2015ರಿಂದಲೂ ಕೈಲಾಶ್ ಹೇಳಿಕೆಗಳು ಬಿಜೆಪಿ ನಾಯಕರುಗಳನ್ನೇ ಮುಜುಗುರಕ್ಕೀಡು ಮಾಡುವಂತಿದೆ. ಆದರೆ ಬಿಜೆಪಿ ಮಾತ್ರ ನಿರಂತರವಾಗಿ ಕೈಲಾಶ್ ಅವರಿಗೆ ಮನ್ನಣೆ ನೀಡುತ್ತಲೇ ಬಂದಿದೆ. ಸ್ಥಳೀಯವಾಗಿ ಕೈಲಾಶ್‌ಗೆ ಇರುವ ಪ್ರಭಾವವೂ ಇದಕ್ಕೆ ಕಾರಣವಾಗಿರಬಹುದು ಅಥವಾ ಬಿಜೆಪಿಯವರಿಗೆ ಇಂತಹ ಜನರೇ ಅಗತ್ಯ ಇದೆ ಎಂಬ ಮಾತು ನಿಜವೇ?
ಮಧ್ಯಪ್ರದೇಶದ ಇಂದೋರ್‌ನ ಭಗೀರಥಪುರದಲ್ಲಿ ಇತ್ತೀಚೆಗೆ ವಿಷಪೂರಿತ ನೀರು ಕುಡಿದು ಕನಿಷ್ಠ 10 ಮಂದಿ ಮೃತಪಟ್ಟಿದ್ದು, 2,500ಕ್ಕೂ ಹೆಚ್ಚು ಮಂದಿ ಅನಾರೋಗ್ಯಕ್ಕೆ ಒಳಗಾದರೆ, ಸುಮಾರು 270ಕ್ಕೂ ಅಧಿಕ ಮಂದಿ ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದೇಶದಾದ್ಯಂತ ಸುದ್ದಿಯಾಗುವುದರ ನಡುವೆಯೇ ಮಧ್ಯಪ್ರದೇಶದ ಹಿರಿಯ ಬಿಜೆಪಿ ನಾಯಕ, ನಗರಾಭಿವೃದ್ಧಿ ಮತ್ತು ವಸತಿ ಸಚಿವ ಕೈಲಾಶ್ ವಿಜಯವರ್ಗೀಯ ತನ್ನ ಹೊಸ ವಿವಾದವನ್ನು ಸೃಷ್ಟಿಸಿಕೊಂಡಿದ್ದಾರೆ. ಎಂದಿನಂತೆ ತಮ್ಮ ಉದ್ಧಟತನವನ್ನು ಪ್ರದರ್ಶಿಸಿದ್ದಾರೆ.
ಅಷ್ಟಕ್ಕೂ ಕೈಲಾಶ್ ವಿಜಯವರ್ಗೀಯ ಅವರ ವಿವಾದ ಹೊಸದೇನಲ್ಲ. ತಾವು ರಾಜಕೀಯಕ್ಕೆ ಇಳಿದಾಗಿನಿಂದ ಈವರೆಗೂ ನಿರಂತರವಾಗಿ ಒಂದಲ್ಲ ಒಂದು ವಿವಾದಾದ್ಮಕ, ಮಹಿಳಾ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಬಂದವರು ಕೈಲಾಶ್ ವಿಜಯವರ್ಗೀಯ. ಆದರೆ ಈವರೆಗೂ ಬಿಜೆಪಿ ಮಾತ್ರ ವಿಜಯವರ್ಗೀಯ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಕಡೆ ಪಕ್ಷ ಮೂಲೆಗುಂಪೂ ಮಾಡಿಲ್ಲ. ವಿಜಯವರ್ಗೀಯ ಎಂಬ ಗುಟುರು ಗೂಳಿಗೆ ಬಿಜೆಪಿ ಕಡಿವಾಣ ಹಾಕುವುದೇ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಇಲ್ಲ ಎಂದಷ್ಟೇ ಆಗಬಹುದೇನೋ! ವಿಜಯವರ್ಗೀಯ ಅವರ ಈವರೆಗಿನ ವಿವಾದಗಳತ್ತ ಗಮನಹರಿಸಿದಾಗ ಬಿಜೆಪಿ ಯೋಜನೆಯೇನೂ ಎಂಬ ಚರ್ಚೆಗೆ ನಾವು ಇಳಿಯಬಹುದು.
