ಕೇಂದ್ರ ಸರ್ಕಾರವು 29 ಕಾರ್ಮಿಕ ಕಾನೂನುಗಳನ್ನು ಕ್ರೋಢೀಕರಿಸಿ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ. ದೇಶದ ಕಾರ್ಮಿಕ ಕಾನೂನುಗಳ ಚೌಕಟ್ಟನ್ನು ಸರಳಗೊಳಿಸಿ, ಆಧುನೀಕರಿಸುವ ಗುರಿಯನ್ನು ಈ ಕಾರ್ಮಿಕ ಕಾನೂನುಗಳು ಹೊಂದಿವೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಆದರೆ ವಿವಿಧ ಕಾರ್ಮಿಕ ಸಂಘಟನೆಗಳು ಈ ಸಂಹಿತೆಗಳಿಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರವು ಶುಕ್ರವಾರ ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ದುಡಿಯುವ ಪರಿಸ್ಥಿತಿಗಳ ಸಂಹಿತೆಯನ್ನು ಜಾರಿಗೊಳಿಸಿದೆ. ಈ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ಮತ್ತು ರಕ್ಷಣೆಯನ್ನು ಮೊಟಕುಗೊಳಿಸುತ್ತದೆ. ಬಂಡವಾಳಶಾಹಿ ಹಾಗೂ ಉದ್ಯಮಗಳ ಪರವಾಗಿವೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿದೆ.
ಇದನ್ನು ಓದಿದ್ದೀರಾ? ಹಾಸನ | ಕರಾಳ ಕಾರ್ಮಿಕ ಸಂಹಿತೆ ಜಾರಿಗೆ ವಿರೋಧ: ಕಾರ್ಮಿಕರ ಹೋರಾಟ ಯಶಸ್ವಿ
ನಾಲ್ಕು ಕಾರ್ಮಿಕ ಸಂಹಿತೆಗಳು
ವೇತನ ಸಂಹಿತೆ, 2019: ಈ ಸಂಹಿತೆಯು ಕನಿಷ್ಠ ವೇತನ ಕಾಯಿದೆ, ವೇತನ ಪಾವತಿ ಕಾಯಿದೆ, ಬೋನಸ್ ಪಾವತಿ ಕಾಯಿದೆ ಮತ್ತು ಸಮಾನ ಸಂಭಾವನೆ ಕಾಯಿದೆ ಸೇರಿದಂತೆ ನಾಲ್ಕು ಕಾನೂನುಗಳನ್ನು ಹೊಂದಿದೆ.
ಕೈಗಾರಿಕಾ ಸಂಬಂಧಗಳ ಸಂಹಿತೆ, 2020: ಈ ಸಂಹಿತೆಯು ಕಾರ್ಮಿಕ ಸಂಘಟನೆಗಳ ಕಾಯಿದೆ, ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ಕಾಯಿದೆ ಮತ್ತು ಕೈಗಾರಿಕಾ ವಿವಾದಗಳ ಕಾಯಿದೆಗಳನ್ನು ಬದಲಾಯಿಸುತ್ತದೆ. ಇದು ಉದ್ಯೋಗದಾತರಿಗೆ ನೌಕರರನ್ನು ನೇಮಿಸಿಕೊಳ್ಳುವ ಮತ್ತು ವಜಾಗೊಳಿಸುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಅಂದೆರೆ 300 ನೌಕರರವರೆಗಿನ ಕಂಪನಿಗಳು ಸರ್ಕಾರಿ ಅನುಮೋದನೆ ಇಲ್ಲದೆ ಕೆಲಸಗಾರರನ್ನು ವಜಾಗೊಳಿಸಬಹುದಾಗಿದೆ ಅಥವಾ ಘಟಕಗಳನ್ನು ಮುಚ್ಚಬಹುದಾಗಿದೆ. ಅಂದರೆ ಯಾವುದೇ ಸಮಯದಲ್ಲಿ ನಾವು ನಮ್ಮ ಕೆಲಸವನ್ನು ಕಳೆದುಕೊಳ್ಳಬಹುದು!
