ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಮತ್ತು ಚುನಾವಣಾ ಅಕ್ರಮಗಳ ಆರೋಪದ ವಿರುದ್ಧ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಹೋರಾಡಲು ಪ್ರಯತ್ನಿಸುತ್ತಿರುವ ನಡುವೆಯೇ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ(ಆಗಸ್ಟ್ 11ರಂದು) ಇಂಡಿಯಾ ಒಕ್ಕೂಟದ ಸಂಸದರಿಗೆ ಭೋಜನ ಕೂಟ ಆಯೋಜಿಸಲಿದ್ದಾರೆ ಎಂದು ವರದಿಯಾಗಿದೆ.
ಚುನಾವಣಾ ವಂಚನೆ ವಿಷಯದ ಕುರಿತು ವಿರೋಧ ಪಕ್ಷದ ನಾಯಕರು ಮತ್ತು ಸಂಸದರು ಸೋಮವಾರ ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಅದೇ ದಿನ ಚಾಣಕ್ಯಪುರಿಯ ಹೋಟೆಲ್ ತಾಜ್ ಪ್ಯಾಲೇಸ್‌ನಲ್ಲಿ ಇಂಡಿಯಾ ಒಕ್ಕೂಟದ ಸಂಸದರಿಗೆ ಖರ್ಗೆ ಭೋಜನ ಕೂಟ ಆಯೋಜಿಸಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಮತ ಕಳವು ವಿರುದ್ಧ ಅಭಿಯಾನ ಆರಂಭಿಸಿದ ಕಾಂಗ್ರೆಸ್: ಡಿಜಿಟಲ್ ಮತದಾರರ ಪಟ್ಟಿ ನೀಡಲು ಆಗ್ರಹ
ಈ ಹಿಂದೆ ಇಂಡಿಯಾ ಬ್ಲಾಕ್‌ನ ಉನ್ನತ ನಾಯಕರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನಿವಾಸದಲ್ಲಿ ಭೋಜನ ಕೂಟ ನಡೆಸಿ ಬಿಹಾರದಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆಯ ವಿರುದ್ಧ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ ಕೆಲವೇ ದಿನಗಳ ನಂತರ ಇದೀಗ ಖರ್ಗೆ ಭೋಜನ ಕೂಟ ಆಯೋಜಿಸಲು ಮುಂದಾಗಿದ್ದಾರೆ.
2024ರ ಜೂನ್ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆದ ಬಳಿಕ ವಿರೋಧ ಪಕ್ಷದ ಪ್ರಮುಖ ನಾಯಕರ ಮೊದಲ ಸಭೆ ಇದಾಗಿತ್ತು. ಮಲ್ಲಿಕಾರ್ಜುನ ಖರ್ಗೆ , ಸೋನಿಯಾ ಗಾಂಧಿ, ಎನ್‌ಸಿಪಿ-ಎಸ್‌ಪಿ ಮುಖ್ಯಸ್ಥ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ, ಎಸ್‌ಪಿಯ ಅಖಿಲೇಶ್ ಯಾದವ್, ಆರ್‌ಜೆಡಿಯ ತೇಜಸ್ವಿ ಯಾದವ್, ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಡಿಎಂಕೆಯ ತಿರುಚಿ ಶಿವ ಮತ್ತು ಟಿ ಆರ್ ಬಾಲು, ಸಿಪಿಐ (ಎಂ) ನ ಎಂ ಎ ಬೇಬಿ, ಸಿಪಿಐನ ಡಿ ರಾಜಾ, ಸಿಪಿಐ (ಎಂಎಲ್) ನ ದೀಪಂಕರ್ ಭಟ್ಟಾಚಾರ್ಯ ಮತ್ತು ಎಂಎನ್‌ಎಂ ಮುಖ್ಯಸ್ಥ ಕಮಲ್ ಹಾಸನ್ ಸೇರಿದಂತೆ 25 ಪಕ್ಷಗಳ ಹಲವಾರು ನಾಯಕರು ಸಭೆಯಲ್ಲಿ ಹಾಜರಿದ್ದರು.





