ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ: ನಿತೀಶ್ ಕುಮಾರ್ ವಿಚಿತ್ರ ವರ್ತನೆ ಇದೇ ಮೊದಲಲ್ಲ!

Date:

ವಿಪಕ್ಷಗಳು ಹೇಳುವಂತೆ ಬಿಹಾರ ಸಿಎಂ ನಿತೀಶ್ ಕುಮಾರ್ ಸಾರ್ವಜನಿಕವಾಗಿ ವಿಚಿತ್ರವಾಗಿ ವರ್ತಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಬಿಜೆಪಿ ನಾಯಕರ ಕಾಲಿಗೆ ನಮಸ್ಕರಿಸಿದ್ದು, ದೀರ್ಘಕಾಲ 'ನಮಸ್ತೆ' ಭಂಗಿಯಲ್ಲೇ ಇದ್ದದ್ದು, ಅಧಿಕಾರಿಯ ತಲೆಯ ಮೇಲೆ ಗಿಡ ಇಟ್ಟದ್ದು -ಹೀಗೆ ಹಲವು ಘಟನೆಗಳು ನಡೆದಿವೆ. ಇವೆಲ್ಲವೂ ನಿತೀಶ್ ಮಾನಸಿಕ ಆರೋಗ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿಸಿವೆ. 

ಇತ್ತೀಚೆಗೆ ಪಟನಾದಲ್ಲಿ ನಡೆದ ನೇಮಕಾತಿ ಪತ್ರ ವಿತರಣಾ ಸಮಾರಂಭದಲ್ಲಿ, ವೇದಿಕೆಯ ಮೇಲೆ ವೈದ್ಯೆಯೊಬ್ಬರ ಹಿಜಾಬ್ ಅನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಳೆದಿದ್ದಾರೆ. ಸದ್ಯ, ನಿತೀಶ್‌ರ ಈ ನಡವಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ. ಜತೆಗೆ ನಿತೀಶ್ ಕುಮಾರ್ ಮಾನಸಿಕ ಆರೋಗ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಯಾಕೆಂದರೆ ನಿತೀಶ್‌ ಕುಮಾರ್‌ ವಿಚಿತ್ರ ವರ್ತನೆ ಇದೇ ಮೊದಲಲ್ಲ. ಈ ವರ್ಷದಲ್ಲೇ ಹಲವು ಬಾರಿ ನಿತೀಶ್ ಸಾರ್ವಜನಿಕ ನಡವಳಿಕೆ ಹದಗೆಡುತ್ತಾ ಸಾಗುತ್ತಿದೆ.

ಪಟನಾಟದಲ್ಲಿ ನಡೆದ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರ ಸ್ವೀಕರಿಸಲು ಬಂದ ನುಸ್ರತ್ ಪರ್ವೀನ್ ಎಂಬ ವೈದ್ಯೆಯ ಹಿಜಾಬ್‌ನತ್ತ ನಿತೀಶ್ ಸನ್ನೆ ಮಾಡುವುದು, ‘ಇದೇನು’ ಎಂದು ಕೇಳುವುದು ವಿಡಿಯೋದಲ್ಲಿ ಕಂಡುಬಂದಿದೆ. ಅದಾದ ಬಳಿಕ ಹಿಜಾಬ್ ತೆಗೆಯುವಂತೆ ಸೂಚಿಸುತ್ತಾ ಹಿಜಾಬ್ ಎಳೆದಿದ್ದಾರೆ. ಕೂಡಲೇ ಅಧಿಕಾರಿಯೊಬ್ಬರು ಆ ಮಹಿಳೆಯನ್ನು ಪಕ್ಕಕ್ಕೆ ಕರೆದೊಯ್ಯಲು ಯತ್ನಿಸಿದ್ದು, ಪಕ್ಕದಲ್ಲಿದ್ದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಸಿಎಂ ನಿತೀಶ್ ಅವರನ್ನು ತಡೆಯಲು ಮುಂದಾಗಿರುವ ದೃಶ್ಯವೂ ವಿಡಿಯೋದಲ್ಲಿದೆ.

