ಏನಾಗಲಿದೆ ಮೋದಿ 3.0 ಸರ್ಕಾರ | ನಿತೀಶ್-ನಾಯ್ಡು ಮರ್ಜಿನಲ್ಲಿ ಮೋದಿ ಡಮ್ಮಿ ಪ್ರಧಾನಿ!

Date:

ಲೋಕಸಭಾ ಚುನಾವಣೆಯಲ್ಲಿ ಅಗತ್ಯ ಬಹುಮತಕ್ಕೆ ಬೇಕಿರುವಷ್ಟು ಸ್ಥಾನಗಳನ್ನು ಗೆಲ್ಲುವಲ್ಲಿ ಬಿಜೆಪಿ ಸೋತಿದೆ. ಸರ್ಕಾರ ರಚಿಸಲು ಎನ್‌ಡಿಎ ಮಿತ್ರಪಕ್ಷಗಳ ಮೊರೆ ಹೋಗಿದೆ. ಸದ್ಯ, ಜೆಡಿಯು ನಾಯಕ ನಿತೀಶ್ ಕುಮಾರ್, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಎನ್‌ಡಿಎ ಜೊತೆಗೆ ಇರುವುದಾಗಿ ಭರವಸೆ ನೀಡಿದ್ದಾರೆ. ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ. ಭಾನುವಾರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

40 ವರ್ಷಗಳ ಬಳಿಕ ಒಬ್ಬನೇ ವ್ಯಕ್ತಿ 3ನೇ ಬಾರಿಗೆ ಪ್ರಧಾನಿಯಾಗುತ್ತಿದ್ದಾರೆ. ಆದರೆ, ಈಗ ಅವರ ಪಕ್ಷಕ್ಕೆ ಬಹುಮತವಿಲ್ಲ. ಅವರು ಎನ್‌ಡಿಎ ಸರ್ಕಾರದಲ್ಲಿ ಪ್ರಧಾನಿ ಆಗಲಿದ್ದಾರೆ. ಕಳೆದ ಎರಡು ಅವಧಿಗಳಲ್ಲಿ ಲೋಕಸಭೆಯಲ್ಲಿ ಬಹುಮತಕ್ಕೆ ಅಗತ್ಯವಿದ್ದಷ್ಟು ಸ್ಥಾನಗಳನ್ನು ಬಿಜೆಪಿ, ಸ್ವಂತ ಬಲದಿಂದ ಸರ್ಕಾರ ರಚಿಸಿತ್ತು. ಏಕಪಕ್ಷದ ಸರ್ಕಾರದಲ್ಲಿ ಮೋದಿ ಸಂಪೂರ್ಣ ಸರ್ವಾಧಿಕಾರಿಯಂತೆ ಆಡಳಿತ ನಡೆಸಿದ್ದರು. ಆದರೆ, ಈಗ ಅವರು ಎನ್‌ಡಿಎ ಮೈತ್ರಿ ಸರ್ಕಾರದಲ್ಲಿ ಪ್ರಧಾನಿ ಆಗುತ್ತಿದ್ದಾರೆ. ಕಳೆದ ಎರಡು ಸರ್ಕಾರಗಳಲ್ಲಿ ಅಬ್ಬರಿಸಿದಂತೆ ಈ ಬಾರಿ ಬೊಬ್ಬಿರಿಯಲು ಅವರಿಗೆ ಸಾಧ್ಯವಿಲ್ಲ. ಅವರು ರೆಕ್ಕೆ-ಪುಕ್ಕಗಳು ಈಗ ಮೈತ್ರಿ ಪಕ್ಷಗಳ ಕೈಯಲ್ಲಿವೆ.

ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದರೆ, ಮೋದಿ ಮತ್ತೆ ಪ್ರಧಾನಿಯಾದರೆ, ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ, ಸಂವಿಧಾನವನ್ನೇ ಬದಲಿಸಿಬಿಡುತ್ತಾರೆ, ಮುಂದೆ ಭಾರತದಲ್ಲಿ ಚುನಾವಣೆಗಳೇ ನಡೆಯದೇ ಹೋಗಬಹುದು ಎಂಬ ಆತಂಕಗಳಿದ್ದವು. ಹಾಗಾಗಿ, ಹಲವಾರು ಸಂಘ-ಸಂಸ್ಥೆಗಳು, ಪಕ್ಷಗಳು, ಅಷ್ಟೇ ಯಾಕೆ ಹಲವಾರು ವ್ಯಕ್ತಿಗಳು ಬಿಜೆಪಿಯನ್ನು ಮಣಿಸಲೇಬೇಕೆಂದು ನಿರಂತರವಾಗಿ ಶ್ರಮಿಸಿದರು. ಜನರನ್ನು ಎಚ್ಚರಿಸುವ ಕೆಲಸ ಮಾಡಿದರು. ಪರಿಣಾಮ, ಬಿಜೆಪಿ ಸೋತಿದೆ. ಆದರೆ, ಎನ್‌ಡಿಎ ಗೆದ್ದಿದೆ. ಈಗ, ಮೋದಿ ಮತ್ತೆ ಪ್ರಧಾನಿಯೂ ಆಗುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಂದಹಾಗೆ, 2019ರ ಚುನಾವಣೆಯಲ್ಲಿ 303 ಸ್ಥಾನಗಳನ್ನು ಗೆದ್ದು, ಮತ್ತೆ ಪ್ರಧಾನಿಯಾಗಿದ್ದ ಮೋದಿ, ಜನಾಭಿಪ್ರಾಯವನ್ನು ಹತ್ತಿಕ್ಕಿದ್ದರು. ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದರು. ಸರ್ವಾಧಿಕಾರಿಯಾಗಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದರು. ಸಿಎಎ-ಎನ್‌ಆರ್‌ಸಿ ಕಾಯ್ದೆಗಳನ್ನು ಅಂಗೀಕರಿಸಿದರು. ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದರು. ಅದಾನಿ-ಅಂಬಾನಿಗಳಿಗೆ ಬೇಕಾದಂತೆ ಕಾಯ್ದೆಗಳನ್ನು-ಯೋಜನೆಗಳನ್ನು ರೂಪಿಸಿದರು. ಪಿಎಂ ಕೇರ್ಸ್‌ ಆರಂಭಿಸಿ, ಅದು ಸರ್ಕಾರಿ ಸ್ವತ್ತಲ್ಲ ಎಂದರು. ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ವಿಪಕ್ಷಗಳ ನಾಯಕರ ಮೇಲೆ ದಮನ ನಡೆಸಿದರು. ಹಲವು ಪಕ್ಷಗಳನ್ನು ಒಡೆದು, ಇಬ್ಭಾಗ ಮಾಡಿದರು. ರಾಹುಲ್ ಗಾಂಧಿ, ಮೊಹುವಾ ಮೊಯಿತ್ರಾರನ್ನು ಸಂಸತ್‌ನಿಂದ ಉಚ್ಛಾಟನೆ ಮಾಡಿದರು. ಚುನಾವಣಾ ಬಾಂಡ್‌ಗಳ ಮೂಲಕ ಕಾನೂನಾತ್ಮಕವಾಗಿಯೇ ಬೃಹತ್ ಹಗರಣ ಮಾಡಿದರು. ಅಷ್ಟೇ ಯಾಕೆ, ಚುನಾವಣೆಯ ಸಮಯದಲ್ಲಿ ಚುನಾವಣಾ ಆಯೋಗವನ್ನೂ ತಮಗೆ ಬೇಕಾದಂತೆ ಬಳಸಿಕೊಂಡರು.

ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕೆ ಬೇಕಿರುವ 272 ಸ್ಥಾನಗಳನ್ನು ಗೆಲ್ಲಲಾಗದೆ, 240 ಸ್ಥಾನಗಳನ್ನು ಮಾತ್ರವೇ ಗೆದ್ದಿದೆ. ಈ ಸೋಲು ಬಿಜೆಪಿ ಹಲ್ಲು-ಉಗುರು-ಬಾಲವನ್ನು ಕತ್ತರಿಸಿದೆ. ಮೋದಿ ಈಗ ಪ್ರಧಾನಿಯಾಗಿ ಮುಂದುವರೆದರೂ, ಅವರ ಸರ್ವಾಧಿಕಾರಿ ಆಡಳಿತ ಜೂನ್ 4 ಸಂಜೆಯೇ ಅಂತ್ಯಗೊಂಡಿದೆ. ಈಗ ಅವರು ಎನ್‌ಡಿಎ ಸರ್ಕಾರದಲ್ಲಿ ಹಲ್ಲಿಲ್ಲದ ಹಾವಿನಂತೆ ಆಡಳಿತ ನಡೆಸಲಿದ್ದಾರೆ. ಈವರೆಗೆ, ಏಕಪಕ್ಷೀಯವಾಗಿ ಆಡಳಿತ ನಡೆಸಿದ ಮೋದಿ-ಶಾ ಜೋಡಿಗೆ ಮೈತ್ರಿ ಸರ್ಕಾರವನ್ನು ಮುನ್ನಡೆಸಿದ ಅನುಭವವಿಲ್ಲ. ಕೊಂಚ ಏರು-ಪೇರಾದರೂ ಸರ್ಕಾರ ಅಲುಗಾಡುತ್ತದೆ. ಮುಂದಿನ ಐದು ವರ್ಷ ಮೋದಿ ಸರ್ಕಾರ ಅಭದ್ರವಾಗಿಯೇ ಇರುತ್ತದೆ.

ಮಾತ್ರವಲ್ಲದೆ, ಸಂವಿಧಾನ, ಪ್ರಜಾಪ್ರಭುತ್ವದ ಆಶಯಗಳನ್ನು ನಂಬಿರುವ ಪಕ್ಷಗಳು, ಬಹುತ್ವವನ್ನು ಪೋಷಿಸುವ ಪಕ್ಷಗಳು ಎನ್‌ಡಿಎ ಒಳಗಿವೆ. ಈ ಮೈತ್ರಿಪಕ್ಷಗಳು ಮೋದಿಯ ಸರ್ವಾಧಿಕಾರಿ ಧೋರಣೆ, ಸಂವಿಧಾನ ವಿರೋಧಿತನ, ಏಕಪಕ್ಷೀಯ ಆಡಳಿತವನ್ನು ಸಹಿಸುವುದಿಲ್ಲ. ಬೆಂಬಲಿಸುವುದಿಲ್ಲ. ಹೀಗಾಗಿ, ಸಂವಿಧಾನವನ್ನು ಬದಲಿಸುತ್ತೇವೆ. ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುತ್ತೇವೆ. ಹಿಂದುತ್ವದ ಮೇಲೆಯೇ ರಾಜಕೀಯ ಮಾಡುತ್ತೇವೆ ಎಂಬ ಆರ್‌ಎಸ್‌ಎಸ್‌, ಮೋದಿ ಆಟ ಎನ್‌ಡಿಎ ಸರ್ಕಾರದಲ್ಲಿ ನಡೆಯುವುದಿಲ್ಲ.

ಜೊತೆಗೆ, 2019ರಲ್ಲಿ ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಮೋದಿ-ಶಾ ಜೋಡಿ ಕಿತ್ತುಕೊಂಡರು. ಆದರೆ, ಈಗ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಬೇಕು ಎನ್ನುತ್ತಿರುವ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಎನ್‌ಡಿಎ ಸರ್ಕಾರದ ಭಾಗವಾಗಿದೆ. ಮಾತ್ರವಲ್ಲದೆ, ಲೋಕಸಭೆಯ ಸಭಾಪತಿ ಸ್ಥಾನವೂ ಸೇರಿದಂತೆ ನಾನಾ ಸಚಿವ ಸ್ಥಾನಗಳಿಗೆ ಬೇಡಿಕೆಯನ್ನೂ ಇಟ್ಟಿದೆ. ಆರು ಕೊಟ್ಟರೆ ಆ ಕಡೆ – ಮೂರು ಕೊಟ್ಟರೆ ಈ ಕೆಡೆ ಎನ್ನುವ ನಿತೀಶ್‌ ಕುಮಾರ್ ಕೂಡ ಮೋದಿ ಸರ್ಕಾರದ ಭಾಗವಾಗಿದ್ದಾರೆ.

