಹೀಗಾಗಿ ಪುನರ್ವಸತಿ, ಪರಿಹಾರ ಕಲ್ಪಿಸಿಕೊಡಬೇಕು” ಎಂದು ಹೈಕೋರ್ಟಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಸಂತ್ರಸ್ತರ ಪರವಾಗಿ ಹೈಕೋರ್ಟ್ ವಕೀಲರಾದ ನಾಗರತ್ನಂ ಕೆ, ಸೌಧ ಅಕ್ಕರಂಗಡಿ, ಲಕ್ಷ್ಮಿ ಕೇಶವ್ ಶ್ರೀನಿವಾಸನ್ ವಕಾಲತ್ತು ವಹಿಸಿದ್ದಾರೆ.
ಇದನ್ನು ಓದಿದ್ದೀರಾ? ಕೋಗಿಲು ಬಡಾವಣೆ ವಿಚಾರ | ಅರ್ಹರಿಗಷ್ಟೇ ಜ.2ಕ್ಕೆ ಮನೆಗಳ ವಿತರಣೆ; ಸಚಿವ ಜಮೀರ್ ಸ್ಪಷ್ಟನೆ
ಕೋಗಿಲು ಲೇಔಟ್ನಲ್ಲಿ ಅಕ್ರಮ ಮನೆಗಳ ತೆರವಿನಿಂದ ನಿರಾಶ್ರಿತರಾದವರಿಗೆ ಜನವರಿ 2ರಂದು ಸರ್ಕಾರ ಬೈಯ್ಯಪ್ಪನಹಳ್ಳಿಯಲ್ಲಿ ಫ್ಲ್ಯಾಟ್ ನೀಡಲು ಮುಂದಾಗಿದೆ. ಈ ನಡುವೆ ಅರ್ಹರಿಗೆ ಮಾತ್ರ ಮನೆ ನೀಡುವುದಾಗಿ ಸರ್ಕಾರ ತಿಳಿಸಿದ್ದು, ನಿರಾಶ್ರಿತರ ದಾಖಲೆಗಳನ್ನ ಪರಿಶೀಲನೆ ನಡೆಸಿದೆ. ಈ ಮಧ್ಯೆ ಅಕ್ರಮ ವಲಸಿಗರಿಗೆ ಮನೆ ನೀಡದಂತೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.