ಇದನ್ನು ಓದಿದ್ದೀರಾ? ವಿಷಪೂರಿತ ನೀರಿಗೆ 10 ಬಲಿ : ಡಬಲ್ ಇಂಜಿನ್ ಸರ್ಕಾರ ಪೇಚಿನಲ್ಲಿರುವಾಗ ನಾಯಕರುಗಳ ಶೀತಲ ಸಮರ
ಇಂದೋರ್ ವಿಷಪೂರಿತ ನೀರು: ಪತ್ರಕರ್ತರಿಗೆ ಅಸಭ್ಯ ಪದ ಬಳಕೆ
ಇಂದೋರ್‌ನ ಭಗೀರಥಪುರ ಪ್ರದೇಶದಲ್ಲಿ ವಿಷಪೂರಿತ ನೀರಿನಿಂದಾಗಿ ಹಲವು ಮಂದಿ ಮೃತಪಟ್ಟಿದ್ದಾರೆ, ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಮತ್ತು ಶುದ್ಧ ನೀರಿನ ವ್ಯವಸ್ಥೆಯ ಬಗ್ಗೆ ತಮ್ಮನ್ನು ಪ್ರಶ್ನಿಸಿದ ಪತ್ರಕರ್ತರ ಮೇಲೆ ಆಕ್ರೋಶಗೊಂಡ ಕೈಲಾಶ್, ಅನಗತ್ಯವಾಗಿ ಪ್ರಶ್ನೆ ಕೇಳಬೇಡಿ ಎನ್ನುತ್ತಾ ಅಸಭ್ಯವಾಗಿ ಮಾತನಾಡಿ ತಮ್ಮ ದುರಹಂಕಾರವನ್ನು ಪ್ರದರ್ಶಿಸಿದ್ದಾರೆ. ಕೈಲಾಶ್ ವರ್ತನೆಗೆ ಟೀಕೆ ವ್ಯಕ್ತವಾಗುತ್ತಿದ್ದಂತೆ, ವಿವಾದವಾಗುತ್ತಿದ್ದಂತೆ ಕ್ಷಮೆಯಾಚಿಸಿದ್ದಾರೆ. ಆದರೆ ಇಲ್ಲಿ ತಲೆದಂಡವಾಗಿದ್ದು ಅಧಿಕಾರಿಯದ್ದು! ಹೌದು ವಿಜಯವರ್ಗೀಯ ಅವರ ಹೇಳಿಕೆಯನ್ನು ಅಸಭ್ಯ ಎಂದು ಅಧಿಕೃತ ಆದೇಶದಲ್ಲಿ ದಾಖಲಿಸಿದ ದೇವಸ್ ಜಿಲ್ಲೆಯ ಎಸ್‌ಡಿಎಂ (SDM) ಅವರನ್ನು ಅಮಾನತುಗೊಳಿಸಲಾಗಿದೆ. ಈ ರೀತಿ ಅಧಿಕಾರ ದುರ್ಬಳಕೆ, ಗೂಂಡಾಗಿರಿ ಮಾಡುವ ವ್ಯಕ್ತಿಯನ್ನು ಬಿಜೆಪಿ ಮಾತ್ರ ಪೋಷಿಸುತ್ತಲೇ ಇದೆ.
Let's end the old year 2025
— ✎𝒜 πundhati🌵🍉🇵🇸 (@Polytikles) December 31, 2025
& Let's start this new year with this powerful video of A Journalist grilling Kailash Vijayvargiya.
