ಲೇಹ್ ಅಪೆಕ್ಸ್ ಬಾಡಿ (LAB) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (KDA) ನಾಯಕರು ಜತೆಯಾಗಿ ಸೇರಿ ಲಡಾಖ್ ಬೇಡಿಕೆಗಳ ಹೊಸ ಕರಡನ್ನು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ. ಈ 29 ಪುಟಗಳ ಕರಡಿನಲ್ಲಿ ಲಡಾಖ್‌ಗೆ ಅನ್ನು 6ನೇ ಪರಿಚ್ಛೇದಕ್ಕೆ ಸೇರಿಸುವುದು, ರಾಜ್ಯ ಸ್ಥಾನಮಾನ ನೀಡುವುದು ಸೇರಿದಂತೆ ಸೆಪ್ಟೆಂಬರ್ 14ರಂದು ಲೇಹ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಬಂಧಿತರಾದವರಿಗೆ ಕ್ಷಮಾದಾನ ನೀಡುವಂತೆಯೂ ಆಗ್ರಹಿಸಲಾಗಿದೆ.
‘ಆರನೇ ಪರಿಚ್ಛೇದ ನಿಬಂಧನೆಗಳು ಮತ್ತು ರಾಜ ಸ್ಥಾನಮಾನ: ಲಡಾಖ್‌ನ ಕರಡು ಚೌಕಟ್ಟು’ (Sixth Schedule Provisions and a case for Statehood: Draft Framework for Ladakh) ಎಂಬ ಶೀರ್ಷಿಕೆಯ ಕರಡನ್ನು ನವೆಂಬರ್ 14ರಂದು ಲಡಾಖ್ ನಾಯಕರು ಕೇಂದ್ರಕ್ಕೆ ಸಲ್ಲಿಸಿದ್ದಾರೆ. ಈ ಬೇಡಿಕೆಯಲ್ಲಿ ಲಡಾಖ್ ರಾಜ್ಯವನ್ನು ಆರ್ಟಿಕಲ್ 371ರ ಅಡಿಯಲ್ಲಿ ಆರ್ಟಿಕಲ್ 371-K ಎಂದು ಸೇರ್ಪಡೆ ಮಾಡುವಂತೆ ಆಗ್ರಹಿಸಲಾಗಿದೆ.
ಇದನ್ನು ಓದಿದ್ದೀರಾ? ಲಡಾಖ್ ಸಂಘರ್ಷ: ಮಾತುಕತೆಗೂ ಮುನ್ನ ಬೇಡಿಕೆಗಳ ಹೊಸ ಕರಡು ಕೇಳಿದ ಕೇಂದ್ರ ಸರ್ಕಾರ
ಲಡಾಖ್ ಪ್ರಧಾನವಾಗಿ ಬುಡಕಟ್ಟು ಜನಾಂಗ ಇರುವ ಪ್ರದೇಶವಾಗಿದ್ದು, ಜನಸಂಖ್ಯೆಯ 90% ಕ್ಕಿಂತ ಹೆಚ್ಚು ಜನರು ಚಾಂಗ್ಪಾ, ಬಾಲ್ಟಿ, ಬೇಡಾ, ಬೋಟ್, ಬ್ರೋಕ್ಪಾ, ದರ್ದ್, ಗಾರಾ, ಮಾನ್ ಮತ್ತು ಪುರಿಗ್ಪಾ ಮುಂತಾದ ಬುಡಕಟ್ಟು ಜನಾಂಗಗಳಿಗೆ ಸೇರಿದವರು ಎಂದೂ ಕರಡಿನಲ್ಲಿ ಉಲ್ಲೇಖಿಸಲಾಗಿದೆ.
