ಮೋದಿ ಅತ್ಯಾಪ್ತ ಅದಾನಿಯೇ ದೇಶದ ಅತೀ ಶ್ರೀಮಂತ ಉದ್ಯಮಿ; ದೇಶಕ್ಕೆ ಬಂದ ಭಾಗ್ಯವೇನು?

Date:

ಹುರುನ್ ಇಂಡಿಯಾ ಎಂಬ ಖಾಸಗಿ ಸಂಸ್ಥೆ ಉದ್ಯಮಿ ಗೌತಮ್ ಅದಾನಿಯನ್ನು ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಹೆಸರಿಸಿದೆ. ಹತ್ತು ವರ್ಷಗಳ ಹಿಂದೆ ಹತ್ತನೇ ಸ್ಥಾನದಲ್ಲಿದ್ದ ಅದಾನಿ ಇಂದು ನಂಬರ್ ಒನ್ ಶ್ರೀಮಂತರಾಗಿದ್ದಾರೆ. ಈ ಶ್ರೀಮಂತಿಕೆಯ ಹಿಂದೆ ಯಾರಿದ್ದಾರೆ? ಅವರ ಸಹಕಾರದಿಂದ ಬೆಳೆದ ಅದಾನಿ ದೇಶಕ್ಕೇನು ಕೊಡುಗೆ ಕೊಟ್ಟಿದ್ದಾರೆ? ಎಷ್ಟು ಜನಕ್ಕೆ ಉದ್ಯೋಗ ಕೊಟ್ಟಿದ್ದಾರೆ, ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ... ಜನ ಕೇಳಬೇಕಾದ ಪ್ರಶ್ನೆಗಳಲ್ಲವೇ ಇವು?

ಇತ್ತೀಚೆಗೆ ಹುರುನ್‌ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿದ 2024ರ ಭಾರತದ ಸಿರಿವಂತರ ಪಟ್ಟಿಯಲ್ಲಿ, ದೇಶದಲ್ಲಿ 300ಕ್ಕೂ ಹೆಚ್ಚು ಕುಬೇರರು ಇದ್ದಾರೆ. ಶ್ರೀಮಂತರ ಪಟ್ಟಿಯಲ್ಲಿ ಉದ್ಯಮಿ ಮುಕೇಶ್‌ ಅಂಬಾನಿ ಅವರನ್ನು ಹಿಂದಿಕ್ಕಿ, ಉದ್ಯಮಿ ಗೌತಮ್‌ ಅದಾನಿ ಅಗ್ರಸ್ಥಾನಕ್ಕೇರಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಮೋದಿಯವರು ಪ್ರಧಾನಿಯಾಗುವುದಕ್ಕೂ ಮುಂಚೆ, 2014ರಲ್ಲಿ ಪ್ರಕಟಗೊಂಡಿದ್ದ ಹುರುನ್‌ ವರದಿ ಅನ್ವಯ ಗೌತಮ್‌ ಅದಾನಿ ಸಂಪತ್ತು 44 ಸಾವಿರ ಕೋಟಿ ರೂ. ಇತ್ತು. ಶ್ರೀಮಂತರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದರು. 2024ರಲ್ಲಿ, ಅದಾನಿ ಅವರ ಒಟ್ಟು ಸಂಪತ್ತಿನ ಮೌಲ್ಯ 11.6 ಲಕ್ಷ ಕೋಟಿ ದಾಟಿದೆ. ಕೇವಲ ಹತ್ತು ವರ್ಷಗಳಲ್ಲಿ ಅಳತೆಗೂ ಮೀರಿದ ಆಸ್ತಿ ಮೌಲ್ಯ ಹೆಚ್ಚಾಗಿದೆ. ಒಂದೇ ವರ್ಷದಲ್ಲಿ ಶೇ. 95ರಷ್ಟು ಏರಿಕೆಯಾಗಿದೆ.

Screenshot 2024 09 02 095959

ಇದು ಮೋದಿ ಭಾರತದ ಹತ್ತು ವರ್ಷಗಳ ಅದ್ಭುತ ಅಭಿವೃದ್ಧಿ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೋವಿಡ್ ನಂತರದ ದೇಶದ ಆರ್ಥಿಕತೆಯನ್ನು ಇವತ್ತಿಗೂ ಸ್ಥಿರತೆಯತ್ತ ತರಲಾಗುತ್ತಿಲ್ಲ. ನೋಟು ಅಮಾನ್ಯೀಕರಣ, ಜಿಎಸ್‌ಟಿ ನಂತರದ ದೇಶದ ಉದ್ಯಮ ಕ್ಷೇತ್ರದ ಪರಿಸ್ಥಿತಿ ಈ ಕ್ಷಣಕ್ಕೂ ಸುಸ್ಥಿತಿಗೆ ಮರಳಲಿಲ್ಲ.  

ಆದರೆ, ಗೌತಮ್ ಅದಾನಿ ಎಂಬ ಕಾರ್ಪೊರೇಟ್ ಉದ್ಯಮಿಯ ವ್ಯಾಪಾರ, ವಹಿವಾಟು, ಆಸ್ತಿ, ಹಣ ಗಳಿಕೆಗೆ ಕೋವಿಡ್, ಜಿಎಸ್‌ಟಿ, ನೋಟು ಅಮಾನ್ಯೀಕರಣ ಯಾವ ಅಡೆತಡೆಯನ್ನೂ ಒಡ್ಡಲಿಲ್ಲ. ಬದಲಿಗೆ ದೇಶದ ಸಿರಿವಂತರ ಪಟ್ಟಿಯಲ್ಲಿ ಅದಾನಿ ಹೆಸರನ್ನು ಪ್ರತಿಷ್ಠಾಪಿಸಿತು. ಅದು ದೇಶದಾದ್ಯಂತ ದೊಡ್ಡ ಸುದ್ದಿಯಾಯಿತು. ದೇಶದ ಆರ್ಥಿಕ ಸ್ಥಿತಿ ಹಳ್ಳ ಹಿಡಿದರೂ, ಅದಾನಿಯ ಆಸ್ತಿ ಗಳಿಕೆ ಹೆಚ್ಚಾಗಿದ್ದು ಹೇಗೆ? ಅದಾನಿ ಹಿಂದೆ ಯಾರಿದ್ದಾರೆ, ಯಾರ ಸಹಕಾರದಿಂದ ಇವರು ಬೆಳೆದಿದ್ದಾರೆ?

ಇದಕ್ಕೆ ಪೂರಕವಾಗಿ, ಮೋದಿಯವರು ಭಾರತದ ಪ್ರಧಾನಿಯಾದ ನಂತರ ಅದಾನಿ ಸಂಸ್ಥೆಗಳು ದೇಶ – ವಿದೇಶಗಳಲ್ಲಿ ಅನೇಕ ವ್ಯಾವಹಾರಿಕ ಒಪ್ಪಂದಗಳನ್ನು ಮಾಡಿಕೊಂಡಿರುವುದನ್ನು ಕಾಣಬಹುದಾಗಿದೆ. ಮೋದಿಯವರು ಭಾರತ ಸರ್ಕಾರದ ವತಿಯಿಂದ ವಿದೇಶಗಳಿಗೆ ರಾಜತಾಂತ್ರಿಕ ಕಾರಣಗಳಿಗಾಗಿ ಭೇಟಿ ನೀಡುವ ಸಂದರ್ಭಗಳಲ್ಲೆಲ್ಲ ಅದಾನಿ, ಪ್ರಧಾನಿಯವರ ಜೊತೆಗಿದ್ದ ಉದಾಹರಣೆಗಳು ಸಾಕಷ್ಟಿವೆ. ಅದರ ಫಲವಾಗಿ ಅದಾನಿ ಅವರ ವ್ಯಾಪಾರ-ವಹಿವಾಟುಗಳ ವ್ಯಾಪ್ತಿ ವಿಸ್ತಾರವಾಗಿದೆ. ದೇಶ ಅಭಿವೃದ್ಧಿ ಹೊಂದಿದೆಯೋ ಇಲ್ಲವೋ, ಅದಾನಿಯ ತಿಜೋರಿ ತುಂಬಿದೆ. ಶ್ರೀಮಂತರ ಪಟ್ಟಿಯಲ್ಲಿ ರಾರಾಜಿಸುವಂತೆ ಮಾಡಿದೆ.

ಯಾರೀ ಅದಾನಿ?

ಗುಜರಾತಿನ ಮಧ್ಯಮವರ್ಗದ ಕುಟುಂಬದ ಶಾಂತಿಲಾಲ್ ಅದಾನಿ, ಜೀವನಕ್ಕಾಗಿ ಸಣ್ಣ ಜವಳಿ ವ್ಯಾಪಾರ ಮಾಡುತ್ತಿದ್ದರು. ಅವರ ಏಳು ಮಕ್ಕಳಲ್ಲಿ ಒಬ್ಬರಾದ ಗೌತಮ್ ಅದಾನಿ ಜನಿಸಿದ್ದು 1962ರಲ್ಲಿ. ಆಡಿದ್ದು ಬೆಳೆದದ್ದು ಎಲ್ಲ ಗುಜರಾತಿನ ಅಹಮದಾಬಾದ್‌ನಲ್ಲಿ. ಓದನ್ನು ಅರ್ಧಕ್ಕೇ ನಿಲ್ಲಿಸಿದ ಗೌತಮ್ ಅದಾನಿ, 1978ರಲ್ಲಿ ಕೆಲಸಕ್ಕಾಗಿ ಮುಂಬೈಗೆ ತೆರಳಿದರು. ಅಲ್ಲಿ ಮಹೇಂದ್ರ ಬ್ರದರ್ಸ್ ವಜ್ರ ವ್ಯಾಪಾರಿಗಳ ಬಳಿ, ವಜ್ರ ವಿಂಗಡಿಸುವ ಕೆಲಸಕ್ಕೆ ಸೇರಿದರು. ಆದರೆ 1981ರಲ್ಲಿ ಸಹೋದರ ಮಹಾಸುಖಭಾಯಿ ಅದಾನಿ ಅಹಮದಾಬಾದ್‌ನಲ್ಲಿ ಪ್ಲಾಸ್ಟಿಕ್ ಘಟಕ ಖರೀದಿಸಿದಾಗ, ಅವರ ಜೊತೆಯಾದರು. ಪಾಲಿವಿನೈಲ್ ಕ್ಲೋರೈಡ್ ಪೈಪ್(ಪಿವಿಸಿ) ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಲೇ, ಅದಾನಿ ಆಮದು ವ್ಯಾಪಾರ ಶುರು ಮಾಡಿದರು.