Happy New Year 2026 🥳🥳🥳pic.twitter.com/iTPpNiciJP
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟಿಗರ ಮೇಲೆ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೆ
2025ರ ಅಕ್ಟೋಬರ್‌ನಲ್ಲಿ ಇಂದೋರ್‌ನಲ್ಲಿ ನಡೆದ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ ನಡೆದಿತ್ತು. ಈ ಬಗ್ಗೆಯೂ ಕೈಲಾಶ್ ವಿವಾದಾತ್ಮಕ, ಮಹಿಳಾ ವಿರೋಧಿ ಹೇಳಿಕೆ ನೀಡಿದ್ದರು. “ಈ ಘಟನೆ ಆಟಗಾರರಿಗೆ ಒಂದು ಪಾಠವಾಗಿದ್ದು, ಅವರು ಇನ್ನು ಮುಂದೆ ಎಚ್ಚರಿಕೆಯಿಂದ ಇರಲಿದ್ದಾರೆ” ಎಂದು ಹೇಳಿದ್ದರು. ಭದ್ರತಾ ಲೋಪವಾಗಿದೆ ಎಂಬುದನ್ನು ಒಪ್ಪಿಕೊಂಡರೂ ಆಟಗಾರರು ಯಾರಿಗೂ ಮಾಹಿತಿ ನೀಡದೆ ಹೋಟೆಲ್‌ನಿಂದ ಹೊರಗೆ ಹೋಗಿದ್ದು, ಅವರ ಕಡೆಯಿಂದಲೇ ತಪ್ಪಾಗಿರುವುದು ಎಂದು ಸಂಪೂರ್ಣ ಘಟನೆಯ ಹೊಣೆಯನ್ನು ಮಹಿಳಾ ಕ್ರಿಕೆಟಿಗರ ಮೇಲೆಯೇ ಹಾಕಿದ್ದರು. ಕೈಲಾಶ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ರಾಹುಲ್, ಪ್ರಿಯಾಂಕಾಗೆ ಸಂಸ್ಕೃತಿಯ ಕೊರತೆಯಿದೆ ಎಂದಿದ್ದ ಕೈಲಾಶ್!
2025ರ ಸೆಪ್ಟೆಂಬರ್‌ನಲ್ಲಿ ಶಾಜಾಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ವಿಜಯವರ್ಗೀಯ ಅವರು, “ಲೋಕಸಭೆಯ ವಿರೋಧ ಪಕ್ಷದ ನಾಯಕರು (ರಾಹುಲ್ ಗಾಂಧಿ) ಸಾರ್ವಜನಿಕವಾಗಿ ತಮ್ಮ ಸಹೋದರಿಯನ್ನು (ಪ್ರಿಯಾಂಕಾ ಗಾಂಧಿ ವಾದ್ರಾ) ಮುದ್ದಾಡುತ್ತಾರೆ. ಇದು ವಿದೇಶಿ ಸಂಸ್ಕೃತಿಯ ಪ್ರಭಾವ. ಇದು ಸಂಸ್ಕೃತಿಯ ಕೊರತೆ” ಎಂದು ಹೇಳಿದ್ದರು. ಈ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಈ ಹೇಳಿಕೆಯನ್ನು ‘ಹೇಯ ಮತ್ತು ಅಸಹ್ಯಕರ’ ಎಂದಿದ್ದರು. ಸಚಿವರು ಅಣ್ಣ-ತಂಗಿಯ ಪವಿತ್ರ ಸಂಬಂಧವನ್ನು ಅವಮಾನಿಸಿದ್ದಾರೆ ಎಂದು ಹೇಳಿದ್ದರು.
ಸ್ವಾತಂತ್ರ್ಯ ದಿನದ ಬಗ್ಗೆ ಕೈಲಾಶ್ ವಿಜಯವರ್ಗೀಯ ಹೇಳಿಕೆ
1947ರ ಆಗಸ್ಟ್ 15ರಂದು ನಮಗೆ ದೊರೆತ ಸ್ವಾತಂತ್ರ್ಯವು ‘ಕಟಿ-ಫಟಿ’ ಅಂದರೆ ಛಿದ್ರಗೊಂಡ ಸ್ವಾತಂತ್ರ್ಯವಾಗಿದೆ. ನಾವು ‘ಅಖಂಡ ಭಾರತ’ದ ಕಲ್ಪನೆಯನ್ನು ಹೊಂದಿದ್ದೇವೆ. ಒಂದು ದಿನ ಇಸ್ಲಾಮಾಬಾದ್‌ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಕಾಲ ಬಂದೇ ಬರುತ್ತದೆ ಎಂದೂ ಹೇಳಿದ್ದರು. ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. “ಇದು ದೇಶದ ಸ್ವಾತಂತ್ರ್ಯ ಚಳವಳಿ ಮತ್ತು ಪ್ರಾಣತ್ಯಾಗ ಮಾಡಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ” ಎಂದು ಕಾಂಗ್ರೆಸ್ ಆರೋಪಿಸಿತ್ತು, ಮಧ್ಯಪ್ರದೇಶದ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಆದರೆ ಬಿಜೆಪಿ ಮಾತ್ರ ಈ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ, “ಸಚಿವರು ಅಂದಿನ ಸರ್ಕಾರದ ತಪ್ಪು ನೀತಿಗಳನ್ನು ಮತ್ತು ದೇಶದ ವಿಭಜನೆಯನ್ನು ಟೀಕಿಸಿದ್ದಾರೆಯೇ ಹೊರತು ಸ್ವಾತಂತ್ರ್ಯವನ್ನಲ್ಲ” ಎಂದು ತೇಪೆ ಹಾಕಿತ್ತು.
