ಲಡಾಖ್ ಪ್ರತಿನಿಧಿಗಳು ಅಕ್ಟೋಬರ್ 22ರಂದು ದೆಹಲಿಯಲ್ಲಿ ಗೃಹ ಸಚಿವಾಲಯದೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಲೇಹ್ ಅಪೆಕ್ಸ್ ಬಾಡಿ(LAB) ತಿಳಿಸಿದೆ. ಗೃಹ ಸಚಿವಾಲಯವು ನಮ್ಮನ್ನು ಮಾತುಕತೆಗೆ ಆಹ್ವಾನಿಸಿದೆ ಎಂದು ಎಲ್‌ಎಬಿ ಹೇಳಿದೆ.
ಲಡಾಖ್‌ಗೆ ರಾಜ್ಯ ಸ್ಥಾನಮಾನವನ್ನು ನೀಡಬೇಕು, ಆರನೇ ಪರಿಚ್ಛೇದಕ್ಕೆ ಸೇರ್ಪಡೆ ಸೇರಿದಂತೆ ಒಟ್ಟು ನಾಲ್ಕು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಲಡಾಖ್‌ನಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿದೆ. ಇತ್ತೀಚೆಗೆ ಲೇಹ್‌ನಲ್ಲಿ ಹಿಂಸಾಚಾರ ನಡೆದಿದ್ದು, ನಾಲ್ವರು ಸಾವನ್ನಪ್ಪಿ, 90 ಮಂದಿ ಗಾಯಗೊಂಡಿದ್ದಾರೆ. ಸೆಪ್ಟೆಂಬರ್ 14ರ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆ ನಡೆಯುತ್ತಿದೆ.
ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-4 | ಲಡಾಖಿನ ವಿದ್ಯಾರ್ಥಿಗಳ ಅಳಲು ಕೇಳುವವರಾರು?
ಲಡಾಖ್‌ನ ಬೇಡಿಕೆಗಳನ್ನು ಬೆಂಬಲಿಸಿ ಹಲವು ಬಾರಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಪರಿಸರವಾದಿ ಸೋನಮ್ ವಾಂಗ್‌ಚುಕ್ ಸೇರಿದಂತೆ 60ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಸೋನಮ್ ಅವರನ್ನು ಪ್ರಸ್ತುತ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ರಾಜಸ್ಥಾನದ ಜೈಲಿನಲ್ಲಿ ಇರಿಸಲಾಗಿದೆ. ಸೋನಮ್ ಬಿಡುಗಡೆಗೆ ಲಡಾಖ್ ಜನರು ಆಗ್ರಹಿಸುತ್ತಿದ್ದಾರೆ.
ಲೇಹ್ ಅಪೆಕ್ಸ್ ಬಾಡಿ (LAB) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (KDA) ನ ತಲಾ ಮೂವರು ಪ್ರತಿನಿಧಿಗಳು, ಲಡಾಖ್ ಸಂಸದ ಮೊಹಮ್ಮದ್ ಹನೀಫಾ ಜಾನ್ ಅವರೊಂದಿಗೆ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಲೇಹ್ ಅಪೆಕ್ಸ್ ಬಾಡಿ ಸಹ-ಅಧ್ಯಕ್ಷ ಚೆರಿಂಗ್ ಡೋರ್ಜೆ ಲಕ್ರುಕ್ ಭಾನುವಾರ ಹೇಳಿದ್ದಾರೆ.
“ಅಕ್ಟೋಬರ್ 22ರಂದು ಉಪ ಸಮಿತಿಯ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಗೃಹ ಸಚಿವಾಲಯವು ನಮಗೆ ತಿಳಿಸಿದೆ. ಎಲ್‌ಎಬಿ ಮತ್ತು ಕೆಡಿಎ ಎರಡನ್ನೂ ಸಭೆಗೆ ಆಹ್ವಾನಿಸಲಾಗಿದೆ. ನಮ್ಮನ್ನು ಆಹ್ವಾನಿಸುವ ಭಾರತ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ” ಎಂದು ಹೇಳಿದರು. ತನಿಖಾ ತಂಡದಲ್ಲಿ ಲಡಾಖ್‌ನ ಪ್ರತಿನಿಧಿಯನ್ನು ಸೇರಿಸಬೇಕೆಂದೂ ಎಲ್‌ಎಬಿ ಒತ್ತಾಯಿಸಿದೆ.





