ಲೋಕಸಭಾ ಚುನಾವಣೆಯ ಸಮಯದಲ್ಲಿ ಅಲ್ಲಿಲ್ಲಿ ಕಾಣಸಿಕ್ಕರೂ, ಫಲಿತಾಂಶದ ಬಳಿಕ ಕಾಣೆಯಾಗಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ, ಈಗ ಮತ್ತೆ ಕಾಣಿಸಿಕೊಂಡಿದ್ದಾರೆ. ಪಕ್ಷಭೇದ ಮರೆತು ಎಲ್ಲ ಪಕ್ಷಗಳ ವಿರುದ್ಧ ಗುಟುರು ಹಾಕುತ್ತಿದ್ದಾರೆ. ರಾಜಕೀಯದಲ್ಲಿ ನೆಲೆ ಕಳೆದುಕೊಂಡು, ನಿರುದ್ಯೋಗಿಯಾಗಿರುವ ಪ್ರತಾಪ್ ಸಿಂಹಗೆ ಈಗ ಎಲ್ಲ ಪಕ್ಷದವರೂ ವಿರೋಧಿಗಳಂತೆಯೇ ಕಾಣುತ್ತಿದ್ದಾರೆ. ಎಲ್ಲ ಪಕ್ಷಗಳ ಪ್ರಮುಖ ನಾಯಕರ ವಿರುದ್ಧ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪತ್ರಕರ್ತನಾಗಿ ಪ್ರವರ್ಧಮಾನಕ್ಕೆ ಬಂದ ಪ್ರತಾಪ್ ಸಿಂಹ, ವಿಶ್ವೇಶ್ವರ ಭಟ್ಟರ ಕೃಪಾಕಟಾಕ್ಷದಿಂದ ಬಿಜೆಪಿ ಸೇರಿ, ಟಿಕೆಟ್ ಗಿಟ್ಟಿಸಿಕೊಂಡು ಗೌಡರ ಬೆಂಬಲದಲ್ಲಿ, ಮೋದಿ ಅಲೆಯಲ್ಲಿ ಎರಡು ಬಾರಿ ಸಂಸದರಾಗಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನಿರಾಕರಿಸಿ ಮೂಲೆಗೆ ದೂಡಿದೆ. ಹನುಮ ಜಯಂತಿ ಮಾಡಿಕೊಂಡು, ಮಹಿಷ ದಸರಾಗೆ ವಿರೋಧ ಮಾಡಿಕೊಂಡು ಹಿಂದುತ್ವವನ್ನು ತಲೆಗೇರಿಸಿಕೊಂಡು ಮೋದಿ ಅಮಲಿನಲ್ಲಿ ಅಲೆದಾಡುತ್ತಿದ್ದ ಪ್ರತಾಪ್ ಸಿಂಹ ಈಗ ಮಾಜಿ ಸಂಸದ.
ಈಗ ಪ್ರತಾಪ್ ಸಿಂಹಗೆ ಅತ್ತ ಪತ್ರಿಕಾ ವೃತ್ತಿಯೂ ಇಲ್ಲ. ಇತ್ತ ರಾಜಕೀಯ ವೃತ್ತಿಯೂ ಇಲ್ಲ. ಹೇಳಿ-ಕೇಳಿ ಪ್ರತಾಪ್ ಸಿಂಹ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಬಹುದಾದ, ಪ್ರಭಾವ ಬೀರಬಹುದಾದ, ಏಕಾಂಗಿಯಾಗಿ ತನ್ನದೇ ಛಾಪು ಮೂಡಿಸಬಹುದಾದ ನಾಯಕನೂ ಅಲ್ಲ. ಪೊರೆಯುವ ಗಾಡ್‌ಫಾದರ್‍ಗಳೂ ಇಲ್ಲ. ಅಂತಹ ವರ್ಚಸ್ಸೂ ಪ್ರತಾಪ್ ಸಿಂಹಗೆ ಇಲ್ಲ. ಹೀಗಾಗಿ, ಪ್ರತಾಪ್ ಸಿಂಹ ರಾಜಕೀಯ ಭವಿಷ್ಯ ಬಹುತೇಕ ಅಂತ್ಯವಾಗಿದೆ ಎಂದೇ ಹೇಳಲಾಗುತ್ತಿದೆ. ಪ್ರತಾಪ್ ಸಿಂಹ ಈಗ ಮಾಜಿ ಪತ್ರಕರ್ತ ಮತ್ತು ಮಾಜಿ ರಾಜಕಾರಣಿ ಎಂಬುದು ಭಾಗಶಃ ಖಚಿತವಾಗಿದೆ.