1988ರಲ್ಲಿ ಅದಾನಿ ಎಕ್ಸ್‌ಪೋರ್ಟ್ಸ್ ಸ್ಥಾಪಿಸಿದರು. ಕೃಷಿ ಮತ್ತು ವಿದ್ಯುತ್ ಕ್ಷೇತ್ರಗಳತ್ತ ಕೈ ಚಾಚಿದರು. 1991ರಲ್ಲಿ ಆರ್ಥಿಕ ಉದಾರೀಕರಣ ನೀತಿ ಅವರ ಕಂಪನಿಗೆ ಅನುಕೂಲಕರ ವಾತಾವರಣ ನಿರ್ಮಿಸಿತು. ಅದು ಆಮದು, ಜವಳಿ, ಲೋಹ ಕ್ಷೇತ್ರಗಳತ್ತ ವಿಸ್ತರಿಸಲು ಅನುಕೂಲವಾಯಿತು. ಮುಂದುವರೆದು ಬಂದರು ನಿರ್ವಹಣೆಯ ಹೊರಗುತ್ತಿಗೆಯನ್ನು ಪಡೆಯಲು ದಾರಿ ಮಾಡಿಕೊಟ್ಟಿತು. ಮುಂದ್ರಾ ಬಂದರು ಭಾರತದಲ್ಲಿನ ಅತಿ ದೊಡ್ಡ ಖಾಸಗಿ ವಲಯದ ಬಂದರು ಆಗಿದ್ದು, ವಾರ್ಷಿಕ 210 ಮಿಲಿಯನ್ ಟನ್ ಸರಕುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಉಸ್ತುವಾರಿ ಸಿಗುತ್ತಿದ್ದಂತೆ ಅದಾನಿ, ಮತ್ತೊಂದು ಮೆಟ್ಟಿಲು ಹತ್ತಿದರು. ಮುಂದುವರೆದು 1996ರಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಿದರು. ಇದು ದೇಶದ ಅತಿದೊಡ್ಡ ಖಾಸಗಿ ಉಷ್ಣ ವಿದ್ಯುತ್ ಉತ್ಪಾದಕ ಸ್ಥಾವರವಾಗಿ ಹೊರಹೊಮ್ಮಿತು.

ಇಷ್ಟೆಲ್ಲ ವ್ಯಾಪಾರ-ವಹಿವಾಟು ನಡೆಸಲು ಅದಾನಿಯ ಬಳಿ ಇದ್ದ ಮೂಲ ಬಂಡವಾಳವೆಷ್ಟು? ಇದು ಆಗಲೂ ನಿಗೂಢ, ಈಗಲೂ ನಿಗೂಢ. ಏಕೆಂದರೆ, ಅದಾನಿಯ ಮೂಲವೇ ಸಾಲ. ಸಾಲದ ಮೇಲೆಯೇ ಎಲ್ಲ ವ್ಯವಹಾರ. ಅದಕ್ಕೆಲ್ಲ ಮೋದಿಯೇ ಗ್ಯಾರಂಟಿ. ಕಳೆದ ಚುನಾವಣೆಯಲ್ಲಿ ಘೋಷವಾಕ್ಯವಾಗಿತ್ತಲ್ಲ, ಅದೇ ಮೋದಿ ಗ್ಯಾರಂಟಿ!

ಸಿಎನ್‌ಬಿಸಿ ಸರ್ವೇ ಪ್ರಕಾರ 2023-24ನೇ ಸಾಲಿನಲ್ಲಿ ಅದಾನಿಯ ಒಟ್ಟು ಸಾಲ 2,27 ಲಕ್ಷ ಕೋಟಿ ರೂಪಾಯಿಗಳು. ಆ ಸಾಲ ಕೊಟ್ಟವರ ಸಾಲಿನಲ್ಲಿ ವಿದೇಶಿ ಬ್ಯಾಂಕ್‌ಗಳು ಹೆಚ್ಚಾಗಿದ್ದರೆ; ದೇಶದ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಯಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಆರ್‍‌ಬಿಎಲ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್‌ಗಳು ಕೂಡ ಇವೆ.

ಇಂತಹ ಸಾಲದ ವ್ಯವಹಾರದಲ್ಲಿ ವಂಚಿಸಿದ ಅದಾನಿ ವಿರುದ್ಧ 2002ರಲ್ಲಿ ದೆಹಲಿಯಲ್ಲೊಂದು ದೂರು ದಾಖಲಾಗಿತ್ತು. ಜಾಮೀನುರಹಿತ ವಾರಂಟ್ ಕೂಡ ಜಾರಿಯಾಗಿತ್ತು.

2001ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾದ ಮೋದಿಯವರು, ಕೇವಲ ಒಂದು ವರ್ಷದೊಳಗೆ ಗೋಧ್ರಾ ಹತ್ಯಾಕಾಂಡಕ್ಕೆ ಕಾರಣರಾಗಿ, ಇಡೀ ಪ್ರಪಂಚಕ್ಕೇ ಪರಿಚಯವಾಗಿದ್ದರು. ಆ ಸಂದರ್ಭದಲ್ಲಿ ಗುಜರಾತ್ ಸರ್ಕಾರ ವಿದೇಶಿ ಹೂಡಿಕೆದಾರರ ಸಮಾವೇಶ ಆಯೋಜಿಸಿತು. ಆದರೆ, ಹತ್ಯಾಕಾಂಡದ ಹಿನ್ನೆಲೆಯಲ್ಲಿ, ಹಿಂದೂ-ಮುಸ್ಲಿಂ ಗಲಭೆಗಳ ನಡುವೆ, ಗುಜರಾತಿನಲ್ಲಿ ಹೂಡಿಕೆ ಮಾಡಲು ಯಾರೊಬ್ಬರೂ ಮುಂದೆ ಬರಲಿಲ್ಲ. ಮೋದಿ ಚಿಂತಾಕ್ರಾಂತರಾದರು.

