‘ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್’ ಸಂಸ್ಥೆಯು 2025-26ರ ಕೇಂದ್ರ ಬಜೆಟ್ ಅನ್ನು ವಿಶ್ಲೇಷಿಸಿದೆ. ಪ್ರಮುಖ ಇಲಾಖೆಗಳು ತಮಗೆ ನಾನಾ ಯೋಜನೆಗಳಿಗಾಗಿ ಹಂಚಿಕೆಯಾದ ಹಣವನ್ನು ಸರಿಯಾಗಿ ಖರ್ಚು ಮಾಡಿಲ್ಲ. 26ರ ಆರ್ಥಿಕ ವರ್ಷದಲ್ಲಿ ಅನ್‌ಯುಟಿಲೈಸ್ಡ್ (ಖರ್ಚು ಮಾಡದೇ ಉಳಿದ) ಹಣವೇ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಬಹಿರಂಗಪಡಿಸಿದೆ.
ನರೇಂದ್ರ ಮೋದಿ ಅವರನ್ನು ಜುಮ್ಲಾ ಪ್ರಧಾನಿ ಎಂದೂ, ಅವರ ಸರ್ಕಾರದ ಭರವಸೆಗಳು-ಆಶ್ವಾಸನೆಗಳನ್ನು ಜುಮ್ಲಾಗಳೆಂದೂ ಕರೆಯುವುದು ಹೊಸತೇನಲ್ಲ. ಮೋದಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಆರಂಭಿಸಿದ ಮೊದಲ ಅವಧಿಯಲ್ಲಿಯೇ ಅದು ‘ಜುಮ್ಲಾ ಸರ್ಕಾರ’ ಎಂಬ ಹಣೆಪಟ್ಟಿ ಪಡೆದುಕೊಂಡಿತು. ಪದನಾಮ ಸುಮ್ಮನೆ ಬಂದಿದ್ದೂ ಅಲ್ಲ, ಮೋದಿ ನೇತೃತ್ವದ ಬಿಜೆಪಿ ಇಡೀ ದೇಶಕ್ಕೆ ಹಾಕಿದ ನಾಮದ ಕಾರಣಕ್ಕಾಗಿಯೇ ಬಂದದ್ದು. ಕಪ್ಪು ಹಣ ವಾಪಸ್, ವಾರ್ಷಿಕ 2 ಕೋಟಿ ಉದ್ಯೋಗ, 100 ಸ್ಮಾರ್ಟ್ ಸಿಟಿ, ರೈತರ ಆದಾಯ ದ್ವಿಗುಣ, ಅಚ್ಛೇದಿನ್ ಇತ್ಯಾದಿ ಸುಳ್ಳು-ಪೊಳ್ಳು ಭರವಸೆಗಳನ್ನು ಪ್ರಧಾನಿ ಮೋದಿ ನೀಡಿದ್ದರು. ಆದರೆ, ಅವೆಲ್ಲವೂ ಜುಮ್ಲಾ ಆಗಿಯೇ ಉಳಿದಿವೆ. ಇದೀಗ, ಬಜೆಟ್‌ನಲ್ಲಿ ಯೋಜನೆಗಳಿಗೆ ಘೋಷಿಸಲಾದ ಅನುದಾನವೂ ಜುಮ್ಲಾವೇ ಆಗಿದೆ ಎಂಬುದನ್ನು 2025-26ರ ಬಜೆಟ್ ವಿಶ್ಲೇಷಣೆ ತೆರೆದಿಟ್ಟಿದೆ. ಕೇಂದ್ರ ಸರ್ಕಾರದ ಪ್ರಮುಖ 30 ಇಲಾಖೆಗಳು ತಮ್ಮ ಇಲಾಖೆಯಡಿ ಇರುವ ಯೋಜನೆಗಳ ಬಜೆಟ್ ಹಂಚಿಕೆಯಲ್ಲಿ ಅತೀ ಕಡಿಮೆ ಮೊತ್ತವನ್ನು ಮಾತ್ರವೇ ವ್ಯಯಿಸಿವೆ. ಉಳಿದ ಹಣ ಇಲಾಖೆಗಳಿಗೆ ತಲುಪಿಲ್ಲ ಎಂಬ ಕಠೋರ ಸತ್ಯ ಹೊರಬಿದ್ದಿದೆ.
