ಹಾಸನಕ್ಕೆ ಕೃಷ್ಣ ಬೈರೇಗೌಡರ ಉಸ್ತುವಾರಿ: ರಾಜಕೀಯ ಚಿತ್ರಣ ಬದಲಾಗಬಹುದೇ?

Date:

ಹಾಸನ ಜಿಲ್ಲಾ ಕಾಂಗ್ರೆಸ್‌ಗೆ ಸಮರ್ಥ ನಾಯಕತ್ವವಿಲ್ಲದೆ ಬಣ ರಾಜಕೀಯದಿಂದ ಪಕ್ಷ ಸೊರಗಿದೆ. ಜಿಪಂ, ತಾಪಂ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ನಿಷ್ಠಾವಂತ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನು ಕೃಷ್ಣ ಬೈರೇಗೌಡರು ಎಷ್ಟರಮಟ್ಟಿಗೆ ನಿಭಾಯಿಸಿ ಯಶಸ್ವಿಯಾಗುತ್ತಾರೆ ಎಂಬುದು ಸದ್ಯದ ಪ್ರಶ್ನೆ...

ಒಲ್ಲದ ಮನಸ್ಸಿನಿಂದಲೇ ಒಂದೂ ಕಾಲು ವರ್ಷ ಹಾಸನ ಜಿಲ್ಲಾ ಉಸ್ತುವಾರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದ ಕೆ ಎನ್‌ ರಾಜಣ್ಣ ಅವರನ್ನು ಸಹಕಾರ ಖಾತೆಯಿಂದ ವಜಾಗೊಳಿಸುವ ಪ್ರಕರಣಕ್ಕಿಂತ ಮುಂಚಿತವಾಗಿ ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಅವರನ್ನು ಹಾಸನದ ನೂತನ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಸಿಎಂ ಸಿದ್ದರಾಮಯ್ಯ ನೇಮಿಸಿ, ಅವರಿಗೆ ಹೊಸ ಜವಾಬ್ದಾರಿ ನೀಡಿದ್ದರು.

ಕೃಷ್ಣ ಬೈರೇಗೌಡರ ನೇಮಕವು ಹಾಸನ ಜಿಲ್ಲೆಯ ರಾಜಕೀಯ ಮತ್ತು ಆಡಳಿತಾತ್ಮಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಯೂತ್ ಕಾಂಗ್ರೆಸ್‌ನಿಂದ ರಾಜಕಾರಣ ಪ್ರವೇಶಿಸಿದ ಕೃಷ್ಣ ಬೈರೇಗೌಡ ಅವರು ರಾಜಕಾರಣದಲ್ಲಿ ಅತ್ಯುನ್ನತ ಸ್ಥಾನ ಗಳಿಸಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. 2013ರಿಂದ 18ರ ಅವಧಿಯಲ್ಲಿ ಕೃಷಿ ಖಾತೆಯನ್ನು ದಕ್ಷವಾಗಿ ನಿಭಾಯಿಸಿದ್ದರು. ಪ್ರಸ್ತುತ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಜನ ಸ್ನೇಹಿ ಆಡಳಿತ ನೀಡುತ್ತಿದ್ದಾರೆ.

