ಬಿಹಾರದ ರಾಜಕೀಯ ಚದುರಂಗದಾಟದಲ್ಲಿ, ಈ ಬಾರಿಯ ಚುನಾವಣೆಯಲ್ಲಿ ಗ್ಯಾರಂಟಿ ತಂತ್ರಗಾರಿಕೆ ಚುನಾವಣೆಯನ್ನು ಗೆಲ್ಲುವುದಕ್ಕಷ್ಟೇ ಸೀಮಿತವಾಗುತ್ತದೋ, ಇಲ್ಲ ಜಾರಿಗೆ ಬರುತ್ತದೋ...
ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ದೇಶದ ರಾಜಕೀಯ ದಿಕ್ಕನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಬಿಹಾರದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ರಾಜಕೀಯ ಪ್ರಜ್ಞೆ ಇರುವ ರಾಜ್ಯಗಳಲ್ಲಿ ಒಂದಾಗಿರುವ ಬಿಹಾರದ ಅಧಿಕಾರ ಗದ್ದುಗೆಗಾಗಿ ಇಂಡಿಯಾ ಹಾಗೂ ಎನ್‌ಡಿಎ, ಎರಡು ಪ್ರಮುಖ ಮೈತ್ರಿಕೂಟಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಪ್ರಚಾರದ ಅಖಾಡ ರಂಗೇರಿದೆ. ಚುನಾವಣೆಯಲ್ಲಿ ಗೆಲ್ಲಬೇಕು ಎಂದರೆ ಚುನಾವಣೆ ಪ್ರಚಾರದ ಹೊತ್ತಲ್ಲಿ, ಅಭ್ಯರ್ಥಿಗಳ ಆಯ್ಕೆ ಹೊತ್ತಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಅನ್ನುವುದು ಸಾಂಪ್ರದಾಯಿಕ ನಿಲುವು. ಇದನ್ನ ತುಂಬಾನೇ ಸೀರಿಯಸ್ ಆಗಿ ತೆಗೆದುಕೊಂಡಿರುವ ಬಿಜೆಪಿ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯನ್ನು ಕಾಪಿ ಹೊಡೆಯುತ್ತಿದೆ.
ಮತದಾರರನ್ನು ಸೆಳೆಯಲು ಪಕ್ಷಗಳು ಕಸರತ್ತು ನಡೆಸುತ್ತಿವೆ. ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ನೇತೃತ್ವದ ಮೈತ್ರಿಕೂಟ, ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಬೇಕು ಎಂದು ಪಣ ತೊಟ್ಟಿರುವುದಕ್ಕೆ ಕಾರಣ ಬಿಹಾರ ರಾಜ್ಯದಿಂದ ಹೊರಟ ಸಂಕೇತ ಇಡೀ ದೇಶಕ್ಕೆ ತಲುಪತ್ತೆ ಅನ್ನುವುದು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರಧಾನಿ ನರೇಂದ್ರ ಮೋದಿ ತಲಾ 10 ಸಾವಿರ ನಗದು ವರ್ಗಾವಣೆ ಮಾಡುವ ಮೂಲಕ ಮಹಿಳೆಯರ ಮನ ಗೆಲ್ಲಲು ಮುಂದಾಗಿದ್ದಾರೆ. ಇದೇ ವೇಳೆ ”ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ”ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ ಮತದಾರ ಪಟ್ಟಿ ಪರಿಷ್ಕರಣೆ: ಮೋದಿ ಮಸಲತ್ತು ಬಹಿರಂಗ?
