ಕಳೆದ ತಿಂಗಳು ಇಂಡಿಯಾ ಗೇಟ್‌ನಲ್ಲಿ ವಾಯು ಮಾಲಿನ್ಯದ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ನಕ್ಸಲ್ ಪರ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಬಂಧಿತರಾದ 23 ಜನರಲ್ಲಿ 10 ಜನರಿಗೆ ಮಂಗಳವಾರ ದೆಹಲಿ ಕೋರ್ಟ್ ಜಾಮೀನು ನೀಡಿದೆ. ಜಾಮೀನು ನೀಡುವ ಸಂದರ್ಭದಲ್ಲಿ ನಕ್ಸಲರು ಎಂದು ಹೇಳಲು ಯಾವ ಆಧಾರವೂ ಇಲ್ಲ ಎಂದು ಕೋರ್ಟ್ ಹೇಳಿದೆ. ಒಬ್ಬ ಆರೋಪಿಯ ಜಾಮೀನು ಮಾತ್ರ ತಿರಸ್ಕರಿಸಿದೆ.
ಜಾಮೀನು ಆದೇಶದಲ್ಲಿ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅರಿದಮಾನ್ ಸಿಂಗ್ ಚೀಮಾ ಅವರು ಆರೋಪಿಗಳು ಯಾವುದೇ ಆಮೂಲಾಗ್ರ ಅಥವಾ ನಕ್ಸಲ್ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲು ಯಾವುದೇ ಸಾಕ್ಷ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕುರುಡು ದ್ವೇಷದ ಈ ಅಂಧಕಾರಕ್ಕೆ ಅಂತ್ಯವೆಂದು?
ಹಾಗೆಯೇ ಸಿಸಿಟಿವಿ ದೃಶ್ಯಾವಳಿಗಳು ಮತ್ತು ವೀಡಿಯೊ ತುಣುಕುಗಳು ಸೇರಿದಂತೆ ಎಲ್ಲ ತನಿಖಾ ಸಾಮಾಗ್ರಿಗಳು ಈಗಾಗಲೇ ಪೊಲೀಸರ ಬಳಿ ಇವೆ. ಹೀಗಿರುವಾಗ ಆರೋಪಿಗಳನ್ನು ಬಂಧನದಲ್ಲಿ ಇಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ. ಆದರೆ ಆರೋಪಿ ಮಹಿಳೆ ಇಲಾಕಿಯಾ, ಮದ್ವಿ ಹಿಡ್ಮಾ ಅವರನ್ನು ಬೆಂಬಲಿಸಿ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ ಎಂದು ಕೋರ್ಟ್ ಉಲ್ಲೇಖಿಸಿದೆ.
ಏನಿದು ವಾಯು ಮಾಲಿನ್ಯ ಪ್ರತಿಭಟನೆ ಪ್ರಕರಣ?
ನವೆಂಬರ್ 23ರಂದು ದೆಹಲಿ ವಿಶ್ವವಿದ್ಯಾಲಯ ಮತ್ತು ಇತರ ಸಂಸ್ಥೆಗಳ ವಿದ್ಯಾರ್ಥಿಗಳು ಇಂಡಿಯಾ ಗೇಟ್ ಬಳಿ ವಾಯು ಮಾಲಿನ್ಯದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಯಾವುದೇ ಅನುಮತಿ ಇರಲಿಲ್ಲ. ಅಧಿಕಾರಿಗಳು ಗುಂಪನ್ನು ಚದುರಿಸಲು ಪ್ರಯತ್ನಿಸಿದಾಗ ಘರ್ಷಣೆ ಉಂಟಾಗಿದೆ. ಆರಂಭದಲ್ಲಿ ಐವರು ವಿದ್ಯಾರ್ಥಿಗಳನ್ನು ಬಂಧಿಸಿದರೆ ಬಳಿಕ 17 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಇನ್ನು ನವೆಂಬರ್ 28ರಂದು ವಿದ್ಯಾರ್ಥಿಗಳು ಜಾಮೀನು ಪಡೆದ ಗಂಟೆಗಳ ನಂತರ ದೆಹಲಿ ಪೊಲೀಸರು ಕರ್ತವ್ಯ ಪಥ ಪೊಲೀಸ್ ಠಾಣೆಯಲ್ಲಿ ಎರಡನೇ ಎಫ್ಐಆರ್ ದಾಖಲಿಸಿದ್ದು, ಎಂಟು ವಿದ್ಯಾರ್ಥಿಗಳನ್ನು ಮತ್ತೆ ಬಂಧಿಸಿದ್ದಾರೆ. ಅದಾದ ಬಳಿಕ ಪಾರ್ಲಿಮೆಂಟ್ ಸ್ಟ್ರೀಟ್ ಎಫ್‌ಐಆರ್‌ನಲ್ಲಿ ಜಾಮೀನು ಪಡೆದಿದ್ದ ಉಳಿದ 15 ಆರೋಪಿಗಳನ್ನು ನಂತರ ಕರ್ತವ್ಯ ಪಥ ಎಫ್‌ಐಆರ್‌ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಪ್ರತಿಭಟನಾಕಾರರು ನಕ್ಸಲ್ ಪರ ಘೋಷಣೆಗಳನ್ನು ಎತ್ತಿದ್ದಾರೆ ಎಂದು ಪೊಲೀಸರು ಆರೋಪಿಸಿದರು. ಆದರೆ ವಕೀಲರು ಆರೋಪಗಳನ್ನು ತಳ್ಳಿಹಾಕಿದರು. ನಕ್ಸಲ್ ಸಂಘಟನೆಗಳೊಂದಿಗೆ ಸಂಪರ್ಕಿಸುವ ಯಾವುದೇ ಪುರಾವೆಗಳಿಲ್ಲ ಎಂದು ವಾದಿಸಿದರು. ವಾದ ಆಲಿಸಿದ ಕೋರ್ಟ್ ನಕ್ಸಲರೆನ್ನಲು ಯಾವ ಆಧಾರವೂ ಇಲ್ಲ ಎಂದು ಹೇಳಿ ಜಾಮೀನು ನೀಡಿದೆ.
