ರಾಜ್ಯದಲ್ಲಿ ಬಿಜೆಪಿ ಪಕ್ಷ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ ಸಾಮಾಜಿಕ ನ್ಯಾಯದ ವಿರೋಧಿ. ಸಬ್ ಕಾ ಸಾಥ್ – ಸಬ್ ಕಾ ವಿಕಾಸ್ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಬೋಗಸ್ ಘೋಷಣೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಪರವಾಗಿ ನಗರದ ಗಣೇಶ ಮೈದಾನದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, “ಬಿಜೆಪಿ ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿಲ್ಲದವರು,ಸಾಮಾಜಿಕ ನ್ಯಾಯದ ವಿರುದ್ಧ ನಿಲ್ಲುತ್ತಾರೆ. ಆದರೆ ಕಾಂಗ್ರೆಸ್ ದೇಶದಲ್ಲಿ ಸಾಮಾಜಿಕ ನ್ಯಾಯಕ್ಕೆ ಬೆಲೆ ಕೊಡುವ ಏಕೈಕ ಪಕ್ಷ ಕಾಂಗ್ರೆಸ್ ಮಾತ್ರ. ಕರ್ನಾಟಕ ಇತಿಹಾಸದಲ್ಲಿ ಆರು ಜನ ಮಹಿಳೆಯರಿಗೆ ಟಿಕೆಟ್ ಕಾಂಗ್ರೆಸ್ ಟಿಕೆಟ್ ನೀಡಿದೆ” ಎಂದರು.
“ದೇಶದಲ್ಲಿ 140 ಕೋಟಿ ಜನರಿಗೂ ಅಧಿಕಾರ, ಅವಕಾಶ, ಸಂಪತ್ತು ಎಲ್ಲ ಸಮುದಾಯಗಳಿಗೂ ಸಮಾನ ಹಂಚಿಕೆಯಾದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಅಸಮಾನತೆಯ ಅಂತರ ಹೋಗದಿದ್ದರೆ ಅಸಮಾನತೆಗೆ ಒಳಗಾದವರು ಈ ಸ್ವಾತಂತ್ರ್ಯದ ಸೌಧವನ್ನು ದ್ವಂಸ ಮಾಡುತ್ತಾರೆ ಎಂದು ಅಂಬೇಡ್ಕರ್ ಅವರು ಎಚ್ಚರಿಸಿದ್ದು ಯಾರೂ ಮರೆಯಕೂಡದು” ಎಂದರು.
“ಮೊದಲ ಬಾರಿ ನಾನು ಮುಖ್ಯಮಂತ್ರಿಯಾಗಿ ಜಾರಿ ಮಾಡಿದ ಎಲ್ಲಾ ಭಾಗ್ಯಗಳೂ ಕೂಡ ದುಡಿಯುವ ವರ್ಗಗಳು, ಬಡವರು, ಹಿಂದುಳಿದವರು, ದಲಿತರ ಪ್ರಗತಿಗಾಗಿ ಆಗಿದ್ದವು. ಬಡವರೂ ಹೊಟ್ಟೆ ತುಂಬ ಊಟ ಮಾಡಬೇಕು ಎನ್ನುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ತೆರೆದೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದು ಇಂದಿರಾ ಕ್ಯಾಂಟೀನ್ ವ್ಯವಸ್ಥೆಯನ್ನು ಹಾಳು ಮಾಡಲು ಮುಂದಾಗಿತ್ತು. ಈಗ ಮತ್ತೆ ನಾವು ಇಂದಿರಾ ಕ್ಯಾಂಟೀನ್ ಗಳ ಸಂಖ್ಯೆ ಹೆಚ್ಚಿಸಿದ್ದೇವೆ” ಎಂದು ಹೇಳಿದರು.
“ಕಳೆದ ಬಾರಿ ಅಧಿಕಾರಕ್ಕೆ ಬಂದ ನಂತರ ನಾವು ಐದು ಗ್ಯಾರಂಟಿಗಳ ಜತೆಗೆ 82 ಭರವಸೆಗಳನ್ನು ಈಡೇರಿಸಿ ನಿಮ್ಮ ಮತಕ್ಕೆ ಗೌರವ ತಂದುಕೊಟ್ಟಿದ್ದೇವೆ. 195 ಕೋಟಿ ಬಾರಿ ಮಹಿಳೆಯರು ಇಲ್ಲಿಯವರೆಗೂ ರಾಜ್ಯದಲ್ಲಿ ಉಚಿತವಾಗಿ ಬಸ್ ಪ್ರಯಾಣ ಮಾಡಿ ರಾಜ್ಯದ ಆರ್ಥಿಕತೆಗೆ ಶಕ್ತಿ ನೀಡಿದ್ದಾರೆ. ಆದರೆ ಪ್ರಧಾನಿ ಮೋದಿಯವರು ರಾಜ್ಯದ ಬಡವರಿಗೆ ಅಕ್ಕಿ ಕೊಡದಂತೆ ಅಧಿಕಾರಿಗಳಿಗೆ ಆದೇಶಿಸಿದರು” ಎಂದರು.
“ಒಂದು ಕೋಟಿ 21 ಲಕ್ಷ ಮಹಿಳೆಯರಿಗೆ ಪ್ರತೀ ತಿಂಗಳು 2 ಸಾವಿರ ರೂಪಾಯಿ ಕೊಡುತ್ತಿದ್ದೇವೆ. ಆದರೆ ಬಿಜೆಪಿ, ಜೆಡಿಎಸ್ ನವರು ಗ್ಯಾರಂಟಿ ಯೋಜನೆಗಳ ಕೋಟಿ ಕೋಟಿ ಫಲಾನುಭವಿಗಳನ್ನು ಅಪಹಾಸ್ಯ ಮಾಡಿದರು, ಅವಮಾನ ಮಾಡಿದರು. ಈಗ ಅದೇ ಗ್ಯಾರಂಟಿಗಳನ್ನು ಕದ್ದು ಮೋದಿ ಗ್ಯಾರಂಟಿ ಎಂದು ಹೆಸರಿಟ್ಟಿದ್ದಾರೆ” ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.