ರಾಜಕೀಯ ನೆಲೆ ಕಳೆದುಕೊಳ್ಳುತ್ತಿರುವ ಪ್ರತಾಪ್ ಸಿಂಹ, ತಮ್ಮ ರಾಜಕೀಯ ಅವನತಿಗೆ ನೆಪೋಟಿಸಂ (ಕುಟುಂಬ ರಾಜಕಾರಣ), ಅರ್ಥಾತ್ ರಾಜ್ಯ ನಾಯಕರ ಪುತ್ರ ವಾತ್ಸಲ್ಯವೇ ಕಾರಣವೆಂದು ಭಾವಿಸಿದ್ದಾರೆ. ಹೀಗಾಗಿಯೇ, ಪಕ್ಷಾತೀತವಾಗಿ ಎಲ್ಲ ಪಕ್ಷಗಳ ನಾಯಕರ ವಿರುದ್ಧ ವೇದಿಕೆಗಳಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ ಹೊಂದಾಣಿಕೆ ರಾಜಕಾರಣ ಮತ್ತು ನೆಪೋಟಿಸಂ ಹೆಚ್ಚಾಗಿದೆ. ಈ ನೆಪೋಟಿಸಂ ಮತ್ತು ಹೊಂದಾಣಿಕೆ ರಾಜಕಾರಣವನ್ನು ಬಿಚ್ಚಿಡ ಹೊರಟರೆ ಬಿಜೆಪಿಯನ್ನೇ ಮೊದಲು ತೊಳೆಯುತ್ತೇನೆ ಎಂದು ಹೇಳುತ್ತಿದ್ದಾರೆ.
ಇತ್ತೀಚೆಗೆ, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತಾಡಿದ ಪ್ರತಾಪ್ ಸಿಂಹ, ”ಸಿದ್ದರಾಮಯ್ಯ, ಯಡಿಯೂರಪ್ಪ, ಖರ್ಗೆ, ಕುಮಾರಣ್ಣ ಎಲ್ಲರಿಗೂ ತಮ್ಮ ಮಕ್ಕಳ ಬಗ್ಗೆಯೇ ಚಿಂತಿಸಿದರೆ, ಕಂಡವರ ಮಕ್ಕಳನ್ನು ಬೆಳೆಸುವವರಾರು? ಸಿದ್ದರಾಮಯ್ಯ, ಹೆಚ್.ಡಿ ದೇವೇಗೌಡರು, ಹೆಚ್.ಸಿ ಮಹದೇವಪ್ಪ, ಯಡಿಯೂರಪ್ಪ ನೆಲದಿಂದ ಬೆಳೆದು ಬಂದವರು. ಹಾಗಾಗಿಯೇ ಅವರು ನಾಯಕರಾದರು. ಆದರೆ, ಅವರು ಮುಂದಿನ ಪೀಳಿಗೆಗೆ ಏನು ಕೊಟ್ಟರು. ಕಂಡವರ ಮಕ್ಕಳನ್ನು ಬೆಳೆಸಿದ ದೇವರಾಜ್ ಅರಸ್ ದೇವರಾದರು. ಈಗಿನ ನಾಯಕರು ತಮ್ಮ ಮಕ್ಕಳ ಬಗ್ಗೆ ಚಿಂತೆ ಮಾಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ಪ್ರತಾಪ್ ಸಿಂಹರ ಈ ಆಕ್ರೋಶ, ಅಸಮಾಧಾನ, ಬೇಸರ, ನೋವು, ಹತಾಶೆಯಲ್ಲಿ ನ್ಯಾಯವಿದೆ. ಇದು, ಕಾರ್ಪೊರೇಟ್ ವ್ಯವಸ್ಥೆಯಲ್ಲಿ ‘ಶ್ರೀಮಂತರು ಮತ್ತುಷ್ಟು ಶ್ರೀಮಂತರಾಗುತ್ತಾರೆ – ಬಡವರು ಮತ್ತಷ್ಟು ಬಡವರಾಗುತ್ತಾರೆ’ ಎಂಬಂತೆ, ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುತ್ತಾರೆ. ಕಾರ್ಯಕರ್ತರು, ಅವರ ಮಕ್ಕಳು ಕಾಲಾಳುಗಳಾಗಿಯೇ ಇರುತ್ತಾರೆ ಎಂಬುದನ್ನು ಪ್ರತಿಧ್ವನಿಸುತ್ತದೆ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎನ್ನದೆ ಎಲ್ಲ ಪಕ್ಷಗಳ ನಾಯಕರು ತಮ್ಮ ಮಕ್ಕಳ ಭವಿಷ್ಯಕ್ಕೆ ಒತ್ತುಕೊಡುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ತಮ್ಮ ಮಕ್ಕಳು ಮುಖ್ಯಮಂತ್ರಿಯಾಗಬೇಕು, ಸಚಿವರಾಗಬೇಕು, ಮೊಮ್ಮಕ್ಕಳು, ಸೊಸೆಯಂದಿರು ಶಾಸಕ, ಸಂಸದರಾಗಬೇಕು ಎಂಬುದೇ ಧಾವಂತ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ತಮ್ಮ ಇಬ್ಬರು ಮಕ್ಕಳೇ ಬಿಜೆಪಿ ರಾಜಕೀಯದಲ್ಲಿ ಮುಂಚೂಣಿಯಲ್ಲಿರಬೇಕು ಎಂಬ ಹೆಬ್ಬಯಕೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ತಮ್ಮ ಮಕ್ಕಳ ರಾಜಕೀಯ ಭವಿಷ್ಯ ಮುಖ್ಯವಾಗಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಮೂವರು ಮಕ್ಕಳು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಸಹೋದರರು ತಮ್ಮದೇ ಹಿಡಿತಕ್ಕಾಗಿ ಹೆಣಗಾಡುತ್ತಿದ್ದಾರೆ.
ಹೀಗೆ, ಎಲ್ಲ ಪಕ್ಷಗಳಲ್ಲಿಯೂ ತಮ್ಮ ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿಯೇ ರಾಜ್ಯದ ಪ್ರಭಾವಿ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಂತೂ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಎಚ್.ಸಿ ಮಹದೇವಪ್ಪ, ಶಿವಾನಂದ ಪಾಟೀಲ್ ಆದಿಯಾಗಿ ಪ್ರಮುಖ ಸಚಿವರೆಲ್ಲರೂ ತಮ್ಮ ಮಕ್ಕಳಿಗೆ ಟಿಕೆಟ್ ಪಡೆದು, ರಾಜಕೀಯಕ್ಕಿಳಿಸಿದರು.
ಇದೆಲ್ಲವೂ, ಸಹಜವಾಗಿಯೇ ಕುಟುಂಬ ರಾಜಕಾರಣದಿಂದ ಹೊರಗುಳಿದು, ರಾಜಕೀಯ ನೆಲೆ ಕಾಣಲು ಪ್ರಯತ್ನಿಸುತ್ತಿರುವವರಿಗೆ ಅಸಮಾಧಾನವನ್ನು ತರಿಸುತ್ತದೆ. ಈಗ, ರಾಜಕೀಯ ನೆಲೆ ಇರಲಿ, ಭವಿಷ್ಯದ ಬಗೆಗೆ ಖಾತ್ರಿಯೇ ಇಲ್ಲದ ಪ್ರತಾಪ್ ಸಿಂಹ ಅತಂತ್ರರಾಗಿದ್ದಾರೆ. ತಮ್ಮ ರಾಜಕೀಯ ಜೀವನ ಅಂತ್ಯವಾಯಿತು ಎಂಬ ಹತಾಶೆಯಲ್ಲಿದ್ದಾರೆ. ಅವರು ಈಗ ನೆಪೋಟಿಸಂ ಬಗ್ಗೆ ಮಾತನಾಡುತ್ತಿದ್ದಾರೆ. ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದಾರೆ.
