ಇಂಡಿಯಾ ಅಂದ್ರೆ ಮಂಡ್ಯ ಎಂಬುದು ಹಳೆಯ ಮಾತು. ಯಾವುದೇ ಚುನಾವಣೆ ನಡೆದರೂ ಮಂಡ್ಯ ಕ್ಷೇತ್ರ ಇಂಡಿಯಾದಲ್ಲೆ ಸದ್ದು ಮಾಡುವುದಂತು ನಿಜ. ಪ್ರತಿ ಚುನಾವಣೆಯಲ್ಲೂ ಒಂದಲ್ಲ ಒಂದು ವಿಚಾರಕ್ಕೆ ಮಂಡ್ಯ ಮುನ್ನಲೆಗೆ ಬರುತ್ತದೆ.
ರಾಜ್ಯಾದ್ಯಂತ ಲೋಕಸಭಾ ಚುನಾವಣೆ ರಂಗೇರುತ್ತಿದೆ. ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂದು, ಈಗಾಗಲೇ ಮೈತ್ರಿ ಕ್ಷೇತ್ರ ಹಂಚಿಕೆ ಕೂಡ ಬಹುತೇಕ ಅಂತಿಮವಾಗಿದೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ ಜೆಡಿಎಸ್ ಗೆ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲೇ ಮಂಡ್ಯಕ್ಕೆ ಹೊಸ ಪರಿಚಯ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಅಭ್ಯರ್ಥಿಯನ್ನು ಕಣಕ್ಕಿಸಿದೆ. ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಗೆಲ್ಲುವ ನಿಟ್ಟಿನಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನ 7ಜನ ಶಾಸಕರು ಸಹಾ ಕ್ಷೇತ್ರದಲ್ಲಿ ಪ್ರಚಾರ ಜೋರಾಗಿ ಶುರುಮಾಡಿದ್ದಾರೆ.
ಇತ್ತ ಜೆಡಿಎಸ್ ಪರಿಸ್ಥಿತಿ ನುಂಗಲಾರದ ತುತ್ತಾಗಿದೆ ಎಂದರೆ ತಪ್ಪಾಗಲಾರದು. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣಾ ದಿನಾಂಕ ಘೋಷಣೆಯಾದರು ಅಭ್ಯರ್ಥಿಯನ್ನು ಹೆಸರನ್ನು ಘೋಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಮಂಡ್ಯ ಕ್ಷೇತ್ರವನ್ನು ಈ ಬಾರಿ ಗೆಲ್ಲಲ್ಲೇಬೇಕು. ಜೆಡಿಎಸ್ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆಂದು ಕುಮಾರಸ್ವಾಮಿ ಅವರೇ ಮಂಡ್ಯದಿಂದ ಕಣಕ್ಕಿಳಿಯುತ್ತಾರೆ ಎಂಬ ಮಾತು ಕ್ಷೇತ್ರದಲ್ಲಿ ಜೋರಾಗಿತ್ತು. ಇತ್ತ ಪಕ್ಷ ಸಂಘಟನೆ ಸೇರಿದಂತೆ ಈಗಾಗಲೇ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಸಿ.ಎಸ್. ಪುಟ್ಟರಾಜು ಅಭ್ಯರ್ಥಿಯಾಗಬಹುದೇ ಎಂಬ ಮಾತುಗಳು ಸಹಾ ಕ್ಷೇತ್ರದಲಿತ್ತು.
ಹಾಲಿ ಸಂಸದೆ ಸುಮಲತಾ ಅಂಬರೀಷ್ ಕೂಡ ಬಿಜೆಪಿಯಿಂದ ಮಂಡ್ಯ ಕ್ಷೇತ್ರದ ಟಿಕೆಟ್ ನನಗೆ ಬೇಕು, ಯಾವುದೇ ಕಾರಣಕ್ಕೂ ಬಿಟ್ಟು ಕೊಡುವ ಮಾತಿಲ್ಲ ಎಂದು ಪದೇ ಪದೆ ದೆಹಲಿ ಮಟ್ಟದ ನಾಯಕರನ್ನೂ ಭೇಟಿ ಮಾಡಿ ಲಾಬಿ ಮಾಡುತ್ತಿದ್ದರು ಅವರಿಗೆ ಟಿಕೆಟ್ ಬಹುತೇಕ ಮಿಸ್ ಆಗಲಿದೆ ಮಂಡ್ಯ ಜೆಡಿಎಸ್ ಪಾಲಾಗಲಿದೆ.