ಮಹಿಳೆಯರ ಉಡುಪಿನ ಬಗ್ಗೆ ಹೇಳಿಕೆ
ಕೈಲಾಶ್ ವಿಜಯವರ್ಗಿಯ ಮಹಿಳೆಯರ ಉಡುಪಿನ ಬಗ್ಗೆ ಹಲವಾರು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. 2025ರ ಜೂನ್‌ನಲ್ಲಿ ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ನನಗೆ ತುಂಡುಡುಗೆ ಧರಿಸುವ ಹುಡುಗಿಯರು ಇಷ್ಟವಿಲ್ಲ. ವಿದೇಶಗಳಲ್ಲಿ ಕಡಿಮೆ ಬಟ್ಟೆ ಧರಿಸುವುದು ಸೌಂದರ್ಯದ ಸಂಕೇತವಾಗಿರಬಹುದು. ಆದರೆ ಭಾರತದಲ್ಲಿ ಮಹಿಳೆಯರನ್ನು ದೇವತೆಯ ರೂಪದಲ್ಲಿ ಕಾಣಲಾಗುತ್ತದೆ. ಆದ್ದರಿಂದ ಉತ್ತಮವಾದ ಬಟ್ಟೆಗಳನ್ನು ಧರಿಸಬೇಕು” ಎಂದಿದ್ದರು.
ಇದನ್ನು ಓದಿದ್ದೀರಾ? ಪತ್ರಕರ್ತರ ಪ್ರಶ್ನೆಗೆ ಉದ್ಧಟ ಉತ್ತರ ನೀಡಿದ ಅಮಿತ್ ಶಾ, ವಿಜಯವರ್ಗೀಯಾ: ವಿಡಿಯೋ ವೈರಲ್
ಅಷ್ಟು ಮಾತ್ರವಲ್ಲದೆ ತಮ್ಮೊಂದಿಗೆ ಸೆಲ್ಫಿ ತೆಗೆಯಲು ಬಂದ ಹುಡುಗಿಯರಿಗೆ, “ಮುಂದಿನ ಬಾರಿ ಸರಿಯಾದ ಬಟ್ಟೆ ಧರಿಸಿ ಬನ್ನಿ, ಆಗ ಫೋಟೋ ತೆಗೆಸಿಕೊಳ್ಳೋಣ” ಎಂದು ಹೇಳಿದ್ದರು. 2023ರಲ್ಲಿ ಇಂದೋರ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ, ಸಣ್ಣ ಬಟ್ಟೆ ಧರಿಸುವ ಹುಡುಗಿಯರು ರಾಮಾಯಣದ ‘ಶೂರ್ಪನಖಿ’ಯಂತೆ ಕಾಣುತ್ತಾರೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಈ ಹೇಳಿಕೆಗಳು ಮಹಿಳೆಯರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಹಕ್ಕುಗಳ ಮೇಲೆ ನಡೆಸುವ ದಾಳಿ ಎಂದು ಪ್ರತಿಪಕ್ಷಗಳು ಟೀಕಿಸಿತ್ತು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಯೂ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಪೋಹಾ ತಿಂದ ಕಾರ್ಮಿಕರು ಬಾಂಗ್ಲಾದೇಶದವರು!
