ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ಮೈತ್ರಿ ‘ಮಹಾವಿಕಾಸ್ ಅಘಾಡಿ’ (ಎಂವಿಎ) ಕೂಟದ ಮುಖ್ಯಮಂತ್ರಿ ಮುಖ, ಅಭ್ಯರ್ಥಿ ಯಾರು ಎಂಬುದನ್ನು ಸೂಕ್ತ ಸಮಯದಲ್ಲಿ ಮೈತ್ರಿಯು ಬಹಿರಂಗಪಡಿಸುತ್ತದೆ. ಆದರೆ, ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಮೊದಲು ‘ಸೋಲಿನ ಮುಖ’ ತೋರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಉದ್ದವ್ ಠಾಕ್ರೆ, “ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ) ಮತ್ತು ಎನ್‌ಸಿಪಿ (ಅಜಿತ್ ಪವಾರ್) ಆಡಳಿತಾರೂಢ ಮೈತ್ರಿಕೂಟವನ್ನು ಎಂವಿಎ ಮಣಿಸಿದ್ದು, ವಿಧಾನಸಭಾ ಚುನಾವಣೆಗೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ” ಎಂದು ಹೇಳಿದ್ದಾರೆ.
“ಇಂದು ಕೇಂದ್ರ ಮತ್ತು ರಾಜ್ಯದಲ್ಲಿ ಸೋರಿಕೆ ಸರ್ಕಾರಗಳಿವೆ. ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಅಕ್ರಮಗಳು ಬಿಜೆಪಿ ಸರ್ಕಾರಗಳ ವೈಫಲ್ಯವನ್ನು ಎತ್ತಿತೋರಿಸಿವೆ. ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಗೆ ಮಳೆನೀರು ಸೋರುತ್ತಿದೆ. ಅದರೆ, ಆ ವರದಿಗಳನ್ನು ದೇವಾಲಯ ಸಮಿತಿಯು ಕಸದ ಬುಟ್ಟಿಗೆ ಹಾಕಿದೆ” ಎಂದು ಆರೋಪಿಸಿದ್ದಾರೆ.
2022ರಲ್ಲಿ ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಶಿವಸೇನೆಯನ್ನು ವಿಭಜಿಸಿದರೆ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಎನ್‌ಪಿಸಿಯನ್ನು ವಿಭಜಿಸಿ ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿದ್ದಾರೆ. ಮಹಾರಾಷ್ಟ್ರದ ಎರಡು ಪ್ರಮುಖ ಪಕ್ಷಗಳು ವಿಭಜನೆಯಾದ ಬಳಿಕ, ಇದೀಗ ವಿಧಾನಸಭಾ ಚುನಾವಣೆ ಎದುರಾಗುತ್ತಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಶಿಂಧೆ ಬಣ) ಹಾಗೂ ಎನ್‌ಸಿಪಿ (ಅಜಿತ್ ಬಣ) ಮೈತ್ರಿಯನ್ನು ಕಾಂಗ್ರೆಸ್ ನೇತೃತ್ವದ ಎಂವಿಎ ಮಣಿಸಿ, ಭರ್ಜರಿ ಜಯ ಗಳಿಸಿದೆ.




