ಮಿರ್ಜಾ ಇಸ್ಮಾಯಿಲ್ ಅವರು ಆಧುನಿಕ ಮೈಸೂರು ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು. ಅವರ 142ನೇ ಜನ್ಮದಿನವಿಂದು...
ಇಂದು ಮಿರ್ಜಾ ಇಸ್ಮಾಯಿಲ್ ಅವರ 142 ನೇ ಜನ್ಮದಿನ. ಮಿರ್ಜಾರವರು ಅಗಲಿ 66 ವರ್ಷಗಳು ಕಳೆದವು. ಆದರೆ ಅವರು ದಿವಾನರಾಗಿದ್ದಾಗ ಕೈಗೊಂಡ ಕಾರ್ಯಗಳು ಅವರ ಹೆಸರನ್ನು ಉಳಿಸಿವೆ. ದಿವಾನ್ ಮಿರ್ಜಾ ಇಸ್ಮಾಯಿಲ್ ಅವರು 1954ರಲ್ಲಿ ‘My Public Life: re collections and reflection’s’ ಹೆಸರಿನಲ್ಲಿ ಆತ್ಮಕಥೆ ಬರೆದಿದ್ದಾರೆ. ಕನ್ನಡಕ್ಕೆ ಗಜಾನನ ಶರ್ಮ ಅವರು ‘ನನ್ನ ಸಾರ್ವಜನಿಕ ಬದುಕು’ ಎಂಬ ಹೆಸರಲ್ಲಿ 2017ರಲ್ಲಿ ಅನುವಾದಿಸಿದ್ದಾರೆ. ಈ ಆತ್ಮಕಥೆಯನ್ನು ಓದಿದರೆ ಮಿರ್ಜಾ ಇಸ್ಮಾಯಿಲ್ ಅವರು ಆಧುನಿಕ ಮೈಸೂರು ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು ಎನ್ನುವುದು ಮನವರಿಕೆಯಾಗುತ್ತದೆ.
ಪರ್ಷಿಯಾ ದೇಶದ ಷಿರಾಜ್ ನಗರದಿಂದ 1924ರಲ್ಲಿ ಭಾರತಕ್ಕೆ ಕುದುರೆ ವ್ಯಾಪಾರಕ್ಕೆ ಬಂದ ಆಲಿ ಅಸ್ಕರ್ ಬೆಂಗಳೂರು ವಾತಾವರಣಕ್ಕೆ ಮನಸೋತು ತನ್ನ ಮೂಲದ ಇರಾನ್ ದೇಶವನ್ನೆ ಮರೆತು ಬೆಂಗಳೂರಿಗರಾದರು. ತಮ್ಮ ವ್ಯಾಪಾರದ ತೀಕ್ಷತೆಯಿಂದ ಬೆಂಗಳೂರಿನಲ್ಲಿ ಅಪಾರ ಸಂಪತ್ತನ್ನು ಗಳಿಸಿ ಶ್ರೀಮಂತ ವರ್ಗದಲ್ಲಿ ಗುರುತಿಸಿಕೊಂಡರು. ಈ ಸಂದರ್ಭದಲ್ಲಿಯೇ ಮೈಸೂರು ಅರಸರೊಂದಿಗೂ, ಬ್ರಿಟಿಷ್ ಅಧಿಕಾರಿಗಳೊಂದಿಗೂ ಆಪ್ತತೆ ಬೆಳೆಯಿತು. ಪ್ರಭಾವಿ ವ್ಯಾಪಾರಿಯಾದ ಆಲಿ ಅಸ್ಕರ್ ಪುತ್ರ ಆಗಾಖಾನ್ ಕೂಡ ತಂದೆಯ ವ್ಯಾಪಾರ ವಹಿವಾಟಿನ ವಾರಸುದಾರನಾದನು. ಈ ಆಗಾಖಾನರ ಮಗನೇ ಮಿರ್ಜಾ ಇಸ್ಮಾಯಿಲ್, 1883ರ ಅಕ್ಟೋಬರ್ 24ರಂದು ಬೆಂಗಳೂರಿನಲ್ಲಿ ಜನಿಸಿದರು.
ಹದಿನೆಂಟು ವರ್ಷಗಳ ಕಾಲ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಶೇಷಾದ್ರಿ ಅಯ್ಯರ್ ಅವರು ಈ ಮುಂಚೆಯ ದಿವಾನರಾಗಿದ್ದ ರಂಗಾಚಾರ್ಲೂರವರಿಂದ ಆರಂಭವಾದ ಸಾಮಾಜಿಕ ಸುಧಾರಣಾ ಪ್ರಕ್ರಿಯೆಯನ್ನು ಸಮರ್ಥವಾಗಿ ಮುಂದುವರಿಸಿದರು. ಶೇಷಾದ್ರಿ ಅಯ್ಯರ್ ನಂತರ 1926ರ ಮೇ ಒಂದರಿಂದ 1941ರ ಮೇ ಮೂವತ್ತೊಂದನೇ ತಾರೀಖಿನವರೆಗೆ 15 ವರ್ಷಗಳ ಕಾಲ ಸಂಸ್ಥಾನದ ದಿವಾನರಾಗಿದ್ದವರು ಸರ್ ಅಮಿನ್-ಉಲ್-ಮುಲ್ಕ್ ಮಿರ್ಜಾ ಮಹಮ್ಮದ್ ಇಸ್ಮಾಯಿಲ್ ಸಾಮಾಜಿಕ ಸುಧಾರಣೆಯಲ್ಲಿ ಒಂದು ಕ್ರಾಂತಿಯನ್ನೆ ಮಾಡಿದರು.
