ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿ, ವಿವಾದ ಸೃಷ್ಟಿಸಿದ್ದ ಹಿಂದುತ್ವವಾದಿಗಳ ಕಣ್ಣು ಈಗ ಮಥುರಾ ಮೇಲೆ ನೆಟ್ಟಿದೆ. ಮಥುರಾದ ಕೃಷ್ಣ ದೇವಾಲಯ ಮತ್ತು ಶಾಹಿ ಈದ್ಗಾ ಮಸೀದಿ ಒಂದೇ ಜಾಗದಲ್ಲಿದ್ದು, ಅದನ್ನು ವಿವಾದ ಸ್ಥಳವಾಗಿಸಲು ಮುಂದಾಗಿವೆ. ಈದ್ಗಾ ಮಸೀದಿ ಇರುವ ಸ್ಥಳ ಕೃಷ್ಣ ಜನ್ಮಭೂಮಿಗೆ ಸೇರಿದ್ದೆಂದು ಹಿಂದುತ್ವವಾದಿಗಳು ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯ ಅಂಗೀಕಾರಾರ್ಹತೆ ಪ್ರಶ್ನಿಸಿ ಮುಸ್ಲಿಂ ಮುಖಂಡರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.
ಶಾಹಿ ಈದ್ಗಾ ಮಸೀದಿ ಪರವಾಗಿ ಮುಸ್ಲಿಂ ಮುಖಂಡರು ಸಲ್ಲಿಸಿದ್ದ ಅರ್ಜಿಯಲ್ಲಿ ಆದೇಶ 7 ನಿಯಮ 11 ಸಿಪಿಡಿ ಅಡಿಯಲ್ಲಿ ಹೈಕೋರ್ಟ್ ವಜಾಗೊಳಿಸಿದೆ. ಕೃಷ್ಣ ಜನ್ಮಭೂಮಿ ಪರವಾಗಿ ಹಿಂದುತ್ವವಾದಿಗಳು ಸಲ್ಲಿಸಿರುವ ಎಲ್ಲ 18 ಮೊಕದ್ದಮೆಗಳು ಅಂಗೀಕಾರಾರ್ಹವಾಗಿದೆ ಎಂದು ಕೋರ್ಟ್ ಹೇಳಿದೆ.
ಹಿಂದುತ್ವವಾದಿಗಳು ಸಲ್ಲಿಸಿರುವ ಹಲವು ಅರ್ಜಿಗಳಲ್ಲಿ ರಾಜ ಔರಂಗಜೇಬ್ ಕಾಲದಲ್ಲಿ ದೇವಾಲಯವನ್ನು ನೆಲಸಮಗೊಳಿಸಿ, ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ವಾದಿಸಲಾಗಿದೆ. ಮಸೀದಿಯನ್ನು ಆ ಸ್ಥಳದಿಂದ ತೆರವುಗೊಳಿಸುವಂತೆ ಕೋರಲಾಗಿದೆ. ಅಲ್ಲದೆ, ಪೂಜಾಸ್ಥಳಗಳ ಕಾಯ್ದೆ, ಲಿಮಿಟೇಷನ್ ಕಾಯ್ದೆ ಮತ್ತು ವಕ್ಫ್ ಕಾಯ್ದೆಗಳು ಈ ಪ್ರಕರಣದಲ್ಲಿ ಅನ್ವಯವಾಗುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.
ಈ ವರದಿ ಓದಿದ್ದೀರಾ?: ಶೋಷಿತರ ವಿರುದ್ಧ ಅಸ್ತ್ರವಾದ ಅತ್ಯಾಚಾರ; ಇಸ್ರೇಲ್‌ನಿಂದ ಹೇಯ ಕೃತ್ಯ – ಭಾರತವೂ ಹೊರತಾಗಿಲ್ಲ
ಮಸೀದಿ ಇರುವ ಭೂಮಿಯನ್ನು ಯಾವುದೇ ಸರ್ಕಾರಿ ದಾಖಲೆಗಳಲ್ಲಿ ಈದ್ಗಾ ಮಸೀದಿಯ ಹೆಸರಿನಲ್ಲಿ ಗುರುತಿಸಲಾಗಿದೆ. ಹೀಗಾಗಿ, ಮಸೀದಿಯು ಅತಿಕ್ರಮಣ ಕಟ್ಟಡವಾಗಿದೆ. ಈ ಭೂಮಿಯು ವಕ್ಫ್ ಮಂಡಳಿಯ ಆಸ್ತಿಯಾಗಿದೆ ಎಂಬುದು ನಿಜವಾಗಿದ್ದಲ್ಲ, ಮಸೀದಿ ಸಮಿತಿಯು ಆ ಭೂಮಿಯನ್ನು ಮಸೀದಿಗೆ ದೇಣಿಗೆ ನೀಡಿದ ದಾನಿಯ ಕುರಿತು ಮಾಹಿತಿ ಒದಗಿಸಬೇಕು ಹಿಂದುತ್ವವಾದಿ ಅರ್ಜಿದಾರರು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
1992ರಿಂದ ಅಯೋಧ್ಯೆಯ ಬಾಬರಿ ಮಸೀದಿ ಇದ್ದ ಸ್ಥಳವು ವಿವಾದದ ಸ್ಥಳವಾಗಿತ್ತು. ಬಾಬರಿ ಮಸೀದಿ ಇದ್ದ ಸ್ಥಳವು ರಾಮ ಜನ್ಮಭೂಮಿಯಾಗಿದ್ದು, ಅದನ್ನು ರಾಮಮಂದಿರಕ್ಕೆ ನೀಡಬೇಕೆಂದು ಆರ್‌ಎಸ್‌ಎಸ್, ಬಿಜೆಪಿ ನೇತೃತ್ವದಲ್ಲಿ ಹಿಂದುತ್ವವಾದಿಗಳು ವಿವಾದ ಸೃಷ್ಟಿಸಿದ್ದರು. ಆ ಭೂಮಿ ರಾಮಮಂದಿರಕ್ಕೆ ಸೇರಿದ್ದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲದಿದ್ದರೂ, ಜನರ ಭಾವನೆಯನ್ನು ಪರಿಗಣಿಸಿ ಬಾಬರಿ ಮಸೀದಿ ಇದ್ದ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಆ ಸಂದರ್ಭದಲ್ಲಿಯೇ ರಾಜ್ಯದ ಬಿಜೆಪಿ ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು, ಮಥುರಾ, ಕಾಶಿಗಳನ್ನೂ ಬಿಡುವುದಿಲ್ಲ. ಅಲ್ಲಿಯೂ ಮಸೀದಿಗಳನ್ನು ತೆರವುಗೊಳಿಸಿ ದೇವಾಲಯ ಕಟ್ಟುತ್ತೇವೆಂದು ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ, ಮಥುರಾದಲ್ಲಿ ಮಸೀದಿ ತೆರವಿಗೆ ಒತ್ತಾಯಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅಲ್ಲದೆ, ಜ್ಞಾನವಾಪಿ ಮಸೀದಿಯನ್ನು ವಿವಾದದ ಬಿಂದುವಾಗಿಸಿದ್ದು, ಮಸೀದಿ ಸಂಕೀರ್ಣದ ಸರ್ವೇ ಮಾಡಲು ವಾರಣಾಸಿ ನ್ಯಾಯಾಲಯ ಆದೇಶಿಸಿದೆ.




