ಮಂಡ್ಯದಲ್ಲಿರುವ ಮೈಶುಗರ್ ಶಾಲೆಯನ್ನು ಅಭಿವೃದ್ಧಿಪಡಿಸಲು ಶೀಘ್ರವೇ 10 ಕೋಟಿ ರೂ. ಒದಗಿಸಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ಯಾವುದೇ ಕಾರಣಕ್ಕೂ ಮೈಶುಗರ್ ಶಾಲೆಯನ್ನು ಖಾಸಗಿಯವರಿಗೆ ಕೊಡುವುದು ಬೇಡವೆಂದು ಹೇಳಿದ್ದೇನೆ. ಶಾಲೆಯ ಅಭಿವೃದ್ಧಿಗಾಗಿ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತೇವೆ. ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ನಮ್ಮ ತಂಡ ಕೆಲಸ ಮಾಡುತ್ತಿದೆ” ಎಂದು ಹೇಳಿದ್ದಾರೆ.
“ಈ ವರ್ಷ ಮಂಡ್ಯದಲ್ಲಿ ಶಾಲಾ ಕಟ್ಟಡ ಮತ್ತು ಬಸ್ ನಿಲ್ದಾಣಗಳನ್ನು ಸಿಎಸ್‌ಆರ್ ನಿಧಿಯಿಂದ ನಿರ್ಮಾಣ ಮಾಡುತ್ತಿದ್ದೇನೆ. ಮೈಶುಗರ್ ಶಾಲೆ ಅಭಿವೃದ್ಧಿಗೂ ಅದೇ ನಿಧಿಯಿಂದ ಹಣ ಬಿಡುಗಡೆ ಮಾಡುತ್ತೇನೆ. ಅನುದಾನ ತರಿಸಿ ಕೊಡುವ ಜವಾಬ್ದಾರಿ ನನ್ನದು. ಯಾರೂ ಲಘುವಾಗಿ ಮಾತನಾಡುವ ಅಗತ್ಯವಿಲ್ಲ” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: RSS- ದೇಶಭಕ್ತರ ಸಂಘಟನೆಯೇ! ಯಶವಂತ್ ಶಿಂದೆ ಅಫಿಡವಿಟ್ ಹೇಳುತ್ತಿರುವುದೇನು?
“ಇತ್ತೀಚಗೆ ಕಾರಣಾಂತರಗಳಿಂದ ಮಂಡ್ಯಕ್ಕೆ ಭೇಟಿ ಕೊಡಲು ಸಾಧ್ಯವಾಗಿರಲಿಲ್ಲ. ಮಂಡ್ಯ ಬರಲು ಆಗದೇ ಇದ್ದರೂ, ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಜಿಲ್ಲೆಯ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದೆ. ಕೆಲಸದ ಒತ್ತಡದಲ್ಲೂ ಜಿಲ್ಲೆಗೆ ಹೆಚ್ಚು ಸಮಯ ಮೀಸಲಿಡಲು ಯೋಜಿಸಿದ್ದೇನೆ” ಎಂದು ಹೇಳಿದ್ದಾರೆ.