“ಗ್ಯಾರಂಟಿಗೆ ಕೊಟ್ಟ ಹಣದ ಹೊರತಾಗಿ ಒಂದು ಲಕ್ಷದ 20 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯದ ಇತರೆ ಅಭಿವೃದ್ಧಿ ಕೆಲಸಗಳಿಗೆ ಮೀಸಲಿಟ್ಟಿದ್ದೇವೆ. 2028 ರ ನಂತರವೂ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಆಗಲೂ, ಹತ್ತು ವರ್ಷಗಳಾದರೂ ಗ್ಯಾರಂಟಿಗಳು ಮುಂದುವರೆಯಲಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಭಗವಂತ ಖೂಬಾ ಹತ್ತು ವರ್ಷಗಳಿಂದ ಸಂಸದರಾಗಿದ್ದಾರೆ. ಆದರೆ ಕರ್ನಾಟಕಕ್ಕೆ ಅನ್ಯಾಯವಾದಾಗ ಎಂದಾದರೂ ಸಂಸತ್ತಿನಲ್ಲಿ ಕನ್ನಡಿಗರ ಪರ ಬಾಯಿ ಬಿಟ್ಟಿದ್ದಾರಾ ಎಂದು ಪ್ರಶ್ನಿಸಿದರು. ರಾಜ್ಯದ ರೈತರಿಗೆ ಮೋಸ, ತೆರಿಗೆ ಹಂಚಕೆಯಲ್ಲಿ ಅನ್ಯಾಯ, 15ನೇ ಹಣಕಾಸು ಅನುದಾನದಲ್ಲಿ ಅನ್ಯಾಯ, ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಮೀಸಲಿಟ್ಟ ಅನುದಾನ ನೀಡದಿದ್ದರೂ ರಾಜ್ಯದ ಯಾರೊಬ್ಬ ಸಂಸದರೂ ಪ್ರಧಾನಿಗೆ ಕೇಳುವ ಧೈರ್ಯ ತೋರಲಿಲ್ಲ. ಇವರೆಲ್ಲರೂ ಮೋದಿಗೆ ಮಾತಾಡಲು ಗಡಗಡ ಅಂತ ನಡಗುತ್ತಾರೆ. ಕೇಂದ್ರದಿಂದ ರಾಜ್ಯಕ್ಕೆ ಇಷ್ಟೊಂದು ಮೋಸವಾದರೂ ಬಾಯಿ ಬಿಡದ ರಾಜ್ಯದ 25 ಬಿಜೆಪಿ ಸಂಸದರಿಗೆ ಈ ಬಾರಿ ಮನೆಗೆ ಕಳುಹಿಸಿ” ಎಂದು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿದುಕೊಳ್ಳುತ್ತಾರೆ ಎಂದು ಬಿಜೆಪಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ. ಸುಳ್ಳು ಭರವಸೆಗಳನ್ನು ಕೊಟ್ಟು ಆಡಳಿತಕ್ಕೆ ಬಂದ ಬಿಜೆಪಿ ಜನರಿಗೆ ಮೋಸ ಮಾಡಿದೆ. ನಮ್ಮ ಸರ್ಕಾರ ನಮ್ಮ ಸರ್ಕಾರ ಮುಂದಿನ ನಾಲ್ಕು ವರ್ಷ ಭದ್ರವಾಗಿರುತ್ತದೆ. ದೇಶದ ಜನ ಬದಲಾವಣೆ ಬಯಸುತ್ತಿದ್ದಾರೆ, ಬೀದರ್ ಕ್ಷೇತ್ರದಲ್ಲಿಯೂ ಬದಲಾವಣೆ ಬಯಸುತ್ತಿದ್ದಾರೆ” ಎಂದರು.
ಯಾರದೋ ಹೆಸರಿನಿಂದ ಗೆದ್ದು ಬಂದಿರುವ ಸಂಸದ ಭಗವಂತ ಖುಬಾ ದುರಂಹಕಾರದಿಂದ ಓಡಾಡುತ್ತಿದ್ದಾರೆ. ಸ್ವಪಕ್ಷೀಯ ಶಾಸಕರೇ ತಿರಸ್ಕಾರ ಮಾಡಿದ್ದಾರೆ, ಮತದಾರರು ಈ ಬಾರಿ ಖೂಬಾಗೆ ತಿರಸ್ಕರಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲ್ಲಿಸಬೇಕು ಎಂದು ಖಂಡ್ರೆ ಕೋರಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದ್ವೇಷ -ವಿರಸ- ವೈಷಮ್ಯಗಳ ಮೇಲೆ ಮತಯಾಚನೆ ಪರಮವಿಕೃತಿ
ಸಮಾವೇಶದಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ , ವಿಧಾನಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ, ಅರವಿಂದ ಅರಳಿ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ್, ಮಾಜಿ ಸಚಿವ ರಾಜಶೇಖರ ಪಾಟೀಲ, ಮಾಜಿ ಶಾಸಕ ಅಶೋಕ್ ಖೇಣಿ, ಮಾಜಿ ವಿಧಾನಪರಿಷತ್ ಸದಸ್ಯ ವಿಜಯಸಿಂಗ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