ಕೃಷ್ಣ ಬೈರೇಗೌಡ ಅವರು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿದ್ದು ಜಿಲ್ಲೆಯ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆ ದೃಷ್ಟಿಯಿಂದ ನೆರವಾಗಲಿದೆ ಎಂಬ ಆಶಯವನ್ನು ಕಾಂಗ್ರೆಸ್‌ ಪಾಳಯ ಹೊಂದಿದೆ. ಆದರೆ, ಸಮಸ್ಯೆಗಳ ಸುಳಿಯಲ್ಲಿ ನಲುಗುತ್ತಿರುವ ಜಿಲ್ಲೆಯನ್ನು ಅಭಿವೃದ್ದಿಯತ್ತ ತೆಗೆದುಕೊಂಡು ಹೋಗುವಂತಹ ಗುರುತರವಾದ ಜವಾಬ್ದಾರಿಯೂ ಕೃಷ್ಣ ಬೈರೇಗೌಡ ಹೆಗಲೇರಿದೆ. ಮುಖ್ಯವಾಗಿ ಪಕ್ಷ ಸಂಘಟನೆ ಜವಾಬ್ದಾರಿ ಸುತ್ತ ಹಲವು ನಿರೀಕ್ಷೆಗಳು ಗರಿಗೆದರಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಾಸನ ಬೇರೆ ಜಿಲ್ಲೆಗಳಂತೆ ಅಲ್ಲ. ಎರಡು ದಶಕಕ್ಕೂ ಹೆಚ್ಚಿನ ಕಾಲ ದೇವೇಗೌಡರ ಕುಟುಂಬದ ರಾಜಕೀಯ ಪಾರಮ್ಯಕ್ಕೆ ಹಾಸನ ಒಳಪಟ್ಟಿದೆ. ಇತ್ತೀಚೆಗೆ ಎಚ್‌.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ, ಮಕ್ಕಳಾದ ಪ್ರಜ್ವಲ್‌ ರೇವಣ್ಣ ಹಾಗೂ ಸೂರಜ್‌ ರೇವಣ್ಣ ಎಲ್ಲರೂ ಲೈಂಗಿಕ ಹಗರಣ, ಅಪಹರಣ ಮತ್ತಿತರ ಪ್ರಕರಣಗಳನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದರಿಂದ ಗೌಡರ ಕುಟುಂಬದ ಪಾರುಪತ್ಯ ಕ್ಷೀಣಿಸತೊಡಗಿದೆ.

‘ಹಾಸನ ರಿಪಬ್ಲಿಕ್’ ಎಂದು ಕರೆಯಿಸಿಕೊಳ್ಳಲು ಕಾರಣರಾದ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರ ತವರು ಹಾಗೂ ಅವರ ರಾಜಕೀಯ ಆಡುಂಬೊಲವಾಗಿದ್ದ ಹಾಸನ ಜಿಲ್ಲಾ ರಾಜಕೀಯ ತಲ್ಲಣಕ್ಕೊಳಗಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. ಸಂತ್ರಸ್ತೆಯ ಅಪಹರಣ ಕೇಸ್‌ನಲ್ಲಿ ಜಾಮೀನಿನ ಮೇಲೆ ಹೊರಗೆ ಇರುವ ಭವಾನಿ ರೇವಣ್ಣ ಮತ್ತು ಎಚ್‌ ಡಿ ರೇವಣ್ಣ ತನಿಖೆ ಎದುರಿಸುತ್ತಿದ್ದು, ಆ ಪ್ರಕರಣದಲ್ಲೂ ಶಿಕ್ಷೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದು ವೇಳೆ ಶಿಕ್ಷೆಯಾದಲ್ಲಿ ಹಾಸನ ಜಿಲ್ಲೆ ಸಂಪೂರ್ಣವಾಗಿ ಜೆಡಿಎಸ್‌ ನಿಂದ ಕೈತಪ್ಪಲಿದೆ.

ಇಂತಹ ಪರಿಸ್ಥಿತಿಯಲ್ಲಿ ಇರುವ ಅವಕಾಶವನ್ನು ಬಳಸಿಕೊಂಡು ಪಕ್ಷ ಕಟ್ಟಲು ಕಾಂಗ್ರೆಸ್‌ ಈಗಿನಿಂದಲೇ ತಯಾರಿ ನಡೆಸುತ್ತಿದೆ. ಜೊತೆಗೆ ಜೆಡಿಎಸ್‌ನ ಮೈತ್ರಿ ಪಕ್ಷವಾದ ಬಿಜೆಪಿ ಸಹ ಪಕ್ಷ ಸಂಘಟನೆಗೆ ತೆರೆ ಮರೆಯಲ್ಲೇ ಪ್ರಯತ್ನಿಸುತ್ತಿದೆ.