ನಿತೀಶ್ ಮತ್ತು ನಾಯ್ಡು ಹಾಗೂ ಅವರ ಪಕ್ಷದ ಹಿನ್ನೆಲೆ ನೋಡಿದರೆ, ಅವರು ಮೋದಿಗೆ ಬಗ್ಗುವವರಲ್ಲ ಎಂಬುದು ಸ್ಪಷ್ಟ. ಈ ಹಿಂದೆ, 1989-90ರಲ್ಲಿ ಜನತಾ ದಳ ನೇತೃತ್ವದಲ್ಲಿ ರಾಷ್ಟ್ರೀಯ ರಂಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ, ಟಿಡಿಪಿ ನಾಯಕ ಎನ್.ಟಿ ರಾಮರಾಮ್ ಕೇಂದ್ರ ಸರ್ಕಾರದ ಸಂಚಾಲಕರಾಗಿದ್ದರು. ಸರ್ಕಾರದಲ್ಲಿ ತಮ್ಮದೇ ಪಾತ್ರ ನಿರ್ವಹಿಸಿದ್ದರು. ಮಾತ್ರವಲ್ಲದೆ, 1996ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ಸೇತರ ಸಂಯುಕ್ತ ರಂಗ ಅಧಿಕಾರಕ್ಕೆ ಬಂದಾಗಲೂ ಇದೇ ಟಿಡಿಪಿಯ ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರದ ಸಂಚಾಲಕರಾಗಿದ್ದರು. ಕೇಂದ್ರ ಸರ್ಕಾರದ ವ್ಯವಹಾರಗಳ ಮೇಲೆ ಹಿಡಿತ ಹೊಂದಿದ್ದರು. ಮಾತ್ರವಲ್ಲದೆ, 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ರಚನೆಯಾದ ಎನ್‌ಡಿಎ ಸರ್ಕಾರದಲ್ಲಿಯೂ ಒಂದು ವರ್ಷಗಳ ಕಾಲ ನಾಯ್ಡು ಸಂಚಾಲಕರಾಗಿದ್ದರು. ಹೀಗಾಗಿ, 90ರ ದಶಕದಿಂದಲೇ ನಾಯ್ಡು ರಾಷ್ಟ್ರ ರಾಜಕೀಯದಲ್ಲಿ ಹಿಡಿತ ಹೊಂದಿದ್ದಾರೆ. ಜೊತೆಗೆ, 1995-2004ರ ನಡುವೆ 10 ವರ್ಷ ಅವಿಭಜಿತ ಆಂಧ್ರಪ್ರದೇಶ ಮತ್ತು 2014-19ರ ನಡುವೆ ವಿಭಜಿತ ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿಯೂ ಅಧಿಕಾರದಲ್ಲಿ ಪಳಗಿದ್ದಾರೆ. ಅಲ್ಲದೆ, ಸ್ವತಃ ತಮ್ಮ ಮಾವನ ಪಕ್ಷವನ್ನೇ ವಿಭಜಿಸಿ, ಹೊರಬಂದು ಹೊಸ ಪಕ್ಷ ಕಟ್ಟಿದ್ದರು.