ಹೋರಾಟಗಳಿಗೆ ನಕ್ಸಲ್ ನಂಟು ನೀಡುವ ಪೊಲೀಸರು!
ಈ ಹಿಂದೆಯೂ ಹೋರಾಟಗಾರರಿಗೆ ನಕ್ಸಲ್ ಮತ್ತು ಭಯೋತ್ಪಾದನೆಯ ನಂಟನ್ನು ಕಲ್ಪಿಸಲಾಗಿದೆ. ಈ ಪೈಕಿ ಭೀಮಾ ಕೋರೆಗಾಂವ್ ಪ್ರಕರಣ ಅತ್ಯಂತ ಪ್ರಮುಖ ಮತ್ತು ಚರ್ಚಾಸ್ಪದವಾಗಿದೆ. 2018ರಲ್ಲಿ ಮಹಾರಾಷ್ಟ್ರ ಪೊಲೀಸರು ಮತ್ತು ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹಲವು ಪ್ರಮುಖ ವಕೀಲರು, ಲೇಖಕರು, ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದ್ದು, ನಕ್ಸಲ್ ನಂಟು ಕಲ್ಪಿಸಲಾಗಿದೆ.
2017ರ ಡಿಸೆಂಬರ್ 31ರಂದು ಪುಣೆಯಲ್ಲಿ ನಡೆದ ‘ಎಲ್ಗಾರ್ ಪರಿಷದ್’ ಸಭೆಯಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಲಾಗಿದ್ದು, ಮರುದಿನ ಭೀಮಾ ಕೋರೆಗಾಂವ್‌ನಲ್ಲಿ ನಡೆದ ಜಾತಿ ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಈ ಆರೋಪದಲ್ಲೇ ಸುಧೀರ್ ಧವಳೆ, ಸುರೇಂದ್ರ ಗಾಡ್ಲಿಂಗ್, ಮಹೇಶ್ ರಾವತ್, ಶೋಮಾ ಸೇನ್, ರೋನಾ ವಿಲ್ಸನ್, ವರವರ ರಾವ್, ಸುಧಾ ಭಾರದ್ವಾಜ್, ಗೌತಮ್ ನವಲಖಾ, ಅರುಣ್ ಫೆರೇರಾ, ವರ್ನಾನ್ ಗೊನ್ಸಾಲ್ವೆಸ್ ಮತ್ತು ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಹನಿ ಬಾಬು ಅವರನ್ನು ಬಂಧಿಸಲಾಗಿದೆ. ಆದರೆ ಬಳಿಕ ಬಂಧಿತರು ನಿಷೇಧಿತ ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)’ ಜೊತೆ ಸಂಪರ್ಕ ಹೊಂದಿದ್ದಾರೆ, ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗೆಯೇ ಜಾಮೀನು ಪಡೆಯುವುದು ಕಷ್ಟವಾಗುವಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬುಡಕಟ್ಟು ಹಕ್ಕುಗಳ ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿ 2021ರಲ್ಲಿ ನ್ಯಾಯಾಂಗ ಬಂಧನದಲ್ಲಿರುವಾಗಲೇ ಮೃತರಾಗಿದ್ದಾರೆ. 83 ವರ್ಷ ವಯಸ್ಸಿನ ಸ್ಟಾನ್ ಸ್ವಾಮಿ ಅವರಿಗೆ ಸರಿಯಾಗಿ ಚಿಕಿತ್ಸೆ ನೀಡದ ಆರೋಪವೂ ಇದೆ. ಅಮೆರಿಕ ಮೂಲದ ವಿಧಿವಿಜ್ಞಾನ ಸಂಸ್ಥೆ (forensics firm) ನಡೆಸಿದ ತನಿಖೆಯಲ್ಲಿ, ಸ್ಟಾನ್ ಸ್ವಾಮಿ ಅವರ ಕಂಪ್ಯೂಟರ್‌ಗೆ ಅನಾಮಧೇಯ ಹ್ಯಾಕರ್‌ಗಳು ಸುಳ್ಳು ದಾಖಲೆಗಳನ್ನು ಕೃತಕವಾಗಿ ಸೇರಿಸಿದ್ದಾರೆ ಎಂಬುದು ಬಹಿರಂಗವಾಗಿದೆ. ಆದರೆ ಎನ್‌ಐಎ ಈ ನಕಲಿ ದಾಖಲೆಗಳನ್ನೇ ಆಧಾರವಾಗಿಟ್ಟುಕೊಂಡು ಅವರನ್ನು ಬಂಧಿಸಿತ್ತು.





