ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ಕಳೆದ 5 ವರ್ಷಗಳಲ್ಲಿ 15ನೇ ಹಣಕಾಸು ಆಯೋಗದ ಮೂಲಕ ಕೇಂದ್ರವು ಮಾಡಿದ ದ್ರೋಹದಿಂದ ಸುಮಾರು 70 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ನಾಡನ್ನು ಉದ್ದೇಶಿಸಿ ಅವರು ಮಾತನಾಡಿದರು.
“15ನೇ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ್ದ ಅನುದಾನ, ಕೇಂದ್ರವು ಬಜೆಟ್‌ನಲ್ಲಿ ಘೋಷಿಸಿ ಕೊಡದೆ ಹೋದ ಅನುದಾನ, ಯೋಜನೆಗಳಲ್ಲಾದ ಅನ್ಯಾಯ ಸೇರಿ ಸುಮಾರು 1 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಅನ್ಯಾಯವಾಗಿದೆ. ಇದರ ವಿರುದ್ಧ ಸರ್ಕಾರ ಹೋರಾಟ ನಡೆಸುತ್ತಿದೆ. ಜನ ಸಮುದಾಯವು ಕೂಡ ಗಂಭಿರವಾಗಿ ಪ್ರಶ್ನಿಸಬೇಕಾದ ಅನಿವಾರ್ಯತೆ ಉದ್ಭವಿಸಿದೆ. ಬಲಿಷ್ಠ ಒಕ್ಕೂಟ ವ್ಯವಸ್ಥೆಯ ಕನಸು ನಮ್ಮ ಸಂವಿಧಾನ ಪಿತೃಗಳದ್ದಾಗಿತ್ತು. ಇದನ್ನು ಕಳೆದ ಕೆಲವು ವರ್ಷಗಳಿಂದ ಛಿದ್ರಗೊಳಿಸಿ ರಾಜ್ಯಗಳ ಅಧಿಕಾರವನ್ನು ಕಬ್ಜಾ ಮಾಡುವ ವಸಾಹತುವಾದಿ ಮನೋಭಾವ ಕಾಣುತ್ತಿದೆ. ಕೇಂದ್ರದ ಈ ತಾರತಮ್ಯಗಳ ವಿರುದ್ಧ ಇಡೀ ನಾಡು ಸಂವಿಧಾನಾತ್ಮಕವಾಗಿ ನಿಂತು ಪ್ರತಿಭಟಿಸದೆ ಹೋದರೆ ಅಪಾಯ ಕಟ್ಟಿಟ್ಟದ್ದು” ಎಂದು ಎಚ್ಚರಿಕೆ ಮಾತುಗಳನ್ನು ಆಡಿದರು.
“4.5 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ತೆರಿಗೆ ಸಂಪತ್ತನ್ನು ಕರ್ನಾಟಕವು ನೀಡುತ್ತಿದೆ. ಆದರೆ ನಮಗೆ ಬಿಡಿಗಾಸು ಕೊಟ್ಟು ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸುತ್ತಿದೆ. ಹಿಂದಿ ಭಾಷೆಯನ್ನು ಹೇರಿಕೆ ಮಾಡಲು ನಿರಂತರ ಹುನ್ನಾರ ನಡೆಯುತ್ತಿದೆ. ಹಿಂದಿ, ಸಂಸ್ಕೃತ ಭಾಷೆಗಳ ಅಭಿವೃದ್ಧಿಗೆ ಮಾತ್ರ ಅನುದಾನಗಳನ್ನು ನೀಡಲಾಗುತ್ತಿದೆ. ಕನ್ನಡವೂ ಸೇರಿದಂತೆ ಉಳಿದ ದೇಶಭಾಷೆಗಳನ್ನು ನಿರ್ಲಕ್ಷಿಸಲಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಬೇಕಾಗಿದ್ದ ಯೋಜನೆಗಳನ್ನು ಕರ್ನಾಟಕಕ್ಕೆ ಕೊಡದೆ ವಂಚಿಸಲಾಗುತ್ತಿದೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗಿದ್ದರೂ, ನೀಡಬೇಕಾದ ಅನುದಾನಗಳನ್ನೂ ಕೊಡದೆ ಅನ್ಯಾಯ ಮಾಡಲಾಗುತ್ತಿದೆ” ಎಂದರು.