ಮಿರ್ಜಾ ಇಸ್ಮಾಯಿಲ್ ಅವರ ಕಾಲಘಟ್ಟ ಬಹಳ ಬಿಕ್ಕಟ್ಟಿನದಾಗಿತ್ತು. ಒಂದೆಡೆ ಬ್ರಿಟಿಷ್ ವಸಾಹತು ಅಧಿಕಾರಿಗಳ ಒತ್ತಡ, ಮತ್ತೊಂದೆಡೆ ಪ್ರಜೆಗಳ ಹಿತ ಕಾಯಬೇಕು ಎನ್ನುವ ಮಹಾರಾಜರ ಇಚ್ಛೆ. ಇದರ ಮಧ್ಯೆ ಬ್ರಿಟಿಷ್ ವಸಾಹತಿನ ವಿರುದ್ಧ ಸಂಸ್ಥಾನದ ಒಳಗೇ ಹೆಚ್ಚುತ್ತಿದ್ದ ಸ್ವಾತಂತ್ರ್ಯ ಹೋರಾಟದ ಕಿಚ್ಚು… ಈ ಎಲ್ಲವನ್ನೂ ಸಮಚಿತ್ತದಿಂದ ನಿಭಾಯಿಸಿ ಸಂಸ್ಥಾನವನ್ನು ಸಂವಿಧಾನ ರಚನಾ ಸಮಿತಿಯೂ ಮತ್ತು ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಸ್ವತಃ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಮೆಚ್ಚುವಂತೆ ಮೈಸೂರು ಸಂಸ್ಥಾನ ಮಾದರಿ ಸಂಸ್ಥಾನ ಎಂದು ಹೊಗಳುವಂತೆ ಮಿರ್ಜಾ ಇಸ್ಮಾಯಿಲ್ ಅಪೂರ್ವ ಕೆಲಸಗಳನ್ನು ಮಾಡಿದರು. ಶೇಷಾದ್ರಿ ಅಯ್ಯರ್ ಅವರಿಂದ ಚುರುಕುಗೊಂಡಿದ್ದ ವಿದ್ಯುತ್ ಹಾಗೂ ಇತರ ಅಭಿವೃದ್ಧಿ ಕಾಮಗಾರಿ, ನಂತರದ ದಿವಾನರುಗಳು ಮುಂದುವರೆಸಿದ ರಾಜ್ಯಾಭಿವೃದ್ಧಿಯ ಚಟುವಟಿಕೆ, ಸರ್ ಎಂ ವಿಶ್ವೇಶ್ವರಯ್ಯ ಅವರ ಕಾಲದ ನೀರಾವರಿ, ಕೈಗಾರಿಕೆ ಮುಂತಾದ ಸರ್ವತೋಮುಖ ಪ್ರಗತಿಯನ್ನು ಮಿರ್ಜಾ ಅವರು ಮುಂದುವರಿಸಿದರು.
ಇದನ್ನು ಓದಿದ್ದೀರಾ?: ಕ್ಯಾನ್ಸರ್ ಆಸ್ಪತ್ರೆಯ ಬೆಡ್ ಮೇಲಿಂದ ಕಾಕಡ ಮಲ್ಲಿಗೆ ಬೆಳೆಯುವ ಕನಸು ಕಂಡ ʼನೀರ್ ಸಾಬ್ʼ
ಬಾಲಕ ಯುವರಾಜ ಕೃಷ್ಣರಾಜ ಒಡೆಯರಿಗೆ ಶಿಕ್ಷಣ ನೀಡಲು, ‘ರಾಯಲ್ ಸ್ಕೂಲ್ ಎಂಬ ಪ್ರತ್ಯೇಕ ಶಾಲೆಯೊಂದನ್ನು ಆರಂಭಿಸಲಾಗಿತ್ತು. ಈ ಬಾಲಕ ಯುವರಾಜ ಜತೆಗೆ ಓದಲು ಸಮಾನ ಸಿರಿವಂತಿಕೆಯ ಮನೆತನದ ತೀಕ್ಷ್ಣಮತಿ ಬಾಲಕರ ಹುಡುಕಾಟ ನಡೆಸಿದ್ದರು. ಇದರಲ್ಲಿ ಆಯ್ಕೆಯಾದವರಲ್ಲಿ ಮಿರ್ಜಾ ಕೂಡ ಒಬ್ಬರು. ಆಂಗ್ಲ ಐಸಿಎಸ್ ಅಧಿಕಾರಿ ಎಸ್.ಎಮ್. ಫೋಸರ್ ಶಿಕ್ಷಕರಾಗಿದ್ದ ಈ ಶಾಲೆಯಲ್ಲಿ ಮಿರ್ಜಾ ಯುವರಾಜರ ಸಹಪಾಠಿಯಾಗಿ ಐದು ವರ್ಷ ಕಲಿತು, ನಂತರ ಸೆಂಟ್ರಲ್ ಕಾಲೇಜು ಸೇರುತ್ತಾರೆ. 1905ರಲ್ಲಿ ಅಲ್ಲಿಂದ ಪದವೀಧರರಾಗಿ ಹೊರಬರುತ್ತಾರೆ.

