ಧರ್ಮಸ್ಥಳದಲ್ಲಿ ರಹಸ್ಯವಾಗಿ ನೂರಾರು ಮೃತದೇಹಗಳನ್ನು ಅಂತ್ಯಕ್ರಿಯೆ ಮಾಡಲಾದ ಮತ್ತು ಹಲವಾರು ಮಂದಿ ನಾಪತ್ತೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ವಿಸ್ತರಿಸಿದೆ. ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎಂದು ದಾಖಲಾಗಿರುವ ಎಲ್ಲ ದೂರುಗಳನ್ನು ತನಿಖೆಯನ್ನು ಒಳಗೊಳ್ಳುವುದಾಗಿ ಘೋಷಿಸಿದೆ. ಈ ನಡುವೆ, ಧರ್ಮಸ್ಥಳ ದೇವಾಲಯದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಾಗರಿಕ ಸೇವಾ ಟ್ರಸ್ಟ್‌ನ ಕೆ ಸೋಮನಾಥ್ ನಾಯಕ್ ಪತ್ರ ಬರೆದಿದ್ದಾರೆ.
ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆ ಅವರು ಭೂ ಅಕ್ರಮಗಳನ್ನು ಎಸಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಹಲವಾರು ದಾಖಲೆಗಳನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸೋಮನಾಥ್ ನಾಯಕ್ ಇ-ಮೇಲ್ ಮೂಲಕ ಸಲ್ಲಿಸಿದ್ದಾರೆ. ವೀರೇಂದ್ರ ಹೆಗ್ಗಡೆ ಅವರು ಕಾನೂನುಬಾಹಿರ ಕೃತ್ಯಗಳನ್ನು ಎಸಗಿದ್ದಾರೆ. ಸುಮಾರು 2,500 ಎಕರೆ ಭೂ ಹಗರಣ ನಡೆಸಿದ್ದಾರೆ ಹಾಗೂ ಸಾವಿರಾರು ಕೋಟಿ ರೂಪಾಯಿಗಳ ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

“ವೀರೇಂದ್ರ ಹೆಗ್ಗಡೆ ಅವರ ‘ಶ್ರೀ ಧರ್ಮಸ್ಥಳ ಮಂಜುನಾಥ (ಎಸ್‌ಡಿಎಂ) ಶೈಕ್ಷಣಿಕ ಟ್ರಸ್ಟ್ ಮತ್ತು ಎಸ್‌ಡಿಎಂ ಶೈಕ್ಷಣಿಕ ಸೊಸೈಟಿ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಹಲವಾರು ಕಾನೂನುಗಳನ್ನು ಉಲ್ಲಂಘಿಸಿವೆ. ಕಾನೂನಿನ ಪ್ರಕಾರ 18% ಎಸ್‌ಸಿ/ಎಸ್‌ಟಿ ಸಿಬ್ಬಂದಿಯನ್ನು ನೇಮಿಸಿಲ್ಲ. ಅಲ್ಲದೆ, ಎಸ್‌ಸಿ/ಎಸ್‌ಟಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ನೀಡಲಾದ ಹಣಕಾಸಿನ ಅನುದಾನವನ್ನು ಟ್ರಸ್ಟ್ ಮತ್ತು ಸೊಸೈಟಿಗಳು ದುರುಪಯೋಗ ಮಾಡಿಕೊಂಡಿವೆ ಎಂಬುದು ತಿಳಿದುಬಂದಿದೆ. ಹೆಗ್ಗಡೆ ಅವರ ಅವರ ವಿರುದ್ಧ ಇಡಿ ಮತ್ತು ಸಮರ್ಥ ಪ್ರಾಧಿಕಾರದ ಮೂಲಕ ವಿಚಾರಣೆ ನಡೆಸಬೇಕು. ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ವೀರೇಂದ್ರ ಹೆಗ್ಗಡೆ ಅವರನ್ನು 2022ರ ಜುಲೈನಲ್ಲಿ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಬಿಜೆಪಿ ನಾಮನಿರ್ದೇಶನ ಮಾಡಿತು. ಅಂದಿನಿಂದ ಅವರು ರಾಜ್ಯಸಭಾ ಸದಸ್ಯರಾಗಿದ್ದಾರೆ.




