ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಏನೂ ಇಲ್ಲ, ಬರೀ ಚೊಂಬು ನೀಡಲಾಗಿದೆ. ಇದು ಅತಿ ನಿರಾಶಾದಾಯಕ ಬಜೆಟ್. ಈ ಬಜೆಟ್‌ಗೆ ದೂರದೃಷ್ಟಿಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರಿಗೆ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, “ಇಡೀ ದಕ್ಷಿಣ ಭಾರತಕ್ಕೆ ಬಜೆಟ್‌ನಲ್ಲಿ ಏನೂ ನೀಡಲಾಗಿಲ್ಲ. ಕರ್ನಾಟಕಕ್ಕೆ ನೀಡುರುವುದು ಚೊಂಬು. ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ 2026 | ನಿರ್ಮಲಾ ಸೀತಾರಾಮನ್ ಮಂಡಿಸಿದ ಆಯವ್ಯಯದ ಪ್ರಮುಖ ಅಂಶಗಳು
“ಎರಡು ವಿಷಯಗಳನ್ನು ಮಾತ್ರ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಅದು ಬೆಂಗಳೂರು-ಚೆನ್ನೈ ಮತ್ತು ಹೈದರಾಬಾದ್-ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್. ಆದರೆ ಇದರಿಂದ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಿಲ್ಲ. ಹೆಚ್ಚಾಗಿ ತೆಲಂಗಾಣ ಮತ್ತು ತಮಿಳುನಾಡಿಗೆ ಪ್ರಯೋಜನವಾಗುತ್ತದೆ” ಎಂದು ಹೇಳಿದರು.
“ಭದ್ರಾ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸುವಂತೆ ಕೇಳಿದ್ದೇವೆ. ಹಾಗೆಯೇ ಬೆಂಗಳೂರು-ಮುಂಬೈ, ಬೆಂಗಳೂರು-ಮಂಗಳೂರು, ಮತ್ತು ಬೆಂಗಳೂರು-ಪುಣೆ ಹೈಸ್ಪೀಡ್ ರೈಲುಗಳನ್ನು ನಾವು ಕೇಳಿದ್ದೆವು. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿಲ್ಲ. ಅಷ್ಟು ಮಾತ್ರವಲ್ಲದೆ ಕೇಂದ್ರದ ಅನುದಾನದಲ್ಲಿ ರಾಜ್ಯಕ್ಕೆ ಕಡಿಮೆ ಅನುದಾನವಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ವಿತ್ತ ಸಚಿವರು ವಿಕಸಿತ ಭಾರತ್ ಬಗ್ಗೆಯೂ ಬಜೆಟ್‌ನಲ್ಲಿ ಮಾತನಾಡಿದ್ದಾರೆ. ಆದರೆ ಇದು ಬರೀ ಮಾತಿನಲ್ಲೇ ಉಳಿದಿದೆ. ಕಾರ್ಯರೂಪಕ್ಕೆ ಮಾತ್ರ ಈವರೆಗೂ ಬಂದಿಲ್ಲ” ಎಂದು ಟೀಕಿಸಿದರು.