ಅದಾನಿಗೆ ಜಾಮೀನುರಹಿತ ವಾರೆಂಟ್ ಕಾಟ, ಮೋದಿಗೆ ಹೂಡಿಕೆದಾರರ ಚಿಂತೆ. ಈ ಬಿಕ್ಕಟ್ಟು ಇವರಿಬ್ಬರನ್ನು ಒಂದು ಮಾಡಿತು. ಅತ್ತ ವಾರಂಟ್‌ನಿಂದ ಅದಾನಿ ಬಚಾವಾದರು. ಇತ್ತ, ವಿದೇಶಿ ಹೂಡಿಕೆದಾರರ ಸಮಾವೇಶದ ಉಸ್ತುವಾರಿಯನ್ನು ಅದಾನಿ ಹೊತ್ತರು. ತಮಗಿರುವ ಸಂಪರ್ಕ ಬಳಸಿ, ದೇಶ-ವಿದೇಶದ ಹೂಡಿಕೆದಾರರನ್ನು ಗುಜರಾತಿಗೆ ಕರೆಸಿ, ಮೋದಿಗೆ ಶಕ್ತಿ ತುಂಬಿದರು. ಅದರ ಪ್ರತಿಫಲವಾಗಿ ಅದಾನಿ ಸಂಸ್ಥೆಗಳಿಗೆ ಎಸ್ಇಝಡ್ ನೆಪದಲ್ಲಿ ನೂರಾರು ಎಕರೆ ಭೂಮಿ, ಕನಿಷ್ಠ ಬೆಲೆಗೆ ಸಿಗುವಂತೆ ನೋಡಿಕೊಳ್ಳಲಾಯಿತು. ಇದರಿಂದ ಗುಜರಾತ್ ಸರ್ಕಾರಕ್ಕೆ 58 ಕೋಟಿ ರೂಪಾಯಿಗಳ ನಷ್ಟವಾಯಿತು. ಇದನ್ನು ಸರ್ಕಾರದ ಅಧಿಕೃತ ಇಲಾಖೆಯ ವರದಿಯೇ ತದನಂತರ ಬಹಿರಂಗಪಡಿಸಿತು.

ಇಷ್ಟಾದರೂ, ಅದಾನಿಗೇನೂ ತೊಂದರೆಯಾಗಲಿಲ್ಲ. ಬದಲಿಗೆ, ಅವರ ಕಂಪನಿಗಳ ಪಟ್ಟಿ ಬೆಳೆಯಲಾರಂಭಿಸಿತು. ದೇಶದಲ್ಲಷ್ಟೇ ಅಲ್ಲ, ವಿದೇಶಗಳಿಗೂ ವಿಸ್ತರಿಸಿತು. ಮೋದಿ ಮತ್ತು ಅದಾನಿ ಒಂದಾಗಿ, ‘ಗುಜರಾತ್ ಮಾಡೆಲ್’ ಎಂಬುದನ್ನು ಮುನ್ನೆಲೆಗೆ ತಂದರು. ಮಾಧ್ಯಮಗಳನ್ನು ಬಳಸಿಕೊಂಡು ಗುಜರಾತ್‌ನಲ್ಲಿ ರಸ್ತೆಗಳಿಲ್ಲ, ಇರುವುದೆಲ್ಲ ಚಿನ್ನದ ರಸ್ತೆಗಳು ಎಂದರು. ಗುಜರಾತ್ ಅಭಿವೃದ್ಧಿಯ ನಾಗಾಲೋಟದಲ್ಲಿದೆ ಎಂದು ಬಿಂಬಿಸಿದರು. ಇಡೀ ದೇಶಕ್ಕೇ ಮಾದರಿ ಎಂದರು. ಇದು ರಾಜಕೀಯವಾಗಿ ಮೋದಿ ಬೆಳೆಯಲು ಅನುಕೂಲವಾದರೆ, ಉದ್ಯಮಿಯಾಗಿ ವ್ಯಾಪಾರ ವಿಸ್ತರಿಸಲು ಅದಾನಿಗೆ ಸಹಕರಿಸಿತು.