ಸಾಮಾಜಿಕ ಭದ್ರತಾ ಸಂಹಿತೆ, 2020: ಈ ಸಂಹಿತೆಯಲ್ಲಿ ಒಂಬತ್ತು ಸಾಮಾಜಿಕ ಭದ್ರತಾ ಕಾನೂನುಗಳನ್ನು ವಿಲೀನಗೊಳಿಸಲಾಗಿದೆ. ಇದು ಭವಿಷ್ಯ ನಿಧಿ (EPF), ನೌಕರರ ರಾಜ್ಯ ವಿಮಾ ಯೋಜನೆ (ESI), ಮತ್ತು ಗ್ರಾಚ್ಯುಟಿ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳ ವಿವರವನ್ನು ಹೊಂದಿದೆ. ಜತೆಗೆ ಅಸಂಘಟಿತ ಮತ್ತು ಗಿಗ್ ಕಾರ್ಮಿಕರಿಗೂ ಸಾಮಾಜಿಕ ಭದ್ರತೆಯ ನಿಬಂಧನೆಗಳನ್ನು ಹೊಂದಿದೆ.
ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ದುಡಿಯುವ ಪರಿಸ್ಥಿತಿಗಳ ಸಂಹಿತೆ 2020: ಈ ಸಂಹಿತೆಯು ಕಾರ್ಖಾನೆಗಳ ಕಾಯಿದೆ ಮತ್ತು ಗಣಿ ಕಾಯಿದೆ ಸೇರಿದಂತೆ 13 ಕಾರ್ಮಿಕ ಕಾನೂನುಗಳನ್ನು ಸಂಯೋನೆಯಾಗಿದೆ. ಕಾರ್ಮಿಕರ ಕೆಲಸದ ಪರಿಸ್ಥಿತಿಗಳು, ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಸುಧಾರಿಸುವತ್ತ ಈ ಕಾಯ್ದೆ ಗಮನಹರಿಸುತ್ತದೆ.
ಈ ಸಂಹಿತೆಗಳನ್ನು ಕಾರ್ಮಿಕ ಸಂಘಟನೆಗಳು ಕಾರ್ಮಿಕ ವಿರೋಧಿ ಮತ್ತು ಉದ್ಯೋಗದಾತರ ಪರವಾದ ಸಂಹಿತೆ ಎಂದು ಕರೆದಿದೆ. ಕಾರ್ಮಿಕರನ್ನು ಯಾವುದೇ ಸಂದರ್ಭದಲ್ಲಿ ವಜಾ ಮಾಡುವ ಅವಕಾಶವನ್ನು ಈ ಕಾಯ್ದೆಗಳು ಕಂಪನಿಗಳಿಗೆ ನೀಡುವುದರಿಂದ ಉದ್ಯೋಗ ಭದ್ರತೆಯನ್ನು ಕಡಿಮೆ ಮಾಡುತ್ತದೆ ಎಂದು ಕಾರ್ಮಿಕ ಸಂಘಟನೆಗಳು ಆತಂಕ ವ್ಯಕ್ತಪಡಿಸಿದೆ.
ಹಾಗೆಯೇ ಈವರೆಗೆ ನಮ್ಮ ಹಕ್ಕಿಗಾಗಿ ಹೋರಾಡುವ ಹಕ್ಕು ಇತ್ತು. ಆದರೆ ಈ ಸಂಹಿತೆಗಳು ನಾವು ಮುಷ್ಕರ ನಡೆಸುವ ಹಕ್ಕನ್ನೇ ಮೊಟಕುಗೊಳಿಸುತ್ತದೆ. ಮುಷ್ಕರಕ್ಕೆ ಹೋಗುವ ಕನಿಷ್ಠ 60 ದಿನಗಳ ಮೊದಲು ನೋಟಿಸ್ ನೀಡುವುದನ್ನು ಕಡ್ಡಾಯಗೊಳಿಸಲಾಗಿದ್ದು, ತ್ವರಿತ ಮುಷ್ಕರಗಳನ್ನು ಕಾನೂನುಬಾಹಿರಗೊಳಿಸುತ್ತದೆ. ಅಂದರೆ ಅನ್ಯಾಯದ ವಿರುದ್ಧ ಕಾರ್ಮಿಕರು ಹೋರಾಟ ನಡೆಸಲು 60 ದಿನ ಕಾಯಬೇಕು ಎಂದರ್ಥವೇ? ಎಂಬುದು ಕಾರ್ಮಿಕ ಸಂಘಟನೆಗಳ ಪ್ರಶ್ನೆಯಾಗಿದೆ.