ಹಾಸನ ಜಿಲ್ಲೆಯನ್ನು ಗೌಡರ ಕುಟುಂಬದ ಭದ್ರಕೋಟೆಯಂತೆ ಕಾಪಾಡಿಕೊಂಡವರು ದೇವೇಗೌಡರ ಎರಡನೇ ಪುತ್ರ ಎಚ್‌ ಡಿ ರೇವಣ್ಣ ಮತ್ತವರ ಕುಟುಂಬ ಸದಸ್ಯರು. ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಮಾಜಿ ಸಂಸದ ಪುಟ್ಟಸ್ವಾಮಿಗೌಡ ಕುಟುಂಬದ ಕುಡಿ ಶ್ರೇಯಸ್ ಪಟೇಲ್ ಅವರು ಪ್ರಜ್ವಲ್‌ ರೇವಣ್ಣನನ್ನು ಸೋಲಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಚುನಾವಣಾ ಸಂದರ್ಭದಲ್ಲಿ ಹೊರಬಂದ ಪ್ರಜ್ವಲ್‌ನ ಲೈಂಗಿಕ ಹಗರಣ ಎಂಬುದು ಬಹುತೇಕ ಸಾಬೀತಾಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾನವಶಕ್ತಿ ಸದ್ಬಳಕೆಗೆ ಇದು ಸಕಾಲ: ಮೋದಿ ಮನಸ್ಸು ಮಾಡುವರೇ?

ಹಾಸನ, ಮಂಡ್ಯ, ರಾಮನಗರ ಹಾಗೂ ಮೈಸೂರು ಸೇರಿದಂತೆ ಹಳೇ ಮೈಸೂರು ಭಾಗದ ಒಕ್ಕಲಿಗ ಪ್ರಭಾವ ಉಳ್ಳ ಭದ್ರಕೋಟೆಗಳಲ್ಲಿ ದೇವೇಗೌಡರ ರಾಜಕೀಯ ವಾರಸುದಾರರು ತಮ್ಮದೇ ಅಧಿಪತ್ಯ ಹೊಂದಿದ್ದಾರೆ. ದೇವೇಗೌಡರ ಕುಟುಂಬದೊಳಗಿನ ಎರಡು ಪ್ರಬಲ ಉಪ ಕುಟುಂಬಗಳಿವೆ. ಒಂದು ಎಚ್ ಡಿ ರೇವಣ್ಣ ಮತ್ತು ಎಚ್ ಡಿ ಕುಮಾರಸ್ವಾಮಿ ಅವರದು. ರೇವಣ್ಣ ಅವರು ಹಾಸನದಲ್ಲಿ, ಕುಮಾರಸ್ವಾಮಿ ರಾಮನಗರ ಜಿಲ್ಲೆಯಲ್ಲಿ ತಮ್ಮ ಹಿಡಿತ ಸಾಧಿಸಿದ್ದಾರೆ.

ಕುಟುಂಬದ ಇತರ ಸದಸ್ಯರು ಕೂಡ ಬೇರೆ ಬೇರೆ ಕ್ಷೇತ್ರಗಳಲ್ಲಿ ರಾಜಕೀಯ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿ.ಎನ್. ಬಾಲಕೃಷ್ಣ (ಶ್ರವಣಬೆಳಗೊಳದಲ್ಲಿ) ಮತ್ತು ಅವರ ಸಹೋದರ ಡಾ.ಸಿ.ಎನ್. ಮಂಜುನಾಥ್ (ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಗೆದ್ದವರು) ಅವರು ದೇವೇಗೌಡರ ಮೊದಲ ಮಗಳು ಅನಸೂಯಾ ಅವರ ಪತಿ. ಡಾ ಎಚ್.ಡಿ. ರಮೇಶ್ ಅವರ ಪತ್ನಿ ಡಾ.ಸೌಮ್ಯಾ ರಮೇಶ್ ರಾಜಕೀಯ ಆಕಾಂಕ್ಷಿಯಾಗಿದ್ದು, ಅವರ ತಂದೆ ಡಿ.ಸಿ.ತಮ್ಮಣ್ಣ ಮದ್ದೂರು ಶಾಸಕರಾಗಿದ್ದರು.