ಇನ್ನು, ನಿತೀಶ್ ಕುಮಾರ್ ಅವರ ಜೆಡಿಯು 90ರ ದಶಕದಲ್ಲಿ ಸಂಯುಕ್ತ ಸಮಾಜವಾದಿ ಪಕ್ಷವಾಗಿತ್ತು. ಆಗ, ಪಕ್ಷದ ನಾಯಕರಾಗಿದ್ದ ಜಾರ್ಜ್‌ ಫರ್ನಾಂಡಿಸ್‌ 2001ರಿಂದ 2004ರವರೆಗೆ ವಾಜಪೇಯಿ ಸರ್ಕಾರದಲ್ಲಿ ಸಂಚಾಲಕರಾಗಿದ್ದರು. ಅದೇ ವಾಜಪೇಯಿ ಸರ್ಕಾರದಲ್ಲಿ ನಿತೀಶ್ ಕುಮಾರ್ ಕೂಡ ರೈಲ್ವೆ ಸಚಿವರಾಗಿದ್ದರು. 2014ರಲ್ಲಿ ಬಿಹಾರದಲ್ಲಿ ಜೆಡಿಯು ಸರ್ಕಾರದಲ್ಲಿ ನಿತೀಶ್ ಮುಖ್ಯಮಂತ್ರಿಯಾಗಿದ್ದರು. ಆದರೆ, ಜಿತನ್ ರಾಮ್ ಮಾಂಝಿ ಅವರು ಬಂಡಾಯ ಎದ್ದಾಗ, ಪಕ್ಷ ಒಡೆಯುವುದನ್ನು ತಪ್ಪಿಸಲು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ನತೀಶ್ ಅವರು ಮಾಂಝಿ ಅವರನ್ನೇ ಮುಖ್ಯಮಂತ್ರಿಯನ್ನಾಗಿ ನೇಮಿಸಿದರು. ಆದರೆ, ಮಾಂಝಿ ಮುಖ್ಯಮಂತ್ರಿಯಾದ ಒಂಬತ್ತೇ ತಿಂಗಳಲ್ಲಿ ಅವರನ್ನು ಪದಚ್ಯುತಿಗೊಳಿಸಿ ಮತ್ತೆ ನಿತೀಶ್ ಮುಖ್ಯಮಂತ್ರಿಯಾದರು. ಅಲ್ಲದೆ, ಮಾಂಝಿ ಅವರ ರಾಜಕೀಯ ಭವಿಷ್ಯವನ್ನೂ ಕೊನೆಗೊಳಿಸಿದರು.

ಗಮನಾರ್ಹ ಎಂದರೆ, ನಾಯ್ಡು ಮತ್ತು ನಿತೀಶ್‌ – ಈ ಇಬ್ಬರೂ ಮೋದಿಗಿಂತ ಮುಂಚೆಯೇ ಮುಖ್ಯಮಂತ್ರಿಯೂ ಆಗಿದ್ದವರು. ರಾಜಕೀಯದಲ್ಲಿ ಇಷ್ಟೆಲ್ಲ ಆಟ ಆಡಿರುವ, ಪಳಗಿರುವ ಈ ಇಬ್ಬರೂ ನಾಯಕರು, ರಾಷ್ಟ್ರ ರಾಜಕಾರಣದಲ್ಲಿ, ಮೈತ್ರಿ ಸರ್ಕಾರದಲ್ಲಿ ಯಾವ ರೀತಿ ಪಾಲು ಕೇಳಬೇಕು. ಹೇಗೆ ನಿಭಾಯಿಸಬೇಕು. ಯಾರನ್ನು ಯಾವ ರೀತಿ ಮಣಿಸಬೇಕು ಎಂಬುದು ಚೆನ್ನಾಗಿಯೇ ಗೊತ್ತಿದೆ.

ರಾಷ್ಟ್ರ ರಾಜಕಾರಣದಲ್ಲಿ ಮೋದಿಗಿಂತ ಹೆಚ್ಚಿನ ಹಿಡಿತ ಈ ಇಬ್ಬರೂ ನಾಯಕರಿಗಿದೆ. ಒಂದು ವೇಳೆ, ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್‌ಸಿಪಿ ಪಕ್ಷಗಳನ್ನು ಒಡೆದಂತೆ ಈ ಇಬ್ಬರ ಪಕ್ಷಗಳನ್ನು ಒಡೆದು ಆಳಬಹುದು ಎಂದು ಮೋದಿ-ಶಾ ಭಾವಿಸಿದರೆ, ಅದೂ ಸಾಧ್ಯವಿಲ್ಲ. ಪಕ್ಷವನ್ನು ಸಂಪೂರ್ಣವಾಗಿ ಹಿಡಿತದಲ್ಲಿಟ್ಟುಕೊಳ್ಳುವ ಸಾಮರ್ಥ್ಯವೂ ಈ ಇಬ್ಬರಿಗೂ ಇದೆ. ಈ ಇಬ್ಬರೂ ಅಧಿಕಾರಕ್ಕಾಗಿ ಯಾವ ಪಕ್ಷದೊಂದಿಗೆ ಬೇಕಿದ್ದರೂ ಮೈತ್ರಿ ಮಾಡಿಕೊಂಡು, ಆಡಳಿತ ನಡೆಸುತ್ತಾರೆ.