ವಿಜಯವರ್ಗೀಯ ಅವರು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲವು ನಿರ್ಮಾಣ ಕಾರ್ಮಿಕರ ಆಹಾರ ಪದ್ಧತಿ ವಿಚಿತ್ರವಾಗಿದೆ. ಅವರು ಮಧ್ಯಾಹ್ನದ ಊಟಕ್ಕೆ ಕೇವಲ ಪೋಹಾ (ಅವಲಕ್ಕಿ) ಮಾತ್ರ ತಿನ್ನುತ್ತಿದ್ದರು. ಇದರಿಂದಾಗಿ ಅವರ ರಾಷ್ಟ್ರೀಯತೆಯ ಬಗ್ಗೆ ಅನುಮಾನ ವ್ಯಕ್ತವಾಗಿತ್ತು ಎಂದು ಹೇಳಿದ್ದರು. ಕೇವಲ ಪೋಹಾ ತಿನ್ನುವ ಅಭ್ಯಾಸದಿಂದಾಗಿ ಆ ಕಾರ್ಮಿಕರು ಬಾಂಗ್ಲಾದೇಶದಿಂದ ಬಂದವರಾಗಿರಬಹುದು ಎಂದು ತಮಗೆ ಶಂಕೆಯಾಗಿತ್ತು ಎಂದಿದ್ದರು. ಆದರೆ ಅವಲಕ್ಕಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಮನೆಮಾತಾದ ಉಪಹಾರ ಆಗಿರುವುದರಿಂದ ಈ ಹೇಳಿಕೆಗೆ ತೀವ್ರ ಟ್ರೋಲ್‌ಗೆ ಒಳಗಾಗಿತ್ತು. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಇದು ಜನಾಂಗೀಯ ಮತ್ತು ವಿಭಜಕ ಮನಸ್ಥಿತಿಯ ಹೇಳಿಕೆ ಎಂದು ಟೀಕಿಸಿದ್ದವು.
ಅಧಿಕಾರಿಗೆ ಬ್ಯಾಟ್‌ನಿಂದ ಚಚ್ಚಿದ್ದ ವಿಜಯವರ್ಗೀಯ ಮಗ
2019ರ ಜೂನ್ 26ರಂದು ಕೈಲಾಶ್ ವಿಜಯವರ್ಗೀಯ ಅವರ ಪುತ್ರ ಆಕಾಶ್ ವಿಜಯವರ್ಗೀಯ ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್ ಅಧಿಕಾರಿಯ ಮೇಲೆ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ಮಾಡಿದ್ದರು. ಗಂಜಿ ಕಾಂಪೌಂಡ್ ಪ್ರದೇಶದಲ್ಲಿ ಶಿಥಿಲಗೊಂಡ ಮನೆಯೊಂದನ್ನು ಕೆಡವಲು ಬಂದಿದ್ದ ಪಾಲಿಕೆ ಅಧಿಕಾರಿ ಧೀರೇಂದ್ರ ಸಿಂಗ್ ಬೈಸ್ ಮೇಲೆ ಆಕಾಶ್ ವಿಜಯವರ್ಗೀಯ ಸಾರ್ವಜನಿಕವಾಗಿ ಬ್ಯಾಟ್‌ನಿಂದ ಚಚ್ಚಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಆಕಾಶ್ ಬಂಧನ ಮಾಡಿದ್ದರು. ನಂತರ ಜಾಮೀನೂ ಮಂಜೂರಾಗಿತ್ತು. 2024ರ ಸೆಪ್ಟೆಂಬರ್‌ನಲ್ಲಿ ಮಧ್ಯಪ್ರದೇಶದ ವಿಶೇಷ ನ್ಯಾಯಾಲಯವು ಈ ಪ್ರಕರಣದ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು. ಅಧಿಕಾರಿಯು “ಘಟನೆಯ ಸಮಯದಲ್ಲಿ ನಾನು ಫೋನ್‌ನಲ್ಲಿ ಮಾತನಾಡುತ್ತಿದ್ದರಿಂದ ನನ್ನನ್ನು ಯಾರು ಹೊಡೆದರು ಎಂದು ನೋಡಲು ಸಾಧ್ಯವಾಗಲಿಲ್ಲ” ಎಂದು ಹೇಳಿಕೆ ನೀಡಿದ್ದರಿಂದ ಎಲ್ಲರೂ ಖುಲಾಸೆಗೊಂಡಿದ್ದರು. ಆದರೆ ಅಧಿಕಾರಿಗೆ ಒತ್ತಡ ಹೇರಿ ಈ ಹೇಳಿಕೆ ನೀಡುವಂತೆ ಮಾಡಲಾಗಿದೆ ಎಂದು ಆರೋಪಗಳೂ ಕೇಳಿಬಂದಿವೆ.

