“ರೈತರಿಗೆ ಬರ ಹಾಗೂ ಮಳೆಹಾನಿ ಪರಿಹಾರ ತಲುಪಿಸುವ ವಿಚಾರದಲ್ಲೂ ಕೂಡ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರೀ ಅವ್ಯವಹಾರಗಳು ನಡೆದಿವೆ. ಜಮೀನು ಯಾರದ್ದೋ ಇದೆ, ಪರಿಹಾರ ಇನ್ಯಾರಿಗೋ ಹೋಗಿರುವ ಹಲವು ಪ್ರಕ್ರರಣಗಳು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆಗೆ ಆದೇಶ ಮಾಡಲಾಗಿದೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಶುಕ್ರವಾರ ಜರುಗಿದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳ ಜೊತೆಗಿನ ಮಾಸಿಕ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, “ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲೇ 6 ಕೋಟಿ ರೂ. ಪರಿಹಾರದ ಹಣದ ವಿತರಣೆಯಲ್ಲಿ ಅಕ್ರಮ ಎಸಲಾಗಿದೆ. ಹಣ ದುರ್ಬಳಕೆಯಾದವರ ಪಟ್ಟಿ ನನ್ನ ಬಳಿ ಇದೆ. ಹಾನಗಲ್, ಶಿಗ್ಗಾಂವ್ ನಲ್ಲೂ ಇಂತಹ ಪ್ರಕರಣಗಳು ಕಂಡುಬಂದಿದೆ” ಎಂದು ಮಾಹಿತಿ ನೀಡಿದರು.
“2022-21 ಹಾಗೂ 22-23 ನೇ ಸಾಲಿನಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವ್ ಹಾಗೂ ಹಾನಗಲ್ ನಲ್ಲಿ ವ್ಯಾಪಕವಾಗಿ ಅಕ್ರಮ ನಡೆದಿದೆ. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ” ಎಂದರು.
“ಗರಿಷ್ಠ 5 ಎಕರೆಯವರೆಗೆ ಪರಿಹಾರ ಕೊಡಬಹುದು. ಆದರೆ, 5 ಎಕರೆ ಮೀರಿ ಕೂಡ ಪರಿಹಾರ ವಿತರಿಸಿದ್ದಾರೆ. ರೈತರಲ್ಲದವರ ಖಾತೆಗೆ 49,999 ಜಮೆ ಆಗಿದೆ. ಅಸಲಿ ರೈತರ ಖಾತೆಗೆ ಅಲ್ಪ ಪ್ರಮಾಣದ ಮೊತ್ತ ಮಾತ್ರ ಜಮೆ ಆಗಿದೆ. ಇದೇ ಕಾರಣಕ್ಕೆ ಈ ಬಾರಿ ರೈತರಿಗೆ ಬರ ಪರಿಹಾರ ನೀಡಲು ‘ಫ್ರೂಟ್ಸ್’ ದಾಖಲಾತಿ ಕಡ್ಡಾಯಗೊಳಿಸಲಾಗಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

“ಈ ಹಿಂದೆ ಫ್ರೂಟ್ಸ್ ಡಾಟಾ ಬೇಸ್‌ನಲ್ಲಿ 7.7 ಲಕ್ಷ ರೈತರ ಮಾಹಿತಿಯೇ ಇರಲಿಲ್ಲ. ಇದೀಗ ಹೊಸದಾಗಿ ಸೇರಿಸಲಾಗಿದೆ. 34 ಲಕ್ಷ ರೈತರ ಜಮೀನಿನ ಮಾಹಿತಿಯನ್ನು ಈ ತಂತ್ರಾಂಶದಲ್ಲಿ ದಾಖಲು ಮಾಡಲಾಗಿದೆ. ಬಿಟ್ಟುಹೋಗಿರುವ ಅರ್ಹ ರೈತರ ಮಾಹಿತಿಯನ್ನು ಮತ್ತೆ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಳೆದ 15 ದಿನಗಳಿಂದ ನಮ್ಮ ಅಧಿಕಾರಿಗಳು ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ್ದು, ರೈತರ ಹಣ ದುರುಪಯೋಗವಾಗದಂತೆ ಅವರಿಗೆ ತಲುಪಿಸಲಾಗುವುದು. ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದ್ದು, 15 ಲಕ್ಷಕ್ಕೂ ಅಧಿಕ ರೈತರಿಗೆ ಈಗಾಗಲೇ ಹಣ ತಲುಪಿಸಲಾಗಿದೆ. ಮುಂದಿನ ವಾರದೊಳಗೆ 30 ಲಕ್ಷ ರೈತರಿಗೆ ಪರಿಹಾರದ ಹಣ ತಲುಪಲಿದೆ” ಎಂದರು.
“ಬರ ಪರಿಹಾರದ ಮೊದಲ ಕಂತಿನ ಹಣವನ್ನು ಶೀಘ್ರವೇ ರೈತರಿಗೆ ತಲುಪಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಫ್ರೂಟ್ಸ್‌ನಲ್ಲಿ ಶೇ.75 ರಷ್ಟು ರೈತರ ಸಂಪೂರ್ಣ ಜಮೀನಿನ ಮಾಹಿತಿಯನ್ನು ನವೀಕರಿಸಿದ್ದು ಮುಂದಿನ ಒಂದು ವಾರದಲ್ಲಿ 30 ಲಕ್ಷ ರೈತರಿಗೆ ಮೊದಲ ಕಂತಿನ ಬರ ಪರಿಹಾರದ ಹಣ ಬ್ಯಾಂಕ್ ಖಾತೆಗೆ ತಲುಪಲಿದೆ” ಎಂದು ತಿಳಿಸಿದರು.
ಕೇಂದ್ರದಿಂದ ಇನ್ನೂ ಬಂದಿಲ್ಲ ಪರಿಹಾರ!
ಬರ ಘೋಷಿಸಿ ನಾಲ್ಕು ತಿಂಗಳಾದರೂ ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಇನ್ನೂ ಬಂದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದರು.
“ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ 18,177.44 ಕೋಟಿ ರೂ. ಪರಿಹಾರ ನೀಡುವಂತೆ ಸೆಪ್ಟೆಂಬರ್ 22ರಂದೇ ಕೇಂದ್ರ ಕೃಷಿ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಭಾರತ ಸರ್ಕಾರದ ಬರ ಅಧ್ಯಯನ ತಂಡ ಅಕ್ಟೋಬರ್ ತಿಂಗಳ 4 ರಿಂದ 9ರ ನಡುವೆ ಭೇಟಿ ನೀಡಿ, ವರದಿಯನ್ನೂ ಸಲ್ಲಿಸಿದೆ. ಆದರೂ, ಕೇಂದ್ರ ಸರ್ಕಾರ ಸಭೆ ನಡೆಸಿ, ತೀರ್ಮಾನ ತೆಗೆದುಕೊಂಡಿಲ್ಲ. ನಮ್ಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರವೇ ಮೊದಲ ಕಂತಿನಲ್ಲಿ 2,000 ರೂ. ನೀಡಲು ಮುಂದಾಗಿದೆ” ಎಂದು ತಿಳಿಸಿದರು.





