ಯದುವೀರ್ ಒಡೆಯರ್ ತಮ್ಮ ಪೂರ್ವಜರ ಇತಿಹಾಸವನ್ನೇ ಮರೆತಿದ್ದಾರೆ. ಬಿಜೆಪಿಯ ಹಾರ್ಡ್‌ಕೋರ್ ಹಿಂದುತ್ವವಾದಿಯಂತೆ ವರ್ತಿಸುತ್ತಿದ್ದಾರೆ. ಬಾನು ಮುಷ್ತಾಕ್ ಅವರನ್ನು ಪಕ್ಷದ ನಿಲುವಿನ ಆಚೆ ಒಪ್ಪಿಕೊಂಡು ಸಂಭ್ರಮಿಸಿದರೆ ರಾಜಮನೆತನಕ್ಕೂ ಗೌರವ.
ನಾಡಹಬ್ಬ ದಸರಾ ಉದ್ಘಾಟನೆಗೆ ಕನ್ನಡಕ್ಕೆ ಮೊದಲ ಬೂಕರ್ ತಂದುಕೊಟ್ಟ ಬಾನು ಮುಷ್ತಾಕ್ ಅವರಂಥ ಹಿರಿಯ ಸಾಹಿತಿಯನ್ನು ಸರ್ಕಾರ ಆಹ್ವಾನಿಸಿದಾಗ ನಾಡಿನ ಜನತೆ ಹೃದಯದಿಂದ ಸಂಭ್ರಮಿಸಬೇಕಿತ್ತು. ಆದರೆ ಬಿಜೆಪಿಯ ಹಿಂದೂ-ಮುಸ್ಲಿಂ ಟೂಲ್ ಕಿಟ್‌ನಿಂದ ಆಗುತ್ತಿರುವುದೇ ಬೇರೆ.
ಬಿಜೆಪಿ ಮತ್ತು ಆ ಪಕ್ಷದ ಬೂಟು ನೆಕ್ಕುವ ಸುದ್ದಿ ಮಾಧ್ಯಮಗಳು ಈ ವಿಷಯದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಅಸಹ್ಯ ಹುಟ್ಟಿಸಿದೆ. ಇವರೆಲ್ಲರ ಮನಸ್ಸುಗಳು ಎಷ್ಟು ಕೊಳೆತು ನಾರುತ್ತಿವೆ ಎಂದರೆ; ಇವರಿಗೆ ದೇಶ ಯಾವತ್ತೂ ಮುಖ್ಯವಲ್ಲ, ದ್ವೇಷವೇ ಮುಖ್ಯ ಎಂಬುದನ್ನು ಮತ್ತೆ ಬಹಿರಂಗವಾಗಿ ಸಾರಿದ್ದಾರೆ.
ಕೋಮುದ್ವೇಷದ ಹಣತೆ ಬಿಜೆಪಿಗರ ಎದೆಯಲ್ಲಿ ಜ್ವಾಲೆಯಾಗಿ ಉರಿಯುತ್ತಿದ್ದು, ಕೋಮುವಾದದ ಕತ್ತಿಯನ್ನು ಕೈಗೆತ್ತಿಕೊಂಡು ಝಳಪಿಸಲಾರಂಭಿಸಿದ್ದಾರೆ. ಹಾವೇರಿ ಸಾಹಿತ್ಯ ಸಮ್ಮೇಳನದಿಂದ ಅಲ್ಪಸಂಖ್ಯಾತ ಲೇಖಕರನ್ನು ಹೊರಗಿಟ್ಟ ಸಂದರ್ಭದಲ್ಲಿ, ಪ್ರತಿರೋಧ ವ್ಯಕ್ತಪಡಿಸಲು ನಡೆಸಿದ ಜನಸಾಹಿತ್ಯ ಸಮಾವೇಶದಲ್ಲಿ ಸಾಂದರ್ಭಿಕವಾಗಿ ಬಾನು ಮುಷ್ತಾಕ್ ಹೇಳಿದ ಅರಿಶಿನ ಕುಂಕುಮ ವಿಶ್ಲೇಷಣೆಯನ್ನೇ ನೆಪವಾಗಿಟ್ಟು ಅವರ ವಿರುದ್ಧ ಗುರಾಣಿ ಹಿಡಿದಿದ್ದಾರೆ!
ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಅವರನ್ನು ಸರ್ಕಾರ ಆಯ್ಕೆ ಮಾಡಿದಾಗ ಹೃದಯದಿಂದ ಸ್ವಾಗತಿಸಿದ್ದ ಸಂಸದ ಮತ್ತು ಮೈಸೂರು ರಾಜಮನೆತದ ಕುಡಿ ಯದುವೀರ್ ಒಡೆಯರ್, ಆನಂತರ ಬಿಜೆಪಿಯ ಟೂಲ್‌ಕಿಟ್‌ನ ಭಾಗವಾಗಿ ಯೂಟರ್ನ್ ಹೊಡೆದಿದ್ದಾರೆ. ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರಕ್ಕೆ ಮೊದಲು ಪ್ರತಿಕ್ರಿಯಿಸಿದ್ದ ಯದುವೀರ್, “ಸರ್ಕಾರಿ ಕಾರ್ಯಕ್ರಮದಲ್ಲಿ ಪೂಜೆ ಮಾಡುವುದು ಇಲ್ಲವೇ ಇಲ್ಲ. ಇದು ಜಾತ್ಯತೀತ ವ್ಯವಸ್ಥೆಯಾಗಿದೆ. ಧಾರ್ಮಿಕ ಪೂಜೆಗಳನ್ನು ನಾವು ವೈಯಕ್ತಿಕವಾಗಿ ಮನೆಯಲ್ಲಿ ಮಾಡಿಕೊಳ್ಳುತ್ತೇವೆ. ಸರ್ಕಾರಕ್ಕೆ ಇದೊಂದು ಉತ್ಸವ. ಅವರ ಆಯ್ಕೆ ಬಗ್ಗೆ ನನ್ನ ವಿರೋಧವಿಲ್ಲ” ಎಂದಿದ್ದರು.
ಎರಡು ದಿನ ಕಳೆಯುವುದರಲ್ಲಿ “ಬಾನು ಮುಷ್ತಾಕ್ ಅವರು ಕನ್ನಡಾಂಬೆಯ ಕುರಿತು 2023ರಲ್ಲಿ ನೀಡಿದ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ಕೊಟ್ಟು ವೇದಿಕೆಗೆ ಬರಬೇಕು. ಇಲ್ಲದಿದ್ದರೆ ಅವರು ದಸರಾ ಉದ್ಘಾಟಿಸುವುದಕ್ಕೆ ನಮ್ಮ ವಿರೋಧವಿದೆ” ಎಂದು ಯದುವೀರ್ ಹೇಳಿದ್ದಾರೆ.
“ಚಾಮುಂಡಿ ಬೆಟ್ಟವು ಧಾರ್ಮಿಕ ಸ್ಥಳವಾಗಿದೆ ಮತ್ತು ಪ್ರತಿಯೊಬ್ಬರೂ ದೇವಿಯನ್ನು ಪೂಜಿಸುತ್ತಾರೆ. ಅವರ ಧರ್ಮದ ಆಚರಣೆ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ನಮ್ಮ ಧರ್ಮದಲ್ಲಿ ಮೂರ್ತಿ ಪೂಜೆಯೇ ಶ್ರೇಷ್ಠ. ಅವರು ಮೊದಲು (2023 ರಲ್ಲಿ) ಏಕೆ ಹಾಗೆ ಹೇಳಿದರು ಎಂಬುದನ್ನು ಸ್ಪಷ್ಟಪಡಿಸಬೇಕು. ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡರೆ ಒಳ್ಳೆಯದು. ಏಕೆಂದರೆ, ಅದು ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ವಿಷಯವಾಗಿದೆ” ಎಂದಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಕರ್ನಾಟಕದ ಸಾಂಸ್ಕೃತಿಕ ವಿದ್ಯಮಾನವೇ ಹೊರತು ಕೇವಲ ಹಿಂದೂ ಧಾರ್ಮಿಕತೆಯ ಭಾಗವಲ್ಲ ಎಂಬುದನ್ನು ಹಿಂದುತ್ವದ ಅಮಲಿನಲ್ಲಿರುವವರಿಗೆ ವಿವರಿಸುವುದು ಕಷ್ಟವೇ ಸರಿ. ಬಿಜೆಪಿಯ ಮುಖಂಡರು ಬಾನು ಅವರ ಆಯ್ಕೆಯ ವಿರುದ್ಧ ನಾಲಿಗೆ ಹರಿಬಿಡುತ್ತಿದ್ದಾರೆ. ”ಹಿಂದೂಗಳ ಹಬ್ಬದ ಉದ್ಘಾಟನೆಗೆ ಒಬ್ಬ ಹಿಂದೂ ಸಿಗಲಿಲ್ಲವೇ” ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ. ಮುಸ್ಲಿಂ ವಿರುದ್ಧ ಸದಾ ದ್ವೇಷ ಕಾರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ”ಬಾನು ಮುಷ್ತಾಕ್ ಚಾಮುಂಡಿ ಬೆಟ್ಟ ಹತ್ತಬಾರದು. ಸರ್ಕಾರ ಆಹ್ವಾನವನ್ನು ವಾಪಸ್ ಪಡೆಯಬೇಕು” ಎಂದು ಗದರಿಸಿದ್ದಾರೆ.