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದು, ಪತ್ನಿ ಅನಿತಾ ಕುಮಾರಸ್ವಾಮಿ ಎರಡು ಬಾರಿ ಶಾಸಕಿಯಾಗಿದ್ದಾರೆ. ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸಂಸದ ಮತ್ತು ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಮೂರು ಬಾರಿ ವಿಫಲರಾಗಿದ್ದಾರೆ. ಇದೇ ವೇಳೆ ಎಚ್ ಡಿ ರೇವಣ್ಣ ಹಲವು ಬಾರಿ ಸಚಿವರಾಗಿದ್ದರು, ಅವರ ಪತ್ನಿ ಭವಾನಿ ರೇವಣ್ಣ ಅವರು ಜಿಲ್ಲಾ ಪಂಚಾಯಿತಿ ಸದಸ್ಯೆ ಆಗಿದ್ದು, ಶಾಸಕರಾಗುವ ಆಶಯದಲ್ಲೇ ಇದ್ದಾರೆ. ಅವರ ಮಕ್ಕಳಾದ ಪ್ರಜ್ವಲ್ ರೇವಣ್ಣ ಸಂಸದನಾಗಿ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಮತ್ತು ಡಾ. ಸೂರಜ್ ರೇವಣ್ಣ (ಎಂಎಲ್‌ಸಿ) ಆಗಿದ್ದು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

1991ರಲ್ಲಿ ಹೆಚ್‌ ಡಿ ದೇವೇಗೌಡರು ಹಾಸನ ಲೋಕಸಭೆ ಕ್ಷೇತ್ರವನ್ನು ಪ್ರವೇಶ ಮಾಡುತ್ತಾರೆ. ಅವರ ಪೂರ್ವದಲ್ಲಿ ಎಚ್‌ ಸಿ ಶ್ರೀಕಂಠಯ್ಯ ಹಾಸನ ಜಿಲ್ಲೆಯ ಸಂಸದರಾಗಿದ್ದರು. ಇವರು ಎಸ್‌ ಎಂ ಕೃಷ್ಣ ಸರ್ಕಾರದಲ್ಲಿ ಪ್ರಬಲ ಖಾತೆಗಳನ್ನು ನಿಭಾಯಿಸಿ ತೆರೆಗೆ ಸರಿದಿದ್ದಾರೆ. 1996ರಿಂದ 1997ರ ಅವಧಿಯಲ್ಲಿ ಪ್ರಧಾನಿ ಪಟ್ಟಕ್ಕೆ ಏರಿದ ಹೆಚ್‌ ಡಿ ದೇವೇಗೌಡರು ಕುರ್ಚಿಯಿಂದ ಕೆಳಗೆ ಇಳಿದ ಮೇಲೆ ಎದುರಿಸಿದ 1999ರ ಹಾಸನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಿ ಪುಟ್ಟಸ್ವಾಮಿ ಎದುರು ದೇವೇಗೌಡರು ಸೋಲು ಅನುಭವಿಸುತ್ತಾರೆ. 2004ರಲ್ಲಿ ಹಾಸನದಿಂದ ಮತ್ತೆ ಸ್ಪರ್ಧಿಸಿ ಜಯ ಸಾಧಿಸುತ್ತಾರೆ. 2009 ಮತ್ತು 2014ರಲ್ಲೂ ಗೆಲುವು ಕಾಣುವ ಮೂಲಕ ಹ್ಯಾಟ್ರಿಕ್‌ ಜಯ ಕಾಣುತ್ತಾರೆ.