ಈ ಸಂಹಿತೆಗಳು ಕಾರ್ಪೊರೇಟ್ ವಲಯಕ್ಕೆ ಅನುಕೂಲ ಮಾಡಿಕೊಡಲು ಕಾರ್ಮಿಕರ ಹಕ್ಕುಗಳು ಮತ್ತು ರಕ್ಷಣೆಯನ್ನು ಮೊಟಕುಗೊಳಿಸುತ್ತವೆ ಎಂದು ವಿರೋಧ ಪಕ್ಷಗಳು ಮತ್ತು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ಸಿಐಟಿಯು ಮುಖಂಡೆ ಎಸ್.ವರಲಕ್ಷ್ಮಿ, “ಕಾರ್ಮಿಕ ಸಂಹಿತೆಗಳು ಭಾರತದ ಬೆಳವಣಿಗೆಯನ್ನು ಕುಂಠಿತ ಮಾಡುವಂತದ್ದು. ದೇಶದಲ್ಲಿ ಈಗಾಗಲೇ ಆರ್ಥಿಕವಾಗಿ, ಸಾಮಾಜಿಕವಾಗಿ ಅಸಮಾನತೆಯಿದೆ. ಈ ಕಾರ್ಮಿಕ ಸಂಹಿತೆಗಳಿಂದಾಗಿ ದೊಡ್ಡ ಪ್ರಮಾಣದಲ್ಲಿ ಈ ಅಸಮಾನತೆ ಹೆಚ್ಚಾಗುತ್ತದೆ. ಆದ್ದರಿಂದ ಈ ಸಂಹಿತೆಗಳನ್ನು ಸರ್ಕಾರ ವಾಪಸ್ ಪಡೆಯಬೇಕು” ಎಂದು ಆಗ್ರಹಿಸಿದರು.
“ಶ್ರಮ ಶಕ್ತಿ ನೀತಿ 2025 ಅನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಕಡಿಮೆ ವೆಚ್ಚ, ಉತ್ತಮ ಗುಣಮಟ್ಟ ಎಂದು ಹೇಳಲಾಗುತ್ತದೆ. ಅದರ ವ್ಯಾಖ್ಯಾನದಂತೆ ಉತ್ಪಾದನೆಗೆ ಇರುವ ಕಚ್ಚಾ ವಸ್ತುಗಳ ವೆಚ್ಚವನ್ನು ಕಡಿಮೆ ಮಾಡಬೇಕು. ಆದರೆ ಸರ್ಕಾರ ಕಾರ್ಮಿಕರ ಮೇಲೆ ಮಾಡುವ ವೆಚ್ಚವನ್ನು ಕಡಿಮೆ ಮಾಡಲು ಈ ನೀತಿಯನ್ನು ಜಾರಿಗೆ ತಂದಿದೆ. ಇದು ದೇಶದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ. ಅಭಿವೃದ್ಧಿಗೆ ವಿರುದ್ಧವಾದುದ್ದು” ಎಂದು ಹೇಳಿದ್ದಾರೆ.
ಇನ್ನು ಈ ದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ಎಐಯುಟಿಯುಸಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಮೈಸೂರು ಮುದ್ದು ಕೃಷ್ಣ, “ಈ ಕಾನೂನುಗಳನ್ನು ಜಾರಿಗೆ ತಂದಿರುವುದು ಈ ದೇಶದ ಬಂಡವಾಳಶಾಹಿಗಳಿಗೆ ಹೆಚ್ಚಿನ ಪ್ರಮಾಣದ ಲಾಭ ಮಾಡಿಕೊಡಲೇ ಹೊರತು, ಕಾರ್ಮಿಕರ ಹಿತಾಸಕ್ತಿಗಾಗಿ ಅಲ್ಲ. ಉದ್ಯೋಗದ ಭದ್ರತೆಯೇ ಇಲ್ಲದಂತಾಗಿದೆ. ಮಾಲೀಕ ರಾತ್ರೋರಾತ್ರಿ ಕಂಪನಿ ಮುಚ್ಚಿ ಓಡಿಹೋಗಬಹುದೆಂಬ ನೀತಿಯನ್ನು ಸರ್ಕಾರ ಜಾರಿಗೊಳಿಸಿದೆ” ಎಂದು ದೂರಿದರು.