ಇದನ್ನು ಓದಿದ್ದೀರಾ? ನಿತೀಶ್ ಕುಮಾರ್ ಪ್ರಾಮಾಣಿಕರಾಗಿರಬಹುದು, ಆದರೆ ಸಚಿವರು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ: ಪ್ರಶಾಂತ್ ಕಿಶೋರ್

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಘಟನೆ ಬಳಿಕ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ನಿತೀಶ್ ವರ್ತನೆ ದಿನೇ ದಿನೇ ಹದಗೆಡುತ್ತಿದೆ ಎಂದು ಹೇಳಿವೆ. ವಿಪಕ್ಷಗಳು ಹೇಳುವಂತೆ ನಿತೀಶ್ ಕುಮಾರ್ ಸಾರ್ವಜನಿಕವಾಗಿ ವಿಚಿತ್ರವಾಗಿ ವರ್ತಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಬಿಜೆಪಿ ನಾಯಕರ ಕಾಲಿಗೆ ನಮಸ್ಕರಿಸಿದ್ದು, ದೀರ್ಘಕಾಲ ‘ನಮಸ್ತೆ’ ಭಂಗಿಯಲ್ಲೇ ಇದ್ದದ್ದು, ಅಧಿಕಾರಿಯ ತಲೆಯ ಮೇಲೆ ಗಿಡ ಇಟ್ಟದ್ದು ಹೀಗೆ ಹಲವು ಘಟನೆಗಳು ನಡೆದಿವೆ. ಇದೇ ವಿಚಾರವನ್ನು ಮುಂದಿಟ್ಟು ನಿತೀಶ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಆಗ್ರಹಗಳೂ ಕೇಳಿಬಂದಿದೆ.

ಹುತಾತ್ಮರ ದಿನದಂದು ಚಪ್ಪಾಳೆ ತಟ್ಟಿದ ನಿತೀಶ್

ಇದೇ ವರ್ಷದ ಜನವರಿ 30ರಂದು ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ (ಹುತಾತ್ಮರ ದಿನ) ಅಂಗವಾಗಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ನಿತೀಶ್ ಕುಮಾರ್ ಇದ್ದಕ್ಕಿದ್ದಂತೆ ಚಪ್ಪಾಳೆ ತಟ್ಟಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಪುಷ್ಪನಮನ ಸಲ್ಲಿಸಿದ ನಂತರ ಎಲ್ಲರೂ ಗಂಭೀರವಾಗಿ ಮೌನದಿಂದ ಇರುವಾಗ ನಿತೀಶ್ ಕುಮಾರ್ ಮಾತ್ರ ಇದ್ದಕ್ಕಿದ್ದಂತೆ ಉತ್ಸಾಹದಿಂದ ಚಪ್ಪಾಳೆ ತಟ್ಟಿದ್ದರು. ಈ ವೇಳೆ ಪಕ್ಕದಲ್ಲೇ ನಿಂತಿದ್ದ ಬಿಹಾರ ವಿಧಾನಸಭೆಯ ಸ್ಪೀಕರ್ ನಂದ ಕಿಶೋರ್ ಯಾದವ್ ಕೂಡಲೇ ನಿತೀಶ್ ಅವರ ಕೈ ಹಿಡಿದು ಚಪ್ಪಾಳೆ ತಟ್ಟದಂತೆ ತಡೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಿತೀಶ್ ಮಾನಸಿಕ ಸ್ಥಿತಿ ಬಗ್ಗೆ ಚರ್ಚೆ ನಡೆದಿತ್ತು.

ಬಿಜೆಪಿ ನಾಯಕರ ಪಾದಸ್ಪರ್ಶ ಮಾಡಿದ್ದ ಬಿಹಾರ ಸಿಎಂ

ಬಿಹಾರ ಸಿಎಂ ಒಂದೆರಡು ಬಾರಿಯಲ್ಲ 2024, 2025ರ ಅವಧಿಯಲ್ಲಿ ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರ ಪಾದಗಳನ್ನು ಮುಟ್ಟಲು ಮುಂದಾಗಿ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದರು. ಇತ್ತೀಚೆಗೆ ನವೆಂಬರ್ 20ರಂದು ಸಿಎಂ ಆಗಿ 10ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ನಂತರ, ಮೋದಿಯವರು ಪಟನಾ ವಿಮಾನ ನಿಲ್ದಾಣದಿಂದ ಹೊರಡುವಾಗ ನಿತೀಶ್ ಅವರು, ಮೋದಿ ಪಾದ ಮುಟ್ಟಲು ಪ್ರಯತ್ನಿಸಿದ್ದರು. ಆಗ ಪ್ರಧಾನಿಯವರು ನಿತೀಶ್ ಅವರ ಭುಜ ಹಿಡಿದು ತಡೆದು, ಕೈಕುಲುಕಿದ್ದರು.