1905ರಲ್ಲಿಯೇ ರಾಜ್ಯದ ಪೋಲೀಸ್ ಇಲಾಖೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಸೇರ್ಪಡೆಗೊಂಡ ಮಿರ್ಜಾ ಬಹಳ ದಿನಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಮುಂದುವರಿಯಲಿಲ್ಲ. ಮಹಾರಾಜರ ಆಪ್ತ ಕಾರ್ಯದರ್ಶಿಗಳಾಗಿದ್ದ ಆರ್.ಹೆಚ್. ಕ್ಯಾಂಪ್ ಬೆಲ್ 1923ರಲ್ಲಿ ನಿವೃತ್ತರಾಗುತ್ತಾರೆ. ನಂತರ ಬ್ರಿಟಿಷ್ ಅಧಿಕಾರಿಗಳ ಮನವೊಲಿಸುವ ಮಹಾರಾಜರು, ಕ್ಯಾಂಪ್ ಬೆಲ್ಲರ ಸ್ಥಾನಕ್ಕೆ ಬಾಲ್ಯದ ಗೆಳೆಯ ಮಿರ್ಜಾರನ್ನು ನೇಮಕ ಮಾಡಿಕೊಳ್ಳುತ್ತಾರೆ. ಬ್ರಿಟಿಷ್ ಆಡಳಿತದಲ್ಲಿ ದೇಸೀಯ ರಾಜರುಗಳ ಆಪ್ತ ಕಾರ್ಯದರ್ಶಿಗಳು ಬ್ರಿಟಿಷ್ ಅಧಿಕಾರಿಗಳೆ ಆಗುತ್ತಿದ್ದರು. ಹೀಗಿರುವಾಗ ಮಹಾರಾಜರೊಬ್ಬರ ಆಪ್ತಕಾರ್ಯದರ್ಶಿಯಾದ ಮೊಟ್ಟಮೊದಲ ಭಾರತೀಯ, ಸರ್ ಮಿರ್ಜಾ ಇಸ್ಮಾಯಿಲ್. ದಿವಾನ್ ಹುದ್ದೆ ಹೊರತುಪಡಿಸಿದರೆ ಈ ಹುದ್ದೆಯೇ ಉನ್ನತವಾದ ಹುದ್ದೆಯಾಗಿತ್ತು.
ಮುಂದೆ 42ರ ಸಣ್ಣ ಪ್ರಾಯದಲ್ಲಿಯೇ 1926ರಲ್ಲಿ ಸರ್ ಅಲ್ಟಿಯನ್ ಬ್ಯಾನರ್ಜಿಯವರು ದಿವಾನ್ ಪದವಿಯಿಂದ ನಿವೃತ್ತರಾದಾಗ, ಮಹಾರಾಜರು ಮಿರ್ಜಾರನ್ನು ರಾಜ್ಯದ ದಿವಾನರನ್ನಾಗಿ ನೇಮಕ ಮಾಡಿಕೊಳ್ಳುತ್ತಾರೆ. ಸತತ 15 ವರ್ಷಗಳ ಕಾಲ ದಿವಾನರಾಗಿ ಮುಂದುವರಿದ ಮಿರ್ಜಾ ಇಸ್ಮಾಯಿಲ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ ಸಹಚರ್ಯ ಸಹಕಾರದೊಂದಿಗೆ ಮೈಸೂರನ್ನು ಆಧುನಿಕ ಮೈಸೂರನ್ನಾಗಿ ರೂಪಿಸಿದರು.