ಹೀಗಾಗಿ, ಎನ್‌ಡಿಎ ಸರ್ಕಾರದಲ್ಲಿ ಮೋದಿ ತನ್ನದೇ ದರ್ಬಾರು ನಡೆಸಲು ಮುಂದಾದರೆ, ಅವರ ದರ್ಬಾರಿಗೆ ಈ ಇಬ್ಬರೂ ಕಡಿವಾಣ ಹಾಕಿಯೇ ಹಾಕುತ್ತಾರೆ. ಸರ್ಕಾರದೊಳಗೆ ನಿರ್ಣಾಯಕ ಪಾತ್ರ ನಿರ್ವಹಿಸುತ್ತಾರೆ. ಮೋ-ಶಾಗಳು ತಮಗೆ ಬೇಕಾದಂತೆ ಸಂಪುಟದಲ್ಲಿ ನಿರ್ಧಾರ ಜಾರಿಗೊಳಿಸಲು, ಮಸೂದೆಗಳನ್ನು ರೂಪಿಸಲು, ಕಾಯ್ದೆಗಳನ್ನು ಜಾರಿಗೆ ತರಲು ನಿತೀಶ್-ನಾಯ್ಡು ಅಡ್ಡಗಾಲಾಗಿ ನಿಲ್ಲುತ್ತಾರೆ. ಇದೆಲ್ಲವೂ, ಮೋದಿಯ ಆರ್ಭಟಕ್ಕೆ ಕೊಕ್ಕೆ ಹಾಕುತ್ತದೆ.

ಸಿಂಹಾಸನದಂತೆ ಮೋದಿ ಒಬ್ಬರೇ ಕೂರುತ್ತಿದ್ದ ವೇದಿಕೆಯ ಸಾಲಿನಲ್ಲಿ ಈಗ ನಿತೀಶ್, ನಾಯ್ಡು ಕಾಣಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ, ತನ್ನನ್ನು ಮುನ್ನೆಲೆಗೆ ತಂದ ಅಡ್ವಾಣಿಯನ್ನೇ ಮೂಲೆಗುಂಪು ಮಾಡಿದ್ದ ಮೋದಿ, ಇದೀಗ ಅಡ್ವಾಣಿ ಮನೆಯ ಮೆಟ್ಟಿಲು ತುಳಿದಿದ್ದಾರೆ. ಸಂವಿಧಾನ ಬದಲಿಸುವ ಮಾತನಾಡುತ್ತಿದ್ದವರು ಇಂದು ಸಂಸತ್‌ನಲ್ಲಿ ಸಂವಿಧಾನಕ್ಕೆ ನಮಸ್ಕರಿಸಿದ್ದಾರೆ. ಇದು, ಇನ್ನು ಮುಂದೆ ತನ್ನ ಪ್ರಾಬಲ್ಯ, ಪ್ರಭಾವ ಯಾವುದೂ ನಡೆಯಲ್ಲವೆಂದು ಈಗಾಗಲೇ ಮೋದಿ ಅರಿತಿದ್ದಾರೆ ಎಂಬುದನ್ನು ಸೂಚಿಸುತ್ತದೆ.

