‘500 ಕೋಟಿ ರೂ.ಗಳ ಸೂಟ್ ಕೇಸ್ ಕೊಡುವ ವ್ಯಕ್ತಿ ಮುಖ್ಯಮಂತ್ರಿ ಆಗುತ್ತಾರೆ’ ಎಂದು ಹೇಳಿಕೆ ನೀಡಿ, ಕಾಂಗ್ರೆಸ್‌ನಲ್ಲಿ ವಿವಾದ ಸೃಷ್ಟಿಸಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಂಧು ಅವರ ಪತ್ನಿ ನವಜೋತ್ ಕೌರ್ ಅವರನ್ನು ಕಾಂಗ್ರೆಸ್‌ನಿಂದ ಹೊರಹಾಕಲಾಗಿದೆ. ಪಕ್ಷವನ್ನು ಅವರನ್ನು ಅಮಾನತುಗೊಳಿಸಿದೆ.
ಮಾಜಿ ಶಾಸಕಿ ಕೌರ್ ಅವರು ಇತ್ತೀಚೆಗೆ, ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ, ‘ನವಜೋತ್ ಸಿಂಗ್ ಸಿಧು ಅವರು ಸಕ್ರಿಯ ರಾಜಕಾರಣಕ್ಕೆ ಯಾಕೆ ಮರಳಿ ಬಂದಿಲ್ಲ’ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಕೌರ್, “ಮುಂದಿನ ಪಂಜಾಜ್ ಚುನಾವಣೆಯಲ್ಲಿ (2027) ನನ್ನ ಪತಿಯನ್ನು ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ ಮಾತ್ರವೇ, ಅವರು ರಾಜಕಾರಣಕ್ಕೆ ಮರಳುತ್ತಾರೆ” ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ, ಮುಖ್ಯಮಂತ್ರಿ ಹುದ್ದೆಯನ್ನು ಖರೀದಿಸಲು ನಮ್ಮಲ್ಲಿ 500 ಕೋಟಿ ರೂ. ಹಣವಿಲ್ಲ ಎಂದೂ ಹೇಳಿದ್ದರು.
ಅವರ ಈ ಹೇಳಕೆಯು ಕಾಂಗ್ರೆಸ್ ವಿರುದ್ಧ ನೇರ ಆರೋಪವೆಂದು ಹೇಳಲಾಗಿತ್ತು. ಇದು ಕಾಂಗ್ರೆಸ್‌ಅನ್ನು ಮುಜುಗರಕ್ಕೆ ಈಡುಮಾಡಿತ್ತು. ಮಾತ್ರವಲ್ಲದೆ, ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತು ಎಎಪಿ ವಾಗ್ದಾಳಿ ನಡೆಸಲು ಅಸ್ತ್ರವಾಗಿ ದೊರೆತಿತ್ತು.
ಇನ್ನು, ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿರುವ ಕೌರ್, “ನನ್ನ ಅನಿಸಿಕೆಗಳಿಗೆ ಹೊಸ ತಿರುವು ನೀಡಲಾಗಿದೆ. ನಮ್ಮಿಂದ ಕಾಂಗ್ರೆಸ್ ಪಕ್ಷ ಈವರೆಗೆ ಏನನ್ನೂ ಕೇಳಿಲ್ಲ. ನನ್ನ ಪತಿ ನವಜೋತ್ ಸಿಂಗ್ ಅವರು ಯಾವುದೇ ಪಕ್ಷದಿಂದ ಮುಖ್ಯಮಂತ್ರಿಯಾಗಬಲ್ಲರೇ ಎಂಬ ಪ್ರಶ್ನೆಗೆ ಉತ್ತರಿಸುವಾಗ, ಮುಖ್ಯಮಂತ್ರಿ ಹುದ್ದೆಯನ್ನು ಪಡೆಯಲು ನಮ್ಮ ಬಳಿ ಹಣವಿಲ್ಲ ಎಂದಿದ್ದೆ. ನನ್ನ ಹೇಳಿಕೆಗೆ ನಾನಾ ಆಯಾಮಗಳನ್ನು ನೀಡಲಾಗಿದೆ. ಅದನ್ನು ನೋಡಿ ನಾನು ಆಘಾತಗೊಂಡಿದ್ದೇನೆ” ಎಂದು ಹೇಳಿದ್ದಾರೆ.
ಅವರ ಹೇಳಿಕೆ ವ್ಯಾಪಕ ಚರ್ಚೆಗೆ ಗುರಿಯಾದ ಬೆನ್ನಲ್ಲೇ, ಸಿಧು ದಂಪತಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ, ಕೌರ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.