ದಸರಾವನ್ನು ರಾಜ್ಯ ಸರ್ಕಾರದ ಕೋಟ್ಯಂತರ ರೂ.ಗಳ ಅನುದಾನದಲ್ಲಿ ಸಂಘಟಿಸುತ್ತದೆ. ಅಂದರೆ ಅದು ನೇರವಾಗಿ ಈ ರಾಜ್ಯದ ಜನತೆಯ ತೆರಿಗೆಯ ಹಣ. ಕರ್ನಾಟಕ ಯಾವುದೋ ಒಂದು ಧರ್ಮ ಅಥವಾ ಜಾತಿಗೆ ಸೇರಿಲ್ಲ. ರಾಷ್ಟ್ರಕವಿ ಕುವೆಂಪು ಹೇಳಿದಂತೆ ಇದು ‘ಸರ್ವ ಜನಾಂಗದ ಶಾಂತಿಯ ತೋಟ’. ರಾಜಪ್ರಭುತ್ವವನ್ನು ಕೊನೆಗಾಣಿಸಿ ಭಾರತದ ಸಂವಿಧಾನದ ಅಡಿಯಲ್ಲಿ, ಅದರ ಆಶಯದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇಲ್ಲಿ ಎಲ್ಲರಿಗೂ ಸಮಾನವಾದ ಅವಕಾಶಗಳಿವೆ. ಇದನ್ನು ಅರ್ಥ ಮಾಡಿಕೊಳ್ಳಲಾಗದ ಬಿಜೆಪಿ ನಾಯಕರು ರಾಜ್ಯದ ಸೌಹಾರ್ದತೆಗೆ ಕೊಳ್ಳಿ ಇಡುವ ಹುನ್ನಾರ ನಡೆಸಿದ್ದಾರೆ.
ಕನ್ನಡದ ಹಿರಿಮೆಯನ್ನು ಬಾನು ಮುಷ್ತಾಕ್ ಅವರು ಜಗತ್ತಿಗೆ ಪಸರಿಸಿದಾಗ ಅವರು ಮುಸ್ಲಿಂ ಸಮುದಾಯವರು ಎಂಬ ಕಾರಣಕ್ಕಾಗಿ ಮೋದಿ ಪಟಾಲಂ ಒಂದು ಅಭಿನಂದನೆ ಸಹ ಸಲ್ಲಿಸಲಿಲ್ಲ. ಹಾಗೆ ನೋಡಿದರೆ ನಿಜಕ್ಕೂ ಇವರೇ ಭಾರತದ ಜಾತ್ಯತೀತ ಪರಂಪರೆಯ ವಿರೋಧಿಗಳು. ಮಹಿಳಾ ವಿರೋಧಿ ಎಂಬುದು ಬಿಜೆಪಿ ಮೂಲ ಸಿದ್ಧಾಂತದಲ್ಲೇ ಇದೆ. ಜೊತೆಗೆ ಅಲ್ಪಸಂಖ್ಯಾತ ವಿರೋಧಿಯಾಗಿ, ದಲಿತ ವಿರೋಧಿಯಾಗಿ ರೂಪಿಸಿಕೊಂಡ ಬಂದ ಬಿಜೆಪಿ, ಈಗ ಬಾನು ಆಯ್ಕೆ ಮುಂದಿಟ್ಟುಕೊಂಡು ಕೀಳು ರಾಜಕಾರಣ ಮಾಡುತ್ತಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಗೆದಷ್ಟೂ ಆಳವಾಗುತ್ತಿದೆ ಧರ್ಮಸ್ಥಳ ಪ್ರಕರಣ; ಸೌಜನ್ಯಳಿಗೆ ಸಿಗಲಿ ನ್ಯಾಯ