ಈ ವರದಿ ಓದಿದ್ದೀರಾ?: ಕಾವಡ್ ಯಾತ್ರೆ | ಆಹಾರದಲ್ಲಿ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ
ಅದಾಗ್ಯೂ, ಕುಟುಂಬ ರಾಜಕಾರಣಕ್ಕೆ ರಾಜ್ಯದಲ್ಲಿ ಎಲ್ಲ ಕಾಲದಲ್ಲೂ ಜನರು ಮಣೆ ಹಾಕುವುದಿಲ್ಲ ಎಂಬುದನ್ನೂ ಇತ್ತೀಚಿನ ಚುನಾವಣೆಗಳೇ ಸೂಚಿಸುತ್ತಿವೆ. ಸಚಿವರಾಗಿಯೂ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಶಿವಾನಂದ ಪಾಟೀಲ್ ತಮ್ಮ ಮಕ್ಕಳನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ ಶಿವಕುಮಾರ್ ಅವರ ಸಹೋದರ ಡಿ.ಕೆ ಸುರೇಶ್ ಸೋಲುಂಡರು. ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನು ರಾಜಕೀಯದಲ್ಲಿ ಬೆಳೆಸಲೇಬೇಕೆಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹವಣಿಸುತ್ತಲೇ ಇದ್ದಾರೆ. ಆದರೂ, ಅವರೇ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿಯೂ ಮಂಡ್ಯದಲ್ಲಿ ನಿಖಿಲ್ ಸೋತರು, ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಕ್ಷೇತ್ರವನ್ನು ಬಿಟ್ಟುಕೊಟ್ಟರೂ ನಿಖಿಲ್‌ನನ್ನು ಗೆಲ್ಲಿಸಿಕೊಳ್ಳಲು ಕುಮಾರಸ್ವಾಮಿ ಅವರಿಗೆ ಸಾಧ್ಯವಾಗಲಿಲ್ಲ.
ರಾಜ್ಯದ ರಾಜಕೀಯವನ್ನು ಐದಾರು ಕುಟುಂಬಗಳು ಮಾತ್ರವೇ ನಿಯಂತ್ರಿಸುತ್ತಿವೆ ಎಂಬುದು ಸತ್ಯವೇ ಆಗಿದ್ದರೂ, ರಾಜ್ಯದ ಜನರು ಆ ಐದಾರು ಕುಟುಂಬಗಳ ಅಧೀನದಲ್ಲಿವೆ ಎನ್ನಲಾಗದು. ಜಾತಿ-ಧರ್ಮಗಳ ಆಧಾರದ ಮೇಲೆ ಜನರು ಮತ ಚಲಾಯಿಸಿದರೂ, ಕುಟುಂಬ ರಾಜಕಾರಣಕ್ಕೆ ಆಗಾಗ್ಗೆ ಪೆಟ್ಟುಕೊಡುತ್ತಲೇ ಇದ್ದಾರೆ. ಹೀಗಾಗಿ, ರಾಜಕೀಯವಾಗಿ ತನ್ನದೇ ವರ್ಚಸ್ಸು ಬೆಳೆಸಿಕೊಳ್ಳುವ ನಾಯಕನೂ ರಾಜಕೀಯದಲ್ಲಿ ಮುಂದುವರೆಯಬಲ್ಲ. ಇದನ್ನು ಸಿದ್ದರಾಮಯ್ಯ, ಖರ್ಗೆಯಂತವರು ಸಾಬೀತು ಮಾಡಿದ್ದಾರೆ. ಪ್ರತಾಪ್ ಸಿಂಹ ಅಂತಹ ಪ್ರಭಾವ ಬೆಳೆಸಿಕೊಳ್ಳುವಲ್ಲಿ ವಿಫರಾಗಿದ್ದಾರೆ, ಮೋದಿ ಭಜನೆಯೇ ರಾಜಕೀಯವೆಂದು ಭಾವಿಸಿ, ಎಡವಿದ್ದಾರೆ. ರಾಜಕೀಯದಲ್ಲಿ ಸದ್ಯಕ್ಕೆ ಕುಟುಂಬ ರಾಜಕಾರಣ ಮೇಲುಗೈ ಸಾಧಿಸಿದ್ದರೂ, ಅದೇ ಶಾಶ್ವತವಲ್ಲ ಎಂಬುದು ಸ್ಪಷ್ಟ.