ಶತ್ರುಘ್ನ ಸಿನ್ಹಾರನ್ನು ನಾಯಿಗೆ ಹೋಲಿಸಿದ್ದ ಕೈಲಾಶ್
2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿದಾಗ ಶತ್ರುಘ್ನ ಸಿನ್ಹಾ ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೈಲಾಶ್ ವಿಜಯವರ್ಗೀಯ “ಕಾರು ಚಲಿಸುವಾಗ ಅದರ ಕೆಳಗೆ ನಾಯಿ ಕೂಡ ಓಡುತ್ತದೆ, ಆ ಕಾರು ತನ್ನಿಂದಲೇ ಚಲಿಸುತ್ತಿದೆ ಎಂದು ನಾಯಿ ಭಾವಿಸುತ್ತದೆ” ಎಂದು ಹೇಳುತ್ತಾ ಸಿನ್ಹಾರನ್ನು ನಾಯಿಗೆ ಹೋಲಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಸಿನ್ಹಾ, “ಆನೆ ನಡೆದರೆ ಸಾವಿರ ನಾಯಿಗಳು ಬೊಗಳುತ್ತವೆ” ಎಂಬ ಹಿಂದಿ ಗಾದೆಯ ಮೂಲಕ ತಿರುಗೇಟು ನೀಡಿದ್ದರು. ಒಂದೇ ಪಕ್ಷದ ಇಬ್ಬರು ನಾಯಕರುಗಳು ಈ ವಾಗ್ವಾದ ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿತ್ತು.
ನಿತೀಶ್ ಕುಮಾರ್ ಬಗ್ಗೆ ಕೈಲಾಶ್ ಹೇಳಿಕೆ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡಾಗ, ವಿಜಯವರ್ಗೀಯ “ವಿದೇಶಗಳಲ್ಲಿ ಹುಡುಗಿಯರು ತಮ್ಮ ಬಾಯ್‌ಫ್ರೆಂಡ್‌ಗಳನ್ನು ಬದಲಾಯಿಸುವಂತೆ ನಿತೀಶ್ ಕುಮಾರ್ ಅವರು ಮೈತ್ರಿ ಬದಲಾಯಿಸುತ್ತಾರೆ” ಎಂದು ಹೇಳಿದ್ದರು. ವಿಜಯವರ್ಗೀಯ ಅವರ ಮಹಿಳಾ ವಿರೋಧಿ ಮತ್ತು ಸ್ತ್ರೀದ್ವೇಷದ ಹೇಳಿಕೆಯು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆ ಮಹಿಳೆಯರನ್ನು ಕೀಳಾಗಿ ಚಿತ್ರಿಸುವಂತಿದೆ ಎಂದು ಸಾಮಾಜಿಕ ಕಾರ್ಯಕರ್ತರು, ರಾಜಕೀಯ ನಾಯಕರುಗಳು ಆಕ್ಷೇಪಿಸಿದ್ದರು.
