ಮುಂಬೈನಲ್ಲಿ ಶನಿವಾರ ನಡೆದ ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಭಾಗಿಯಾಗಿದ್ದರು. ಅವರ ಸಮ್ಮುಖದಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, “ಸಂಘವು ಯಾರನ್ನೂ ವಿರೋಧಿಸುವುದಿಲ್ಲ. ದೇಶಕ್ಕಾಗಿ ಕೆಲಸ ಮಾಡುತ್ತದೆ” ಎಂದು ಹೇಳಿದರು. ಭಾಗವತ್ ಮಾತಿಗೆ ಸನ್ಮಾಲ್ ಖಾನ್ ತಲೆದೂಗಿದರು ಎಂದು ವರದಿಯಾಗಿದೆ.
ಬ್ರಿಟಿಷ್ ಆಡಳಿತದ ಸಮಯದಲ್ಲಿ ಜನರ ಆಕ್ರೋಶವನ್ನು ಬ್ರಿಟಿಷರಿಂದ ಮುಸ್ಲಿಮರ ಎಡೆಗೆ ತಿರುಗಿಸುವ, ಹಿಂದುತ್ವ ಕೋಮುದ್ವೇಷ ಬಿತ್ತಿ ಬ್ರಿಟಿಷರಿಗೆ ನೆರವಾಗಲು ಹುಟ್ಟಿಕೊಂಡದ್ದೇ ಆರ್‌ಎಸ್‌ಎಸ್ ಎಂಬ ಗಂಭೀರ ಆರೋಪಗಳಿವೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಬಹುತ್ವದ ನಾಡಿನಲ್ಲಿ ದ್ವೇಷದ ವಿಷ ಬಿತ್ತಲಾರಂಭಿಸಿದ್ದ ಸಂಘ, ಈಗ ಯಾರನ್ನೂ ವಿರೋಧಿಸುವುದಿಲ್ಲವೆಂದು ಭಾಗವತ್ ಹೇಳಿದ್ದಾರೆ. ಅವರ ಮಾತನ್ನು ಸಲ್ಮಾನ್ ಖಾನ್ ಹರ್ಷಚಿತ್ತದಿಂದ ಕೇಳಿದ್ದಾರೆ.
ಶನಿವಾರದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, “ಸಂಘವು ಅಧಿಕಾರ ಅಥವಾ ಜನಪ್ರಿಯತೆಯನ್ನು ಬಯಸುವುದಿಲ್ಲ. ಒತ್ತಡದ ಗುಂಪಾಗುವ ಗುರಿಯೂ ಇಲ್ಲ. ಆದರೆ, ಸಮಾಜವನ್ನು ಒಗ್ಗೂಡಿಸುವುದು ಸಂಘದ ಉದ್ದೇಶ” ಎಂದು ಹೇಳಿದ್ದಾರೆ.
“ಸಮಾಜವನ್ನು ಏಕೀಕರಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳುವುದಿಲ್ಲವೆಂದು ಆರ್‌ಎಸ್‌ಎಸ್ ಬಹಳ ಹಿಂದೆಯೇ ನಿರ್ಧರಿಸಿದೆ. ಸಂಘದ ಚಟುವಟಿಕೆಗಳನ್ನು ವೀಕ್ಷಿಸಲು ವಿವಿಧ ದೇಶಗಳ ಜನರು ಭಾರತಕ್ಕೆ ಬರುತ್ತಿದ್ದಾರೆ. ಆರ್‌ಎಸ್‌ಎಸ್ ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರು ತಮ್ಮ ಯುವಜನರಿಗಾಗಿ ನಮ್ಮ ಮಾದರಿಯನ್ನು ಜಾರಿಗೆ ತರಲು ಬಯಸುತ್ತಾರೆ” ಎಂದು ಭಾಗವತ್ ಹೇಳಿದ್ದಾರೆ.
“ಸಂಘವು ಯಾರನ್ನೂ ವಿರೋಧಿಸದೆ ಕೆಲಸ ಮಾಡುತ್ತದೆ. ದೇಶದಲ್ಲಿ ನಡೆಯುತ್ತಿರುವ ಎಲ್ಲ ಒಳ್ಳೆಯ ಕೆಲಸಗಳನ್ನು ಸರಿಯಾಗಿ ಮಾಡಬೇಕು. ಸಂಘದ ಸ್ವಯಂಸೇವಕರು ಸರ್ಕಾರದಿಂದ ಯಾವುದೇ ಹಣವನ್ನು ತೆಗೆದುಕೊಳ್ಳದೆ 1.3 ಲಕ್ಷಕ್ಕೂ ಹೆಚ್ಚು ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಸಮಾಜದ ಸಹಕಾರದೊಂದಿಗೆ ತಮ್ಮ ಸ್ವಂತ ಹಣವನ್ನು ಖರ್ಚು ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.





