ಬಿಹಾರ ವಿಧಾನಸಭೆ ಕ್ಷೇತ್ರದ ಮೊಕಾಮಾದಲ್ಲಿ ಜೈಲಿನಲ್ಲಿರುವ ಜೆಡಿಯು ನಾಯಕ, ಕೊಲೆ ಆರೋಪಿ ‘ಬಾಹುಬಲಿ’ ಅನಂತ್ ಕುಮಾರ್ ಸಿಂಗ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅನಂತ್ ಸಿಂಗ್ 91,416 ಮತಗಳನ್ನು ಗಳಿಸಿ, ಆರ್‌ಜೆಡಿಯ ವೀಣಾ ದೇವಿಯನ್ನು(63,210 ಮತಗಳು) 28,206 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.
ಮೊಕಾಮಾದ ರಾಜಕೀಯ ಕ್ಷೇತ್ರದಲ್ಲಿ ತೀವ್ರ ವಿವಾದಾತ್ಮಕ ಅಭ್ಯರ್ಥಿಯಾದ ಅನಂತ್ ಕುಮಾರ್ ಸಿಂಗ್ ಪ್ರಸ್ತುತ ಕೊಲೆ ಆರೋಪಲ್ಲಿ ಜೈಲಿನಲ್ಲಿದ್ದಾರೆ. ಜನ ಸುರಾಜ್ ಬೆಂಬಲಿಗ ದುಲಾರ್‌ಚಂದ್ ಯಾದವ್ ಅವರ ಹತ್ಯೆಗೆ ಸಂಬಂಧಿಸಿದಂತೆ ಚುನಾವಣೆ ನಡೆಯುವುದಕ್ಕೂ ಮುನ್ನವೇ ಪಟನಾ ಪೊಲೀಸರು ಅನಂತ್ ಸಿಂಗ್ ಅನ್ನು ಬಂಧಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ ಚುನಾವಣೆಯಲ್ಲಿ ರಕ್ತಪಾತ: JSP ನಾಯಕ ದುಲಾರ್‌ಚಂದ್ ಹತ್ಯೆ; NDA ಅಭ್ಯರ್ಥಿ ಅನಂತ್ ಸಿಂಗ್ ಕೈವಾಡ?
ಮಣಿಕಾಂತ್ ಠಾಕೂರ್ ಮತ್ತು ರಂಜೀತ್ ರಾಮ್ ಎಂಬ ಇಬ್ಬರು ಸಹಚರರನ್ನೂ ಬಂಧಿಸಲಾಗಿದೆ. ಈಗಾಗಲೇ ಆರೋಪಿಗಳನ್ನು ಪಟನಾದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈ ಬಂಧನವು ಈಗಾಗಲೇ ಮೊಕಾಮಾದಲ್ಲಿ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಮೊಕಾಮಾದಲ್ಲಿ ಜೆಡಿಯು ಹಿನ್ನೆಡೆ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ ಇದೀಗ ಕೊಲೆ ಆರೋಪಿಯೇ ಗೆಲುವು ಸಾಧಿಸಿದ್ದಾರೆ.
ಮೊಕಾಮಾ ಈ ಹಿಂದಿನಿಂದಲೂ ಪ್ರಭಾವಿ ಮತ್ತು ವಿವಾದಾತ್ಮಕ ವ್ಯಕ್ತಿಗಳ ಭದ್ರಕೋಟೆಯಾಗಿಯೇ ಉಳಿದಿದೆ. ಬಿಹಾರದ ರಾಜಕೀಯ ವಲಯಗಳಲ್ಲಿ ‘ಬಾಹುಬಲಿ’ ಎಂದೇ ಕರೆಯಲಾಗುವ ಸಿಂಗ್ ಕೂಡಾ ವಿವಾದದ ಮೂಲಕವೇ ಮೊಕಾಮಾದಲ್ಲಿ ಪ್ರಾಬಲ್ಯ ಹೊಂದಿದ್ದಾರೆ.





