ನಮ್ಮ ಗಣರಾಜ್ಯವು ಯಾವ ಉದ್ದೇಶದಿಂದ ರಾಷ್ಟ್ರೀಯ ನಾಟಕಶಾಲೆಯನ್ನು ಹುಟ್ಟು ಹಾಕಿತೋ, ಯಾವ ಧ್ಯೇಯ ಮತ್ತು ಕಾರ್ಯಸೂಚಿಯನ್ನು ಅದರ ಮುಂದಿಟ್ಟಿತೋ ಆ ಎಲ್ಲವುದಕ್ಕೂ ಬಗೆದ ಮಹಾದ್ರೋಹ.
ಇಲ್ಲಿಯವರೆಗೆ ಎನ್ಎಸ್‍ಡಿ ಸಂಪೂರ್ಣ ಸಬ್ಸಿಡಿ ಆಧರಿಸಿ ರಂಗಭೂಮಿಯ ಪಾಠಗಳನ್ನು ಕಲಿಸುತ್ತ ಬಂದಿದೆ. ಈಗ ಹೊಸದಾಗಿ ಶುಲ್ಕ ವಿಧಿಸಿದೆ. ಈ ಬಗೆಯ ಯೋಜನೆ, ಈ ಬಗೆಯ ಶುಲ್ಕದ ವಿಧಿಯಿಂದ ರಂಗಭೂಮಿಯ ವಿದ್ಯಾಭ್ಯಾಸ ಪಡೆಯಲು ತೀರ ಬಡವರ ಮಕ್ಕಳಿಗೆ ಮಾತ್ರವಲ್ಲ, ಮಧ್ಯಮ ವರ್ಗ, ಕೆಳಮಧ್ಯಮ ವರ್ಗದವರಿಗೂ ಅವಕಾಶ ಇಲ್ಲವಾಗುತ್ತದೆ. 1978ರಲ್ಲಿ, ಅಂದಿನ ಕಾಲದ ದರಗಳಲ್ಲಿ ಈ ಥರದ ಶುಲ್ಕ ಇದ್ದಿದ್ದರೆ, ನಾನಾಗಲಿ, ನನ್ನ ಜೊತೆ ಅಂದು ಕಲಿತ ಸಹಪಾಠಿ ಗೆಳೆಯ-ಗೆಳತಿಯರಾಗಲಿ, ಕಳೆದ ಸುಮಾರು 70 ವರ್ಷಗಳಲ್ಲಿ ಆ ಶಾಲೆಯಿಂದ ಪದವಿ ಪಡೆದವರಲ್ಲಿಯ ಶೇಕಡಾ 99ರಷ್ಟು ಜನರಾಗಲಿ ಅಲ್ಲಿ ತರಬೇತಿ ಪಡೆಯಲು ಸಾಧ್ಯವೇ ಇರುತ್ತಿರಲಿಲ್ಲ.

ಇದನ್ನೂ ನೋಡಿ: https://nsd.gov.in/delhi/index.php/admission-notice-mumbai-2025/
ಅಷ್ಟೇಕೆ, ಈಗ ಈ ಶಾಲೆಯಲ್ಲಿ ಅಧಿಕಾರಸ್ಥಾನದಲ್ಲಿರುವವರು, ಅದನ್ನು ನಡೆಸುವ ಸಮಾಜ, ಅಂದರೆ ಎನ್‍ಎಸ್‍ಡಿ ಸೊಸೈಟಿ, ಸದಸ್ಯರಾಗಿರುವವರು, ಅದರ ಶೈಕ್ಷಣಿಕ ಸಮಿತಿ, ಅಂದರೆ ಅಕಾಡೆಮಿಕ್ ಕೌನ್ಸಿಲ್, ಸದಸ್ಯರಾಗಿರುವವರು, ಈ ಶಾಲೆಯಲ್ಲಿ ಅಧ್ಯಾಪನ ಮಾಡುತ್ತಿರುವವರು, ಇವರೆಲ್ಲರೂ ಆ ಥರದ- ಸಮಾಜವಾದೀ ಎನ್ನಬಹುದಾದ- ಸವಲತ್ತು ಮತ್ತು ಹಕ್ಕಿನ ಪ್ರಯೋಜನ ಪಡೆದವರೇ. ತಮ್ಮಂತೆ ಇತರರೂ, ಇಂದಿನ ಮತ್ತು ಮುಂದಿನ ಪೀಳಿಗೆಯ ಮಕ್ಕಳೂ, ಎಂಬ ಪರಿವೆ, ಧರ್ಮಪ್ರಜ್ಞೆ ಇಲ್ಲವೇ, ಬೇಡವೇ ಇವರಿಗೆ?