ಮಕ್ಕಳ ಭವಿಷ್ಯವನ್ನು ಭದ್ರ ಮಾಡುವ ಆಲೋಚನೆಯಲ್ಲಿದ್ದ ಭವಾನಿ ಮತ್ತು ರೇವಣ್ಣ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಕೋಟೆಯನ್ನು ಮೊಮ್ಮಗ ಪ್ರಜ್ವಲ್‌ ರೇವಣ್ಣಗೆ ಬಿಟ್ಟುಕೊಡುವಂತೆ ಒತ್ತಡ ತಂದು ಯಶಸ್ವಿಯೂ ಆಗುತ್ತಾರೆ. ಆಗ ದೇವೇಗೌಡರು ತುಮಕೂರು ಕ್ಷೇತ್ರದ ಕಡೆ ಮುಖ ಮಾಡಿ ಆ ಚುನಾವಣೆಯಲ್ಲಿ ಸೋಲುತ್ತಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಯಿದ್ದರೂ ದೇವೇಗೌಡರು ಸೋಲಲು ಕೆ ಎನ್‌ ರಾಜಣ್ಣ ಅವರ ಅಸಹಕಾರವೇ ಕಾರಣ ಎನ್ನಲಾಗಿದೆ. ದೇವೇಗೌಡರ ಕುಟುಂಬವನ್ನು ಕಟ್ಟಾ ವಿರೋಧಿಸುವ ನಿಲುವಿನಿಂದಲೇ ಈ ಬಾರಿ ಅವರನ್ನು ಹಾಸನದ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ಕೊನೆಗೆ ಕೆ ಎನ್‌ ರಾಜಣ್ಣ ಅವರೇ ತಮಗೆ ಹಾಸನ ಜಿಲ್ಲಾ ಉಸ್ತುವಾರಿ ಸ್ಥಾನ ಬೇಡ ಎಂದು ಸಿಎಂ ಬಳಿ ಮನವಿ ಮಾಡಿದ್ದರು.

ಇನ್ನು ಒಂದು ಕಾಲದಲ್ಲಿ ದೇವೇಗೌಡರ ಪ್ರಬಲ ಎದುರಾಳಿಯಾಗಿದ್ದ ಜಿ ಪುಟ್ಟಸ್ವಾಮಿ ಅವರ ಮೊಮ್ಮಗ ಶ್ರೇಯಸ್‌ ಪಟೇಲ್‌ ಈಗ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್‌ ರೇವಣ್ಣನನ್ನು ಸೋಲಿಸಿ ಹಾಸನದ ಸಂಸದರಾಗಿದ್ದಾರೆ. ಇದೇ ಶ್ರೇಯಸ್‌ ಪಟೇಲ್‌ 2023ರಲ್ಲಿ ಹೆಚ್‌ ಡಿ ರೇವಣ್ಣ ಅವರಿಗೆ ಹೊಳೆನರಸೀಪುರದಲ್ಲೂ ಭಾರೀ ಪೈಪೋಟಿ ನೀಡಿದ್ದರು.

ಹೊಳೆನರಸೀಪುರ ಕ್ಷೇತ್ರವಂತೂ ಜೆಡಿಎಸ್‌ನ ಭದ್ರಕೋಟೆಯಾಗಿಯೇ ಉಳಿದಿದೆ. 1962ರಿಂದ 2023ರವರೆಗೂ ನಡುವೆ ಎರಡು ಅವಧಿ ಬಿಟ್ಟರೆ ಉಳಿದ ಅವಧಿಯಲ್ಲಿ ದೇವೇಗೌಡರ ಕುಟುಂಬವೇ ಇಲ್ಲಿ ರಾಜಕೀಯವಾಗಿ ಮೆರೆದಿದೆ. 1962ರಿಂದ 1985ರವರೆಗೂ ದೇವೇಗೌಡರು ಹೊಳೆನರಸೀಪುರದಿಂದಲೇ ರಾಜಕೀಯವಾಗಿ ಬೆಳೆಯುತ್ತಾರೆ. 1994ರಲ್ಲಿ ಮಗ ಎಚ್‌ ಡಿ ರೇವಣ್ಣ ಮೊದಲ ಬಾರಿಗೆ ಶಾಸಕರಾಗಿ ಕ್ಷೇತ್ರದ ರಾಜಕೀಯದಲ್ಲಿ ಆಟ ಆರಂಭಿಸಿದ್ದಾರೆ. 1999ರಲ್ಲಿ ಕಾಂಗ್ರೆಸ್‌ನ ಎ ದೊಡ್ಡೇಗೌಡ ಗೆದ್ದಿದ್ದು ಬಿಟ್ಟರೆ ಇಲ್ಲಿ ಈವರೆಗೂ ಎಚ್‌ ಡಿ ರೇವಣ್ಣ ಅವರ ಪಾರುಪತ್ಯವೇ ಮುಂದುವರಿದಿದೆ.