ಮತ್ತೊಮ್ಮೆ ನಿಖಿಲ್ ಕುಮಾರಸ್ವಾಮಿ ಕಣಕ್ಕೆ!
ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ಸುಮಲತಾ ಅಂಬರೀಷ್ ಅವರ ಸ್ವಾಭಿಮಾನ ಅಸ್ತ್ರಕ್ಕೆ ಸೋಲುನ್ನು ಒಪ್ಪಿಕೊಂಡು ಮತ್ತೆ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ವರ್ಧಿಸಿ ಸೋಲನ್ನು ಕಂಡಿದ್ದ ನಿಖಿಲ್‌ರನ್ನು ಮತ್ತೊಮ್ಮೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಸಲು ಸೈಲೆಂಟ್ ಆಗಿ ಜೆಡಿಎಸ್ ತಯಾರಿ ಮಾಡಿಕೊಳ್ಳುತ್ತಿದೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಕುಮಾರಸ್ವಾಮಿಯವರು ತನ್ನ ಕುಟುಂಬದಿಂದ ಯಾರು ನಿಲ್ಲಲ್ಲ ಎಂದು ಹೇಳುತ್ತಲೇ ಮಗನನ್ನು ಅಖಾಡಕ್ಕೆ ಇಳಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಸತತ ಎರಡೂ ಬಾರಿ ಸೋತು ಮೂರನೇ ಬಾರಿ ಪರೀಕ್ಷೆಗೆ ಮತ್ತೆ ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತಿರುವುದು ಕುತೂಹಲಕಾರಿಯಾಗಿದೆ.
ಸಿ.ಎಸ್. ಪುಟ್ಟರಾಜು ನಡೆಯೇನು?
ಈ ಬಾರಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸೋತ ನಂತರ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯಲೂ ಪಕ್ಷ ಸಂಘಟನೆ ಸೇರಿದಂತೆ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ಪುಟ್ಟರಾಜು ಮುಂದಿನ ನಡೆ ಏನು ಎನ್ನುವ ಕೂತುಹಲವಿದೆ. ಕಾಂಗ್ರೆಸ್ ಕಡೆ ಮುಖ ಮಾಡುತ್ತಾರಾ? ಜೆಡಿಎಸ್‌ನಲ್ಲೆ ಇದ್ದು ಸೈಲೆಂಟ್ ಆಗಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡುತ್ತಾರಾ ಕಾದು ನೋಡಬೇಕಿದೆ.
ಒಕ್ಕಲಿಗ ಮಾತದಾರರೇ ನಿರ್ಣಾಯಕವಾಗಿರುವ ಈ ಕ್ಷೇತ್ರ ಜೆಡಿಎಸ್ ಭದ್ರಕೋಟೆ ಎಂದೆ ಹೆಸರಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ 7ರಲ್ಲಿ ಕೇವಲ ಒಂದು ಸೀಟ್ ಗೆಲುವು ಮೂಲಕ ಜೆಡಿಎಸ್ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತ್ತು. ಕುಮಾರಸ್ವಾಮಿಯ ಪಕ್ಷಾಂತರ ನೀತಿ, ಕುಟುಂಬ ರಾಜಕಾರಣದಿಂದ ಬೇಸತ್ತು ಮಂಡ್ಯದ ಜನ ಕಾಂಗ್ರೆಸ್ ಕೈ ಹಿಡಿದಿದ್ದರು. ಒಟ್ಟಾರೆಯಾಗಿ ಮಂಡ್ಯ ಲೋಕಸಭಾ ಕ್ಷೇತ್ರ ಈ ಬಾರಿ ಸಹಾ ಜಿದ್ದಾಜಿದ್ದಿ ಕ್ಷೇತ್ರವಾಗಿ ರಂಗೇರುತ್ತಾ ನೋಡಬೇಕಿದೆ, ಕ್ಷೇತ್ರದ ಮತಾದರರರು ಕೈ ಹಿಡಿಯುತ್ತಾರಾ, ಮೈತ್ರಿ ಅಭ್ಯರ್ಥಿಗೆ ಜೈ ಅಂತಾರ ಕಾದು ನೋಡಬೇಕಿದೆ.