ಆಧುನಿಕ ಕೈಗಾರಿಕಾ ಕ್ರಾಂತಿಯೇ ಮೈಸೂರಿನಲ್ಲಾಯಿತು. ಮಿರ್ಜಾರವರ ಕಾಲದಲ್ಲಿ ಬೆಂಗಳೂರಿನ ಸರ್ಕಾರೀ ಪಿಂಗಾಣಿ ಕಾರ್ಖಾನೆ, ಶಿವಮೊಗ್ಗದ ಸಕ್ಕರೆ ಕಾರ್ಖಾನೆ, ಬೆಂಕಿಪೊಟ್ಟಣ ಕಾರ್ಖಾನೆ, ಭದ್ರಾವತಿಯ ಸಿಮೆಂಟ್ ಮತ್ತು ಕಾಗದದ ಕಾರ್ಖಾನೆ, ಮೈಸೂರ್ ಲ್ಯಾಂಪ್ಸ್, ರೇಷ್ಮೆ ನೂಲು ಮತ್ತು ನೇಯ್ಗೆ ಕಾರ್ಖಾನೆ, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಾರ್ಖಾನೆ, ರಾಸಾಯನಿಕಗಳ ಔಷಧೋತ್ಪಾದನೆ, ಚರ್ಮ ಕಾರ್ಖಾನೆ, ಗೊಬ್ಬರ ಕಾರ್ಖಾನೆ, ಹದ ಮಾಡುವ ಕಾರ್ಖಾನೆ, ವ್ಯವಸಾಯೋಪಕರಣಗಳ ಕಾರ್ಖಾನೆ, ಭದ್ರಾವತಿ ಉಕ್ಕಿನ ಕಾರ್ಖಾನೆಯಲ್ಲಿ ಕಬ್ಬಿಣ ಕೊಳವೆಗಳ ಎರಕದ ಕುಲುಮೆ, ಕಾಫಿ ಕ್ಯೂರಿಂಗ್ ವರ್ಕ್ಸ್, ಗಾಜಿನ ಕಾರ್ಖಾನೆ, ವಿಮಾನ ಕಾರ್ಖಾನೆ… ಹೀಗೆ ಹತ್ತು ಹಲವು ಬಗೆಯ ಕೈಗಾರಿಕೆಗಳು ರಾಜ್ಯದ ಹಲವು ಪ್ರದೇಶಗಳಲ್ಲಿ ಆರಂಭಗೊಂಡವು. ಕೈಗಾರಿಕೆಗಳ ವಿಕೇಂದ್ರೀಕರಣ ಅವರ ಆದ್ಯತೆಯಾಗಿತ್ತು.
ಮೈಸೂರು ಸಂಸ್ಥಾನದ ಮಾರುಕಟ್ಟೆಯನ್ನು ಯೂರೋಪ್‌ಗೂ ವಿಸ್ತರಿಸಿದರು. ಸಂಸ್ಥಾನದ ವಿಶೇಷ ಉತ್ಪನ್ನಗಳಾದ ಗಂಧದೆಣ್ಣೆ, ರೇಶೈವಸ್ತ್ರ, ಮೈಸೂರು ಸಾಬೂನು, ಅಗರಬತ್ತಿ ಇವುಗಳಿಗೆ ಯುರೋಪಿನ ಮಾರುಕಟ್ಟೆಯಲ್ಲಿ ಗಿರಾಕಿ ಹುಡುಕಿ ಮಾರಾಟದ ಸೌಲಭ್ಯ ಸುಗಮಗೊಳಿಸಲು ಲಂಡನ್‌ನಲ್ಲಿ ಟ್ರೇಡ್ ಕಮಿಶನರ್ ಕಚೇರಿಯೊಂದನ್ನು ತೆರೆದರು. ವಿಶ್ವೇಶ್ವರಯ್ಯನವರ ಕಾಲದಲ್ಲಿ ಆರಂಭಗೊಂಡು, ಮುಂದೆ ನಿಂತುಹೋಗಿದ್ದ ಮೈಸೂರು ದಸರಾ ವಸ್ತು ಪ್ರದರ್ಶನಕ್ಕೆ ಮಿರ್ಜಾ ಮರುಚಾಲನೆ ನೀಡಿದರು. ಇದರಿಂದ ರಾಜ್ಯದ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಗಳಿಗೆ ಅಪಾರ ಪ್ರಯೋಜನವಾಯಿತು. ವ್ಯಾಪಾರೋದ್ಯಮದ ಬೆಳವಣಿಗೆಗೆ ಉತ್ತಮ ಸಾರಿಗೆ ವ್ಯವಸ್ಥೆ ಅಗತ್ಯವೆಂದು ರಾಜ್ಯದಲ್ಲಿ ರಸ್ತೆ, ಸೇತುವೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿದರಲ್ಲದೇ, 1938ರಲ್ಲಿ, ಎಂ.ಎಸ್.ಎಂ ಎಂಬ ಖಾಸಗಿ ಉದ್ಯಮಸಂಸ್ಥೆಯ ಅಧೀನದಲ್ಲಿದ್ದ ರಾಜ್ಯದ 7216 ಮೈಲುಗಳುದ್ದದ ರೈಲ್ವೇಯನ್ನು ಸರ್ಕಾರದ ವತಿಯಿಂದ ಕೊಂಡುಕೊಂಡರು. ಶಿವಮೊಗ್ಗದಿಂದ ತಾಳಗುಪ್ಪ ರೈಲುಮಾರ್ಗ ನಿರ್ಮಾಣಗೊಂಡಿತು. ಇಡೀ ರಾಜ್ಯದಲ್ಲಿ ರಸ್ತೆಗಳಿಗೆ ಡಾಂಬರು ಹಾಕುವ, ಹೊಸ ರಸ್ತೆ, ಸೇತುವೆ ನಿರ್ಮಿಸುವ ಕಾಮಗಾರಿಗಳಾದವು. ಮಿರ್ಜಾರವರ ಕಾಲದಲ್ಲಿಯೇ ರಾಜ್ಯದ ಪ್ರತಿ ಊರಿನಲ್ಲಿಯೂ ಬಸ್ ನಿಲ್ದಾಣ ನಿರ್ಮಿಸುವ ರೂಢಿ ಆರಂಭವಾಯಿತು.

