ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗುರುವಾರ ಮರಳಿ ಬಿಜೆಪಿಗೆ ಸೇರಿದ್ದಾರೆ. ಅವರ ಸೇರ್ಪಡೆ ಬೆನ್ನಲ್ಲೇ, ಇದೀಗ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಕೂಡ ಬಿಜೆಪಿಗೆ ಸೇರುತ್ತಾರಾ ಎಂಬ ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ಬಿಜೆಪಿಗರು ಪಕ್ಷಕ್ಕೆ ಮರಳುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಸವದಿ ಹೇಳಿಕೊಂಡಿದ್ದಾರೆ.
ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸವದಿ, “ಮರಳಿ ಬಿಜೆಪಿಗೆ ಬರಬೇಕೆಂದು ಒತ್ತಡವಿದೆ. ಕಹಿ ಘಟನೆಗಳನ್ನು ಮರೆದು ಪಕ್ಷಕ್ಕೆ ಹಿಂದಿರುಗಿ ಎನ್ನುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಬಿಜೆಪಿ ಎಷ್ಟೇ ಒತ್ತಡ ಹಾಕಿದರೂ, ನನ್ನ ನಿಲುವು ಬದಲಾಗುವುದಿಲ್ಲ. ನಾನು ಕಾಂಗ್ರೆಸ್ ಸೇರಿದ್ದೇನೆ. ಕಾಂಗ್ರೆಸ್‌ನಿಂದಲೇ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ಮರಳಿ ಬಿಜೆಪಿಗೆ ಹೋಗುವ ಚಿಂತೆ ಇಲ್ಲ” ಎಂದು ಸವದಿ ಸ್ಪಷ್ಟಪಡಿಸಿದ್ದಾರೆ.
“ಕಾಂಗ್ರೆಸ್ ನಾಯಕರು ಬೆಳಗಾವಿ ರಾಜಕಾರಣದಲ್ಲಿ ನನ್ನನ್ನು ಕಡೆಗಣಿಸಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನನ್ನನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ನನಗೆ ಯಾವುದೇ ಅಸಮಾಧಾನವಿಲ್ಲ. ನಾವು ಕಾಂಗ್ರೆಸ್ ತೊರೆಯುವುದಿಲ್ಲ” ಎಂದು ಹೇಳಿದ್ದಾರೆ.




