ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು, ಆರನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಸೇರಿದ್ದಂತೆ ಹಲವು ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ನಡೆಸಲಾಗುತ್ತಿರುವ ಲಡಾಖ್ ಜನರ ಪ್ರತಿಭಟನೆಗೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾನುವಾರ ಬೆಂಬಲ ವ್ಯಕ್ತಪಡಿಸಿದ್ದಾರೆ. “ಅದ್ಭುತ ಜನರು, ಸಂಸ್ಕೃತಿ ಮತ್ತು ಸಂಪ್ರದಾಯಗಳು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ದಾಳಿಗೆ ಒಳಗಾಗಿವೆ” ಎಂದು ರಾಹುಲ್ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಬಿಜೆಪಿ 4 ಯುವಕರನ್ನು ಕೊಂದು ಸೋನಮ್ ವಾಂಗ್‌ಚುಕ್ ಅವರನ್ನು ಜೈಲಿಗೆ ಹಾಕುವ ಮೂಲಕ ಪ್ರತಿಕ್ರಿಯಿಸಿದೆ” ಎಂದೂ ದೂರಿದ್ದಾರೆ.
ಇದನ್ನು ಓದಿದ್ದೀರಾ? ಸೋನಮ್ ವಾಂಗ್‌ಚುಕ್ ಬಂಧನ: ಕೇಂದ್ರ ಸರ್ಕಾರ NSA ದುರ್ಬಳಕೆ ಮಾಡಿಕೊಳ್ಳುತ್ತಿದೆಯೇ?
“ಲಡಾಖ್‌ನ ಅದ್ಭುತ ಜನರು, ಸಂಸ್ಕೃತಿ ಮತ್ತು ಸಂಪ್ರದಾಯಗಳು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ದಾಳಿಗೆ ಒಳಗಾಗಿವೆ. ಲಡಾಖಿಗಳು ಧ್ವನಿ ಎತ್ತುವಂತೆ ಕೇಳಿಕೊಂಡರು. ಬಿಜೆಪಿ 4 ಯುವಕರನ್ನು ಕೊಂದು ಸೋನಮ್ ವಾಂಗ್‌ಚುಕ್ ಅವರನ್ನು ಜೈಲಿಗೆ ಹಾಕುವ ಮೂಲಕ ಪ್ರತಿಕ್ರಿಯಿಸಿದೆ. ಕೊಲೆ ನಿಲ್ಲಿಸಿ, ಹಿಂಸೆ ನಿಲ್ಲಿಸಿ, ಬೆದರಿಕೆ ನಿಲ್ಲಿಸಿ” ಎಂದು ರಾಹುಲ್ ಗಾಂಧಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
2019ರಲ್ಲಿ 370ನೆ ವಿಧಿ ರದ್ಧತಿ ಬಳಿಕ ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಹೋರಾಟ ನಡೆಯುತ್ತಿದೆ. ಸೆಪ್ಟೆಂಬರ್ 24ರಂದು ಲೇಹ್‌ನಲ್ಲಿ ಹಿಂಸಾಚಾರ ನಡೆದಿದ್ದು, ಪೊಲೀಸ್ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
Ladakh’s amazing people, culture, and traditions are under attack by the BJP and RSS.
— Rahul Gandhi (@RahulGandhi) September 28, 2025
Ladakhis asked for a voice. The BJP responded by killing 4 young men and jailing Sonam Wangchuk.
Stop the killing.
Stop the violence.
Stop the intimidation.
Give Ladakh a voice. Give them…
ಈ ಹಿಂಸಾಚಾರಕ್ಕೆ ಶಾಂತ ರೂಪದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರವಾದಿ ಸೋನಮ್ ವಾಂಗ್‌ಚುಕ್ ಅವರು ಕಾರಣ ಎಂದು ಆರೋಪಿಸಿರುವ ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ(ಎನ್‌ಎಸ್‌ಎ) ಅವರನ್ನು ಬಂಧಿಸಿದೆ. ಪಾಕಿಸ್ತಾನದೊಂದಿಗೆ ಸೋನಮ್ ಸಂಬಂಧ ಹೊಂದಿದ್ದಾರೆ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಸೋನಮ್ ಅವರನ್ನು ಜೋಧ್‌ಪುರ ಜೈಲಿನಲ್ಲಿ ಇರಿಸಲಾಗಿದೆ.
ಸಂವಿಧಾನದ ಪ್ರಕಾರ ಯಾವುದೇ ಪ್ರದೇಶದಲ್ಲಿ ಶೇಕಡ 50ಕ್ಕಿಂತ ಅಧಿಕ ಬುಡಕಟ್ಟು, ಪರಿಶಿಷ್ಟ ಪಂಗಡ ಸಮುದಾಯದ ಜನರಿದ್ದರೆ ಆ ಪ್ರದೇಶವನ್ನು ಆರನೇ ಪರಿಚ್ಛೇದದಡಿಯಲ್ಲಿ ಸೇರ್ಪಡೆ ಮಾಡಬೇಕು. ಈ ಪರಿಚ್ಛೇದ ಆದಿವಾಸಿ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ರಕ್ಷಿಸಲು ಜಿಲ್ಲಾ ಮತ್ತು ಪ್ರಾದೇಶಿಕ ಕೌನ್ಸಿಲ್‌ಗಳನ್ನು ರಚಿಸಲು ಮತ್ತು ಈ ಕೌನ್ಸಿಲ್‌ಗಳಿಗೆ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರವನ್ನು ನೀಡುತ್ತದೆ. ಲಡಾಖ್ ಶೇಕಡ 97ರಷ್ಟು ಬುಡಕಟ್ಟು ಸಮುದಾಯವನ್ನು ಹೊಂದಿರುವ ಕಾರಣ ಸಂವಿಧಾನದ ಪ್ರಕಾರವಾಗಿ ಈ ಪರಿಚ್ಛೇದದಡಿ ಸೇರಿಸಬೇಕು. ಈ ಬೇಡಿಕೆ ಮುಂದಿಟ್ಟು ಲಡಾಖಿಗರು ನಿರಂತರ ಪ್ರತಿಭಟನೆ ಮಾಡುತ್ತಿದ್ದಾರೆ.