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ”ನವರಾತ್ರಿಯ ಶುಭ ದಿನಗಳಲ್ಲಿ, ಬಿಹಾರದ ಮಹಿಳೆಯರ ಮುಖದಲ್ಲಿ ಸಂತೋಷ ಕಂಡು ಖುಷಿ ಆಗಿದೆ. ನಿಮ್ಮ ಆಶೀರ್ವಾದ ನಮಗೆ ಶಕ್ತಿಯ ದೊಡ್ಡ ಮೂಲವಾಗಿದೆ” ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೀಗೆ ಹೇಳುವುದಕ್ಕೆ ಕಾರಣ, 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳೆಯ ಮತದಾನ ಪ್ರಮಾಣ ಹೆಚ್ಚಾಗಿತ್ತು. ಒಟ್ಟಾರೆ ಮತದಾನ ಪ್ರಮಾಣ 57.05% ಮತ್ತು ಮಹಿಳೆಯರ ಮತದಾನವು 59.69% ಎಂದು ದಾಖಲಾಗಿತ್ತು. ಪುರುಷರಿಗಿಂತ ಮಹಿಳೆಯರ ಮತದಾನ ಪ್ರಮಾಣ ಹೆಚ್ಚಾಗುತ್ತಿರುವ ಸತತ ಮೂರನೇ ಚುನಾವಣೆ ಅದಾಗಿತ್ತು. ಅಷ್ಟೇ ಅಲ್ಲ ಪ್ರತಿ ಬಿಹಾರ ಚುನಾವಣೆಯ ಸಂದರ್ಭದಲ್ಲಿ, ರಾಜಕೀಯ ಪಕ್ಷಗಳು ಮಹಾದಲಿತ ಸಮುದಾಯವನ್ನು ‘ಮತ ಬ್ಯಾಂಕ್’ ಎಂದು ಪರಿಗಣಿಸಿ ಅವರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತವೆ. ಕೆಲವು ಸಮುದಾಯಗಳು ಅತ್ಯಂತ ಅಂಚಿನಲ್ಲಿರುವ ಸಮುದಾಯವಾಗಿ ಉಳಿದಿದ್ದು, ಬಡತನ, ಹಸಿವು, ವಲಸೆ ಮತ್ತು ಜಾತಿ ಆಧಾರಿತ ತಾರತಮ್ಯದೊಂದಿಗೆ ಹೋರಾಡುತ್ತಿದೆ.
ಬಿಹಾರದ ಎಲ್ಲಾ 243 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ಅಕ್ಟೋಬರ್ ಅಥವಾ ನವೆಂಬರ್ 2025ರಲ್ಲಿ ನಡೆಯಲಿದೆ. ಹಿಂದಿನ ವಿಧಾನಸಭಾ ಚುನಾವಣೆಗಳು ಅಕ್ಟೋಬರ್-ನವೆಂಬರ್ 2020ರಲ್ಲಿ ನಡೆದಿದ್ದವು. ನಂತರ ಎನ್‌ಡಿಎ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿ ಸರ್ಕಾರ ರಚಿಸಿತು. ಆಗಸ್ಟ್ 2022ರಲ್ಲಿ ಜೆಡಿಯು ಎನ್‌ಡಿಎ ಜೊತೆಗಿನ ಸಂಬಂಧವನ್ನು ಮುರಿದು ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ಗೆ ಸೇರಿತು. ಆದರೆ ಜನವರಿ 2024ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರಳಿತು. ಇದರಿಂದ ಮತ್ತೊಮ್ಮೆ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿತು. ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ 74 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಜೆಡಿ(ಯು) 43 ಸ್ಥಾನಗಳಲ್ಲಿ ಗೆದ್ದಿತು. ಪ್ರಮುಖ ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) 75 ಸ್ಥಾನಗಳಲ್ಲಿ ಜಯಗಳಿಸಿ ಅತಿ ಹೆಚ್ಚು ಮತಗಳನ್ನು ಗಳಿಸಿತ್ತು. ಆದರೆ ಬಿಜೆಪಿ-ಜೆಡಿ(ಯು) ಮೈತ್ರಿಕೂಟ ಅಧಿಕಾರಕ್ಕೇರಿತ್ತು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಏನಾದರೂ ಮಾಡಿ ಮತ್ತೊಮ್ಮೆ ಗದ್ದುಗೆಗೆ ಏರಲೇಬೇಕು ಅಂತ ಪಣತೊಟ್ಟಿರುವ ಎನ್‌ಡಿಎ ಮೈತ್ರಿಕೂಟ ಮಹಿಳಾ ಮತದಾರರನ್ನ ಓಲೈಸುವಲ್ಲಿ ಮುಂದಿದೆ. ಇದಕ್ಕೆ ಕಾರಣ ಬಿಜೆಪಿಗೆ ಈಗ ಬಿಹಾರದಲ್ಲಿ ಇರುವ ಆಡಳಿತ ವಿರೋಧಿ ಅಲೆ. ಹೌದು ಬಿಹಾರದ ಜನ ಈಗ ಬಿಜೆಪಿಯನ್ನ ತೊರೆಯುತ್ತಿದ್ದಾರೆ. ಬಿಜೆಪಿ ಬರೀ ರಾಜಕೀಯ ಮಾಡತ್ತೆ, ಇದರಲ್ಲಿ ಸಾಮಾನ್ಯ ಜನರಿಗೆ ಏನೂ ಉಪಯೋಗ ಆಗುತ್ತಿಲ್ಲ ಅನ್ನುವುದು ಎಲ್ಲರ ಗಮನಕ್ಕೂ ಬಂದಿದೆ. ಈ ಆಡಳಿತ ವಿರೋಧಿ ಅಲೆಯ ಮಧ್ಯೆ ಬಿಜೆಪಿ ಮತಗಳ್ಳತನ ನಡೆಸಿದೆ, ಇವಿಎಮ್ ಮಷೀನ್‌ಗಳನ್ನ ಹ್ಯಾಕ್ ಮಾಡಿ ಗೆಲ್ಲುತ್ತಿದೆ ಅನ್ನುವ ಆರೋಪವನ್ನ ವಿಪಕ್ಷಗಳು ಮಾಡಿವೆ. ಅಷ್ಟೇ ಅಲ್ಲ ಬಿಜೆಪಿಗೆ ಬಿಹಾರ ಪ್ರತಿಷ್ಠೆಯ ಕಣವಾಗಿದೆ. ಜೊತೆಗೆ ಮುಂದಿನ ಲೋಕಸಭಾ ಚುನಾವಣೆಗೆ ಭದ್ರ ಬುನಾದಿಯನ್ನ ಹಾಕುವ ತಾಕತ್ತು ಆ ರಾಜ್ಯದ ವಿಧಾನಸಭಾ ಚುನಾವಣೆಗೆ ಇದೆ ಅನ್ನುವುದನ್ನು ನಾವು ಅಲ್ಲಗಳೆಯುವ ಹಾಗಿಲ್ಲ. ವಿಧಾನಸಭಾ ಚುನಾವಣೆಯ ಗೆಲುವು, ಲೋಕಸಭಾ ಚುನಾವಣೆಗೆ ಸೋಪಾನ. ಹಾಗಾಗಿ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲಲು ಬಿಜೆಪಿ ಹೆಜ್ಜೆ ಇಡುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಈ ಯೋಜನೆ ಜಾರಿಗೊಳಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಹಾರ ಮಹಿಳಾ ಮತದಾರರನ್ನ ಸೆಳೆಯುವುದು ಈ ಯೋಜನೆಯ ಮೂಲ ಉದ್ದೇಶ.
ಬಿಜೆಪಿ ಮಹಿಳಾ ಮತದಾರರನ್ನು ಸೆಳೆಯಲು ಅದು ಆಯ್ಕೆ ಮಾಡಿಕೊಂಡಿದ್ದು, ಕರ್ನಾಟಕದ ಮಾದರಿಯನ್ನು, ಗ್ಯಾರಂಟಿ ಯೋಜನೆಗಳನ್ನು. 2023ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಹಲವು ಗ್ಯಾರಂಟಿಗಳನ್ನ ಘೋಷಣೆ ಮಾಡಿದ್ದ ಕಾಂಗ್ರೆಸ್, ಭರ್ಜರಿ ಗೆಲುವು ಸಾಧಿಸಿತ್ತು. ಅಧಿಕಾರಕ್ಕೇರುತ್ತಿದ್ದಂತೆ ಜಾರಿ ಮಾಡಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಇಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ, ದೇವರಾಜ ಅರಸು ಅವರ ಅವಧಿಯಲ್ಲಿ ಕರ್ನಾಟಕದಲ್ಲಿ 20 ಅಂಶಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿತ್ತು. ಇವುಗಳಲ್ಲಿ ಇಂದಿಗೂ ಹಲವು ಕಾರ್ಯಕ್ರಮಗಳು ಮುಂದುವರೆದಿವೆ. ವಿಧವೆಯರು, ದೈಹಿಕವಾಗಿ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಪಿಂಚಣಿ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಕಾಂಗ್ರೆಸ್ ಕಳೆದ ಚುನಾವಣೆ ಸಮಯದಲ್ಲಿ ಮಾತು ಕೊಟ್ಟಂತೆ, ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ಬಡವರಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್, ಬಿಪಿಎಲ್ ಕುಟುಂಬಕ್ಕೆ 10 ಕೆಜಿ ಅಕ್ಕಿ ಮತ್ತು ಪಡಿತರ ಕೊರತೆಯಾದರೆ ನಗದು ವಿತರಣೆ, ಕುಟುಂಬದ ಮಹಿಳೆಗೆ 2000 ರೂ. ಮತ್ತು ಯುವ ನಿಧಿ ಯೋಜನೆಯಡಿಯಲ್ಲಿ ವಿದ್ಯಾರ್ಥಿ ವೇತನ ನೀಡುವ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರವು ಎಲ್ಲಾ ಐದು ಯೋಜನೆಗಳಿಗೆ ಸುಮಾರು 1 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಸಾಕಷ್ಟು ಜನರು ಯೋಜನೆಗಳಿಂದ ಅನುಕೂಲ ಪಡೆದಿದ್ದಾರೆ. ಖ್ಯಾತ ಅರ್ಥಶಾಸ್ತ್ರಜ್ಞರು ಮಹಿಳೆಯರಿಗೆ ನೀಡಲಾಗಿರುವ ಗ್ಯಾರಂಟಿ ಯೋಜನೆಯನ್ನು ಒಪ್ಪಿದ್ದಾರೆ. ರಾಜ್ಯದ ಪ್ರತಿ ಕುಟುಂಬವು ಎಲ್ಲಾ ಯೋಜನೆಗಳಿಂದ ತಿಂಗಳಿಗೆ 5,000-6,000 ರೂ.ಗಳನ್ನು ಗಳಿಸುತ್ತಿದೆ.
ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಬಿಜೆಪಿಗರು ಟೀಕೆ ಮಾಡಿದ್ದರು, ಈಗಲೂ ಮಾಡುತ್ತಿದ್ದಾರೆ. ಅದೇ ರೀತಿ ಪ್ರಧಾನಿ ಮೋದಿ ಕೂಡ ಟೀಕಿಸಿದ್ದರು. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಣವಿಲ್ಲ ಅಂತ ಲೇವಡಿ ಮಾಡಿದ್ದರು. ಅಲ್ಲದೆ, ಹಾಲು, ಆಲ್ಕೋಹಾಲ್ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಸಿದ್ದಾರೆ ಎಂದು ದೂರಿದ್ದರು. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದರು. ಬಿಜೆಪಿಗರು ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸಲು ಮಾಡಿದ್ದು ಒಂದೆರಡಲ್ಲ. ಆದರೆ ಅದೇ ಬಿಜೆಪಿ ಕರ್ನಾಟಕದ ಪಂಚ ಗ್ಯಾರಂಟಿ ಯೋಜನೆಗಳನ್ನು ತನ್ನ ಆಡಳಿತ ಇರುವ ಇತರ ರಾಜ್ಯಗಳಲ್ಲಿ ಅನುಸರಿಸುತ್ತಿದೆ. ಬಿಜೆಪಿ ಒಂದು ಕಡೆ ಟೀಕೆ ಮಾಡುತ್ತದೆ, ಹರಿಯಾಣ, ರಾಜಸ್ತಾನ, ದೆಹಲಿ, ಮಧ್ಯಪ್ರದೇಶ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಕರ್ನಾಟಕ ಮಾದರಿಯ ಗ್ಯಾರಂಟಿ ಯೋಜನೆಯನ್ನ ಅನುಸರಿಸುತ್ತದೆ.
ಅಷ್ಟೇ ಅಲ್ಲ ‘ಕಾಂಗ್ರೆಸ್‌ನ ಗ್ಯಾರಂಟಿಗಳ ಬಣ್ಣ ಬಯಲಾಗುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಲು ಆ ಪಕ್ಷ ಹೊರಟಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಿಕೆಯನ್ನೂ ನೀಡಿದ್ದರು. ಈಗ ಅದೇ ಪ್ರಧಾನಿ ಮಹಿಳೆಯರ ಖಾತೆಗೆ 10,000 ರೂ ಹಣವನ್ನ ಹಾಕುವ ಮೂಲಕ ತಾವೇನೂ ಕಡಿಮೆ ಇಲ್ಲ ಅನ್ನುವುದನ್ನು ತೋರಿಸುವುದಕ್ಕೆ ಹೊರಟಂತಿದೆ. ಜೊತೆಗೆ, ಬಿಹಾರದಲ್ಲಿ ಎಲ್ಲಾ ಗೃಹ ಬಳಕೆದಾರರಿಗೆ ಮಾಸಿಕ 125 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ಘೋಷಣೆಯನ್ನು ಸಹ ಬಿಜೆಪಿ ಮಾಡಿದೆ. ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ಆರ್ಥಿಕವಾಗಿ ದಿವಾಳಿ ಆಗತ್ತದೆ ಎಂದು ಪಿಎಂ ಮೋದಿ ಟೀಕೆ ಮಾಡಿದ್ದರು, ಈಗ ಅದೇ ಪ್ರಧಾನಿ ಬಿಹಾರದಲ್ಲಿ ಮತದಾರರನ್ನ ಸೆಳೆಯುವುದಕ್ಕೆ ಟೀಕೆ ಮಾಡಿದ್ದ ಗ್ಯಾರಂಟಿ ಯೋಜನೆಯನ್ನ ಜಾರಿ ಮಾಡಿದೆ.