2017ರಲ್ಲಿ ಇದೇ ದಸರಾವನ್ನು ಮುಸ್ಲಿಂ ಸಮುದಾಯದ ಕವಿ ನಿಸಾರ್ ಅಹಮದ್ ಅವರು ಉದ್ಘಾಟಿಸಿದ್ದರು. ಆಗ ಇಲ್ಲದ ವಿರೋಧ ಈಗ ಏಕೆ? ಉದ್ದೇಶ ಸ್ಪಷ್ಟವಿದೆ; ಬಿಜೆಪಿ ಮತ್ತು ಸಂಘಪರಿವಾರದ ಶಕ್ತಿಗಳು ಮುಸ್ಲಿಂ ಮತ್ತು ಮಹಿಳಾ ವಿರೋಧಿ ನೆಲೆಯ ಟೂಲ್‌ಕಿಟ್ ಅನ್ನು ಅಸ್ತ್ರವಾಗಿಸಿಕೊಂಡಿವೆ. ಸಮಾಜದಲ್ಲಿನ ಅನ್ಯಾಯ, ಶೋಷಣೆಗಳ ವಿರುದ್ಧ ನಿರಂತರವಾಗಿ ದನಿ ಎತ್ತಿದವರು ಮತ್ತು ಆ ಕುರಿತೇ ತಮ್ಮ ಉತ್ಕೃಷ್ಟ ಸಾಹಿತ್ಯವನ್ನು ಕನ್ನಡದಲ್ಲಿ ರಚಿಸಿದವರು. ಬಾಬಾ ಬುಡನ್‌ಗಿರಿ ಹೋರಾಟದಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಈಗ ಬಿಜೆಪಿಯವರು ಬಾನು ವಿರುದ್ಧ ತಿರುಗಿ ಬಿದ್ದಿದ್ದಾರೆ.
ನಾಡ ಹಬ್ಬ ಎಂದ ಮೇಲೆ ಅದನ್ನು ಹಿಂದುಗಳದ್ದು, ಮುಸ್ಲಿಮರದ್ದು ಕ್ರೈಸ್ತರದ್ದು ಎಂದು ವಿಭಜಿಸಬೇಕಾಗಿಲ್ಲ ಎಂಬ ಸಣ್ಣ ತಿಳಿವಳಿಕೆಯೂ ಇವರಿಗೆ ಇಲ್ಲವಾಗಿದೆ. ಎಲ್ಲರೂ ಸೇರಿ ಆಚರಿಸಬೇಕಾದ ಹಬ್ಬ ಇದು. ಅವರವರ ಧಾರ್ಮಿಕ ಮಿತಿಯೊಳಗೆ ಈ ಹಬ್ಬದ ಸಂಭ್ರಮವನ್ನು ಸಮಸ್ತ ಕನ್ನಡಿಗರು ಅನುಭವಿಸಬೇಕು. ಇದಕ್ಕೆ ಧರ್ಮ ಜಾತಿಯ ಹಂಗಿಲ್ಲ. ನಾಡಹಬ್ಬ ಬಯಸುತ್ತಿರುವುದು ಈ ಒಳಗೊಳ್ಳುವಿಕೆಯನ್ನೇ. ಮಂಗಳೂರು ದಸರಾದಲ್ಲಿ ಮುಸ್ಲಿಂ ನೇಕಾರರು ತಯಾರಿಸಿದ ಸೀರೆಯನ್ನೇ ಶಾರದಾ ದೇವಿಗೆ ಅರ್ಪಿಸುವ ಮೂಲಕ ಧಾರ್ಮಿಕ ಸಹಿಷ್ಣುತೆಯನ್ನು ಪ್ರದರ್ಶಿಸುತ್ತಾರೆ. ಇದು ಧಾರ್ಮಿಕ ಸೌಹಾರ್ದತೆಗೆ ಒಂದು ಪ್ರಮುಖ ನಿದರ್ಶನವಾಗಿದೆ.