ಅಷ್ಟೇ ಅಲ್ಲ, ಕಳೆದ 10 ವರ್ಷಗಳಲ್ಲಿ ಜನಪರವಾಗಿ ಯಾವುದೇ ಯೋಜನೆಯನ್ನು ಜಾರಿಗೊಳಿಸದ ಮೋದಿ ಸರ್ಕಾರ, ಪುಲ್ವಾಮ, ರಾಮಮಂದಿರ, ಮುಸ್ಲಿಂ ವಿರೋಧಿ ದ್ವೇಷದಲ್ಲೇ ಆಡಳಿತ ನಡೆಸಿದೆ. ಗುಜರಾತ್ ಮಾದರಿ, ಶ್ರೀರಾಮ, ಪಾಕಿಸ್ತಾನದ ಹೆಸರಿನಲ್ಲಿ ಮೋದಿ ತನ್ನ ವರ್ಚಸ್ಸನ್ನು ನೀರಿನ ಮೇಲಿನ ಗುಳ್ಳೆಗಳಂತೆ ಕಟ್ಟಿಕೊಂಡಿದ್ದಾರೆ. ಆದರೆ, ಅವರ ಆಡಳಿತದಲ್ಲಿ ನಿರುದ್ಯೋಗ ಹೆಚ್ಚಾಗಿ, ಅಗತ್ಯ ವಸ್ತುಗಳ ಬೆಲೆ ಮಿತಿ ಮೀರಿ ಏರಿಕೆಯಾಗಿದೆ. ಹಣದುಬ್ಬರ ಹೆಚ್ಚಾಗಿದೆ. ಬಡತನ-ಅಪೌಷ್ಟಿಕತೆ ಜನರನ್ನು ಕಾಡುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಈ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಲಿವೆ. ಮೋದಿ ಕಟ್ಟಿಕೊಂಡಿರುವ ಪ್ರಭಾವಿ, ಉತ್ತಮ ಆಡಳಿತಗಾರ, ಚೌಕಿದಾರ, ವಿಶ್ವಗುರು ಎಂಬ ಗುಳ್ಳೆಗಳು ಒಡೆಯಲಿವೆ. ಮೋದಿ ನಿಜಮುಖ ಬಯಲಾಗಲಿದೆ.

ಮೋದಿ-ಮೋದಿ ಎನ್ನುತ್ತಿದ್ದ ಜನರು ಈ ಚುನಾವಣೆಯಲ್ಲಿಯೇ ಮೋದಿ ವಿರುದ್ಧ ಅಸಮಾಧಾನಗೊಂಡಿದ್ದರು. ಹೀಗಾಗಿಯೇ, ವಾರಣಾಸಿಯಲ್ಲಿ ಸ್ವತಃ ಮೋದಿಯೇ ಕೇವಲ 1.5 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ರಾಮಮಂದಿರ ಇರುವ ಅಯೋಧ್ಯೆಯಲ್ಲಿಯೇ ಬಿಜೆಪಿ ಸೋತಿದೆ. ದೇಶಾದ್ಯಂತ ಬಿಜೆಪಿ ಬರೋಬ್ಬರಿ 64 ಸ್ಥಾನಗಳನ್ನು ಕಳೆದುಕೊಂಡಿದೆ. ಇದೆಲ್ಲವೂ, ಜನರು ಮೋದಿ ವಿರುದ್ಧ ಅಸಮಾಧಾನಗೊಂಡಿರುವುದನ್ನು ಸೂಚಿಸುತ್ತದೆ.

ಮುಂದಿನ ಐದು ವರ್ಷಗಳಲ್ಲಿ ಈ ಅಸಮಾಧಾನ ಆಕ್ರೋಶವಾಗಿ ಬದಲಾಗಬಹುದು. ಮುಂದಿನ 5 ವರ್ಷಗಳ ಮೋದಿ ಆಡಳಿತವೇ ಅದಕ್ಕೆ ದಾರಿ ಮಾಡಿಕೊಡಲೂಬಹುದು. ಸತ್ಯ, ನ್ಯಾಯ, ಪ್ರೀತಿ, ಸೌಹಾರ್ದತೆ ತುಂಬಿದ ಹೊಸ ಸಮಾಜ ಕಟ್ಟಲು ಉತ್ತಮ ಸಮಯಕ್ಕಾಗಿ ಕಾಯೋಣ…

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...