ಹಾಗೆಯೇ ಈ ಬುಡಕಟ್ಟು ಜನರು ಬಹುಸಂಖ್ಯೆಯಲ್ಲಿ ಇರುವ ಪ್ರದೇಶವು ಆರನೇ ಪರಿಚ್ಛೇದದಲ್ಲಿ ಸೇರ್ಪಡೆಯಾಗಬೇಕು ಎಂದು ಹೇಳುವ ಸಂವಿಧಾನದ 244 ಮತ್ತು 275ನೇ ವಿಧಿಗಳನ್ನೂ ಉಲ್ಲೇಖಿಸಲಾಗಿದೆ. ಹಾಗೆಯೇ ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂನಲ್ಲಿನ ಸ್ವಾಯತ್ತ ಮಂಡಳಿಗಳ ಯಶಸ್ಸಿನ ಬಗ್ಗೆಯೂ ಉಲ್ಲೇಖಿಸಲಾಗಿದೆ.
ಇನ್ನು ಬುಡಕಟ್ಟು ಜನಸಂಖ್ಯೆ ಅಧಿಕವಾಗಿರುವ ಕಾರಣದಿಂದಾಗಿ ಲಡಾಖ್ ಅನ್ನು ಆರನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡಬೇಕು ಎಂದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (ಎನ್‌ಸಿಎಸ್‌ಟಿ) 2019ರಲ್ಲಿ ಔಪಚಾರಿಕವಾಗಿ ಶಿಫಾರಸು ಮಾಡಿತು ಎಂಬುದನ್ನೂ ಕರಡಿನ ಮೂಲಕ ನೆನಪಿಸಲಾಗಿದೆ.
ಸ್ವಾಯತ್ತ ಮಂಡಳಿಗಳ ರಚನೆಯಾದ 20 ವರ್ಷಗಳಲ್ಲಿ ಚುನಾಯಿತ ಸಂಸ್ಥೆಗಳು ಜನರ ಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು ಎಂದು ಲಡಾಖ್ ಪ್ರದರ್ಶಿಸಿದೆ ಎಂದು ದಾಖಲೆ ಒತ್ತಿ ಹೇಳಿದೆ.
ರಾಜ್ಯ ಸ್ಥಾನಮಾನ ನೀಡುವುದು ಮತ್ತು ಶಾಸಕಾಂಗವನ್ನು ಸ್ಥಾಪಿಸುವುದು ಪ್ರಜಾಪ್ರಭುತ್ವ ಆಡಳಿತವನ್ನು ಬಲಪಡಿಸುತ್ತದೆ. ಎಲ್ಲರನ್ನೂ ಒಳಗೊಂಡ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ಸ್ಥಳೀಯ ಅಗತ್ಯಗಳನ್ನು ಉತ್ತಮವಾಗಿ ಪೂರೈಸಲು ಸಾಧ್ಯವಾಗುತ್ತದೆ. ಹೊಸ ಜಿಲ್ಲೆಗಳ ರಚನೆಯು ಲಡಾಖ್‌ನ ಎಲ್ಲಾ ಪ್ರದೇಶಗಳನ್ನು ಪ್ರತಿನಿಧಿಸಲು ಮೀಸಲಾದ ಶಾಸಕಾಂಗ ಸಂಸ್ಥೆಯ ಅಗತ್ಯವನ್ನು ಒತ್ತಿಹೇಳುತ್ತದೆ ಎಂದು ಕರಡು ಹೇಳಿದೆ.
ಇನ್ನು ಸೆಪ್ಟೆಂಬರ್ 14ರ ಹಿಂಸಾಚಾರದ ಬಳಿಕ ಸಾಮಾಜಿಕ ಕಾರ್ಯಕರ್ತ, ಪರಿಸರವಾದಿ ಸೋನಮ್ ವಾಂಗ್‌ಚುಕ್ ಸೇರಿದಂತೆ ಬಂಧನಕ್ಕೊಳಗಾದ ಎಲ್ಲರಿಗೂ ಸಾಮಾನ್ಯ ಕ್ಷಮಾದಾನವನ್ನು ಕರಡು ಕೋರಿದೆ. ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದು 80 ಮಂದಿ ಗಾಯಗೊಂಡಿದ್ದಾರೆ.