ಎಷ್ಟೇ ಹೇಳಿದರೂ ಮೈಸೂರು ದಸರಾ ಎಂಬುದು ಕೇವಲ ಹಿಂದೂಗಳ ಹಬ್ಬವಲ್ಲ. ಇದು ನಾಡಿನ ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ಅನಾವರಣಗೊಳಿಸುವ ಒಂದು ಸಂಭ್ರಮ. ಮೈಸೂರಿನಲ್ಲಿ ಆಚರಿಸುವ ನವರಾತ್ರಿಗೆ ವಿಶೇಷವಾದ ಚರಿತ್ರೆ ಇದೆ. ನಾಡಹಬ್ಬಕ್ಕೆ ಇರುವ ಗತ್ತು, ಗಾಂಭೀರ್ಯವೇ ಮಹೋನ್ನತವಾದದ್ದು. ರಾಜ, ಮಹಾರಾಜರ ಕಾಲದಿಂದ ಆರಂಭವಾಗಿ ಇಂದಿಗೂ ರಾಜವೈಭವದಲ್ಲಿ ನಡೆಯುತ್ತಿರುವ ಮೈಸೂರು ದಸರಾ ಕರುನಾಡಿಗೆ ಹೆಮ್ಮೆ. ಶೌರ್ಯ, ಪರಾಕ್ರಮದ ಸಂಕೇತವಾದ ದಸರಾ ಆರಂಭವಾಗಿದ್ದು 14ನೇ ಶತಮಾನದಿಂದ. ಹೊಯ್ಸಳರ ನಂತರ ವಿಜಯನಗರ ಅರಸರ ಕಾಲದಲ್ಲಿ ದಸರಾ ಹಬ್ಬ ವೈಭವದಿಂದ ನಡೆಯಿತು. ಇದನ್ನು ಮಹಾನವಮಿ ಎಂದು ಕರೆಯಲಾಗುತ್ತಿತ್ತು.
ಪ್ರತಿವರ್ಷ ಯುದ್ಧ ಗೆದ್ದ ಸಂಭ್ರಮಕ್ಕೆ ವಿಜಯನಗರ ಅರಸರು ದಸರಾ ಆಚರಣೆ ಮಾಡುತ್ತಿದ್ದರು. ಹಂಪಿಯ ಹಜಾರ ರಾಮ ದೇವಾಲಯದ ಹೊರಗೋಡೆಯ ಕಲಾಕೃತಿಯಲ್ಲಿ ದಸರಾ ಉತ್ಸವಗಳನ್ನು ಚಿತ್ರಿಸಲಾಗಿದೆ. 15ನೇ ಶತಮಾನದಲ್ಲಿ ಇಟಾಲಿಯನ್ ಪ್ರವಾಸಿ ನಿಕೊಲೊ ಡಿ’ ಕಾಂಟಿ ಅವರು ದಸರಾ ಹಬ್ಬದ ಮಹತ್ವವನ್ನು ವಿವರಿಸಿದ್ದಾರೆ. ಅಂದಿನ ದಸರಾ ಆಚರಣೆಯಲ್ಲಿ ಸ್ಪರ್ಧೆಗಳು, ಹಾಡುಗಾರಿಕೆ, ನೃತ್ಯ, ಪಟಾಕಿ ಅಬ್ಬರ, ಮಿಲಿಟರಿ ಮೆರವಣಿಗೆ ಮತ್ತು ಪ್ರಜೆಗಳಿಗೆ ದಾನ, ಉಡುಗೊರೆಗಳನ್ನು ನೀಡುವ ಸಂಪ್ರದಾಯಗಳನ್ನು ಪಾಲಿಸಲಾಗಿತ್ತು. ಶಕ್ತಿದೇವತೆ ದುರ್ಗಮಾತೆಯನ್ನು ಪೂಜಿಸಿದ ಉಲ್ಲೇಖಗಳು ಇವೆ. ಆದರೆ ವಿಜಯನಗರ ಅರಸರ ಕಾಲದಲ್ಲಿ ದಸರಾ ನವರಾತ್ರಿಯಾಗಿ ಆಚರಿಸುತ್ತಿರಲಿಲ್ಲ.