ರಾಷ್ಟ್ರೀಯ ನಾಟಕಶಾಲೆ ಹಲವು ದಶಕಗಳಿಂದ ಅಧೋಗತಿಯ ಹಾದಿಹಿಡಿದಿದೆ. ಆ ಹಾದಿ, ಇದೀಗ ಇನ್ನಷ್ಟು ಆಳಕತ್ತಲೆಯ ಕೂಪಕ್ಕೆ ಬೀಳುತ್ತಿದೆ, ಅಷ್ಟೇ. ಮೋದಿ ಸರಕಾರ ಮತ್ತು ಶಾಲೆಯ ಆಡಳಿತವರ್ಗವು ಮುಂಬೈಯಲ್ಲಿ ಈ ಮಾದರಿಯ ‘ಛೂ’ ಬಿಟ್ಟು ಜನ ಹೇಗೆ ಪ್ರತಿಕ್ರಿಯಿಸಬಹುದು ಎಂದು ಪರೀಕ್ಷಿಸುತ್ತಿವೆ. ಇದೆಲ್ಲ ಹೀಗೇ ಆಗುತ್ತ ಸಾಗಿದರೆ, ಮುಂಬೈ ಕೇಂದ್ರದ ಈ ವ್ಯಾಪಾರೀ ಮಾದರಿಯನ್ನು ಎನ್‍ಎಸ್‍ಡಿಯ ಇತರ ಕೇಂದ್ರಗಳು ಅನುಸರಿಸುತ್ತವೆ. ಈ ಪರೀಕ್ಷೆಯಲ್ಲಿ ತಾವು ಗೆದ್ದೆವು ಎಂದು ಅವರಿಗೆ ಅನ್ನಿಸಿದರೆ, ಆ ಬಳಿಕ, ದೆಹಲಿಯಲ್ಲಿರುವ ದೊಡ್ಡ ಶಾಲೆ ಕೂಡ ಇಂಥದನ್ನೇ ದುಪ್ಪಟ್ಟೋ ಮುಪ್ಪಟ್ಟೋ ಬೆಳೆಸಿ ಜಾರಿಗೆ ತರುತ್ತದೆ, ಶಂಕೆ ಬೇಡ.
ಇದನ್ನು ಓದಿದ್ದೀರಾ?: ಮೋದಿ ಮಣಿಪುರ ಭೇಟಿ- ‘ಹಾವು ಸಾಯಲಿಲ್ಲ, ಕೋಲು ಮುರಿಯಲಿಲ್ಲ’!
ರಂಗಭೂಮಿ ಮತ್ತು ಪ್ರದರ್ಶನ ಕಲೆಗಳ ವಿದ್ಯಾಭ್ಯಾಸವು ಹಣವಂತರಿಗೆ, ‘ಮೇಲು’ ಜಾತಿ, ಬಲಿಷ್ಠ ಜಾತಿಗಳವರಿಗೆ ಮಾತ್ರ ಮೀಸಲಿರಬೇಕೇ?
ಇದು, ಇದು ಈ ಬಿಜೆಪಿ-ಸಂಘ ಪರಿವಾರ-ಕಾರ್ಪೊರೆಟ್ ವ್ಯಾಪಾರೀ ವ್ಯವಸ್ಥೆಯ ಅಮೃತಕಾಲದ ವಿಷಫಲ, ಅದರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅನ್ನುವುದರ ಅಸಲಿ ಮುಖ.
ಇಂಥ ಯೋಚನೆ, ಯೋಜನೆಗಳನ್ನು ಖಂಡತುಂಡವಾಗಿ ಎದುರಿಸಿ, ಹೋರಾಡಿ, ಅಡಗಿಸಬೇಕು.

ರಘುನಂದನ
ಕವಿ, ನಾಟಕಕಾರ, ರಂಗನಿರ್ದೇಶಕ




