ಉತ್ತರ ಪ್ರದೇಶದ ಆಗ್ರಾ ಮೂಲಕ ಸಾಗುತ್ತಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾಗಿಯಾಗಿದ್ದಾರೆ. ಎಸ್‌ಪಿ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಒಪ್ಪಂದದ ಕಸರತ್ತು ಮುಗಿಯುತ್ತಿದ್ದಂತೆಯೇ ಅಖಿಲೇಶ್ ಅವರು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಜೊತೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ.
‘ಇಂಡಿಯಾ’ ಮೈತ್ರಿಕೂಟದ ಪ್ರಮುಖ ನಾಯಕರಲ್ಲಿ ಅಖಿಲೇಶ್ ಕೂಡ ಒಬ್ಬರು. ನ್ಯಾಯ ಯಾತ್ರೆ ಉತ್ತರ ಪ್ರದೇಶಕ್ಕೆ ಕಾಲಿಟ್ಟಾಗ, ‘ಸೀಟು ಹಂಚಿಕೆ ಅಂತಿಮಗೊಳ್ಳುವವರೆ ತಮ್ಮ ಪಕ್ಷವು ಯಾತ್ರೆಯಲ್ಲಿ ಭಾಗಿಯಾಗುವುದಿಲ್ಲ’ ಎಂದು ಅಖಿಲೇಶ್ ಹೇಳಿದ್ದರು. ಇದೀಗ, ಉತ್ತರ ಪ್ರದೇಶದಲ್ಲಿ 17 ಸ್ಥಾನಗಳನ್ನು ಎಸ್‌ಪಿ ಬಿಟ್ಟುಕೊಟ್ಟಿದೆ. ಅದಕ್ಕೆ ಪ್ರತಿಯಾಗಿ, ಮಧ್ಯಪ್ರದೇಶದಲ್ಲಿ ಎಸ್‌ಪಿಗೆ 1 ಸ್ಥಾನ ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪಿಕೊಂಡಿದೆ. ಹೀಗೆ, ಸೀಟು ಹಂಚಿಕೆಯಾದ ಬೆನ್ನಲ್ಲೇ ಅವರು ನ್ಯಾಯ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ?: ರಾಜ್ಯಸಭಾ ಚುನಾವಣೆ: ಬಿಜೆಪಿ-ಜೆಡಿಎಸ್ ಅಭ್ಯರ್ಥಿಗೆ 45 ಮತ ಗಳಿಸುವುದೇ ಸವಾಲು
ಇನ್ನು, ನ್ಯಾಯ ಯಾತ್ರೆ ಪಶ್ಚಿಮ ಬಂಗಾಳದಲ್ಲಿ ಹಾದುಹೋದಾಗ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಜಗಳ ನಡೆಯುತ್ತಿತ್ತು. ಹೀಗಾಗಿ, ಅವರು ಸಂಪೂರ್ಣವಾಗಿ ಯಾತ್ರೆಯಿಂದ ದೂರ ಉಳಿದಿದ್ದರು. ಈಗಲೂ ಸೀಟು ಹಂಚಿಕೆಯ ತಿಕ್ಕಾಟ ನಡೆಯುತ್ತಲೇ ಇದೆ. ಸೌಹಾರ್ದಯುತವಾಗಿ ಸೀಟು ಹಂಚಿಕೆ ಮಾಡಿಕೊಂಡು, ಮೈತ್ರಿಯಲ್ಲಿ ಮುನ್ನಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.