ದಕ್ಷಿಣ ಭಾರತಕ್ಕೆ ದಂಡೆತ್ತಿ ಬಂದ ಸುಲ್ತಾನರಿಂದ ವಿಜಯನಗರ ಸಾಮ್ರಾಜ್ಯವು ಪತನಗೊಂಡಿತು. ವಿಜಯನಗರ ಸಾಮ್ರಾಜ್ಯದ ದಕ್ಷಿಣ ಭಾಗಗಳಲ್ಲಿ ಮೈಸೂರಿನ ಒಡೆಯರ್ ರಾಜ್ಯವನ್ನು ಸ್ಥಾಪಿಸಿದರು. ಆಗ ಮಹಾನವಮಿ ಉತ್ಸವವನ್ನು ಮುಂದುವರೆಸಲು ನಿರ್ಧರಿಸಿದರು. ಸೆಪ್ಟೆಂಬರ್ 1610ರ ಅವಧಿಯಲ್ಲಿ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವ ರಾಜ ವೈಭೋಗದಲ್ಲಿ ಮೊದಲ ಬಾರಿಗೆ ಪ್ರಾರಂಭ ಮಾಡಲಾಯಿತು.
ಶ್ರೀರಂಗಪಟ್ಟಣದಲ್ಲಿದ್ದ ಮೈಸೂರು ಸಂಸ್ಥಾನವನ್ನು 1612ರಲ್ಲಿ ಮೈಸೂರಿಗೆ ಸ್ಥಳಾಂತರ ಮಾಡಲಾಯ್ತು. ಯದುವಂಶದ ಶ್ರೀರಾಜ ಒಡೆಯರ್ ಚಿನ್ನದ ಸಿಂಹಾಸನದ ಮೇಲೆ ಕೂತು ಮೊದಲ ದಸರಾ ಆಚರಣೆ ಮಾಡಿದರು. ಅಂದಿನಿಂದ ದಸರಾವನ್ನು ನವರಾತ್ರಿಯಾಗಿ ಆಚರಣೆ ಮಾಡುವ ಸಂಪ್ರದಾಯ ಆರಂಭವಾಗಿದೆ. ಮೈಸೂರು ದಸರಾ ಶ್ರೀರಂಗಪಟ್ಟಣದಿಂದ ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮುಂದುವರೆಸಿದ್ದು ವಿಶೇಷ. 1805ರಿಂದ 1969ರವರೆಗೂ ಮಹಾರಾಜರೇ ಖುದ್ದಾಗಿ ದಸರಾ ನಡೆಸಿ, ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದರು.
1969ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರು ಕೊನೆಯ ರಾಜರ ದಸರಾವನ್ನು ಆಚರಿಸಿದರು. ಅದಾದ ಬಳಿಕ 1970ರಲ್ಲಿ ದಸರಾದಲ್ಲಿ ರಾಜರು ಭಾಗವಹಿಸುವುದಿಲ್ಲ ಎಂದು ಘೋಷಿಸಿದರು. ಇದಕ್ಕೆ ಕಾರಣ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೂ 1950ರವರೆಗೂ ಮೈಸೂರು ಸಂಸ್ಥಾನವನ್ನು ಮಹಾರಾಜರೇ ಆಳುತ್ತಿದ್ದರು. ಭಾಷಾವಾರು ಪ್ರಾಂತ್ಯದ ಬಳಿಕ 1956ರಿಂದ 1964ರವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. 1969ರಲ್ಲಿ ಮಾಜಿ ಮಹಾರಾಜರ ಹೆಸರು ಮತ್ತು ರಾಜಧನವನ್ನು ನಿಲ್ಲಿಸಿ ಬಿಟ್ಟಿದ್ದರು. ಇದರಿಂದ ದೇಶದಲ್ಲಿ 560 ಮಾಜಿ ಮಹಾರಾಜರು ಇಂದಿರಾ ಗಾಂಧಿ ನಿಲುವಿನ ವಿರುದ್ಧ ಕೋರ್ಟ್ ಕಟಕಟೆ ಏರಲು ನಿರ್ಧರಿಸಿದ್ದರು. ಆದರೆ, ಅದಕ್ಕೆ ವಿರೋಧ ವ್ಯಕ್ತಪಡಿಸಿದವರು ಜಯಚಾಮರಾಜೇಂದ್ರ ಒಡೆಯರ್, ‘ಸ್ವತಂತ್ರ ಭಾರತದಲ್ಲಿ ನಾನೊಬ್ಬ ಸಾಮಾನ್ಯ ಪ್ರಜೆ, ಹೀಗಾಗಿ ಜನಸಾಮಾನ್ಯನಾಗಿಯೇ ನಾವು ಬದುಕಬೇಕು’ ಎಂದು ಹೇಳುವ ಮೂಲಕ ಸಂವಿಧಾನದ ಆಶಯ ಎತ್ತಿ ಹಿಡಿದರು.