“ಮುಷ್ಕರ ಮಾಡುವ ಹಕ್ಕನ್ನೇ ಕಸಿದುಕೊಳ್ಳಲಾಗುತ್ತದೆ. 60 ದಿನಕ್ಕಿಂತ ಅಧಿಕ ದಿನ ನೋಟಿಸ್ ನೀಡಿ ಬಳಿಕ ಮುಷ್ಕರ ಮಾಡಬೇಕು ಎಂದು ಸಂಹಿತೆ ಹೇಳುತ್ತದೆ. ಇದು ಕಾರ್ಮಿಕರನ್ನು ಕಂಪನಿ ಮಾಲೀಕರು ಹೆದರಿಸಲು ಸಮಯಾವಕಾಶ ಕೊಟ್ಟಂತೆ. 60 ದಿನದಲ್ಲಿ ಹೋರಾಟವೇ ನಡೆಯದಂತೆ ನೋಡಿಕೊಳ್ಳುತ್ತಾರೆ. ತಮ್ಮ ಸಂಸ್ಥೆಯ ಅನ್ಯಾಯದ ವಿರುದ್ಧ ನಡೆಯುವ ಹೋರಾಟವನ್ನು ಹತ್ತಿಕ್ಕಲು ಸರ್ಕಾರವೇ ಕಾನೂನುಬದ್ಧವಾಗಿ ನೀಡುವ ಅವಕಾಶ ಇದಾಗಿದೆ” ಎಂದು ತಿಳಿಸಿದ್ದಾರೆ.
“ಇದು ಸಂಪೂರ್ಣವಾಗಿ ಕಾರ್ಮಿಕರ ವಿರುದ್ಧವಾದ ಮತ್ತು ಬಂಡವಾಳಶಾಹಿಗಳ ಪರವಾಗಿರುವಂತಹ ಕಾರ್ಮಿಕ ಸಂಹಿತೆಗಳು. ಚುನಾವಣೆ ಸಂದರ್ಭದಲ್ಲಿ ಈ ಬಂಡವಾಳಶಾಹಿಗಳು ಇವರಿಗೆ(ಬಿಜೆಪಿ) ದುಡ್ಡು ಕೊಟ್ಟಿದ್ದಾರೆ. ಅಂದಾನಿ, ಅದಾನಿ, ಟಾಟಾ, ಬಿರ್ಲಾ ಎಲ್ಲರೂ ದುಡ್ಡುಕೊಟ್ಟಿದ್ದಾರೆ. ಕಾರ್ಪೋರೇಟ್ ದೊರೆಗಳು ಚುನಾವಣೆಗೆ ದುಡ್ಡು ಕೊಟ್ಟಿರುವ ಕಾರಣ ಈಗ ಮೋದಿ ಸಾಹೇಬರು ಅವರ ಋಣ ತೀರಿಸುತ್ತಿದೆ” ಎಂದು ಆರೋಪಿಸಿದರು.
“ಈ ಕಾರ್ಮಿಕ ವಿರೋಧ ಕಾನೂನನ್ನು ಹಿಂಪಡೆಯಬೇಕು. ಈಗಾಗಲೇ ನಾವು ಹೋರಾಟ ನಡೆಸುತ್ತಿದ್ದೇವೆ. ಇದು ಆರಂಭವಷ್ಟೇ. ದೇಶದಾದ್ಯಂತ ಈ ಹೋರಾಟವನ್ನು ಮುಂದುವರೆಸುತ್ತೇವೆ, ದೊಡ್ಡ ಚಳವಳಿಯನ್ನು ಕಟ್ಟುತ್ತೇವೆ” ಎಂದು ತಿಳಿಸಿದರು.
ಅನ್ಯಾಯದ ವಿರುದ್ಧ ಹೋರಾಡುವುದು ಪ್ರಜಾಪ್ರಭುತ್ವ ನಮಗೆ ನೀಡಿರುವ ನಾಗರಿಕ ಹಕ್ಕು ಮತ್ತು ನಮ್ಮ ಜವಾಬ್ದಾರಿಯೂ ಹೌದು. ಆದರೆ ಈಗ ಕೇಂದ್ರ ಸರ್ಕಾರವು ಕಾರ್ಪೋರೇಟ್ ಸಂಸ್ಥೆಗಳ, ಮಾಲೀಕರ ಲಾಭಕ್ಕಾಗಿ ಕಾರ್ಮಿಕರನ್ನು ಬಲಿಪಡೆಯುವ, ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರವನ್ನು ನಡೆಸುತ್ತಿದೆ ಎಂಬುದು ಮಾತ್ರ ಈ ಕಾನೂನು ಸ್ಪಷ್ಟಪಡಿಸುತ್ತದೆ. ಹಾಗೆಯೇ ಈ ಕಾರ್ಮಿಕ ಸಂಹಿತೆಗಳು ನಮ್ಮ ಉದ್ಯೋಗ ಭದ್ರತೆಗೆ ಚ್ಯುತಿ ತರುವುದು ಖಚಿತ.