ಮೋದಿ ಅದಾನಿ 1

ಮೋದಿ-ಅದಾನಿಯ ಸಮಾನ ಅಂಶಗಳು

ಮೋದಿ-ಅದಾನಿ ಇಬ್ಬರಲ್ಲೂ ಸಮಾನವಾದ ಕೆಲ ಅಂಶಗಳಿವೆ. ಇಬ್ಬರೂ ಗುಜರಾತಿಗಳು. ಅಲ್ಪಸ್ವಲ್ಪ ಕಲಿತವರು, ಸ್ವಂತಶಕ್ತಿಯಿಂದ ಮೇಲೆ ಬಂದವರು. ಇಬ್ಬರ ಆಸಕ್ತಿ – ಅಭಿರುಚಿಗಳು, ಆಚಾರ – ವಿಚಾರಗಳು ಒಂದೇ. ಇಂಗ್ಲಿಷ್ ಮಾತನಾಡಲು ಹಿಂಜರಿಯುವವರು. ಗುಜರಾತಿ ಭಾಷೆ ಬಗ್ಗೆ ಒಲವುಳ್ಳವರು. ಇಬ್ಬರೂ ಒಂಟಿಯಾಗಿದ್ದು, ಖಾಸಗಿತನ ಬಯಸುವವರು. ಹೊರಗಿನವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದವರು. ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡವರು. ಅವುಗಳ ತೀಕ್ಷ್ಣ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗದವರು. ಇಬ್ಬರೂ, ಮಾಧ್ಯಮಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡವರು. ಗುಜರಾತಿನ ಮತ್ತೊಬ್ಬ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮುಂಬೈನಲ್ಲಿ ನೆಲೆಯೂರಿದರೆ, ಅದಾನಿ ಅಹಮದಾಬಾದ್ ಬಿಡದವರು. ಇಬ್ಬರೂ ಮೋದಿಯವರ ಆಪ್ತರು. ಅದರಲ್ಲೂ ಅದಾನಿ, ಪ್ರಧಾನಿ ಮೋದಿಯವರ ನಿಷ್ಠರು.  

ಮೋದಿ-ಅದಾನಿಗಳ ಸ್ನೇಹ 2014ರ ಲೋಕಸಭಾ ಚುನಾವಣೆಯಲ್ಲಿ ಇನ್ನಷ್ಟು ಗಟ್ಟಿಗೊಂಡಿತು. ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತರಾದಾಗ, ಅದಾನಿಯ ಹಣ ದೇಶದಾದ್ಯಂತ ಹರಿದಾಡಿತು. ಮೋದಿ ಪ್ರಧಾನಿಯಾದರು. ಒಂದಲ್ಲ, ಎರಡಲ್ಲ, ಮೂರನೇ ಬಾರಿಗೂ ಭಾರತಕ್ಕೆ ಪ್ರಧಾನಿಯಾದರು. ಕಳೆದ ಹತ್ತು ವರ್ಷಗಳಲ್ಲಿ ಅದಾನಿಯೂ ಬೆಳೆದರು. ಬರಿ ಬೆಳೆದದ್ದಲ್ಲ, ಎವರೆಸ್ಟ್ ಕೂಡ ನಾಚುವಂತೆ ಬೆಳೆಯುತ್ತಲೇ ಹೋದರು.   

ಮೋದಿಯವರು ಅಧಿಕಾರದಲ್ಲಿ ಗಟ್ಟಿಗೊಂಡಂತೆಲ್ಲ ಅದಾನಿ ವ್ಯಾಪಾರ-ವ್ಯವಹಾರಕ್ಕೆ ಬೇಕಾದಂತೆ ನೀತಿ ನಿರೂಪಣೆಗಳನ್ನು ಬದಲಿಸಲಾಯಿತು. 2018ರಲ್ಲಿ ಅದಾನಿಯ ಪವರ್ ಪ್ರಾಜೆಕ್ಟ್‌ಗೆ ಮಹಾರಾಷ್ಟ್ರದಲ್ಲಿ 370 ಎಕರೆ ಅರಣ್ಯ ಭೂಮಿಯನ್ನು ನೀಡಲಾಯಿತು. ನೀಡುವಾಗ ಯಥಾರೀತಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ‘ಉದ್ಯೋಗ ಸೃಷ್ಟಿಯಾಗುತ್ತದೆ, ದೇಶ ಅಭಿವೃದ್ಧಿ ಪಥದತ್ತ ಸಾಗುತ್ತದೆ’ ಎಂದವು. ಆದರೆ ಸಿಕ್ಕಿದ್ದು 350 ಜನ ಸ್ಥಳೀಯರಿಗೆ ನಾಲ್ಕನೇ ದರ್ಜೆ ಉದ್ಯೋಗ ಮಾತ್ರ.

ಇದೊಂದೇ ಅಲ್ಲ, ಇದೇ ರೀತಿ ಅದಾನಿಗೆ ಅನುಕೂಲವಾಗುವಂತೆ ಸರ್ಕಾರಿ ಕಾಯ್ದೆ-ಕಾನೂನುಗಳನ್ನು ನಿರಂತರವಾಗಿ ಮೋದಿಯವರ ಸರ್ಕಾರ ಮಾರ್ಪಾಡು ಮಾಡುತ್ತಲೇ ಬಂದಿದೆ. ಅದೆಷ್ಟೋ ವರ್ಷಗಳಿಂದ ಸರ್ಕಾರಿ ಸ್ವಾಮ್ಯದಲ್ಲಿದ್ದು ಲಾಭದಲ್ಲಿದ್ದ ರೈಲ್ವೆ, ಬಂದರು, ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಸಂಸ್ಥೆಗಳಿಗೆ ವಹಿಸಿಕೊಡಲಾಗಿದೆ. ಇದರಿಂದ ಸಾರ್ವಜನಿಕ ಸಹಭಾಗಿತ್ವ ಹೊರಟುಹೋಗಿ, ಖಾಸಗಿಯವರ ಕೈವಶವಾಗುತ್ತಿದ್ದಂತೆ, ದೇಶದ ಜನ ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಳ್ಳುವಂತಾಯಿತು. ಖಾಸಗಿಯವರ ಕಾನೂನು ಚಾಲ್ತಿಗೆ ಬಂದು, ಸುಲಿಗೆ ಶುರುವಾಯಿತು.

