ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಅವರ ನಿರ್ವಹಿಸುತ್ತಿದ್ದ ಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿ ಕಸಿದುಕೊಳ್ಳಲು ಈ ತಂತ್ರ ಹೆಡೆದಿದೆ. ನಿತೀಶ್‌ರನ್ನು ಭಾರತೀಯ ಮಡುರೋ ಮಾಡಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ನಿತೀಶ್ ರಾಜ್ಯಸಭೆಗೆ ಪ್ರವೇಶಿಸುವ ಕುರಿತು ಪ್ರತಿಕ್ರಿಯಿಸಿರುವ ಅಲ್ಲಿನ ಪ್ರಮುಖ ವಿಪಕ್ಷ ರಾಷ್ಟ್ರೀಯ ಜನತಾ ದಳ (RJD), “ಬಿಹಾರದಲ್ಲಿ ಬಿಜೆಪಿ ರಾಜಕೀಯ ಅಪಹರಣ ನಡೆಸಿದೆ. ಜೆಡಿಯು ಮತದಾರರು ತಾನು ವಂಚನೆಗೆ ಒಳಗಾಗುತ್ತಿದ್ದೇವೆಂದು ಭಾವಿಸುತ್ತಿದ್ದಾರೆ” ಎಂದು ಹೇಳಿದೆ.
ಆರ್‌ಜೆಡಿಯ ರಾಜ್ಯಸಭಾ ಸಂಸದ ಮನೋಜ್ ಕುಮಾರ್ ಝಾ ಮಾತನಾಡಿ, “ನಿತೀಶ್ ಕುಮಾರ್ ಅವರು ಒಬ್ಬ ‘ತಾತ್ಕಾಲಿಕ ಮುಖ್ಯಮಂತ್ರಿ’ಯೆಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿಯೇ ಹೇಳಿದ್ದರು. ಆದರೆ, ನಿತೀಶ್ ಮುಖ್ಯಮಂತ್ರಿ ಹುದ್ದೆಯು ತೀರಾ ತಾತ್ಕಾಲಿಕವಾಯಿತು. ನಾನು ನಿತೀಶ್ ಅವರ ‘ಎಕ್ಸ್’ ಖಾತೆಯ ಪೋಸ್ಟ್ ಓದಿದೆ. ಅದನ್ನು ನಿತೀಶ್ ಅವರ ಪೋಸ್ಟ್ ಎಂದು ಕರೆಯಬೇಡಿ. ಅದರ ಪ್ರತಿಯೊಂದು ಪದವನ್ನೂ ದೆಹಲಿಯಲ್ಲಿ ರಚಿಸಲಾಗಿದೆ” ಎಂದು ಹೇಳಿದ್ದಾರೆ.
“21 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ವ್ಯಕ್ತಿ ಈಗ ರಾಜ್ಯಸಭೆಗೆ ಬರಲು ಬಯಸುತ್ತಿದ್ದಾರೆ. ಇದು ಬಾಲಿಶವಾದುದು. ಕನಿಷ್ಠಪಕ್ಷ ಒಂದು ಸಮರ್ಥವಾದ ಕಾರಣವನ್ನಾದರೂ ನೀಡಬೇಕು” ಎಂದು ಝಾ ಹೇಳಿದ್ದಾರೆ. ಬಿಜೆಪಿಯ ಒತ್ತಡಕ್ಕೆ ಮಣಿದು ನಿತೀಶ್ ರಾಜ್ಯಸಭೆಗೆ ಹೋಗುತ್ತಿದ್ದಾರೆ ಎಂದು ಅವರು ಪರೋಕ್ಷವಾಗಿ ಪ್ರತಿಪಾದಿಸಿದ್ದಾರೆ.
ನಿತೀಶ್ ಅವರನ್ನು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರಿಗೆ ಹೋಲಿಸಿದ ಝಾ, “ಇಲ್ಲಿ ಸಂಭವಿಸಿರುವುದು ವೆನೆಜುವೆಲಾದಲ್ಲಿ ಮಡುರೊ ಅವರಿಗೆ ಸಂಭವಿಸಿದ್ದನ್ನೇ ಹೋಲುತ್ತದೆ. ಸಮ್ಮತಿಯೊಂದಿಗೆ ನಡೆದ ಅಪಹರಣವಿದು. ನಿತೀಶ್ ಅವರ ಮೂಲ ಮತದಾರರು ತಾವು ವಂಚನೆಗೊಳಗಾಗಿದ್ದೇವೆಂದು ಭಾವಿಸುತ್ತಿದ್ದಾರೆ. ಇದು ಕ್ರಮವು ಬಿಹಾರದಲ್ಲಿ ಯಾರಿಗೂ ಹಿಡಿಸುವುದಿಲ್ಲ” ಎಂದು ಹೇಳಿದ್ದಾರೆ.