ಮಿರ್ಜಾರ ಕಾಲದಲ್ಲಿ ಮೈಸೂರು ಸಂಸ್ಥಾನದ ಕೃಷಿಯು ಉತ್ತುಂಗಕ್ಕೆ ಏರಿತು. ಮೈಸೂರು ರಾಜ್ಯದ ಒಟ್ಟು ಭೂ ವಿಸ್ತೀರ್ಣ 175 ಲಕ್ಷ ಎಕರೆಗಳಾಗಿದ್ದರೂ, ತರಿ, ಖುಷ್ಕಿ ಬಾಗಾಯಿತು ಸೇರಿ ಒಟ್ಟು 63.2 ಲಕ್ಷ ಎಕರೆ ಮಾತ್ರ ಸಾಗುವಳಿಯಾಗುತ್ತಿದ್ದವು. ಅಂದಿನ ಒಟ್ಟು ಜನಸಂಖ್ಯೆಯಲ್ಲಿ (1921ರ ಜನಗಣತಿ) 88.7ರಷ್ಟು ಮಂದಿ ಹಳ್ಳಿಗಳಲ್ಲೇ ವಾಸಿಸುತ್ತಿದ್ದರು. ಹಿಂದಿನ ದಿವಾನರುಗಳ ಕಾಲದಿಂದಲೂ ಕೆರೆಗಳ ನಿರ್ಮಾಣ ಮತ್ತು ದುರಸ್ತಿ ನಡೆಯುತ್ತಿತ್ತಾದರೂ ಮಿರ್ಜಾ ದಿವಾನರಾದ ನಂತರ ಅದಕ್ಕೆ ವೇಗ ದಕ್ಕಿತು. ಅವರ ಕಾಲದಲ್ಲಿ ಅಂಜಾನಾಪುರ, ಗೋಪಾಲ, ಭೀಮನಹಳ್ಳಿ, ಚಂದನಹಳ್ಳಿ, ನೆಲ್ಲಿಗೆರೆ, ಭೈಗು ನದಿ ಅಣೆಕಟ್ಟು ಮುಂತಾದ ಮಧ್ಯಮ ಪ್ರಮಾಣದ ಹಾಗೂ ಚಿಕ್ಕ ಜಲಾಶಯಗಳು ನಿರ್ಮಾಣಗೊಂಡವು. ಅವರು 1927ರಿಂದ 1939ರವರೆಗೆ ಒಟ್ಟು 7,400 ಕೆರೆಗಳನ್ನು ಜೀರ್ಣೋದ್ಧಾರ ಮಾಡಿಸಿದರು. ಒಟ್ಟು 23,453 ಕೆರೆಗಳಿಗೆ ವಿವಿಧ ಕಾಮಗಾರಿ ನಡೆಸಿ, ಅವುಗಳನ್ನು ನೀರಾವರಿಗೆ ಅಣಿಗೊಳಿಸಿದರು. ಬೆಂಗಳೂರು ಜಿಲ್ಲೆಯ ಕೇರೋಹಳ್ಳಿ ಕೆರೆ, ಮರಳವಾಡಿ ಕೆರೆ, ಮೈಸೂರು ಜಿಲ್ಲೆಯ ತುಂಬಾಡಿ ಕೆರೆ, ದಳವಾಯಿ ಕೆರೆ, ನಿಡಸಾಲೆ ಕೆರೆ, ಭುವನಹಳ್ಳಿ ಕೆರೆ, ಕೋಲಾರದ ಕಾಮಸಮುದ್ರ ಕೆರೆ ಮತ್ತು ಶಿವಮೊಗ್ಗದ ಸೌಳಂಗ ಕೆರೆ ಮುಂತಾಗಿ ಹಲವು ದೊಡ್ಡ, ಚಿಕ್ಕ ಕೆರೆಗಳನ್ನು ನಿರ್ಮಿಸಿದರು. ವಿಶೇಷವಾಗಿ ಇವರ ಕಾಲದಲ್ಲಿ ಕೃಷಿ ಕ್ಷೇತ್ರದ ನೀರಾವರಿ ವ್ಯವಸ್ಥೆಗಾಗಿಯೇ, ನೀರಾವರಿ ಅಭಿವೃದ್ಧಿ ನಿಧಿಯೊಂದು ಸ್ಥಾಪನೆಗೊಂಡು ಅದರ ಆರಂಭ ಬಂಡವಾಳವಾಗಿ ಸರ್ಕಾರ ಇಪ್ಪತ್ತೆಂಟು ಲಕ್ಷ ರೂಪಾಯಿ ತೊಡಗಿಸಿತು.
