ದೇಶದ ಪ್ರಸಿದ್ಧ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ(ಜೆಎನ್‌ಯು) ವಿದ್ಯಾರ್ಥಿ ಘಟಕದ ಚುನಾವಣೆಯಲ್ಲಿ ಎಡ-ವಿದ್ಯಾರ್ಥಿ ಸಂಘಟನೆಗಳು ಈ ಬಾರಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಘಟಕ ಎಬಿವಿಪಿಗೆ ಮುಖಭಂಗವಾಗಿದೆ.
ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ (ಜೆಎನ್‌ಯುಎಸ್‌ಯು) ಚುನಾವಣೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್‌ಎ), ಭಾರತ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ) ಮತ್ತು ಡೆಮಾಕ್ರಟಿಕ್ ವಿದ್ಯಾರ್ಥಿ ಒಕ್ಕೂಟ (ಡಿಎಸ್‌ಎಫ್) ಮೈತ್ರಿಕೂಟ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗಳನ್ನು ಗೆದ್ದಿದೆ. ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ. 67ರಷ್ಟು ಮತದಾನವಾಗಿದೆ.
ಇದನ್ನು ಓದಿದ್ದೀರಾ? ಜೈಲಿನಲ್ಲಿರುವ ಜೆಎನ್‌ಯು ವಿದ್ಯಾರ್ಥಿ ನಾಯಕ ಶಾರ್ಜೀಲ್ ಇಮಾಮ್ ಬಿಹಾರ ಚುನಾವಣೆಯಲ್ಲಿ ಸ್ಪರ್ಧೆ
ಆರ್‌ಎಸ್‌ಎಸ್ ವಿದ್ಯಾರ್ಥಿ ಘಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ವಿಫಲವಾಗಿದೆ. ಏಪ್ರಿಲ್‌ನಲ್ಲಿ ನಡೆದ ಕೊನೆಯ ಚುನಾವಣೆಯಲ್ಲಿ ಎಬಿವಿಪಿ ಜಂಟಿ ಕಾರ್ಯದರ್ಶಿ ಸ್ಥಾನವನ್ನು ಗೆದ್ದಿತ್ತು. ಗುರುವಾರ ನಡೆದ ಚುನಾವಣೆಯಲ್ಲಿ ಗೆಲ್ಲುವಲ್ಲಿ ವಿಫಲವಾಗಿದೆ. ಆದರೆ ಎರಡನೇ ಸ್ಥಾನದಲ್ಲಿದೆ.
ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಅದಿತಿ ಮಿಶ್ರಾ ಅವರು ಎಬಿವಿಪಿಯ ವಿಕಾಶ್ ಪಟೇಲ್ ವಿರುದ್ಧ ಅಧ್ಯಕ್ಷ ಸ್ಥಾನವನ್ನು ಗೆದ್ದರೆ, ಎಲ್‌ಯುನ ಕೆ. ಗೋಪಿಕಾ, ಸುನಿಲ್ ಯಾದವ್ ಮತ್ತು ಡ್ಯಾನಿಶ್ ಅಲಿ ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಕೌನ್ಸಿಲರ್ ಹುದ್ದೆಗಳ ಪೈಕಿ, ಎಡ ಸಂಘಟನೆಗಳು ಒಟ್ಟು ಸುಮಾರು 30 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ.
ಏಪ್ರಿಲ್‌ನಲ್ಲಿ ನಡೆದ ಚುನಾವಣೆಯಲ್ಲಿ ಎಡ ಸಂಘಟನೆಗಳು ಪ್ರತ್ಯೇಕವಾಗಿ ಚುನಾವಣೆ ಕಣಕ್ಕೆ ಇಳಿದಿತ್ತು. ಎಐಎಸ್‌ಎ ಮತ್ತು ಡಿಎಸ್‌ಎಫ್ ಮೈತ್ರಿ ಮಾಡಿಕೊಂಡಿದ್ದರೆ, ಎಸ್‌ಎಫ್‌ಐ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ (ಎಐಎಸ್‌ಎಫ್), ಬಿರ್ಸಾ ಅಂಬೇಡ್ಕರ್ ಫುಲೆ ವಿದ್ಯಾರ್ಥಿ ಸಂಘ (ಬಿಎಪಿಎಸ್‌ಎ) ಮತ್ತು ಪ್ರಗತಿಶೀಲ ವಿದ್ಯಾರ್ಥಿ ಸಂಘ (ಪಿಎಸ್‌ಎ) ಪ್ರತ್ಯೇಕವಾಗಿ ಮೈತ್ರಿಮಾಡಿಕೊಂಡಿತ್ತು. ಆದರೆ ಈ ಚುನಾವಣೆ ವೇಳೆಗೆ ಎಲ್ಲಾ ಎಡ ಸಂಘಟನೆಗಳು ಜತೆಯಾಗಿದೆ.
ಇದನ್ನು ಓದಿದ್ದೀರಾ? ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳು ರದ್ದು; ನ್ಯಾಯಾಂಗ ಕೊಟ್ಟ ಸಂದೇಶವೇನು?