ಇನ್ನು 2024ರ ನವೆಂಬರ್ 13ರಂದು ದರ್ಬಂಗಾದಲ್ಲಿ ಏಮ್ಸ್ (AIIMS) ಶಂಕುಸ್ಥಾಪನೆ ಸಮಾರಂಭದ ವೇದಿಕೆಯಲ್ಲೂ ನಿತೀಶ್ ಅವರು ಪ್ರಧಾನಿ ಪಾದ ಮುಟ್ಟಲು ಬಗ್ಗಿದರು. ಆಗಲೂ ಮೋದಿ ತಕ್ಷಣ ನಿತೀಶ್ ಅವರನ್ನು ತಡೆದಿದ್ದರು. 2024ರ ಜೂನ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿಯೂ ನಿತೀಶ್, ಮೋದಿಯವರ ಪಾದಸ್ಪರ್ಶ ಮಾಡಿದ್ದರು! 2024ರ ಏಪ್ರಿಲ್‌ನಲ್ಲಿ ಲೋಕಸಭೆ ಚುನಾವಣಾ ಪ್ರಚಾರದ ವೇಳೆಯೂ ಹೀಗೆಯೇ ವೇದಿಕೆಯ ಮೇಲೆ ಮೋದಿ ಪಾದ ಮುಟ್ಟಿ ನಮಸ್ಕರಿಸಿದ್ದರು.

ಇದನ್ನು ಓದಿದ್ದೀರಾ? ನಿತೀಶ್ ಕುಮಾರ್‌ಗೆ ‘ಭಾರತ ರತ್ನ’ ನೀಡಿ: ಪೋಸ್ಟರ್ ಹಾಕಿದ ಜೆಡಿಯು ನಾಯಕ!

ಮೋದಿ ಅವರನ್ನು ಹೊರತುಪಡಿಸಿ 2025ರ ಮಾರ್ಚ್‌ನಲ್ಲಿ ಹೋಳಿ ಮಿಲನ ಸಮಾರಂಭದಲ್ಲಿ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಅವರ ಪಾದ ಮುಟ್ಟಲು ಮುಂದಾಗಿದ್ದರು. 2024ರ ನವೆಂಬರ್‌ನಲ್ಲಿ ಚಿತ್ರಗುಪ್ತ ಪೂಜಾ ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿದ್ದ ಮಾಜಿ ಬಿಜೆಪಿ ಸಂಸದ ಆರ್.ಕೆ. ಸಿನ್ಹಾ ಅವರ ಪಾದಗಳನ್ನು ನಿತೀಶ್ ಕುಮಾರ್ ಮುಟ್ಟಿದರು.