‘ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್’ ಸಂಸ್ಥೆಯು 2025-26ರ ಕೇಂದ್ರ ಬಜೆಟ್ ಅನ್ನು ವಿಶ್ಲೇಷಿಸಿದೆ. ಪ್ರಮುಖ ಇಲಾಖೆಗಳು ತಮಗೆ ನಾನಾ ಯೋಜನೆಗಳಿಗಾಗಿ ಹಂಚಿಕೆಯಾದ ಹಣವನ್ನು ಸರಿಯಾಗಿ ಖರ್ಚು ಮಾಡಿಲ್ಲ. 26ರ ಆರ್ಥಿಕ ವರ್ಷದಲ್ಲಿ ಅನ್‌ಯುಟಿಲೈಸ್ಡ್ (ಖರ್ಚು ಮಾಡದೇ ಉಳಿದ) ಹಣವೇ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಬಹಿರಂಗಪಡಿಸಿದೆ. ವಿಶ್ಲೇಷಣಾ ವರದಿ ಪ್ರಕಾರ, 30ಕ್ಕೂ ಹೆಚ್ಚು ಇಲಾಖೆಗಳ ಪೈಕಿ, ಕೇವಲ 9 ಇಲಾಖೆಗಳು/ಯೋಜನೆಗಳು ಮಾತ್ರವೇ ತಮ್ಮ ಬಜೆಟ್‌ನಲ್ಲಿ 75%ಕ್ಕಿಂತ ಹೆಚ್ಚು ಖರ್ಚು ಮಾಡಿವೆ. ಉಳಿದೆಲ್ಲ ಇಲಾಖೆಗಳು ತೀರಾ ಕಡಿಮೆ ಪ್ರಮಾಣದ ಹಣವನ್ನು ಮಾತ್ರವೇ ಯೋಜನೆಗಳಿಗಾಗಿ ವಿನಿಯೋಗಿಸಿವೆ. ಉಳಿಕೆಯ ಬೃಹತ್ ಮೊತ್ತವು ಮೋದಿ ಸರ್ಕಾರ ಖಜಾನೆಯಲ್ಲಿಯೇ ಭದ್ರವಾಗಿ ಉಳಿದುಕೊಂಡಿದೆ. ಇದು, ಯೋಜನೆಗಳ ಅನುಷ್ಠಾನದಲ್ಲಿ ಗಮನಾರ್ಹ ಕೊರತೆಯನ್ನು ಸೂಚಿಸುತ್ತದೆ. ಆ ವರದಿಯನ್ನು ಗಮನಿಸಿದ ಅನೇಕರು ಇದು ‘ಜುಮ್ಲಾ ಬಜೆಟ್’ ಎಂದೇ ಟೀಕಿಸಿದ್ದಾರೆ.
ಹಂಚಿಕೆಯಾದ ಬಜೆಟ್‌ನಲ್ಲಿ 75%ಕ್ಕಿಂತ ಹೆಚ್ಚು ಹಣ ಖರ್ಚು ಮಾಡಿದ ಇಲಾಖೆಗಳಿವು
- ‘ಕಾನೂನು ಮತ್ತು ನ್ಯಾಯ ಸಚಿವಾಲಯ’ (Ministry of Law and Justice)ಕ್ಕೆ 2025-26ರ ಬಜೆಟ್‌ನಲ್ಲಿ ಸರ್ಕಾರವು 4,998.24 ಕೋಟಿ ರೂ. ಹಂಚಿಕೆ ಮಾಡಿತ್ತು. ಇದರಲ್ಲಿ, 4,500 ಕೋಟಿ ರೂ. (90.3%) ಬಳಕೆಯಾಗಿದೆ. 9.7% ಹಣ ಬಳಕೆಯಾಗದೆ ಉಳಿದಿದೆ. ಈ ಬಾರಿಯ ಬಜೆಟ್‌ನಲ್ಲಿ 4,509.06 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಇದು, ಕಳೆದ ಆರ್ಥಿಕ ವರ್ಷದಲ್ಲಿ ಬಳಕೆಯಾದ ಮೊತ್ತಕ್ಕೆ ಸಮನಾಗಿದೆ.