“ಶಿಕ್ಷಣ ಕ್ಷೇತ್ರದ ಬಲವರ್ಧನೆಗಾಗಿ ಈ ವರ್ಷ 65,000 ಕೋಟಿ ರೂ.ಗಳಿಗೂ ಹೆಚ್ಚಿನ ಸಂಪನ್ಮೂಲಗಳನ್ನು ವಿನಿಯೋಗಿಸುತ್ತಿದ್ದೇವೆ. ನಮ್ಮ ವಸತಿ ಶಾಲೆಗಳು, ವಸತಿ ನಿಲಯಗಳಲ್ಲಿ 8.36 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಹೊಸದಾಗಿ ವಸತಿ ಶಾಲೆಗಳು, ವಸತಿ ನಿಲಯಗಳನ್ನು ಸ್ಥಾಪಿಸುತ್ತಿದ್ದೇವೆ. ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಪ್ರತ್ಯೇಕ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಕ್ಯಾನ್ಸರ್‌ನಿಂದ ಬಾಧಿತರಾದ ಮಕ್ಕಳಿಗೆ ವೈದ್ಯಕೀಯ ಬೆಂಬಲದೊಂದಿಗೆ ಶಿಕ್ಷಣವನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗ್ಯಾರಂಟಿಗೆ 100 ಅಂಕ, ಶೇ.93ರಷ್ಟು ಭರವಸೆ ಈಡೇರಿಕೆ ವಿಫಲ, ಸರ್ಕಾರದ ಬಗ್ಗೆ ‘ಸಿವಿಕ್ ಬೆಂಗಳೂರು’ ಬಿಚ್ಚಿಟ್ಟ ಸತ್ಯವೇನು?
“ಪ್ರೊ.ಸುಖ್‌ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗವು ತನ್ನ ವರದಿಯನ್ನು ನೀಡಿದೆ. ರಾಜ್ಯದ್ದೆ ಆದ ಶಿಕ್ಷಣ ನೀತಿಯು ರಚನೆಯಾಗಿರುವುದು ಇದೇ ಮೊದಲು. ಸದರಿ ವರದಿಯನ್ನು ಗಂಭೀರವಾಗಿ ಪರಿಶೀಲಿಸಿ ಅದರ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು.
“ಬಹಳ ವರ್ಷಗಳ ನಂತರ ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್‌ನಲ್ಲಿ ಕರ್ನಾಟಕವು ಮಹಾರಾಷ್ಟ್ರವನ್ನು ಹಿಂದೆ ಹಾಕಿ, ಮೊದಲ ಸ್ಥಾನಕ್ಕೆ ಏರಿದೆಯೆಂದು ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿರುವ ಅಂಕಿ ಅಂಶಗಳು ಹೇಳುತ್ತಿವೆ. 50,107 ಕೋಟಿ ರೂ.ಗಳಿಗೂ ಹೆಚ್ಚಿನ ವಿದೇಶಿ ನೇರ ಹೂಡಿಕೆಯು ರಾಜ್ಯದಲ್ಲಿ ಆಗಿದೆ. ಇಡೀ ದೇಶದ ಹೂಡಿಕೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಪಾಲು ಶೇ.51 ರಷ್ಟಿದೆ. ಅದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ” ಎಂದರು.
“ರಾಜ್ಯದ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆ.ಎಂ.ಎಫ್. ನಿಂದ “ಗೋವಿನಿಂದ ಗ್ರಾಹಕರವರೆಗೆ” ಎಂಬ ಶೀರ್ಷಿಕೆಯೊಂದಿಗೆ “ನಂದಿನಿ” ಬ್ರ್ಯಾಂಡ್‌ನಲ್ಲಿ 175 ಕ್ಕೂ ಅಧಿಕ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ರಾಜ್ಯ, ಹೊರರಾಜ್ಯ ಮತ್ತು ವಿದೇಶಗಳ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆ.ಎಂ.ಎಫ್. ನಿಂದ ದಿನಕ್ಕೆ 1 ಕೋಟಿ ಲೀಟರ್‌ಗೂ ಹೆಚ್ಚಿನ ಹಾಲನ್ನು ಸಂಗ್ರಹಿಸಲಾಗುತ್ತಿದೆ” ಎಂದು ತಿಳಿಸಿದರು.