ಕೃಷ್ಣರಾಜ ಸಾಗರ ಅಣೆಕಟ್ಟಿನ್ನು ಪೂರ್ಣಗೊಳಿಸಿದ ಶ್ರೇಯಸ್ಸು ಮಿರ್ಜಾರಿಗೆ ಸಲ್ಲುತ್ತದೆ. ಸರ್ ಎಂ. ವಿಶ್ವೇಶ್ವರಯ್ಯನವರ ಕಾಲದಲ್ಲಿ ನಿರ್ಮಾಣವಾಗತೊಡಗಿ ಪ್ರಥಮ ಹಂತ 1916ರಲ್ಲೇ ಮುಗಿದಿದ್ದರೂ, ಮದ್ರಾಸಿನ ಆಕ್ಷೇಪದಿಂದ ಕಾಮಗಾರಿ ನಿಂತಿತ್ತು. ಇದು ಮಿರ್ಜಾರವರ ಕಾಲದಲ್ಲಿ, ಒಟ್ಟು ಎರಡು ಕೋಟಿ ನಲವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಅಣೆಕಟ್ಟೆಯನ್ನು ಪೂರ್ಣಗೊಳಿಸಲಾಯಿತು. 1927ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯೊಂದನ್ನು ನೇಮಕ ಮಾಡಿ, ಅದರ ಸಲಹೆಯಂತೆ ಒಟ್ಟು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಹುಲಿಕೆರೆಯ ಸುರಂಗ ಮಾರ್ಗವೂ ಸೇರಿದಂತೆ, ಈಗ ವಿಶ್ವೇಶ್ವರಯ್ಯ ನಾಲೆ ಎಂದು ಕರೆಯಲಾಗುತ್ತಿರುವ, ಇರ್ವಿನ್ ನಾಲೆಯನ್ನು ನಿರ್ಮಿಸಿ ಮಂಡ್ಯ ಮಳವಳ್ಳಿಗಳ ಒಟ್ಟು ಒಂದು ಲಕ್ಷದ ಇಪ್ಪತ್ತು ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಯಿತು.
ವಿದ್ಯುತ್ ಬೆಳಕಿನ ಶಕೆಯನ್ನು ಮಿರ್ಜಾ ಆರಂಭಿಸಿದರು. ಮಹಾರಾಜರ ಸೂಚನೆಯಂತೆ ಹಳ್ಳಿ, ಪಟ್ಟಣಗಳಿಗೂ ವಿದ್ಯುತ್ ಸರಬರಾಜನ್ನು ವಿಸ್ತರಿಸುವ ಮಹತ್ವದ ನಿರ್ಧಾರ ಕೈಗೊಂಡರು. 1926ರಲ್ಲಿ ಮೊದಲು ಬೌರಿಂಗ್ ಪೇಟೆ, ನಂತರ ಚನ್ನಪಟ್ಟಣ, ಕೋಲಾರ, ತುಮಕೂರು ವಿದ್ಯುತ್ ಸಂಪರ್ಕ ಪಡೆದವು. ಮೈಸೂರಿನಿಂದ ದೂರದ ಭದ್ರಾವತಿ, ದಾವಣಗೆರೆಯಂತಹ ಪಟ್ಟಣಗಳಿಗೂ ವಿದ್ಯುತ್ ಬೆಳಕು ಹರಡಿತು. ಭಾರತದಲ್ಲಿ ಮೊಟ್ಟಮೊದಲು ಗ್ರಾಮಗಳಿಗೆ ವಿದ್ಯುತ್ ಒದಗಿಸುವ ಪ್ರಕ್ರಿಯೆ ಆರಂಭಗೊಂಡಿದ್ದೇ ಮೈಸೂರು ಸಂಸ್ಥಾನದಲ್ಲಿ!
ಇದನ್ನು ಓದಿದ್ದೀರಾ?: ಗೂಗಲ್ AI ಡೇಟಾ ಹಬ್ ಕರ್ನಾಟಕದ ಕೈ ತಪ್ಪಿತೇ?