ಅದೇ ರೀತಿ, ದೇಶದ ನಂಬಿಕಾರ್ಹ ಸಂಸ್ಥೆಯಾಗಿದ್ದ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್(ಎಲ್ಐಸಿ) ಸಂಚಿತ ನಿಧಿಯನ್ನು ಅದಾನಿ ಕಂಪನಿಗಳ ಶೇರುಗಳಿಗಾಗಿ ಬಳಸಲಾಯಿತು. ಎಲ್ಐಸಿ ಎಂದರೆ, ದೇಶದ ಜನರ ನಂಬಿಕೆ. ಆ ನಂಬಿಕೆಯ ಫಲವಾಗಿ ಸಂಗ್ರಹವಾಗಿದ್ದ ಕೋಟ್ಯಂತರ ಹಣ, ಅದಾನಿ ಕಂಪನಿಗಳ ಶೇರು ಖರೀದಿಗೆ ಬಳಕೆಯಾಯಿತು. ಬೆಲೆ ಏರಿಸಿ, ತಾವೇ ಖರೀದಿಸಿ, ಕೃತಕ ಬೇಡಿಕೆ ಸೃಷ್ಟಿಸಿ, ಶೇರು ಮಾರುಕಟ್ಟೆಯನ್ನು ಕುಲಗೆಡಿಸಲಾಯಿತು. ಕೋಟ್ಯಂತರ ಸಣ್ಣ ಹೂಡಿಕೆದಾರರ ನಂಬಿಕೆ, ವಿಶ್ವಾಸ ಮತ್ತು ಸಾಂಪ್ರದಾಯಿಕ ಶೇರು ವ್ಯವಹಾರವನ್ನು ಮಣ್ಣುಪಾಲು ಮಾಡಲಾಯಿತು.

ಇದನ್ನು ಓದಿದ್ದೀರಾ?: ಮಾಧ್ವ ನಿಯಮಗಳನ್ನು ಪಾಲಿಸದ ಪುತ್ತಿಗೆ ಸುಗುಣೇಂದ್ರ ತೀರ್ಥರಿಗೆ ಅವರು ನಂಬುವ ಸ್ವರ್ಗ ಪ್ರಾಪ್ತಿಯಾಗುತ್ತದೆಯೇ?

ಏತನ್ಮಧ್ಯೆ ಅದಾನಿ, ಸೋಲಾರ್ ಎನರ್ಜಿ, ಎಲೆಕ್ಟ್ರೋಲೈಜರ್, ವಿಂಡ್ ಟರ್ಬೈನ್‌ನಂತಹ ಮೂರು ದೈತ್ಯ ಕಾರ್ಖಾನೆಗಳನ್ನು ಸ್ಥಾಪಿಸಿದರು. ಜೊತೆಗೆ ಗಣಿಗಾರಿಕೆ, ಸಿಮೆಂಟ್, ಕಲ್ಲಿದ್ದಲು, ಆಯಿಲ್ ಕ್ಷೇತ್ರಕ್ಕೂ ಕೈಹಾಕಿ ಸೈ ಎನಿಸಿಕೊಂಡರು. ಸಾಲದು ಎಂದು 2020ರಲ್ಲಿ ದೇಶದ ನಂಬಿಕಾರ್ಹ ಸುದ್ದಿ ಸಂಸ್ಥೆ ಎಂದು ಹೆಸರು ಪಡೆದಿದ್ದ, ಪ್ರಭುತ್ವದ ವಿರುದ್ಧವಿದ್ದ, ಪ್ರಧಾನಿ ಮೋದಿ ಟೀಕಿಸುತ್ತಿದ್ದ ಎನ್‌ಡಿಟಿವಿಯ ಶೇರುಗಳನ್ನು ಅದಾನಿ ಖರೀದಿಸಿದರು. ಆ ಮೂಲಕ ಎನ್‌ಡಿಟಿವಿ ಅದಾನಿಯ ಒಡೆತನಕ್ಕೆ ಸೇರಿತು, ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕಲಾಯಿತು. ಅಲ್ಲಿಂದ ಮುಂದಕ್ಕೆ ಅದು ಮೋದಿಯವರ ತುತ್ತೂರಿಯಾಯಿತು.

ದೇಶದ ರಾಜಕಾರಣಿಗಳು ಉದ್ಯಮಿಗಳ ಪರವಿರುವುದು, ಅವರಿಗೆ ಸಹಕರಿಸುವುದು ಹೊಸ ವಿದ್ಯಮಾನವೇನಲ್ಲ. ಇಲ್ಲಿಯವರೆಗೆ ದೇಶವನ್ನಾಳಿದವರಲ್ಲಿ ಕೊಡು-ಕೊಳ್ಳುವ ವ್ಯವಹಾರ ಇರಲಿಲ್ಲವೆಂದಲ್ಲ. ಇದ್ದರೂ ಅದಕ್ಕೊಂದು ನೀತಿ ಇತ್ತು, ಮಿತಿ ಇತ್ತು. ಆದರೆ ಮೋದಿಯವರು ಆ ನೀತಿ ಮತ್ತು ಮಿತಿಗಳನ್ನು ಮೀರಿದ್ದಾರೆ. ಕಾಯ್ದೆ-ಕಾನೂನುಗಳನ್ನು ಉಲ್ಲಂಘಿಸಿದ್ದಾರೆ. ಅಧಿಕಾರಕ್ಕಾಗಿ ಅದಾನಿ ಪರ ನಿಂತಿದ್ದಾರೆ. ಇಡೀ ಸರ್ಕಾರವನ್ನೇ ಅದಾನಿಯ ಅಡಿಯಾಳಾಗಿಸಿದ್ದಾರೆ. ದೇಶದ ನೆಲ, ಜಲ, ಸಂಪನ್ಮೂಲವನ್ನು ಅದಾನಿಗೆ ಧಾರೆ ಎರೆಯುತ್ತಿದ್ದಾರೆ.

