ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಎಲ್‌ಡಿಎಫ್ ತನ್ನ ಸತತ ಮೂರನೇ ಸರ್ಕಾರವನ್ನು ರಚಿಸಲಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದು, “ಚುನಾವಣೆಯ ಬಳಿಕ ಹೊಸ ಮುಖ್ಯಮಂತ್ರಿಯನ್ನು ನಿರ್ಧರಿಸಲಾಗುವುದು” ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಗೆದ್ದರೆ ಪಿಣರಾಯಿ ವಿಜಯನ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ ಬಿನೋಯ್ ವಿಶ್ವಂ ಚುನಾವಣೆ ಬಳಿಕ ನಿರ್ಧಾರ ಎಂದಿದ್ದಾರೆ. “ಎಲ್‌ಡಿಎಫ್ ಬಹುಮತವನ್ನು ಪಡೆಯುತ್ತದೆ. ಎಲ್‌ಡಿಎಫ್‌ನ ಎಲ್ಲಾ ಪಕ್ಷಗಳು ಸಿಎಂ ಬಗ್ಗೆ ಚರ್ಚಿಸುತ್ತವೆ. ಇಲ್ಲಿ ಸಿಪಿಐಎಂ ಪ್ರಮುಖ ಪಕ್ಷವಾಗಿದೆ ಮತ್ತು ಆದ್ದರಿಂದ ಅವರು ನಿರ್ಧರಿಸುತ್ತಾರೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕೇರಳ ಸಿಎಂ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಕ್ಷಮೆಯಾಚಿಸಿದ ಶಾಸಕ ಪಿವಿ ಅನ್ವರ್
ಇದೇ ಸಂದರ್ಭದಲ್ಲಿ ಕಳೆದ 10 ವರ್ಷಗಳಿಂದ ರಾಜ್ಯವನ್ನು ಆಳುತ್ತಿರುವ ಎಲ್‌ಡಿಎಫ್ ಸರ್ಕಾರದ ಮುಖ್ಯಸ್ಥರಾಗಿರುವ ಸಿಎಂ ವಿಜಯನ್ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದೂ ಎಡಪಕ್ಷದ ನಾಯಕರು ಹೇಳಿದ್ದಾರೆ. “ಅವರು ಅಳವಡಿಸಿಕೊಂಡಿರುವ ನಿಲುವುಗಳು ಮತ್ತು ನೀತಿಗಳು ಖಂಡಿತವಾಗಿಯೂ ಮಹತ್ವದ್ದಾಗಿವೆ” ಎಂದು ಅಭಿಪ್ರಾಯಿಸಿದ್ದಾರೆ.
ಕೇರಳದ 140 ವಿಧಾನಸಭೆ ಕ್ಷೇತ್ರಗಳ ಚುನಾವಣೆಯು 2026ರಲ್ಲಿಯೇ ನಡೆಯಲಿದೆ. ಪ್ರಸ್ತುತ ವಿಧಾನಸಭೆಯ ಅವಧಿಯು ಮೇ 23ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮೊದಲು ಚುನಾವಣೆ ನಡೆಯಬೇಕಿದೆ. ಚುನಾವಣಾ ಆಯೋಗವು ಅಧಿಕೃತ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. ಆದರೆ ಏಪ್ರಿಲ್ ಅಥವಾ ಮೇ ತಿಂಗಳಲ್ಲೇ ನಡೆಯುವ ಸಾಧ್ಯತೆಯಿದೆ.