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ (Ministry of Women and Child Development – MWCD); ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ ಯೋಜನೆ, ಮಿಷನ್ ಶಕ್ತಿ ಮತ್ತು ಮಿಷನ್ ವತ್ಸಲ್ಯ ಯೋಜನೆಗಳ ಅಡಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ 2025-26ರ ಕೇಂದ್ರ ಬಜೆಟ್‌ನಲ್ಲಿ 26,890 ಕೋಟಿ ರೂ. ಹಂಚಿಕೆಯಾಗಿತ್ತು. ಅದರಲ್ಲಿ, 24,374 ಕೋಟಿ ರೂ. (90.7%) ಬಳಕೆಯಾಗಿದೆ. 2,516 ಕೋಟಿ ರೂ. (9.3%) ಉಳಿದಿದೆ. ಈ ಬಾರಿಯ ಬಜೆಟ್‌ನಲ್ಲಿ 28,183 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, 15% ಹೆಚ್ಚಳವಾಗಿದೆ.
- ಔಷಧ ಇಲಾಖೆ (Department of Pharmaceuticals); 2025-26ರ ಹಣಕಾಸು ವರ್ಷದ ಕೇಂದ್ರ ಬಜೆಟ್‌ನಲ್ಲಿ ‘ಔಷಧ ಇಲಾಖೆ’ಗೆ 5,268.72 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಆದರೆ, ಬಳಕೆಯಾಗಿರುವುದು 4,369.70 ಕೋಟಿ ರೂ. ಮಾತ್ರ. ಬಳಕೆಯಾಗದೆ 899 ಕೋಟಿ ರೂ. (17%) ಹಣ ಸರ್ಕಾರದಲ್ಲಿಯೇ ಉಳಿದಿದೆ. ಆದಾಗ್ಯೂ, 2026-27ರಲ್ಲಿ ಇಲಾಖೆಗೆ 5,931.22 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದು, 2025-26ರಲ್ಲಿ ಬಳಕೆಯಾದ ಮೊತ್ತಕ್ಕಿಂತ ಸುಮಾರು 35% ಹೆಚ್ಚಿದೆ.
- ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (Ministry of Corporate Affairs); ಈ ಇಲಾಖೆಗೆ ಕೇಂದ್ರ ಸರ್ಕಾರವು 2025-26ರ ಹಣಕಾಸು ವರ್ಷದ ಬಜೆಟ್‌ನಲ್ಲಿ 11,561 ಕೋಟಿ ರೂ. ಹಂಚಿಕೆ ಮಾಡಿತ್ತು. ಆದಾಗ್ಯೂ, ಬಳಕೆಯಾಗಿದ್ದು, 8,922 ಕೋಟಿ ರೂ. (77.2%). ಸಚಿವಾಲಯದಲ್ಲಿ 2,639 ಕೋಟಿ ರೂ. (22.8%) ಬಳಕೆಯಾಗದೆ ಉಳಿದಿದೆ. ಈ ವರ್ಷದ ಬಜೆಟ್‌ನಲ್ಲಿ ಕೇವಲ 5,665 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು, ಕಳೆದ ಬಜೆಟ್‌ಗಿಂತ 51% ಹಂಚಿಕೆಯನ್ನು ಕಡಿಮೆ ಮಾಡಲಾಗಿದೆ.