ವಿದ್ಯುತ್ತಿನಲ್ಲಿ ಕ್ರಾಂತಿಕಾರಕ ಹೆಜ್ಜೆಯೆಂದರೆ, 1930-31ರಲ್ಲಿ ಸರ್ಕಾರವೇ ವಿದ್ಯುತ್ ಪಂಪ್ ಸ್ಥಾಪಿಸಿ ಕಾನಕಾನಹಳ್ಳಿಯಲ್ಲಿ ನಡೆಸಿದ ವಿದ್ಯುತ್ ಪಂಪಿನ ಪ್ರಾತ್ಯಕ್ಷಿಕೆ. ಅದರ ಮೂಲಕ ಬೆಳೆಗೆ ನೀರು ಹಾಯಿಸಿ, ಬೆಳೆ ಬೆಳೆಯುವ ಪ್ರಾತ್ಯಕ್ಷಿಕೆ ನಡೆಸಿ, ರೈತರಿಗೆ ವಿದ್ಯುತ್ ಪಂಪ್ ಬಳಸಲು ಪ್ರೋತ್ಸಾಹಿಸಿತು. ಜೊತೆಗೆ ಹೈರ್‌ಪರ್ಚೇಸ್ ಆಧಾರದಲ್ಲಿ, ಅಂದರೆ ಸರ್ಕಾರ ಆರಂಭದಲ್ಲಿ ಕೇವಲ ಶೇಕಡ ಇಪ್ಪತ್ತರಷ್ಟು ಮಾತ್ರ ಹಣ ಪಡೆದು, ರೈತರ ಜಮೀನಿನಲ್ಲಿ ತಾನೇ ಸ್ವತಃ ವಿದ್ಯುತ್ ಪಂಪ್ ಸ್ಥಾಪಿಸಿ, ಚಾಲನೆಗೊಳಿಸಿಕೊಡುವ ಮೂಲಕ ಅದರ ಬಳಕೆಯನ್ನು ಪ್ರೋತ್ಸಾಹಿಸಿತು. ಮುಂದಿನ ಮೂರು ವರ್ಷಗಳಲ್ಲಿ ರೈತರು ಮೂರು ಸಮಾನ ಕಂತುಗಳಲ್ಲಿ ಉಳಿದ ಹಣ ಸಂದಾಯ ಮಾಡಬೇಕಿತ್ತು. ಜೊತೆಗೆ ಇಂತಹ ಗ್ರಾಹಕರಿಗೆ ವಿದ್ಯುತ್ ದರ ಯೂನಿಟ್ಟಿಗೆ ಕೇವಲ ಒಂದೂವರೆ ಆಣೆಯಾಗಿತ್ತು. 1926ರಿಂದ 28ರವರೆಗೆ ಒಟ್ಟು 219 ಗ್ರಾಹಕರು ಈ ಸೌಲಭ್ಯವನ್ನು ಪಡೆದಿದ್ದರು. ಆ ಕಾಲದಲ್ಲಿ ಇದೊಂದು ಕ್ರಾಂತಿಕಾರಿ ನಿರ್ಧಾರವಾಗಿತ್ತು. ಮುಂದೆ 1931ರಲ್ಲಿ ವಿದ್ಯುತ್ ದರವನ್ನು ಒಂದಾಣೆಗೆ ಇಳಿಸಿ ಕೃಷಿಗೆ ಮತ್ತಷ್ಟು ಪ್ರೋತ್ಸಾಹ ನೀಡಲಾಯಿತು. ಇಷ್ಟೇ ಅಲ್ಲದೇ ಗ್ರಾಮಗಳ ಹಿಟ್ಟಿನ ಮಿಲ್ಲುಗಳಿಗೆ, ಗೃಹಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ. ಅಖಿಲ ಭಾರತ ಮಟ್ಟದಲ್ಲಿಯೇ ಮೈಸೂರು ಗ್ರಾಮೀಣ ವಿದ್ಯುದೀಕರಣದ ವಿಚಾರದಲ್ಲಿ ಮುಂಚೂಣಿಯ ರಾಜ್ಯವೆಂದು ಪ್ರಸಿದ್ದಿ ಪಡೆಯಿತು. ಈ ಎಲ್ಲ ಪ್ರೋತ್ಸಾಹಗಳ ಫಲವಾಗಿ 1939-40ರ ಹೊತ್ತಿಗೆ ರಾಜ್ಯದ ಎಲ್ಲ ಜಿಲ್ಲೆಗಳ ಒಟ್ಟು 196 ನಗರ, ಹಳ್ಳಿ, ಪಟ್ಟಣಗಳು ವಿದ್ಯುದೀಕರಣಕ್ಕೆ ಒಳಗಾಗಿದ್ದವು. ರಾಜ್ಯದಲ್ಲಿ ಒಟ್ಟು 41,229 ಗ್ರಾಹಕರು ವಿದ್ಯುತ್ ಸೌಲಭ್ಯ ಪಡೆದಿದ್ದರು.
ಮೂವತ್ತರ ದಶಕದಲ್ಲಿ ಕಬ್ಬಿಣದ ದರ ಹೆಚ್ಚಳದಿಂದ ಭದ್ರಾವತಿಯ ಕಬ್ಬಿಣ ಕಾರ್ಖಾನೆಯಲ್ಲಿ ತಯಾರಾಗುತ್ತಿದ್ದ ವಿದ್ಯುತ್ ಕಂಬಗಳು ಇಲಾಖೆಗೆ ದುಬಾರಿ ಎನ್ನಿಸಿತು. ಆಗ ಮಿರ್ಜಾ ಸರ್ಕಾರ, ಮೈಸೂರಿನ ಕಾಡುಗಳಲ್ಲಿ ಬೆಳೆಯುತ್ತಿದ್ದ ‘ಬಳಿಗ’ ಎಂಬ ಜಾತಿಯ ಮರಗಳನ್ನು ವಿದ್ಯುತ್ ಕಂಬಗಳಿಗೆ ಬಳಸಲು ನಿರ್ಧರಿಸಿ, ವಿದ್ಯುತ್ ಇಲಾಖೆಯಲ್ಲಿ ಅಪಾರ ಹಣ ಉಳಿತಾಯ ಮಾಡಿದರು.