ಇಷ್ಟೆಲ್ಲ ಪಡೆದ ಅದಾನಿ, ದೇಶಕ್ಕೆ ಕೊಟ್ಟ ಕೊಡುಗೆ ಏನು, ಅವರಿಂದ ದೇಶಕ್ಕಾದ ಲಾಭವೇನು?

ಇಂದು ದೇಶದಲ್ಲಿ ಅದಾನಿ ಸಂಸ್ಥೆಗಳ ಪಾಲುದಾರಿಕೆ ಇಲ್ಲದ ಉದ್ಯಮಗಳೇ ಇಲ್ಲ ಎನ್ನುವಂತಹ ವಾತಾವರಣ ಸೃಷ್ಟಿಯಾಗಿದೆ. ಅವರ ಸಂಸ್ಥೆಗಳ ವ್ಯವಹಾರ-ವಹಿವಾಟು ಏರುಗತಿಯಲ್ಲಿದೆ. ಆದರೆ ದೇಶದ ಜನತೆಗೆ ಉದ್ಯೋಗ ನೀಡಿದ ಅಗ್ರ 25 ಉದ್ಯಮ ಸಂಸ್ಥೆಗಳಲ್ಲಿ ಅದಾನಿ ಸಂಸ್ಥೆಯೇ ಇಲ್ಲ. ಟಾಟಾ ಕಂಪನಿ 9 ಲಕ್ಷ, ಇನ್ಫೋಸಿಸ್ 3 ಲಕ್ಷ, ರಿಲಯನ್ಸ್ 2 ಲಕ್ಷ 61 ಸಾವಿರ, ವಿಪ್ರೋ 2 ಲಕ್ಷ 26 ಸಾವಿರ ಉದ್ಯೋಗಗಳನ್ನು ನೀಡಿದ್ದರೆ, ಅದಾನಿ ಸಂಸ್ಥೆಗಳು ಉದ್ಯೋಗ ನೀಡಿದ್ದು ಕೇವಲ 23 ಸಾವಿರ.

ಉದ್ಯೋಗ ನೀಡಿಲ್ಲ, ದೇಶಕ್ಕೆ ತೆರಿಗೆ ನೀಡುವಲ್ಲಾದರೂ ಅದಾನಿ ಸಂಸ್ಥೆಗಳು ಮುಂದಿವೆಯೇ?

ದೇಶಕ್ಕೆ ಅತಿ ಹೆಚ್ಚು ತೆರಿಗೆ ನೀಡುವ, ಆರ್ಥಿಕಾಭಿವೃದ್ಧಿಯಲ್ಲಿ ಜೊತೆಯಾಗಿ ಹೆಜ್ಜೆ ಹಾಕುವ ದೇಶದ 10 ಉದ್ಯಮಗಳ ಪಟ್ಟಿಯಲ್ಲಿ ಅದಾನಿ ಹೆಸರೇ ಇಲ್ಲ. ಆದರೆ ಅದಾನಿಯನ್ನು ದೇಶದ ಶ್ರೀಮಂತ ಕುಳ, ಅತಿಹೆಚ್ಚು ಮೌಲ್ಯದ ಆಸ್ತಿವಂತ ಎಂದು ಹೆಸರಿಸಲಾಗಿದೆ. ಈತನ ಕಂಪನಿಗಳು ತೆರಿಗೆ ಕಟ್ಟುತ್ತಿಲ್ಲವೆಂದರೆ, ಅವು ಲಾಭ ಮಾಡುತ್ತಿಲ್ಲ ಎಂದರ್ಥ. ಆದರೆ ಅದಾನಿ ಆಸ್ತಿ ಮಾತ್ರ ಏರುಗತಿಯಲ್ಲಿಯೇ ಇದೆ. ಇದು ಹೇಗೆ ಸಾಧ್ಯ? ಇದು ಯಾವ ಎಕಾನಮಿ?

ಒಬ್ಬ ಉದ್ಯಮಿಯ ಶ್ರೇಯಸ್ಸಿಗಾಗಿ ಸರ್ಕಾರಿ ಯಂತ್ರವನ್ನು, ಕಾನೂನನ್ನು, ನೀತಿಗಳನ್ನು ಬದಲಾಯಿಸುವುದು ತಪ್ಪು ಎಂದು ಪ್ರಧಾನಿ ಮೋದಿಯವರಿಗೆ ಅನಿಸಲೇ ಇಲ್ಲ. ಆದರೆ ಅದಾನಿ ಕಂಪನಿಗಳ ಅಪರಾ-ತಪರಾಗಳನ್ನು ದೂರದ ಅಮೆರಿಕನ್ ಶಾರ್ಟ್ ಸೆಲ್ಲಿಂಗ್ ಆಕ್ಟಿವಿಸ್ಟ್ ಫರ್ಮ್ ಹಿಂಡೆನ್‌ಬರ್ಗ್ ರಿಸರ್ಚ್ ಹೊರಹಾಕಿತು. 2023ರ ಜನವರಿಯಲ್ಲಿ ಶೇರು ಮಾರುಕಟ್ಟೆಯ ವಾಸ್ತವಿಕ ಬೆಲೆಗಿಂತ ಕೃತಕ ಬೆಲೆಯಲ್ಲಿ ಅದಾನಿ ಸಮೂಹದ ಶೇರುಗಳು ಮಾರಾಟವಾಗುತ್ತಿವೆ ಎಂದು ವರದಿ ಬಹಿರಂಗಪಡಿಸಿತು.

ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಟಿಎಂಸಿ ನಾಯಕಿ ಮಹುವಾ ಮೋಯಿತ್ರಾ ಲೋಕಸಭೆಯಲ್ಲಿ ಪ್ರಶ್ನಿಸಿದರು. ಪ್ರಧಾನಿ ಮೋದಿ ಮತ್ತು ಅದಾನಿ ಫೋಟೋ ಬಿಡುಗಡೆ ಮಾಡಿ, ‘ಮೋದಿಗೂ ಅದಾನಿಗೂ ಇರುವ ಸಂಬಂಧವೇನು’ ಎಂದರು. ಆದರೆ ಅದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಯಾವುದಕ್ಕೂ ಬಾಯಿ ಬಿಡದ ಮೋದಿಯವರು, ಅದಾನಿ ಮೇಲಿನ ಆರೋಪಗಳಿಗೂ ಉತ್ತರಿಸಲಿಲ್ಲ. ಸರ್ಕಾರದ ಕಡೆಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ.

ಇದಾದ ನಂತರ, 2024ರಲ್ಲಿ ಹಿಂಡೆನ್‌ಬರ್ಗ್ ಬಿಡುಗಡೆ ಮಾಡಿದ ಎರಡನೇ ವರದಿಯಲ್ಲಿ ಸೆಬಿ ಮುಖ್ಯಸ್ಥೆ ಮಾಧಬಿ ಬುಚ್ ಮತ್ತು ಆಕೆಯ ಪತಿ ಅದಾನಿ ಸಂಸ್ಥೆಗಳಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿರುವ ವಿಚಾರವನ್ನು ಮುಚ್ಚಿಟ್ಟಿರುವುದು ಬಹಿರಂಗವಾಯಿತು. ಇದಕ್ಕೂ ಪ್ರಧಾನಿ ಮೋದಿಯವರ ಮೌನವೇ ಉತ್ತರವಾಯಿತು.

ಮೋದಿ ಅದಾನಿ 2

ಇತ್ತೀಚೆಗೆ ಭಾರತ ಸರ್ಕಾರದ ನೀತಿ ಆಯೋಗದ ಮುಖ್ಯಸ್ಥರು ಭಾರತದಲ್ಲಿ ಬಡವರ ಸಂಖ್ಯೆ ಶೇ. 5ಕ್ಕಿಂತ ಹೆಚ್ಚಿಲ್ಲ ಎಂಬ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದರು. ತಮ್ಮ ಸರ್ಕಾರದ ಅಂಕಿ ಅಂಶಗಳನ್ನೇ ಅಲ್ಲಗಳೆದ ಪ್ರಧಾನಿ ಮೋದಿಯವರು, ಬಿಜೆಪಿ ಸರ್ಕಾರವು ದೇಶದ 80 ಕೋಟಿ ಬಡವರಿಗೆ ಉಚಿತ ಪಡಿತರ ನೀಡುವ ಯೋಜನೆಯನ್ನು ಮುಂದಿನ 5 ವರ್ಷಗಳವರೆಗೆ ವಿಸ್ತರಿಸಲು ನಿರ್ಧರಿಸಿದೆ ಎಂದರು.

ಬಡವರ ಕುರಿತು ಸರ್ಕಾರಿ ಸಂಸ್ಥೆಯ ಮುಖ್ಯಸ್ಥ ಮತ್ತು ದೇಶದ ಪ್ರಧಾನಿಯ ಮಾತುಗಳು ಒಂದಕ್ಕೊಂದು ತದ್ವಿರುದ್ಧ ದಿಕ್ಕಿನಲ್ಲಿರುವಾಗಲೇ, ಹುರುನ್ ಇಂಡಿಯಾ ಎಂಬ ಖಾಸಗಿ ಸಂಸ್ಥೆ ದೇಶದಲ್ಲಿ 300ಕ್ಕೂ ಹೆಚ್ಚು ಕುಬೇರರಿದ್ದಾರೆ ಎಂದು ಪಟ್ಟಿ ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿಯವರ ಅತ್ಯಾಪ್ತ ಸ್ನೇಹಿತ, ಉದ್ಯಮಿ ಗೌತಮ್ ಅದಾನಿಯನ್ನು ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಹೆಸರಿಸಿದೆ.

ಅಂದರೆ ಪ್ರಧಾನಿ ಮೋದಿಯವರ ಬರಿ ಮಾತಿನ ಭಾಷಣಕ್ಕೆ ಬಡವರು ಬೇಕು. ಅವರ ಬಗ್ಗೆ ಕರುಣೆ ತೋರಲು ಬಡವರಿರಬೇಕು. ದೇಶದಲ್ಲಿ ಬಡತನವಿರಬೇಕು. ಆದರೆ ಅಂಬಾನಿ-ಅದಾನಿಗಳು ಬೆಟ್ಟದಂತೆ ಬೆಳೆಯುತ್ತಲೇ ಹೋಗಬೇಕು. ಮೋದಿ ಮತ್ತೊಮ್ಮೆ ಮೊಗದೊಮ್ಮೆ ಪ್ರಧಾನಿಯಾಗುತ್ತಲೇ ಇರಬೇಕು!

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...