“ನಮ್ಮ ಹೊಸ ತಲೆಮಾರಿನ ಮೇಲೆ ಈ ನಾಡನ್ನು ಮುನ್ನಡೆಸುವ ಮತ್ತು ಸಮೃದ್ಧಗೊಳಿಸುವ ಮಹತ್ತರವಾದ ಜವಾಬ್ದಾರಿಯಿದೆ. ನಮ್ಮ ಹಿರಿಯರು ಬಹಳ ತ್ಯಾಗ ಮಾಡಿ ಈ ನಾಡನ್ನು ಕಟ್ಟಿದ್ದಾರೆ. ನಮ್ಮ ಗುರಿ ಅತ್ಯಂತ ಉದಾತ್ತವಾದ, ವೈಜ್ಞಾನಿಕವಾದ, ವೈಚಾರಿಕ ಮನೋಭಾವದ, ಮಾನವೀಯತೆಯ ನಾಡನ್ನು ಕಟ್ಟುವುದು. ಯುರೋಪಿನ ದೇಶಗಳು ಈ ವಿಚಾರದಲ್ಲಿ ಬಹಳಷ್ಟನ್ನು ಸಾಧಿಸಿವೆ. ಆ ರೀತಿಯ ಮಾದರಿಗಳ ಕಡೆಗೆ ನಾವು ಮುನ್ನಡೆಯಬೇಕು ಮತ್ತು ನಮ್ಮವೇ ಆದ ಮಾದರಿಗಳನ್ನೂ ನಿರ್ಮಿಸಬೇಕು. ಆ ಉದ್ದೇಶದಿಂದಲೇ ನಾವು ಯೂನಿವರ್ಸಲ್ ಬೇಸಿಕ್ ಇನ್‌ಕಂ ಎಂಬ ಪರಿಕಲ್ಪನೆಯಡಿ ಜನರ ಖಾತೆಗಳಿಗೆ ನೇರವಾಗಿ ಹಣ ವರ್ಗಾಯಿಸುತ್ತಿದ್ದೇವೆ” ಎಂದು ಹೇಳಿದರು.
1956 ರಂದು ಏಕೀಕರಣಗೊಂಡ ನಮ್ಮ ಕರ್ನಾಟಕ ರಾಜ್ಯ ಉದಯವಾಗಿ ನವೆಂಬರ್ 1, 2025 ಕ್ಕೆ 69 ವರ್ಷ ಪೂರೈಸಿ 70ನೇ ವರ್ಷಕ್ಕೆ ಮುನ್ನಡೆಯುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಎಲ್ಲ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ಮೈಸೂರಿನ ವಿದ್ಯಾರ್ಥಿ ರಾಮಸ್ವಾಮಿ, ಬಳ್ಳಾರಿಯ ರಂಜಾನ್ ಸಾಬ್ ಮುಂತಾದವರಿಗೆ ತಲೆಬಾಗಿ ನಮಿಸುತ್ತೇನೆ. ಏಕೀಕರಣ ಚಳುವಳಿಯ ಬೀಜಗಳನ್ನು ಬಿತ್ತಿ, ಅದನ್ನು ಮುನ್ನಡೆಸಿದ ಆಲೂರು ವೆಂಕಟರಾಯರು, ಅಂದಾನಪ್ಪ ದೊಡ್ಡಮೇಟಿ, ಗುದ್ಲೆಪ್ಪ ಹಳ್ಳಿಕೇರಿ, ಸಿದ್ದಪ್ಪ ಕಂಬಳಿ, ಆರ್.ಎಚ್. ದೇಶಪಾಂಡೆ, ಕೌಜಲಗಿ ಶ್ರೀನಿವಾಸ ರಾವ್, ಕೆಂಗಲ್ ಹನುಮಂತಯ್ಯ ಮುಂತಾದ ಮಹನೀಯರನ್ನು ಹೃದಯ ತುಂಬಿ ಸ್ಮರಿಸುತ್ತೇನೆ. ಇವರೆಲ್ಲರ ಹೋರಾಟದ ಫಲವೆ ಇಂದಿನ ಕರ್ನಾಟಕ” ಎಂದು ಅಭಿಮಾನದ ಮಾತುಗಳನ್ನಾಡಿದರು.





