“ಕೇಂದ್ರದಲ್ಲಿ ಎನ್‌ಡಿಎ ಸರ್ಕಾರವು ತಪ್ಪಿ ರಚನೆಯಾಗಿದ್ದು ಯಾವಾಗ ಬೇಕಾದರೂ ಬೀಳಬಹುದು” ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇತ್ತೀಚೆಗೆ ಲೋಕಸಭೆ ಚುನಾವಣೆಯು ಕೊನೆಯಾಗಿದ್ದು ಬಿಜೆಪಿ ಒಟ್ಟು 240 ಸ್ಥಾನಗಳನ್ನು ಗಳಿಸಿದೆ. ಬಹುಮತ 272 ಆಗಿದ್ದು ಅದಕ್ಕಿಂತ ಕಡಿಮೆ ಸ್ಥಾನವನ್ನು ಬಿಜೆಪಿ ಪಡೆದಿದೆ. ಮಿತ್ರ ಪಕ್ಷಗಳ ಮೇಲೆ ಅವಲಂಬಿಸಿ ಸರ್ಕಾರ ರಚಿಸಿಕೊಂಡಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ, “ತಪ್ಪಿ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಮೋದಿ ಅವರಿಗೆ ಜನಾದೇಶವಿಲ್ಲ. ಇದು ಅಲ್ಪಸಂಖ್ಯಾತ ಸರ್ಕಾರ. ಈ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು” ಎಂದು ಲೇವಡಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಎನ್‌ಡಿಎ ಸರ್ಕಾರ ಐದು ವರ್ಷ ಉಳಿಯಲ್ಲ: ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್
“ಈ ಸರ್ಕಾರ ಮುಂದುವರಿಯಲು ನಾವು ಬಯಸುತ್ತೇವೆ. ದೇಶಕ್ಕೆ ಒಳ್ಳೆಯದಾಗಲಿ. ನಾವು ಒಟ್ಟಾಗಿ ದೇಶವನ್ನು ಬಲಗೊಳಿಸಲು ಶ್ರಮಿಸಬೇಕು. ಆದರೆ ನಮ್ಮ ಪ್ರಧಾನಿ ಯಾವುದೂ ಕೂಡಾ ಸರಿಯಾಗಿ ನಡೆಯಲು ಬಿಡಲ್ಲ. ನಾವು ಮಾತ್ರ ದೇಶವನ್ನು ಬಲಪಡಿಸಲು ಸಹಕರಿಸುತ್ತೇವೆ” ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
NDA government has been formed by mistake.
Modi ji doesn’t have the mandate.
It’s a minority government.
This government can fall anytime…– Congress President Thiru @kharge pic.twitter.com/7qd1dxx04e
— Tamil Nadu Congress Committee (@INCTamilNadu) June 14, 2024
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಹೊಸ ಸಂಪುಟದ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ ಇಂಡಿಯಾ ಒಕ್ಕೂಟದ ಏಕೈಕ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಆಗಿದ್ದರು. ಇದು “ಸಾಂವಿಧಾನಿಕ ಕರ್ತವ್ಯ” ಎಂದು ಖರ್ಗೆ ಹೇಳಿದ್ದಾರೆ.
“ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ನನ್ನ ಸಾಂವಿಧಾನಿಕ ಕರ್ತವ್ಯ ಇದಾಗಿರುವುದರಿಂದ ನಾನು ಈ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದೇನೆ” ಎಂದು ಖರ್ಗೆ ಸುದ್ದಿಗಾರರಿಗೆ ತಿಳಿಸಿದ್ದರು. ಹಾಗೆಯೇ ಮೋದಿ ಅವರನ್ನು ಅಭಿನಂದಿಸುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾನು ಭೇಟಿಯಾದರೆ ನೋಡುತ್ತೇನೆ” ಎಂದಿದ್ದರು.