ಬಿಜೆಪಿ ಕೊಡುವ, ಕೊಡಲಿರುವ ಗ್ಯಾರಂಟಿಗಳಿಗೆ ವಿರೋಧವಿಲ್ಲ. ಆದರೆ ಬೇರೆ ಪಕ್ಷಗಳು ಅದನ್ನೇ ಮಾಡುವಾಗ, ಸ್ವಾಗತಿಸುವ ಬದಲು ಟೀಕಿಸುವುದು; ತಾನು ಮಾಡುವಾಗ ಜನಪರ ಕಾರ್ಯಕ್ರಮ ಎಂದು ಬಿಂಬಿಸುವುದು- ಇದು ಬಿಜೆಪಿಯ ಸೋಗಲಾಡಿತನ. ಬಿಹಾರದಲ್ಲಿ ಈಗ ಚುನಾವಣೆ ಎದುರಾಗಿದೆ. ಹಾಗಾಗಿ ಅಲ್ಲಿ ಘೋಷಣೆ ಮಾಡಿದ್ದಾರೆ. ನುಡಿದಂತೆ ನಡೆಯುವ ಜವಾಬ್ದಾರಿ ಬಿಜೆಪಿಯದಾಗಿದೆ.
ಯಾಕೆಂದರೆ ನಾಯಕರು ಮತ ಕೇಳಲು ಮಾತ್ರ ಬರುತ್ತಾರೆ. ಮಕ್ಕಳ ಶಾಲೆಗಳು, ಗುಡಿಸಲುಗಳು ಅಥವಾ ಜನರ ಖಾಲಿ ಹೊಟ್ಟೆಗಳ ಬಗ್ಗೆ ಅವರಿಗೆ ಕಾಳಜಿ ಇರುವುದಿಲ್ಲ. ಪ್ರತಿಯೊಂದು ಗ್ರಾಮದ ಪ್ರತಿಯೊಂದು ಗುಡಿಸಲು, ಪ್ರತಿಯೊಬ್ಬ ಮಹಿಳೆಯ ಬಾಗಿದ ಬೆನ್ನು ಮತ್ತು ಪ್ರತಿಯೊಂದು ಮಗುವಿನ ಅರ್ಧ-ಖಾಲಿ ಹೊಟ್ಟೆ ಕಾಡುತ್ತದೆ, ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಪ್ರಜಾಪ್ರಭುತ್ವ ಕೇವಲ ನಮ್ಮ ಮತಗಳ ಬಗ್ಗೆ ಮಾತ್ರವೇ? ಚುನಾವಣೆಗಳ ನಂತರ, ಹಸಿವು ಮತ್ತು ಅವಮಾನವೇ ಏಕೆ ನಮ್ಮ ಪಾಲಾಗುತ್ತದೆ ಅನ್ನುವುದು ಮತ ನೀಡಿದ ಜನರ ಅಳಲು. ಒಟ್ಟಿನಲ್ಲಿ, ಬಿಹಾರದ ರಾಜಕೀಯ ಚದುರಂಗದಾಟದಲ್ಲಿ, ಈ ಬಾರಿಯ ಚುನಾವಣೆಯಲ್ಲಿ ಗ್ಯಾರಂಟಿ ತಂತ್ರಗಾರಿಕೆ ಚುನಾವಣೆಯನ್ನು ಗೆಲ್ಲುವುದಕ್ಕಷ್ಟೇ ಸೀಮಿತವಾಗುತ್ತದೋ, ಇಲ್ಲ ಜಾರಿಗೆ ಬರುತ್ತದೋ… ಕಾದು ನೋಡಬೇಕು.