“ಮಹಾರಾಷ್ಟ್ರದಲ್ಲಿ 2024ರ ಚುನಾವಣಾ ಗೆಲುವಿನ ನಂತರ ಶಿವಸೇನಾ ಮುಖ್ಯಸ್ಥ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಹೊರದಬ್ಬಿ, ಅವರನ್ನು ಉಪಮುಖ್ಯಮಂತ್ರಿ ಮಾಡಲು ಬಿಜೆಪಿ ಒಂದು ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ, ಅಂತಹ ತಂತ್ರ ಬಿಹಾರದಲ್ಲಿ ಫಲಿಸುವುದಿಲ್ಲ. ಬಿಹಾರವು ಮಹಾರಾಷ್ಟ್ರದಂತಲ್ಲ. ಇಲ್ಲಿ ನಿತೀಶ್ ಕುಮಾರ್ ಅವರನ್ನು ಕೆಳಸ್ಥಾನಕ್ಕೆ ಇಳಿಸಲು ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ತಿಳಿದಿತ್ತು. ಆದ್ದರಿಂದ, ಅವರು ತಮ್ಮ ಕಾರ್ಯತಂತ್ರವನ್ನು ಬದಲಿಸಿದರು. ಅವರು ನಿತೀಶ್ ಅವರನ್ನು ‘ದೇಶಿ ಮಡುರೊ’ ಮಾಡಿದ್ದಾರೆ, ರಾಜ್ಯಸಭೆಗೆ ದೂಡಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ.
ಈ ಲೇಖನ ಓದಿದ್ದೀರಾ?: ಕಡೆಗೂ ಫಲಿಸಿತು ಬಿಜೆಪಿ ಹುನ್ನಾರ; ಬಿಹಾರ ಸಿಎಂ ಹುದ್ದೆ ಯಾರಿಗೆ?
ಆರ್‌ಜೆಡಿ ನಾಯಕ ಮೃತ್ಯುಂಜಯ್ ತಿವಾರಿ ಮಾತನಾಡಿ, “ಬಿಜೆಪಿ ಇಷ್ಟು ಬೇಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಜೆಡಿಯುನಲ್ಲಿರುವ ಅನೇಕರು ಬಿಜೆಪಿಯೊಂದಿಗೆ ಶಾಮೀಲಾಗಿದ್ದಾರೆ. ಆದರೆ ಅನೇಕರು ನಿತೀಶ್ ಕುಮಾರ್ ಅವರೇ ಮುಂದುವರಿಯಬೇಕೆಂದು ಬಯಸುತ್ತಾರೆ. ಇದೊಂದು ದೊಡ್ಡ ರಾಜಕೀಯ ಅಪಹರಣ. ತನ್ನ ಮಿತ್ರಪಕ್ಷಗಳ ಬಗ್ಗೆ ಬಿಜೆಪಿಯ ಧೋರಣೆ ಏನೆಂಬುದು ಈಗ ನಿಧಾನವಾಗಿ ಸ್ಪಷ್ಟವಾಗುತ್ತಿದೆ” ಎಂದು ಹೇಳಿದ್ದಾರೆ.
ಸಂಸತ್ತಿನ ಎರಡೂ ಸದನಗಳು ಮತ್ತು ರಾಜ್ಯ ಶಾಸಕಾಂಗದ ಎರಡೂ ಸದನಗಳ ಸದಸ್ಯನಾಗಬೇಕೆಂಬ ಆಸೆ ತಮಗೆ ದೀರ್ಘಕಾಲದಿಂದ ಇತ್ತು ಎಂದು ನಿತೀಶ್ ಕುಮಾರ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಅವರು ಈಗಾಗಲೇ ಲೋಕಸಭಾ ಸಂಸದರಾಗಿ, ಶಾಸಕರಾಗಿ ಮತ್ತು ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು, ರಾಜ್ಯಸಭೆಯ ಸದಸ್ಯರಾಗುವುದು ಬಾಕಿ ಇತ್ತು. ಈಗ ಅವರು ನಾಲ್ಕೂ ಸದನಗಳ ಸದಸ್ಯತ್ವದ ಮೈಲಿಗಲ್ಲನ್ನು ಪೂರ್ಣಗೊಳಿಸುತ್ತಾರೆ ಎಂದು ಬಿಜೆಪಿ ಮತ್ತು ಜೆಡಿಯು ಹೇಳಿಕೊಂಡಿವೆ.




