ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡುವ ವಿಚಾರಕ್ಕೆ ಸ್ಪಷ್ಟನೆ ನೀಡಿರುವ ವಸತಿ ಸಚಿವ ಜಮೀರ್ ಅಹಮದ್ ಖಾನ್, “ಅರ್ಹರಿಗಷ್ಟೇ ಮನೆ ವಿತರಣೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಜನವರಿ 2ರಂದು ಮನೆಗಳ ವಿತರಣೆ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಸತಿ ಸಚಿವ ಜಮೀರ್ ಅಹಮದ್ ಖಾನ್, “ಯಲಹಂಕ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು ಹಿನ್ನೆಲೆಯಲ್ಲಿ ಅರ್ಹ ಸಂತ್ರಸ್ತರಿಗೆ ಬಿಬಿಎಂಪಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಪರ್ಯಾಯವಾಗಿ ಶಾಶ್ವತ ವಸತಿ ವ್ಯವಸ್ಥೆ ಮಾಡಿಕೊಡುವ ಬಗ್ಗೆ ದಾಖಲೆ ಪರಿಶೀಲನೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.
“ಈ ವಿಚಾರದಲ್ಲಿ ಅರ್ಹರಿಗೆ ಮಾತ್ರ ವಸತಿ ವ್ಯವಸ್ಥೆ ಮಾಡಿಕೊಡುವುದು ಸರ್ಕಾರದ ಉದ್ದೇಶ. ಹೀಗಾಗಿ ತರಾತುರಿ ಮಾಡದೆ ಸಮಗ್ರವಾಗಿ ದಾಖಲೆ ಪರಿಶೀಲನೆ ಮಾಡಲು ಮುಖ್ಯಮಂತ್ರಿಯವರು ಸೂಚನೆ ನೀಡಿದ್ದು, ಕಂದಾಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಆ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜನವರಿ ಒಂದರಂದು ಉದ್ದೇಶಿಸಲಾಗಿದ್ದ ಮನೆಗಳ ವಿತರಣೆ ಜನವರಿ 2ಕ್ಕೆ ಮುಂದೂಡಿಕೆ ಮಾಡಲಾಗಿದೆ” ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಕೋಗಿಲೆ ಲೇಔಟ್‌ಗೆ ಬಿಜೆಪಿ ನಿಯೋಗ ಭೇಟಿ: ಮನೆ ನೀಡುವುದಕ್ಕೆ ವಿರೋಧ
ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಶೆಡ್ ತೆರವು ಮತ್ತು ನಿರಾಶ್ರಿತರಿಗೆ ಕಾಂಗ್ರೆಸ್ ಸರ್ಕಾರದಿಂದ ಮನೆ ಕೊಡುವ ವಿಚಾರ ಸಂಬಂಧ ಇಂದು ಬಿಜೆಪಿ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನು ಓದಿದ್ದೀರಾ? ವಿಬಿ-ಜಿ ರಾಮ್ ಜಿ ಕಾಯ್ದೆ: ಮನರೇಗಾ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ಕೋಗಿಲು ಲೇಔಟ್ ಪ್ರದೇಶಕ್ಕೆ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿದಂತೆ ಮತ್ತಿತರ ನಿಯೋಗ ಭೇಟಿ ಕೊಟ್ಟು ಪರಿಶೀಲನೆ ನಡೆಸಿತು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, “ಇಲ್ಲಿನ ನಿವಾಸಿಗಳು ಕೇವಲ 6 ತಿಂಗಳ ಹಿಂದೆ ಬಂದಿದ್ದಾರೆಂಬ ಮಾಹಿತಿ ಇದೆ. ಇವರಿಗೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಇತರ ದಾಖಲೆಗಳನ್ನು ನೀಡಿದವರು ಯಾರು? ಸತ್ಯಸತ್ಯತೆ ಹೊರಬರಲು ಎನ್‌ಐಎ ತನಿಖೆ ಅಗತ್ಯವಿದೆ. ಈ ಪ್ರದೇಶದಲ್ಲಿ ಕಟ್ಟಡಗಳ ನಿರ್ಮಾಣ ಆಗಿರೋದು ಇತ್ತೀಚೆಗೆ. ಇಲ್ಲಿ ವಾಸಿಸುತ್ತಿರುವವರು ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು. ರಾಜ್ಯದ ತೆರಿಗೆದಾರರಿಗೆ ಈ ಸೌಲಭ್ಯಗಳು ಸಿಗುತ್ತಿಲ್ಲ. ಸುಮಾರು 600 ಕೋಟಿ ರೂಪಾಯಿ ಮೌಲ್ಯದ ಜಮೀನನ್ನು ಬಾಂಗ್ಲಾದೇಶದವರಿಗೆ ಸಿದ್ದರಾಮಯ್ಯ ಸರ್ಕಾರ ನೀಡಲು ಹೊರಟಿದೆ. ಇದು ಬೆಂಗಳೂರನ್ನು ಮಿನಿ ಬಾಂಗ್ಲಾದೇಶವನ್ನಾಗಿ ಮಾಡುವ ಪ್ರಯತ್ನ” ಎಂದು ಆರ್.ಅಶೋಕ್ ಆರೋಪಿಸಿದ್ದಾರೆ.