ಅದೇ ಸಂದರ್ಭದಲ್ಲಿ ಏಕಾಏಕಿ ದಸರಾ ನಿಂತು ಬಿಟ್ಟರೆ ಏನು ಕಥೆ ಎಂಬ ಚರ್ಚೆಯೂ ನಡೆದಿತ್ತು. ಕೊನೆಗೆ ಕೆಲವು ಗಣ್ಯರು ಸೇರಿ ತಮ್ಮ ಸ್ವಂತ ಖರ್ಚಿನಲ್ಲಿಯೇ ಮರದ ಅಂಬಾರಿಯನ್ನು ಆನೆಯ ಮೇಲೆ ಇಟ್ಟು ಖಾಸಗಿ ದಸರಾ ಮೆರವಣಿಗೆ ನಡೆಸಿದ್ದರು. ಜಯಚಾಮರಾಜೇಂದ್ರ ಒಡೆಯರ್ ಸಿಂಹಾಸನದಲ್ಲಿ ಕುಳಿತುಕೊಳ್ಳದೇ ತಮ್ಮ ಪಟ್ಟದ ಕತ್ತಿಯನ್ನು ಇಟ್ಟು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದ್ದರು.
1972ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಮೈಸೂರಿನ ಗಣ್ಯರು ಭೇಟಿ ಮಾಡಿ ದಸರಾ ನಡೆಸುವಂತೆ ಮನವಿ ಮಾಡಿದರು. ಅದರಂತೆ ಜಯಚಾಮರಾಜೇಂದ್ರ ಒಡೆಯರ್ ಜೊತೆ ಮಾತನಾಡಿ ಚಿನ್ನದ ಅಂಬಾರಿಯನ್ನೇ ಆನೆಯ ಮೇಲೆ ಇಟ್ಟು ದಸರಾ ನಾಡಹಬ್ಬ ಎಂದು ಸರ್ಕಾರದಿಂದಲೇ ಪುನಃ ಚಾಲ್ತಿಗೆ ಬಂದಿದೆ. ಇಂದಿಗೂ ನಾಡದೇವತೆ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿಟ್ಟು ಬನ್ನಿ ಮಂಟಪದವರೆಗೆ ಮೆರವಣಿಗೆ ಮಾಡಲಾಗುತ್ತದೆ.