ಬದಲಾದ ಕಾಲಘಟ್ಟದಲ್ಲಿ ದೇವೇಗೌಡರ ಕುಟುಂಬದ ರಾಜಕೀಯ ಅತಂತ್ರದಲ್ಲಿದೆ. ಅತ್ತ ಕುಮಾರಸ್ವಾಮಿ ಸಹ ಮಗನ ರಾಜಕೀಯ ಭವಿಷ್ಯ ಭದ್ರಮಾಡಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಮಂಡ್ಯ ಲೋಕಸಭೆ, ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಮಗ ನಿಖಿಲ್‌ ರಾಜಕೀಯ ಬೆಳೆಯುವ ಮೊದಲೇ ಮುದುಡಿದೆ. ಪ್ರಯತ್ನ ಬಿಡದ ಕುಮಾರಸ್ವಾಮಿ ಮುಂದೆ ಹಾಸನಕ್ಕೂ ನಿಖಿಲ್‌ನನ್ನು ಕರೆತರುವ ಪ್ರಯತ್ನವನ್ನು ಅಲ್ಲಗಳೆಯುವಂತಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ವಹಿಸಿಕೊಂಡ ನಂತರ ಪ್ರಥಮ ಬಾರಿಗೆ ಜಿಲ್ಲೆಯ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲು ಬಂದಿದ್ದ ಸಚಿವ ಕೃಷ್ಣ ಬೈರೇಗೌಡರ ಎದುರೇ ಕಾರ್ಯಕರ್ತರು, ಮುಖಂಡರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಹಾಸನ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಮತ್ತೊಮ್ಮೆ ಬಯಲಾಗಿದೆ. ಜಿಲ್ಲಾ ಉಸ್ತುವಾರಿಯಾದ ತಕ್ಷಣ ಪಕ್ಷವನ್ನು ಬಲಪಡಿಸಿಬಿಡುತ್ತಾರೆ ಎಂದು ಹೇಳಲಾಗದು. ಆಂತರಿಕ ಸಮಸ್ಯೆಯಲ್ಲಿ ಪಕ್ಷ ಮುಳುಗಿದೆ. ಮೊದಲು ಅದನ್ನು ಸರಿಪಡಿಸಬೇಕಾದ ಜವಾಬ್ದಾರಿ ಕೃಷ್ಣ ಬೈರೇಗೌಡ ಅವರ ಮುಂದಿದೆ.

ಹಾಸನ ಜಿಲ್ಲಾ ಕಾಂಗ್ರೆಸ್‌ಗೆ ಸಮರ್ಥ ನಾಯಕತ್ವವಿಲ್ಲದೆ ಬಣ ರಾಜಕೀಯದಿಂದ ಪಕ್ಷ ಸೊರಗಿದೆ. ಜಿಪಂ, ತಾಪಂ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ನಿಷ್ಠಾವಂತ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನು ಕೃಷ್ಣ ಬೈರೇಗೌಡರು ಎಷ್ಟರಮಟ್ಟಿಗೆ ನಿಭಾಯಿಸಿ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾದುನೋಡಬೇಕು.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...