ವ್ಯಾಪಂ ಹಗರಣ: ಪತ್ರಕರ್ತನ ಬಗ್ಗೆ ಅಸಂವೇದನಾಶೀಲ ಹೇಳಿಕೆ
2015ರಲ್ಲಿ ಮಧ್ಯಪ್ರದೇಶದ ವ್ಯಾಪಂ ಹಗರಣದ ಬಗ್ಗೆ ವರದಿ ಮಾಡುತ್ತಿದ್ದ ಪತ್ರಕರ್ತ ಅಕ್ಷಯ್ ಸಿಂಗ್ ಅವರ ನಿಗೂಢ ಸಾವಿನ ಕುರಿತು ಕೈಲಾಶ್ ವಿಜಯವರ್ಗೀಯ ಅಸಂವೇದನಾಶೀಲ ಹೇಳಿಕೆ ನೀಡಿದ್ದರು. ಪತ್ರಕರ್ತರು ಅಕ್ಷಯ್ ಸಿಂಗ್ ಅವರ ಸಾವಿನ ಬಗ್ಗೆ ಪ್ರಶ್ನಿಸಿದಾಗ, “ಆ ಸತ್ತ ಪತ್ರಕರ್ತನ ಬಗ್ಗೆ ಬಿಡಿ. ನನಗಿಂತ ದೊಡ್ಡ ಪತ್ರಕರ್ತ ಅವನೇ” ಎಂದು ಪ್ರಶ್ನಿಸಿದ್ದರು. ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ತಾವು ಈ ತಮಾಷೆಗಾಗಿ ಹೇಳಿದ್ದು, ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದು ಸಮರ್ಥಿಸಿಕೊಂಡಿದ್ದರು. ತಾವು ತಪ್ಪು ಮಾಡಿಲ್ಲವೆಂದು ವಾದಿಸಿದ್ದ ಕೈಲಾಶ್ ಯಾರಾದರೂ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದರೆ ಅವರೇ ಕ್ಷಮೆಯಾಚಿಸಬೇಕು ಎಂದೂ ಹೇಳಿಕೊಂಡಿದ್ದರು.
ಹೀಗೆ ಕೈಲಾಶ್ ವಿಜಯವರ್ಗೀಯ ಸೃಷ್ಟಿಸಿರುವ ವಿವಾದ ಒಂದೆರೆಡಲ್ಲ. ಇದು ಬರೀ ಬಾಯಿ ತಪ್ಪಿ ಆಡಿದ ಮಾತುಗಳಲ್ಲ, ಬದಲಾಗಿ ಬಿಜೆಪಿಯೇ ಹೇಳುವ ‘ಸಂಸ್ಕೃತಿ’ ಎಂದು ವಿಪಕ್ಷಗಳು ಆಗಾಗೇ ಟೀಕಿಸುತ್ತಲಿವೆ. 2015ರಿಂದಲೂ ಕೈಲಾಶ್ ಹೇಳಿಕೆಗಳು ಬಿಜೆಪಿ ನಾಯಕರುಗಳನ್ನೇ ಮುಜುಗುರಕ್ಕೀಡು ಮಾಡುವಂತಿದೆ. ಆದರೆ ಬಿಜೆಪಿ ಮಾತ್ರ ನಿರಂತರವಾಗಿ ಕೈಲಾಶ್ ಅವರಿಗೆ ಮನ್ನಣೆ ನೀಡುತ್ತಲೇ ಬಂದಿದೆ. ಸ್ಥಳೀಯವಾಗಿ ಕೈಲಾಶ್‌ಗೆ ಇರುವ ಪ್ರಭಾವವೂ ಇದಕ್ಕೆ ಕಾರಣವಾಗಿರಬಹುದು.
ಇನ್ನೊಂದೆಡೆ ಬಿಜೆಪಿಯ ಮನುವಾದಿ ಮನಸ್ಥಿತಿಗೆ ತಕ್ಕುದಾದ ನಾಯಕ ಕೈಲಾಶ್ ಎಂಬ ಕಾರಣಕ್ಕೆ ಇನ್ನೂ ಕೈಲಾಶ್ ಅವರನ್ನು ಬಿಜೆಪಿ ಪೋಷಿಸಿಕೊಂಡೇ ಬರುತ್ತಿದೆಯೇ? ಮನುವಾದದಲ್ಲಿ ಹೆಣ್ಣು ಮಕ್ಕಳನ್ನು ತುಚ್ಛವಾಗಿ ಕಾಣಲಾಗುತ್ತದೆ. ಇಂತಹ ಮನಸ್ಥಿತಿಯನ್ನು ಹೊಂದಿರುವ ಕೈಲಾಶ್ ಹಲವು ಬಾರಿ ಮಹಿಳಾ ವಿರೋಧಿ ಹೇಳಿಕೆಗಳನ್ನು ನೀಡಿದವರು. ಹೀಗಿರುವಾಗ ಬಿಜೆಪಿಯವರಿಗೆ ಇಂತಹ ಜನರೇ ಅಗತ್ಯ ಇದೆ ಎಂಬ ಮಾತು ನಿಜವೇ ಎಂಬ ಪ್ರಶ್ನೆ ಮೂಡುತ್ತದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