ದೀರ್ಘಕಾಲದ ‘ನಮಸ್ತೆ’ ಭಂಗಿಯಲ್ಲಿರುವ ನಿತೀಶ್

ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ‘ಕೌಶಲ್ ದೀಕ್ಷಾಂತ್ ಸಮಾರೋಹ 2025’ ಎಂಬ ವರ್ಚುವಲ್ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಅವರು ಸುಮಾರು 38ರಿಂದ 60 ಸೆಕೆಂಡುಗಳ ಕಾಲ ‘ನಮಸ್ತೆ’ ಭಂಗಿಯಲ್ಲಿಯೇ ಇದ್ದರು. ಅಂದರೆ ಸುಮಾರು ಒಂದು ನಿಮಿಷದವರೆಗೂ ಕೈಮುಗಿದೇ ಕುಳಿತಿದ್ದರು. ಈ ಸಮಯದಲ್ಲಿ ಅಕ್ಕಪಕ್ಕ ನೋಡಿ ನಗುತ್ತಿದ್ದರು. ಹಾಗೆಯೇ 2025ರ ಮಾರ್ಚ್‌ನಲ್ಲಿ ಬಜೆಟ್ ಅಧಿವೇಶನದ ಅಂತಿಮ ದಿನದಂದು ಫೋಟೋ ಸೆಷನ್ ವೇಳೆಯೂ ದೀರ್ಘಕಾಲ ಕೈಮುಗಿದು ಕುಳಿತಿದ್ದರು. ಕೊನೆಗೆ ಸಚಿವ ಬಿಜೇಂದ್ರ ಪ್ರಸಾದ್ ಯಾದವ್ ಅವರು ಮೆಲ್ಲನೆ ಅವರ ಕೈಗಳನ್ನು ಕೆಳಕ್ಕಿಳಿಸಿದ್ದರು. ಈ ವಿಡಿಯೋಗಳು ವೈರಲ್ ಆದ ನಂತರವೂ ನಿತೀಶ್ ಮಾನಸಿಕ ಸ್ಥಿತಿಯ ಬಗ್ಗೆ ಚರ್ಚೆ ನಡೆದಿತ್ತು.

ರಾಷ್ಟ್ರಗೀತೆ ವೇಳೆ ನಗು ಮತ್ತು ಮಾತು

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಷ್ಟ್ರಗೀತೆಯ ವೇಳೆ ನಗುತ್ತಾ ಮಾತನಾಡಿದ ಘಟನೆ 2025ರ ಮಾರ್ಚ್ 20ರಂದು ಪಟನಾದಲ್ಲಿ ನಡೆದ ‘ಸೆಪಕ್ ತಕ್ರಾ ವಿಶ್ವಕಪ್’ ಉದ್ಘಾಟನಾ ಸಮಾರಂಭದಲ್ಲಿ ಸಂಭವಿಸಿತ್ತು. ಸಮಾರಂಭದ ವೇಳೆ ರಾಷ್ಟ್ರಗೀತೆ ಮೊಳಗುತ್ತಿದ್ದಾಗ, ನಿತೀಶ್ ಪಕ್ಕದಲ್ಲಿದ್ದ ತಮ್ಮ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಅವರ ಭುಜ ತಟ್ಟಿ ಮಾತನಾಡಿಸಲು ಪ್ರಯತ್ನಿಸಿದ್ದರು. ದೀಪಕ್ ಕುಮಾರ್ ಕೂಡಲೇ ಕೈ ಸನ್ನೆ ಮಾಡಿ ಸಿಎಂ ಸುಮ್ಮನಿರುವಂತೆ ಮತ್ತು ಶಿಷ್ಟಾಚಾರ ಪಾಲಿಸುವಂತೆ ಸೂಚಿಸಿದ್ದರು. ಇನ್ನೊಂದು ಕಡೆ ರಾಷ್ಟ್ರಗೀತೆ ಘೋಷಣೆಯಾದ ತಕ್ಷಣವೇ ನಿತೀಶ್ ಕುಮಾರ್ ವೇದಿಕೆಯಿಂದ ಇಳಿದು ಹೋಗಿದ್ದರು. ಬಳಿಕ ಅಧಿಕಾರಿಗಳು ಅವರನ್ನು ಮತ್ತೆ ವೇದಿಕೆಗೆ ಕರೆತಂದಿದ್ದರು. ಈ ವಿಚಾರದಲ್ಲಿ ಸಲ್ಲಿಕೆಯಾಗಿದ್ದ ದೂರನ್ನು ವಿಚಾರಣೆ ನಡೆಸಿದ ಪಟನಾ ಹೈಕೋರ್ಟ್‌ “ನಗುವುದು ಅಥವಾ ಕೈ ಮುಗಿಯುವುದು ರಾಷ್ಟ್ರಗೀತೆಗೆ ಮಾಡಿದ ಅವಮಾನ ಎಂದು ಪರಿಗಣಿಸಲಾಗದು” ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.

ಅಧಿಕಾರಿಯ ತಲೆಯ ಮೇಲೆ ಗಿಡ ಇಟ್ಟ ನಿತೀಶ್!