- ಗ್ರಾಹಕ ವ್ಯವಹಾರಗಳ ಇಲಾಖೆ (Department of Consumer Affairs); ಈ ಇಲಾಖೆಗೆ 2025-26ರ ಕೇಂದ್ರ ಬಜೆಟ್‌ನಲ್ಲಿ ಸರ್ಕಾರವು 4,361 ಕೋಟಿ ರೂ.ಗಳನ್ನು ಹಂಚಿಕೆ ಮಾಡಿತ್ತು. ಆದರೆ, 3,361 ಕೋಟಿ ರೂ. (78%) ಬಳಕೆಯಾಗಿದೆ. ಉಳಿದ 1,000 ಕೋಟಿ ರೂ. (22%) ಸರ್ಕಾರದ ಖಜಾನೆಯಲ್ಲಿ ಉಳಿದಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ 7,302 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಬಳಕೆಯಾದ ಮೊತ್ತಕ್ಕಿಂತ ಬರೋಬ್ಬರಿ 3,941 ಕೋಟಿ ರೂ. (117.26%) ಹೆಚ್ಚಿಸಲಾಗಿದೆ.
- ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆ-ಪರಿಶಿಷ್ಟ ಜಾತಿ (Post-Matric Scholarship for Scheduled Castes – PMS-SC); ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿ ಈ ಯೋಜನೆಗಾಗಿ ಕೇಂದ್ರ ಸರ್ಕಾರವು 2025-26ರ ಬಜೆಟ್‌ನಲ್ಲಿ 6,360 ಕೋಟಿ ರೂ.ಗಳನ್ನು ಹಂಚಿಕೆ ಮಾಡಿತ್ತು. ಆದಾಗ್ಯೂ, 6,000 ಕೋಟಿ ರೂ. (94.4%) ಬಳಕೆಯಾಗಿದೆ. ಉಳಿದಂತೆ, 360 ಕೋಟಿ ರೂ. (5.6%) ಸಚಿವಾಲಯದಲ್ಲಿಯೇ ಉಳಿದಿದೆ. ಈ ಬಾರಿಯ ಬಜೆಟ್‌ನಲ್ಲಿಯೂ ಯೋಜನೆಗಾಗಿ 6,360 ಕೋಟಿ ರೂ.ಗಳನ್ನೇ ಹಂಚಿಕೆ ಮಾಡಲಾಗಿದ್ದು, ಹಂಚಿಕೆಯಲ್ಲಿ ಏರಿಳಿತಗಳಿಲ್ಲ.
- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ (Ministry of Social Justice and Empowerment); ತಳ ಸಮುದಾಯಗಳಿಗೆ ವಿದ್ಯಾರ್ಥಿವೇತನ, ಅಂಗವಿಕಲರ ಕಲ್ಯಾಣ, SC/ST/OBC ಸಬಲೀಕರಣ ಯೋಜನೆಗಳಿಗಾಗಿ ಈ ಸಚಿವಾಲಯಕ್ಕೆ 2025-26ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು 13,611 ಕೋಟಿ ರೂ.ಗಳನ್ನು ಹಂಚಿಕೆ ಮಾಡಿತ್ತು. ಇದರಲ್ಲಿ, 11,700 ಕೋಟಿ ರೂ. (84%) ಬಳಕೆಯಾಗಿದೆ. 16% ಹಣವು ಬಳಕೆಯಾಗದೆ ಉಳಿದಿದೆ. ಈ ವರ್ಷದ ಬಜೆಟ್‌ನಲ್ಲಿ ಸಚಿವಾಲಯಕ್ಕೆ 13,687.59 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕಳೆದ ವರ್ಷ ಬಳಕೆಯಾದ ಮೊತ್ತಕ್ಕಿಂತ 16.69% ಹೆಚ್ಚಾಗಿದೆ.
- ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ 2025-26ರ ಬಜೆಟ್‌ನಲ್ಲಿ 26,026.25 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಈ ಪೈಕಿ, 20,232.95 ಕೋಟಿ ರೂ. (78%) ಬಳಕೆಯಾಘಿದೆ. ಸುಮಾರು 5,793 ಕೋಟಿ ರೂ. (22%) ಹಣ ಸರ್ಕಾರದಲ್ಲೇ ಉಳಿದಿದೆ. ಈ ಬಾರಿಯ ಬಜೆಟ್‌ನಲ್ಲಿ ಹಿಂದಿನ ಬಜೆಟ್ ಹಂಚಿಕೆಗಿಂತ ಸುಮಾರು 4.5 ಸಾವಿರ ಕೋಟಿ ರೂ. ಕಡಿತ ಮಾಡಲಾಗಿದೆ. 21,632.96 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.