ಮೈಸೂರು ಸಂಸ್ಥಾನದಲ್ಲಿ 1929ರಿಂದ 1941ರವರೆಗೆ ದಿವಾನರಾಗಿ ಸೇವೆ ಸಲ್ಲಿಸಿದ್ದು ಮುಸ್ಲಿಂ ಸಮುದಾಯದ ಮಿರ್ಜಾ ಇಸ್ಮಾಯಿಲ್ ಎಂಬುದು ಗಮನಿಸಬೇಕಾದ ಸಂಗತಿ. ತಮ್ಮ ಸಮರ್ಥ ಕಾರ್ಯಕ್ಷಮತೆಗಾಗಿ ‘ಸಮರ್ಥ ದಿವಾನ’ ಎಂಬ ಬಿರುದನ್ನು ಪಡೆದವರು. ರಾಜಮನೆತನದೊಂದಿಗೆ ಸುದೀರ್ಘ ಸಂಬಂಧ ಹೊಂದಿದ್ದ ಅವರು, ತಮ್ಮ ಅಧಿಕಾರಾವಧಿಯಲ್ಲಿ ಮೈಸೂರು ನಗರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ರಾಜ್ಯದ ಕೈಗಾರಿಕಾ ಬೆಳವಣಿಗೆಯನ್ನು ಮಿರ್ಜಾ ಇಸ್ಮಾಯಿಲ್ ಮೈಸೂರಿನ ದಿವಾನರಾಗಿ ಉತ್ತೇಜಿಸಿದ್ದಾರೆ. ಅವರು ಮಂಡ್ಯದ ಸಕ್ಕರೆ ಕಾರ್ಖಾನೆ, ಭದ್ರಾವತಿಯ ಕಬ್ಬಿಣದ ಕಾರ್ಖಾನೆ ಮತ್ತು ಎಚ್.ಎ.ಎಲ್. ಕಾರ್ಖಾನೆಯನ್ನು ಸ್ಥಾಪಿಸಲು ಕಾರಣರಾದರು.
ಸಾರಿಗೆಯನ್ನು ಸುಧಾರಿಸಿದರು. ಹಳ್ಳಿಗಳಿಗೆ ವಿದ್ಯುತ್ ಮತ್ತು ನೀರನ್ನು ಒದಗಿಸಿದರು. ಹಾಗೆಯೇ ಬಸ್ ಸ್ಟ್ಯಾಂಡ್‌ಗಳನ್ನು ನಿರ್ಮಿಸಿದರು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೈಸೂರು ಮೆಡಿಕಲ್ ಕಾಲೇಜು ಮತ್ತು ಆಧುನಿಕ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಸ್ಥಾಪಿಸಿದರು.
ಪಾಕಿಸ್ತಾನದ ವಿಭಜನೆಯನ್ನು ವಿರೋಧಿಸಿದವರಲ್ಲಿ ಮಿರ್ಜಾ ಇಸ್ಮಾಯಿಲ್ ಕೂಡ ಪ್ರಮುಖರು. ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು ಪ್ರಯತ್ನಿಸಿದರು. ಹೈದರಾಬಾದ್ ಅನ್ನು ಭಾರತದೊಂದಿಗೆ ಸಂಯೋಜಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದರು. ಹೀಗೆ ರಾಜಮನೆತನದೊಂದಿಗೆ ಮುಸ್ಲಿಂ ಸಮುದಾಯ ಹಿಂದಿನಿಂದಲೂ ಸೌಹಾರ್ದತೆಯನ್ನು ಇಟ್ಟುಕೊಂಡೇ ಬಂದಿದೆ.
ಯದುವೀರ್ ಒಡೆಯರ್ ತಮ್ಮ ಪೂರ್ವಜರ ಇತಿಹಾಸವನ್ನೇ ಮರೆತು ಬಿಜೆಪಿಯ ಹಾರ್ಡ್‌ಕೋರ್ ಹಿಂದುತ್ವವಾದಿಯಂತೆ ನಡೆದುಕೊಳ್ಳುತ್ತಿರುವುದು ದುರಂತವೇ ಸರಿ. ಅವರು ಬಿಜೆಪಿ ಸಂಸದರಾಗಿರಬಹುದು. ಆದರೆ, ತಮ್ಮ ಕುಟುಂಬ ಪ್ರತಿನಿಧಿಸುತ್ತ ಬಂದಿರುವ ರಾಜಮನೆತನದ ಸೌರ್ಹಾರ್ದ ಪರಂಪರೆಯನ್ನು ಹೀಗೆ ಮಣ್ಣು ಮಾಡುವುದು ಸರಿಯಲ್ಲ. ಬಾನು ಮುಷ್ತಾಕ್ ಅವರನ್ನು ಪಕ್ಷದ ನಿಲುವಿನ ಆಚೆ ಒಪ್ಪಿಕೊಂಡು ಸಂಭ್ರಮಿಸಿದರೆ ರಾಜಮನೆತನಕ್ಕೂ ಗೌರವ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.




