ರೌಡಿಶೀಟರ್ ಬಿಕ್ಲು ಶಿವನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇದೀಗ, ಬಸವರಾಜ್‌ಗೆ ಮತ್ತೆ ಬಂಧನ ಭೀತಿ ಎದುರಾಗಿದ್ದು, ಅವರು ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಒಂದು ತಿಂಗಳ ಹಿಂದೆಯೇ ಬೈರತಿ ಬಸವರಾಜ್ ಅವರ ಬಂಧನಕ್ಕೆ ಸಿಐಡಿ ಅಧಿಕಾರಿಗಳು ಮುಂದಾಗಿದ್ದರು. ತಲೆ ಮರೆಸಿಕೊಂಡಿದ್ದ ಬಸವರಾಜ್ ವಿರುದ್ಧ ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಿದ್ದರು. ಅವರಿಗೆ ಜಾಮೀನು ನೀಡಲು ಸೆಷನ್ಸ್ ನ್ಯಾಯಾಲಯ ಕೂಡ ನಿರಾಕರಿಸಿತ್ತು. ಬಳಿಕ ಅವರು ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ, ಹೈಕೋರ್ಟ್ ಕೂಡ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಪೀಠವು ಬಸವರಾಜ್ ಅವರ ಅರ್ಜಿಯನ್ನು ವಜಾಗೊಳಿಸಿದೆ. ಇದೀಗ, ಬೈರತಿ ಬಸವರಾಜ್ ಬಂಧನಕ್ಕೆ ಪೊಲೀಸರು ಸಿದ್ದತೆ ನಡೆಸಿದ್ದಾರೆ. ಆದರೆ, ಬಸವರಾಜ್ ಅವರು ಸೋಮವಾರ ರಾತ್ರಿಯಿಂದಲೇ ತಲೆ ಮರೆಸಿಕೊಂಡಿದ್ದು, ಅವರ ಮೊಬೈಲ್ ಕೂಡ ಸ್ವಿಚ್‌ಆಫ್ ಆಗಿದೆ ಎಂದು ತಿಳಿದುಬಂದಿದೆ.
ಸದ್ಯ, ಅವರು ವಿದೇಶಕ್ಕೆ ಪರಾರಿಯಾಗುವ ಶಂಕೆ ಹಿನ್ನೆಲೆಯಲ್ಲಿ ಅವರು ವಿರುದ್ಧ ‘ಲುಕ್‌ಔಟ್’ ನೋಟಿಸ್ ಜಾರಿಯಲ್ಲಿದೆ. ರಾಜ್ಯದ ಸಿಐಡಿ ಪೊಲೀಸರು ಹೊರರಾಜ್ಯಗಳ ಪೊಲೀಸರ ಜತೆಗೂ ಸಂಪರ್ಕ ಸಾಧಿಸಿದ್ದಾರೆ. ಅವರ ಬಂಧಕ್ಕಾಗಿ ತಂಡಗಳನ್ನು ರಚಿಸಲಾಗಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ಶಾಸಕರನ್ನು ಬಂಧಿಸುವ ಸಾಧ್ಯತೆ ಇದೆ.
ಕಳೆದ ವರ್ಷ ಜುಲೈ 15ರಂದು ಹಲಸೂರಿನಲ್ಲಿ ನಡೆದ ರೌಡಿ ಬಿಕ್ಲುಶಿವನ ಕೊಲೆ ಪ್ರಕರಣದ ಪ್ರಮುಖ ಆರೋಪಿ ರೌಡಿ ಜಗದೀಶ್ ಅಲಿಯಾಸ್ ಜಗ್ಗನೊಂದಿಗೆ ಶಾಸಕ ಬಸವರಾಜ್‌ಗೆ ನೇರ ಸಂಪರ್ಕವಿದೆ. ಬಿಕ್ಲು ಶಿವನ ಹತ್ಯೆಗೂ ಮುನ್ನ ಹತ್ತಾರು ಬಾರಿ ಭೇಟಿ ಮಾಡಿದ್ದಾರೆ. ಶಾಸಕರ ವಿರುದ್ಧ ಕೆಲವು ಪ್ರಮುಖ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು, ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕಿದೆ ಎಂದು ಸಿಐಡಿ ಮೂಲಗಳು ಹೇಳಿವೆ.