ಜೆಎನ್‌ಯುಎಸ್‌ಯು ಅಧ್ಯಕ್ಷೀಯ ಚುನಾವಣೆಯಲ್ಲಿ, ಎಡ ಮೈತ್ರಿಕೂಟದ ಅದಿತಿ ಮಿಶ್ರಾ 1,937 ಮತಗಳನ್ನು ಪಡೆದಿದ್ದರೇ, ಎಬಿವಿಪಿಯ ವಿಕಾಸ್ ಪಟೇಲ್ 1,488 ಮತಗಳನ್ನು ಪಡೆದಿದ್ದಾರ. ಅಧ್ಯಕ್ಷೆಯಾಗಿರುವ ಅದಿತಿ ಮಿಶ್ರಾ ಅವರು ಎಬಿವಿಪಿಯ ವಿಕಾಸ್ ಪಟೇಲ್ ಅವರನ್ನು 449 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಡಪಕ್ಷದ ಕೆ. ಗೋಪಿಕಾ ಬಾಬು ಅವರು 3,101 ಮತಗಳನ್ನು ಪಡೆದರೆ, ಎಬಿವಿಪಿ ಅಭ್ಯರ್ಥಿ ತಾನ್ಯಾ ಕುಮಾರಿ ಅವರು 1,787 ಮತಗಳನ್ನು ಪಡೆದರು. ಜಂಟಿ ಕಾರ್ಯದರ್ಶಿ ಚುನಾವಣೆಯಲ್ಲಿ, ಡ್ಯಾನಿಶ್ ಅಲಿ (ಎಡ) 2,083 ಮತಗಳನ್ನು ಪಡೆದರೆ, ಎಬಿವಿಪಿಯ ಅನುಜ್ ಡಮಾರಾ 1,797 ಮತಗಳನ್ನು ಪಡೆದಿದ್ದಾರೆ.
ಜೆಎನ್‌ಯು ವಿದ್ಯಾರ್ಥಿ ಚುನಾವಣೆಯಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿನಿ ಗೌರಿ School of Social Science (SSS)ನಲ್ಲಿ ಕೌನ್ಸಿಲರ್ ಸ್ಥಾನದಲ್ಲಿ ಗರಿಷ್ಠ ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ. 5 ಕೌನ್ಸಿಲರ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಗೌರಿ ಇತರರಗಿಂತ ಅತಿ ಹೆಚ್ಚು ಅಂದರೆ, ಒಟ್ಟು 1200 ಮತಗಳಲ್ಲಿ, ಸುಮಾರು 723 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. 1999ರಲ್ಲಿ ಬಳ್ಳಾರಿ ಮೂಲದ ಸಯ್ಯದ್ ನಾಸಿರ್ ಹುಸೆನ್ JNU ವಿದ್ಯಾರ್ಥಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ SFIಯಿಂದ ಸ್ಫರ್ಧಿಸಿ ವಿಜಯಶಾಲಿಯಾಗಿದ್ದರು. ತದನಂತರ ಕರ್ನಾಟಕದಿಂದ ಯಾರು ಕೂಡ JNU ವಿದ್ಯಾರ್ಥಿ ಚುನಾವಣೆಯಲ್ಲಿ ಗೆಲುವು ಸಾಧಿಸಿರಲಿಲ್ಲ. ಈ ಬಾರಿ ಕರ್ನಾಟಕ ಮೂಲಕ ಗೌರಿ ಅವರು ಗೆಲುವು ಸಾಧಿಸಿದ್ದಾರೆ.
ಈ ಬಾರಿ ನಡೆದ ಚುನಾವಣೆಯಲ್ಲಿ ಒಟ್ಟು 9,043 ಮತದಾರರಲ್ಲಿ ಶೇ. 67 ರಷ್ಟು ಮಂದಿ ಮತ ಚಲಾಯಿಸಿದ್ದರು. ಕಳೆದ ವರ್ಷ ಶೇ. 70ರಷ್ಟು ಮತದಾನವಾಗಿತ್ತು. ಚುನಾವಣೆಗಳಲ್ಲಿ ವಿದ್ಯಾರ್ಥಿಗಳು ಡ್ರಮ್ ಬಾರಿಸುತ್ತಾ, ಘೋಷಣೆಗಳನ್ನು ಕೂಗುತ್ತಾ ಮತ್ತು ಕ್ಯಾಂಪಸ್‌ನಾದ್ಯಂತ ಸಂಭ್ರಮಾಚರಣೆಯನ್ನು ಮಾಡಿದ್ದಾರೆ.
ಈ ಚುನಾವಣೆ ಬಗ್ಗೆ ಮಾತನಾಡಿದ ಜೆಎನ್‌ಯುಎಸ್‌ಯುನ ಮಾಜಿ ಅಧ್ಯಕ್ಷ ಸಾಯಿ ಬಾಲಾಜಿ, “ಎಬಿವಿಪಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಮತ್ತು ಅವರ ಸಿದ್ಧಾಂತ ಮತ್ತು ರಾಜಕೀಯದ ವಿರುದ್ಧ ವಿದ್ಯಾರ್ಥಿ ನೀಡಿದ ಹೇಳಿಕೆ ಇದಾಗಿದೆ” ಎಂದು ಹೇಳಿದ್ದಾರೆ.
ಕಳೆದ ಬಾರಿ (2024) ನಡೆದ ಚುನಾವಣೆಯಲ್ಲಿಯೂ ಕೂಡ ಎಡ-ವಿದ್ಯಾರ್ಥಿ ಸಂಘಟನೆಗಳೇ ಮೆಲುಗೈ ಸಾಧಿಸಿದ್ದವು. ಸುಮಾರು 30 ವರ್ಷಗಳ ಬಳಿಕ ಜೆಎನ್‌ಯುನಲ್ಲಿ ದಲಿತ ವಿದ್ಯಾರ್ಥಿ ಅಧ್ಯಕ್ಷರಾಗಿದ್ದರು.