- ಆಹಾರ ಸಂಸ್ಕರಣಾ ಕೈಗಾರಿಕೆಗಳ ಇಲಾಖೆಗೆ 2025-26ರ ಬಜೆಟ್‌ನಲ್ಲಿ 4,364 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಇದರಲ್ಲಿ, 3,290 ಕೋಟಿ ರೂ. (82%)ಬಳಕೆಯಾಗಿದೆ. ಸುಮಾರು 1,074 ಕೋಟಿ ರೂ. (18%) ಬಳಕೆಯಾಗದೆ ಉಳಿದಿದೆ. 2026-27ರ ಬಜೆಟ್‌ನಲ್ಲಿ 4,064 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.
ಬಜೆಟ್ ಹಂಚಿಕೆಯಲ್ಲಿ 75%ಗಿಂತ ಕಡಿಮೆ ಹಣ ಬಳಕೆ ಮಾಡಿದ ಇಲಾಖೆಗಳು/ಯೋಜನೆಗಳು
| ಇಲಾಖೆ/ಯೋಜನೆ | 2025-26ರ ಬಜೆಟ್ ಹಂಚಿಕೆ | ವೆಚ್ಚ | ಉಳಿಕೆ | 2026-27ರ ಹಂಚಿಕೆ |
| ಜಲಜೀವನ್ ಮಿಷನ್ | 67,000 ಕೋಟಿ ರೂ. | 17,000 ಕೋಟಿ ರೂ. (25.4%) | 50,000 ಕೋಟಿ ರೂ. (74.6%) | 67,670 ಕೋಟಿ ರೂ. |
| ಹೊಸ ಉದ್ಯೋಗ ಸೃಷ್ಟಿ ಯೋಜನೆ | 20,000 ಕೋಟಿ ರೂ. | 848 ಕೋಟಿ ರೂ. (4.3%) | 19,152 ಕೋಟಿ ರೂ. (95.7%) | 20,083 ಕೋಟಿ ರೂ. |
| ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ | 10,831 ಕೋಟಿ ರೂ. | 526 ಕೋಟಿ ರೂ. (5%) | 10,305 ಕೋಟಿ ರೂ. (95%) | 4,788 ಕೋಟಿ ರೂ. (ಭಾರೀ ಕಡಿತ) |
| ‘ಪ್ರಧಾನಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (PMAY-G)’ | 54,832 ಕೋಟಿ ರೂ. | 32,500 ಕೋಟಿ ರೂ. | 22,332 ಕೋಟಿ ರೂ. (40%) | 54,917 ಕೋಟಿ ರೂ. (2025-26ರಲ್ಲಿ ಬಳಕೆಯಾದ ಹಣಕ್ಕಿಂತ 69% ಹೆಚ್ಚು) |
| ಪ್ರಧಾನ ಮಂತ್ರಿ ಆವಾಸ್ ಯೋಜನೆ – ನಗರ | 19,794 ಕೋಟಿ ರೂ. | 7,500 ಕೋಟಿ ರೂ. (35%) | 12,294 ಕೋಟಿ ರೂ. (65%) | 18,625.05 ಕೋಟಿ ರೂ. |
| ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (PMGSY) | 19,000 ಕೋಟಿ ರೂ. | 11,000 ಕೋಟಿ ರೂ. (58%) | 8,000 ಕೋಟಿ ರೂ. (48%) | 19,000 ಕೋಟಿ ರೂ. |
| ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ | 6,100 ಕೋಟಿ ರೂ. | 2,703.54 ಕೋಟಿ ರೂ. (45%) | 3,397 ಕೋಟಿ ರೂ. (55%) | 9,885.80 ಕೋಟಿ ರೂ. |
| ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ | 28,509 ಕೋಟಿ ರೂ. | 12,000 ಕೋಟಿ ರೂ. (42%) | 16,500 ಕೋಟಿ ರೂ. (58%) | 28,049.32 ಕೋಟಿ ರೂ. |
| ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ | 32,646 ಕೋಟಿ ರೂ. | 12,688 ಕೋಟಿ ರೂ. (39%) | 19,958 ಕೋಟಿ ರೂ. (61%) | 32,666 ಕೋಟಿ ರೂ. |
| ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ | 67,000 ಕೋಟಿ ರೂ. | 17,000 ಕೋಟಿ ರೂ. (25.4%) | 50,000 ಕೋಟಿ ರೂ. (74.6%) | 67,670 ಕೋಟಿ ರೂ. |
| ಪ್ರಧಾನಮಂತ್ರಿ ಯುವ ಸಾಧಕರಿಗೆ ವಿದ್ಯಾರ್ಥಿವೇತನ | 2,190 ಕೋಟಿ ರೂ. | 1,500 ಕೋಟಿ ರೂ. (68.5%) | 690 ಕೋಟಿ ರೂ. (31.5) | 2,320 ಕೋಟಿ ರೂ. |
| ಅನುಶುಚಿತ ಜಾತಿ ಅಭ್ಯುದಯ ಯೋಜನೆ | 2,140 ಕೋಟಿ ರೂ. | 1,250 ಕೋಟಿ ರೂ. (58.4%) | 890 ಕೋಟಿ ರೂ. (41.6%) | 2,140 ಕೋಟಿ ರೂ. |
| ದೂರಸಂಪರ್ಕ ಇಲಾಖೆ | 81,005 ಕೋಟಿ ರೂ. | 53,398 ಕೋಟಿ ರೂ. (66%) | 27,607 ಕೋಟಿ ರೂ. (34%) | 73,990.94 ಕೋಟಿ ರೂ. |
| ಬುಡಕಟ್ಟು ವ್ಯವಹಾರಗಳ ಸಚಿವಾಲಯ | 14,925.81 ಕೋಟಿ ರೂ. | 10,824.18 ಕೋಟಿ ರೂ. (72.6%) | 4,102 ಕೋಟಿ ರೂ. (27.4%) | 15,421.97 ಕೋಟಿ ರೂ. (ಕಳೆದ ವರ್ಷ ಬಳಕೆಯಾದ ಮೊತ್ತಕ್ಕಿಂತ 42.47% ಹೆಚ್ಚು) |
| ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕಾರ್ಯಕ್ರಮ | 14,925.81 ಕೋಟಿ ರೂ. | 10,824.18 ಕೋಟಿ ರೂ. (72%) | 4,101 ಕೋಟಿ ರೂ. (28%) | 15,421.97 ಕೋಟಿ ರೂ. |
| ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ | 3,350 ಕೋಟಿ ರೂ. | 2,160.45ಕೋಟಿ ರೂ. (65%) | 1,190 ಕೋಟಿ ರೂ. (35%) | 3,400 ಕೋಟಿ ರೂ. (ಕಳೆದ ವರ್ಷ ಬಳಕೆಯಾದ ಮೊತ್ತಕ್ಕಿಂತ 57% ಹೆಚ್ಚು) |
| ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವಾಲಯ | 5,762.34 ಕೋಟಿ ರೂ. | 4,327.88 ಕೋಟಿ ರೂ. (76.8%) | 1,434 ಕೋಟಿ ರೂ. (24.2%) | 6,812.30 ಕೋಟಿ ರೂ. |
| ಮೀನುಗಾರಿಕೆ ಇಲಾಖೆ | 2,703.67 ಕೋಟಿ ರೂ. | 1,732.95 ಕೋಟಿರೂ. (65%) | 971 ಕೋಟಿ ರೂ. (35%) | 2,761.80 ಕೋಟಿ ರೂ. |
| ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ(MSME) | 23,168 ಕೋಟಿ ರೂ. | 12,000 ಕೋಟಿ ರೂ. (53%) | 11,000 ಕೋಟಿ ರೂ. (47%) | 25,000 ಕೋಟಿ ರೂ. (ಕಳೆದ ವರ್ಷ ಬಳಕೆಯಾದ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚು) |
| ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ | 28,508.90 ಕೋಟಿ ರೂ. | 11,921.58 ಕೋಟಿ ರೂ. (42%) | 16,587 ಕೋಟಿ ರೂ. (58%) | 28,049.32 ಕೋಟಿ ರೂ. |
| ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ | 96,777 ಕೋಟಿ ರೂ. | 57,203.78 ಕೋಟಿ ರೂ. (60%) | 39,573 ಕೋಟಿ ರೂ. (40%) | 85,522.39 ಕೋಟಿ ರೂ. |
| ಪ್ರವಾಸೋದ್ಯಮ ಸಚಿವಾಲಯ | 2,541.07 ಕೋಟಿ ರೂ. | 1,310.30 ಕೋಟಿ ರೂ. (52%) | 1,231 ಕೋಟಿ ರೂ. (48%) | 2,438.41 ಕೋಟಿ ರೂ. |
ಗಮನಾರ್ಹವೆಂದರೆ, ಇಡೀ ದೇಶಕ್ಕೆ ಶುದ್ಧ ಕುಡಿಯುವ ನೀರು ಒದಗಿಸುತ್ತೇವೆ ಮತ್ತು ಯುವಜನರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಮೋದಿ ಅಬ್ಬರಿಸಿ ಬೊಬ್ಬಿರಿದಿದ್ದರು. ಆದರೆ, ಕುಡಿಯುವ ನೀರು ಒದಗಿಸುವ ಜಲಜೀವನ್ ಮಿಷನ್‌ನ ಬಜೆಟ್ ಹಂಚಿಕೆಯಲ್ಲಿ ಬರೋಬ್ಬರಿ 74.5% ಹಣವು ಬಳಕೆಯೇ ಆಗಿಲ್ಲ. ಅಂತೆಯೇ, ಯುವಜನರಿಗೆ ಕೌಶಲ್ಯ ಮತ್ತು ಉದ್ಯೋಗ ಒದಗಿಸುವ ಹೊಸ ಉದ್ಯೋಗ ಸೃಷ್ಟಿ ಯೋಜನೆ ಹಾಗೂ ಕೌಶಾಲ್ಯಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯಕ್ಕೆ ಹಂಚಿಕೆ ಮಾಡಲಾಗಿದ್ದ ಮೊತ್ತದಲ್ಲಿ ಕ್ರಮವಾಗಿ 95% ಮತ್ತು 55% ಹಣವು ಬಳೆಕೆಯಾಗದೆ ಉಳಿದಿದೆ.
ಈ ಅಂಕಿಅಂಶಗಳು ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಗಂಭೀರ ವೈಫಲ್ಯಗಳನ್ನು ಎತ್ತಿ ತೋರಿಸುತ್ತವೆ. ಆಡಳಿತಾತ್ಮಕ ನಿರ್ಲಕ್ಷ್ಯ, ದಾಖಲೆಗಳ ಸಮಸ್ಯೆಗಳು, ಅಥವಾ ಯೋಜನೆಗಳನ್ನು ಸರಿಯಾಗಿ ನಿರ್ವಹಿಸುವಲ್ಲಿ ಸರ್ಕಾರದ ವಿಫಲತೆಯನ್ನು ವಿಶ್ಲೇಷಕರೂ ಗಮನಿಸಿದ್ದಾರೆ. ಆದಾಗ್ಯೂ, ಕಾರ್ಪೊರೇಟ್ ವ್ಯವಹಾರ, ವಿದೇಶಾಂಗ ವ್ಯವಹಾರಗಳಿಗೆ ಹಂಚಿಕೆಯಾದ ಹಣವನ್ನು ಸರ್ಕಾರವು ಸಮರ್ಪಕವಾಗಿ ಬಳಸಿಕೊಂಡಿದೆ. ವಿದೇಶಿ ಪ್ರವಾಸ, ಕಾರ್ಪೊರೇಟ್‌ಗಳಿಗೆ ನೆರವು ನೀಡುವಲ್ಲಿ ಸರ್ಕಾರ ಹೆಚ್ಚು ಉತ್ಸಾಹ ತೋರಿಸಿದೆ ಎಂಬುದೂ ದತ್ತಾಂಶಗಳಲ್ಲಿ ಸ್ಪಷ್ಟವಾಗಿದೆ.