2025ರ ಮೇ 26ರಂದು ಪಟನಾದ ಲಲಿತ್ ನಾರಾಯಣ್ ಮಿಶ್ರಾ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್. ಸಿದ್ಧಾರ್ಥ್ ಅವರು ಸ್ವಾಗತವಾಗಿ ನೀಡಿದ ಸಸಿಯನ್ನು ನಿತೀಶ್ ಅವರು ಮರಳಿ ಅಧಿಕಾರಿಯ ತಲೆಯ ಮೇಲೆಯೇ ಇಟ್ಟು ನಗೆಪಾಟಲಿಗೀಡಾಗಿದ್ದರು. ಇದರಿಂದ ಅಧಿಕಾರಿ ಸಿದ್ಧಾರ್ಥ್ ಅವರು ಕ್ಷಣಕಾಲ ಅಚ್ಚರಿಗೊಂಡಿದ್ದರು. ನಂತರ ಕೂಡಲೇ ಗಿಡ ಪಕ್ಕಕ್ಕೆ ಸರಿಸಿದ್ದರು.

ಮೋದಿ ಬೆರಳು ಪರೀಕ್ಷಿಸಿದ್ದ ನಿತೀಶ್

ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬೆರಳನ್ನು ಪರೀಕ್ಷಿಸಿದ ಘಟನೆಯು 2024ರ ಜೂನ್‌ನಲ್ಲಿ ಬಿಹಾರದ ರಾಜಗೀರ್‌ನಲ್ಲಿ ನಡೆದ ಹೊಸ ನಳಂದಾ ವಿಶ್ವವಿದ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ನಡೆದಿತ್ತು. ಕಾರ್ಯಕ್ರಮದ ವೇಳೆ ವೇದಿಕೆಯ ಮೇಲೆ ಪಕ್ಕದಲ್ಲೇ ಕುಳಿತಿದ್ದ ನಿತೀಶ್ ಕುಮಾರ್ ಅವರು ಇದ್ದಕ್ಕಿದ್ದಂತೆ ಪ್ರಧಾನಿ ಮೋದಿಯವರ ಎಡಗೈಯನ್ನು ಹಿಡಿದು ತೋರುಬೆರಳನ್ನು ಪರೀಕ್ಷಿಸಿದ್ದರು. ಆಗಷ್ಟೇ ಮುಗಿದಿದ್ದ ಲೋಕಸಭಾ ಚುನಾವಣೆಯ ಮತದಾನದ ಶಾಯಿ ಗುರುತು ಪ್ರಧಾನಿಯವರ ಬೆರಳಿನ ಮೇಲೆ ಇರುವುದನ್ನು ಗಮನಿಸುತ್ತಲೇ ಇದ್ದರು. ನಂತರ ನಗುನಗುತ್ತಾ ತಮ್ಮ ಬೆರಳಿನ ಮೇಲಿದ್ದ ಶಾಯಿಯ ಗುರುತನ್ನೂ ಪ್ರಧಾನಿಯವರಿಗೆ ತೋರಿಸಿದ್ದರು. ಈ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿತ್ತು.

ಈ ರೀತಿಯ ವಿಭಿನ್ನ, ವಿಚಿತ್ರ ನಡವಳಿಕೆಗಳು ಚುನಾವಣಾ ಸಮಯದಲ್ಲಿ ವಿರೋಧ ಪಕ್ಷಗಳಿಗೆ ರಾಜಕೀಯ ಅಸ್ತ್ರವಾದವು. ಆದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇದೀಗ ಮತ್ತೆ ಬಿಹಾರದಲ್ಲಿ ನಿತೀಶ್ ಕುಮಾರ್ ಅವರನ್ನೇ ಸಿಎಂ ಮಾಡಲಾಗಿದೆ, ನಿತೀಶ್ ವಿಚಿತ್ರ ನಡವಳಿಕೆಯೂ ಮುಂದುವರೆದಿದೆ. ಅಧಿಕಾರಿಗಳು, ಇತರೆ ಬಿಜೆಪಿ-ಜೆಡಿಯು ನಾಯಕರು ಈ ವರ್ತನೆಗಳು ಯಾರಿಗೂ ತಿಳಿಯದಂತೆ ತಡೆಯುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದಾರೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...