ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್, ರಾಜಕಾರಣಿ ದಿವಂಗತ ಮುಖ್ತಾರ್ ಅನ್ಸಾರಿ ಕಿರಿಯ ಪುತ್ರ ಉಮರ್ ಅನ್ಸಾರಿಯನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ತಂದೆಯ ವಶಪಡಿಸಿಕೊಂಡ ಆಸ್ತಿಗಳನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ಸಲ್ಲಿಸಿದ ಆರೋಪದ ಮೇಲೆ ಉಮರ್ ಅನ್ಸಾರಿ ಬಂಧನ ಮಾಡಲಾಗಿದೆ.
ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿ ಆಸ್ತಿಯನ್ನು ಉತ್ತರ ಪ್ರದೇಶ ದರೋಡೆಕೋರರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಈ ಆಸ್ತಿಯನ್ನು ಅನ್ಸಾರಿ ಪುತ್ರ ಉಮರ್ ಮರಳಿ ಪಡೆಯುವ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇನ್ನು ಅನ್ಸಾರಿ ಈ ವರ್ಷದ ಮಾರ್ಚ್‌ನಲ್ಲಿ ಉತ್ತರ ಪ್ರದೇಶದ ಬಂಡಾದ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇದನ್ನು ಓದಿದ್ದೀರಾ? ಮುಖ್ತಾರ್ ಅನ್ಸಾರಿಗೆ ಜೈಲಿನಲ್ಲಿ ‘ಸ್ಲೋ ಪಾಯ್ಸನ್’ ನೀಡಲಾಗಿದೆ; ಪುತ್ರ ಉಮರ್ ಅನ್ಸಾರಿ ಆರೋಪ
ಉಮರ್ ಅನ್ಸಾರಿ ಅಕ್ರಮವಾಗಿ ಆಸ್ತಿಯನ್ನು ಪಡೆಯುವ ಉದ್ದೇಶ ಹೊಂದಿದ್ದರು. ಹಾಗೆಯೇ ತಮ್ಮ ತಾಯಿ ಅಫ್ಶಾನ್ ಅನ್ಸಾರಿ ಅವರ ನಕಲಿ ಸಹಿಗಳನ್ನು ಹೊಂದಿರುವ ನಕಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಅಫ್ಶಾನ್ ಅನ್ಸಾರಿ ಪ್ರಸ್ತುತ ತಲೆಮರೆಸಿಕೊಂಡಿದ್ದು, ಸುಲಿವು ನೀಡಿದವರಿಗೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿದೆ.
ಉಮರ್ ಅನ್ಸಾರಿ ವಂಚನೆ ಮಾಡುತ್ತಿರುವ ಬಗ್ಗೆ ತಿಳಿದ ಬಳಿಕ ಅನ್ಸಾರಿ ವಿರುದ್ಧ ಮೊಹಮ್ಮದಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) ನ ವಿವಿಧ ವಿಭಾಗಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ. ಸದ್ಯ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.





