ವಿಧಾನಮಂಡಲದ ಉಭಯ ಸದನಗಳ ಮುಂಗಾರು ಅಧಿವೇಶನವು ಇಂದಿನಿಂದ(ಆಗಸ್ಟ್ 11) ಆರಂಭವಾಗಲಿದ್ದು, ಒಟ್ಟು 17 ಮಸೂದೆಗಳನ್ನು ಮಂಡಿಸಲು ಸರ್ಕಾರ ಸಜ್ಜಾಗಿದೆ. ಜೊತೆಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಮತ್ತು ವಿಪಕ್ಷಗಳ ಪ್ರಶ್ನೆಗೆ ಉತ್ತರ ನೀಡಲು ಸರ್ಕಾರ ಸಿದ್ಧತೆಯನ್ನು ಮಾಡಿಕೊಂಡಂತಿದೆ.
ವಾಕ್ಸಮರಕ್ಕೆ ವೇದಿಕೆಯಾಗಿರುವ ಅಧಿವೇಶನದಲ್ಲಿ ಬೆಂಗಳೂರು ಕಾಲ್ತುಳಿತ ಪ್ರಕರಣ, ಜಾತಿ ಗಣತಿ ಮರು ಸಮೀಕ್ಷೆ, ಅನುದಾನ ಕೊರತೆ, ಮತ ಕಳವು, ಪರಿಶಿಷ್ಟರ ಒಳಮೀಸಲಾತಿ ವರದಿ ಸಲ್ಲಿಕೆ ಪರ-ವಿರೋಧ- ಹೀಗೆ ಹಲವು ವಿಚಾರಗಳ ಚರ್ಚ ನಡೆಯುವ ಸಾಧ್ಯತೆಯಿದೆ. ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆಗಳ ಹಣ ಸರ್ಕಾರಕ್ಕೆ ಬಿಡುಗಡೆಯಾಗುತ್ತಿಲ್ಲ ಎಂಬ ಆರೋಪದ ಪ್ರಸ್ತಾಪವೂ ನಡೆಯುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ? BREAKING NEWS | ಆಗಸ್ಟ್ 11ರಿಂದ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭ
ಇನ್ನೊಂದೆಡೆ ಬಿಜೆಪಿಗೆ ಭಿನ್ನಮತವನ್ನು ನಿಭಾಯಿಸುವುದೇ ಸವಾಲಾಗಬಹುದು. ಈಗಾಗಲೇ ಬಹಿರಂಗವಾಗಿ ಬಿಜೆಪಿ ವಿರುದ್ಧ ಹೇಳಿಕೆಯನ್ನು ನೀಡುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯಶವಂತಪುರ ಶಾಸಕ ಎಸ್ಟಿ ಸೋಮಶೇಖರ್, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಅವರನ್ನು ಈಗಾಗಲೇ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. ಅದಾದ ಬಳಿಕ ಮೊದಲ ಬಾರಿಗೆ ಕಲಾಪಕ್ಕೆ ಮೂವರೂ ಆಗಮಿಸುತ್ತಿದ್ದಾರೆ. ಆದ್ದರಿಂದಾಗಿ ಬಿಜೆಪಿಗೆ ವಿಧಾನಮಂಡಲದಲ್ಲಿಯೂ ಬಂಡಾಯ ನಾಯಕರುಗಳನ್ನು ಹತ್ತಿಕುವ ಸವಾಲಿದೆ.
ಈಗಾಗಲೇ ಶಾಸಕರಿಗೆ ತಲಾ 50 ಕೋಟಿ ರೂಪಾಯಿ ವಿಶೇಷ ಅನುದಾನ ಹಂಚಿಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ. ಆದರೆ ಇದು ಆಡಳಿತ ಪಕ್ಷದ ನಾಯಕರಿಗೆ ಮಾತ್ರ, ತಾರತಮ್ಯ ಮಾಡಲಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಈ ನಿಟ್ಟಿನಲ್ಲಿ ಪ್ರತಿಭಟನೆ ನಡೆಸಲೂ ಸಜ್ಜಾಗಿದೆ.
ರಾಜ್ಯದಲ್ಲಿ ನಡೆದ ಹಲವು ಹತ್ಯೆಗಳ ಬಗ್ಗೆ ಪ್ರಸ್ತಾಪಕ್ಕೂ ಬಿಜೆಪಿ ತಯಾರಿ ನಡೆಸಿದೆ. ಧರ್ಮಸ್ಥಳ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ರಚನೆ, ಧರ್ಮಸ್ಥಳ ಸುತ್ತಮುತ್ತ ಅಕ್ರಮವಾಗಿ ಮೃತದೇಹ ಹೂತ ಪ್ರಕರಣ ಮತ್ತು ಅದರ ಶೋಧ ವಿಚಾರವೂ ಪ್ರಸ್ತಾಪವಾಗುವ ಸಾಧ್ಯತೆಯಿದೆ. ಜೊತೆಗೆ ಮೇ ತಿಂಗಳಿನಲ್ಲಿ ಮಂಗಳೂರಿನಲ್ಲಿ ನಡೆದ ಕೋಮುದ್ವೇಷದ ಹತ್ಯೆಗಳು, ಬೆಂಗಳೂರಿನಲ್ಲಿ ಬಾಲಕನನ್ನು ಹಣಕ್ಕಾಗಿ ಅಪಹರಿಸಿ ಕೊಂದ ಪ್ರಕರಣ, ಕೊಪ್ಪಳ ಮತ್ತು ಕೊರಟಗೆರೆಯಲ್ಲಿ ನಡೆದ ಕೊಲೆಗಳು- ಮೊದಲಾದವುಗಳು ಪ್ರಸ್ತಾಪವಾಗಲಿದೆ.





