ಸುಪ್ರೀಂ ಕೋರ್ಟ್ ಸೂಚನೆಯಂತೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆ ಒಟ್ಟು 18 ಸುತ್ತುಗಳಲ್ಲಿ ಮಂಗಳವಾರ ನಡೆದಿದ್ದು, ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಫಲಿತಾಂಶ ಮಾಹಿತಿ ಸಲ್ಲಿಸಲಾಗುತ್ತದೆ. ಫಲಿತಾಂಶ ಮುಂದಿನ ವಿಚಾರಣೆ ನವೆಂಬರ್ 24ರಂದು ಹೊರಬೀಳುವ ಸಾಧ್ಯತೆಯಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆವೈ ನಂಜೇಗೌಡ ಅವರು 248 ಮತಗಳ ಅಂತರದಿಂದ ಗೆದ್ದು ಶಾಸಕರಾಗಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಕೆಎಸ್ ಮಂಜುನಾಥಗೌಡ ಫಲಿತಾಂಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಂಜುನಾಥಗೌಡ ಮರು ಮತಎಣಿಕೆಗೆ ಮನವಿ ಮಾಡಿದ್ದು, ಸುದೀರ್ಘ ವಿಚಾರಣೆ ಬಳಿಕ ಕೋರ್ಟ್ ಮರು ಮತಎಣಿಕೆಗೆ ಆದೇಶಿಸಿತ್ತು.
ಇದನ್ನು ಓದಿದ್ದೀರಾ? ಮಾಲೂರು ಶಾಸಕ ನಂಜೇಗೌಡರ ಆಯ್ಕೆ ರದ್ದು ಆದೇಶಕ್ಕೆ ತಾತ್ಕಾಲಿಕ ತಡೆ: ಮರು ಮತ ಎಣಿಕೆಗೆ ಸುಪ್ರೀಂ ಸೂಚನೆ
ಹಾಗೆಯೇ ವಿಚಾರಣೆ ನಡೆಸಿದ್ದ ಹೈಕೋರ್ಟ್, ನಂಜೇಗೌಡರ ಆಯ್ಕೆಯನ್ನು ಅಸಿಂಧುಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ನಂಜೇಗೌಡರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ, ಮತಗಳ ಮರುಎಣಿಕೆಗೆ ಆದೇಶಿಸಿತ್ತು.
ಸುಪ್ರೀಂ ಕೋರ್ಟ್ ಆದೇಶದಂತೆ ಮಾಲೂರು ವಿಧಾನಸಭಾ ಕ್ಷೇತ್ರದ ಮತಗಳ ಮರುಎಣಿಕೆ ನಡೆದಿದ್ದು, ಫಲಿತಾಂಶವನ್ನು ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ರವಾನಿಸಿದ್ದಾರೆ.
ಇನ್ನು ಮರು ಎಣಿಕೆಯಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಾಗಿಲ್ಲ ಎಂದು ಶಾಸಕ ನಂಜೇಗೌಡ ಹೇಳಿದ್ದಾರೆ. ಆದರೆ ಅಂತಿಮ ತೀರ್ಪು ಸುಪ್ರೀಂ ಕೋರ್ಟ್‌ನಿಂದ ಬರಲಿದೆ.
ಇನ್ನೂ ಹೊರಬೀಳದ ಗಾಯತ್ರಿ ಶಾಂತೇಗೌಡ ಫಲಿತಾಂಶ
2021ರ ಡಿಸೆಂಬರ್‌ನಲ್ಲಿ ನಡೆದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು ಬಿಜೆಪಿಯ ಎಂ.ಕೆ. ಪ್ರಾಣೇಶ್ ವಿರುದ್ಧ ಕೇವಲ 6 ಮತಗಳ ಅಂತರದಿಂದ ಸೋತಿದ್ದರು. ಮರು ಮತ ಎಣಿಕೆ ಕೋರಿ ಗಾಯತ್ರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನಾಮನಿರ್ದೇಶಿತ ಸದಸ್ಯರು ಚಲಾಯಿಸಿದ ಮತಗಳನ್ನು ಪರಿಗಣಿಸಬಾರದಿತ್ತು ಎಂದು ಗಾಯತ್ರಿ ಹೇಳಿದ್ದರು.
ಹೈಕೋರ್ಟ್ ಆದೇಶದಂತೆ 2025ರ ಫೆಬ್ರವರಿಯಲ್ಲಿ ಮತ ಮರು ಎಣಿಕೆ ನಡೆದಿದೆ. ಆದರೆ ಸುಪ್ರೀಂ ಕೋರ್ಟ್ ಆದೇಶದಂತೆ ಈವರೆಗೂ ಫಲಿತಾಂಶ ಪ್ರಕಟಿಸಿಲ್ಲ. ಚುನಾವಣಾ ಆಯೋಗ ಮೊಹರು ಮಾಡಿದ ಲಕೋಟೆಯಲ್ಲಿ ಫಲಿತಾಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಆದರೆ ವಿಚಾರಣೆ ಮುಂದುವರೆದಿದೆ.