ಮಹಾನಗರ ಬೆಂಗಳೂರನ್ನು ಸುಂದರ ನಗರವನ್ನಾಗಿಸುವಲ್ಲಿ ಮಿರ್ಜಾ ಇಸ್ಮಾಯಿಲ್ ಅವರ ಪಾತ್ರ ದೊಡ್ಡದಿದೆ. ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಒಂದುಲಕ್ಷದ ಮೂವತ್ತು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿದರು. ಕೃಷ್ಣರಾಜ ಮಾರುಕಟ್ಟೆ, ಕಲಾಸಿಪಾಳ್ಯ ವಿಕ್ಟೋರಿಯಾ ಆಸ್ಪತ್ರೆ ಇತರ ಕಡೆಗಳಲ್ಲಿ ಮರ ನೆಡಿಸಿದ್ದು, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮರ ನಡೆಸಿ ಅದನ್ನು ಹಸಿರಾಗಿಸಿದರು. ಬೆಟ್ಟಕ್ಕೆ ಮೋಟಾರು ರಸ್ತೆ ಮಾಡಿಸಿದರು. ರಾತ್ರಿ ವೇಳೆ ಬೆಟ್ಟವೇರಲು ವಿದ್ಯುತ್ ದೀಪ ಹಾಕಿಸಿದರು. ಬೆಟ್ಟದ ದೊಡ್ಡ ದೊಡ್ಡ ಬಂಡೆಗಳನ್ನು ಸೀಳಿ ಅಲ್ಲಿ ಸೂಕ್ತಿಗಳನ್ನೂ, ಶ್ಲೋಕಗಳನ್ನೂ ಕೆತ್ತಿಸಿದರು. ಬೆಂಗಳೂರು ರಸ್ತೆಯಲ್ಲಿ ದೂರದಿಂದಲೇ ಚಾಮುಂಡಿ ಬೆಟ್ಟದ ದೀಪಾಲಂಕೃತ ಫಲಕ ಕಾಣುವ ವ್ಯವಸ್ಥೆ ಮಾಡಿದರು.

ಮೈಸೂರು ಮೃಗಾಲಯ ಮಿರ್ಜಾರ ಕಾಲಕ್ಕೆ ಅಗಾಧವಾಗಿ ವಿಸ್ತರಿಸಿಕೊಂಡಿತು. ಮೃಗಾಲಯಕ್ಕೆ ಹಲವು ಬಗೆಯ ಮೃಗಗಳನ್ನು ಅದರಲ್ಲೂ ಬಿಳಿಯ ಕರಡಿ, ಫೇಂಡಾಮೃಗ, ಹುಲಿ, ಸಿಂಹ, ನಾನಾ ಬಗೆಯ ಕೋತಿಗಳು, ಉರಗಗಳು ಮತ್ತು ಪಕ್ಷಿಗಳನ್ನು ತಂದು ಮೃಗಾಲಯವನ್ನು ಜನಪ್ರಿಯಗೊಳಿಸಿದರು. ರಾಜ್ಯದ ಉದ್ದಕ್ಕೂ ಪ್ರವಾಸಿ ಮಂದಿರಗಳನ್ನು ಹೆಚ್ಚಿಸಿದರು. ಪುರಸಭೆಗಳಿಗೆ ಅಗಲವಾದ ರಸ್ತೆ, ಸಾಲುಮರ, ಉದ್ಯಾನವನ, ಮತ್ತು ವಿಶಾಲವಾದ ಮೈದಾನಗಳನ್ನು ನಿರ್ಮಿಸಲು ಶ್ರಮಿಸಿದರ. ಶಾಲೆಯ ಸುತ್ತ ಮರಗಿಡ ನೆಟ್ಟು ಅದಕ್ಕೆ ಸ್ಥಳೀಯ ಮತ್ತು ಸಸ್ಯಶಾಸ್ತ್ರೀಯ ಶಿಕ್ಷಣಾಧಿಕಾರಿಗಳಿಗೆ ಸೂಚಿಸುತ್ತಿದ್ದರು. ಕಾರ್ಖಾನೆಯ ಸುತ್ತ ಉದ್ಯಾನವನ ಬೆಳೆಸುವ ಮೂಲಕ ಕಾರ್ಮಿಕರ ವಿಶ್ರಾಂತಿಗೆ ಸ್ಥಳ ಒದಗಿಸಲು ಅದರ ಅಧಿಕಾರಿಗಳಿಗೆ ಸೂಚಿಸಿದರು. ಅವರು ಸ್ವಚ್ಛತೆಗೆ ವಿಶೇಷ ಗಮನ ಕೊಡುತ್ತಿದ್ದರು. ತಾವೇ ಸ್ವತಃ ಪುರಸಭಾಧ್ಯಕ್ಷರು, ಆರೋಗ್ಯ ಅಧಿಕಾರಿ ಮತ್ತು ಕಾಮಗಾರಿ ಅಧಿಕಾರಿಗಳೊಂದಿಗೆ ನಗರ ಪ್ರದಕ್ಷಿಣೆ ನಡೆಸಿ ಕುಂದು ಕೊರತೆ, ಕೊಳಕುಗಳನ್ನು ನಿವಾರಿಸಲು ನಿರಂತರವಾಗಿ ಶ್ರಮಿಸುತ್ತಿದ್ದರು. ಬೇಲೂರು ಹಳೇಬೀಡು ಸುಂದರ ಪ್ರವಾಸಿ ತಾಣಗಳನ್ನಾಗಿಸಿದರು.

ಅರುಣ್ ಜೋಳದ ಕೂಡ್ಲಿಗಿ
ಲೇಖಕ, ಜಾನಪದ ಸಂಶೋಧಕರು




