ಇತರೆ ಹಿಂದುಳಿದ ವರ್ಗಕ್ಕೆ(ಒಬಿಸಿ) ಸೇರಿದ ಯುವಕನೊಬ್ಬನಿಂದ ಜಾತಿವಾದಿಗಳು ಒತ್ತಾಯಪೂರ್ವಕವಾಗಿ ಬ್ರಾಹ್ಮಣ ಯುವಕನ ಪಾದ ತೊಳೆಸಿ ನೀರು ಕುಡಿಸಿದ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಡೆದಿದೆ. ಬ್ರಾಹ್ಮಣ ವ್ಯಕ್ತಿಗೆ ಯುವಕ ಅವಮಾನ ಮಾಡಿದ್ದಕ್ಕೆ ಶಿಕ್ಷೆಯಿದು ಎಂದು ಜಾತಿವಾದಿಗಳು ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿವಿಧ ಸಮುದಾಯಗಳ ನಡುವಿನ ಸಾಮರಸ್ಯಕ್ಕೆ ಧಕ್ಕೆ ತರುವ ಕೃತ್ಯ ಸೇರಿದಂತೆ ಹಲವು ಆರೋಪಗಳಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಶ್ವಾಹ ಸಮುದಾಯದ ಸದಸ್ಯರೊಬ್ಬರು ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನು ಓದಿದ್ದೀರಾ? ಬ್ರಾಹ್ಮಣ ರೋಹಿತ್‌ಗೆ ಒಂದು ಅಳತೆಗೋಲು – ಒಬಿಸಿ ವಿನೇಶ್‌ಗೆ ಬೇರೊಂದು ಅಳತೆಗೋಲು; ಇದೇ ಮನುವಾದಿ ಬಿಜೆಪಿಯ ಎರಡು ಮುಖ
ಒಬಿಸಿ ಸಮುದಾಯದ ಪರ್ಶೋತ್ತಮ್ ಕುಶ್ವಾಹ ಎಂಬ ಯುವಕ ಬ್ರಾಹ್ಮಣ ಅನ್ನು ಪಾಂಡೆ ಎಂಬ ಯುವಕನ ಪಾದ ತೊಳೆದು ಗ್ರಾಮಸ್ಥರ ಮುಂದೆ ನೀರು ಕುಡಿಯುವಂತೆ ಮಾಡಲಾಗಿದೆ. ಹಾಗೆಯೇ 5,100 ರೂ. ದಂಡ ವಿಧಿಸಲಾಗಿದ್ದು, ಬ್ರಾಹ್ಮಣ ಸಮುದಾಯದಲ್ಲಿ ಕ್ಷಮೆಯಾಚಿಸುವಂತೆ ಒತ್ತಾಯಿಸಲಾಗಿದೆ.
ಪಾರ್ಷೋತ್ತಮ್ ಕುಶ್ವಾಹ ಮತ್ತು ಅನ್ನು ಪಾಂಡೆ ವಾಸಿಸುವ ಸತಾರಿಯಾ ಗ್ರಾಮದಲ್ಲಿ ಮದ್ಯ ನಿಷೇಧಿಸಲಾಗಿದೆ. ಆದರೂ ಪಾಂಡೆ ಮದ್ಯ ಮಾರಾಟ ಮಾಡಿದ್ದು, ಸಿಕ್ಕಿಬಿದ್ದಾಗ, ಗ್ರಾಮಸ್ಥರು ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ತಿಳಿಸಿ 2,100 ರೂ. ದಂಡ ವಿಧಿಸಿದ್ದಾರೆ. ಪಾಂಡೆ ಈ ನಿರ್ಣಯವನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾನೆ ಎನ್ನಲಾಗಿದೆ.
ಆದರೆ ಪಾರ್ಷೋತ್ತಮ್ ಶೂಗಳ ಹಾರವನ್ನು ಧರಿಸಿರುವ ಅನ್ನುವಿನ AI- ರಚಿತ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾನೆ. ಕೆಲವೇ ನಿಮಿಷಗಳಲ್ಲಿ ಪಾರ್ಷೋತ್ತಮ್ ಪೋಸ್ಟ್ ಅನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸಿದ್ದಾನೆ. ಆದರೆ ಅಷ್ಟರಲ್ಲೇ ಈ ಕೃತ್ಯವನ್ನು ಬ್ರಾಹ್ಮಣ ಸಮುದಾಯಕ್ಕೆ ಮಾಡಿದ ಅವಮಾನವೆಂದು ಬ್ರಾಹ್ಮಣರು ಬಣ್ಣಿಸಿದ್ದಾರೆ. ಇದು ಗ್ರಾಮದಲ್ಲಿ ಜಾತಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಬ್ರಾಹ್ಮಣ ಸಮುದಾಯದ ಒಂದು ಗುಂಪು ಒಟ್ಟುಗೂಡಿ ಪಾರ್ಷೋತ್ತಮ್ ಮಾಡಿದ ತಪ್ಪಿಗೆ ‘ಪ್ರಾಯಶ್ಚಿತ್ತ’ ಎಂದು ಹೇಳಿ ಪಾರ್ಷೋತ್ತಮ್‌ನಿಂದ ಪಾಂಡೆಯ ಪಾದಗಳನ್ನು ತೊಳೆಸಿ ಆ ನೀರನ್ನು ಕುಡಿಸಿದೆ. ಹಾಗೆಯೇ ಇಡೀ ಸಮುದಾಯಕ್ಕೆ ಕ್ಷಮೆಯಾಚಿಸುವಂತೆ ಒತ್ತಡ ಹೇರಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸದ್ಯ ಹರಿದಾಡುತ್ತಿದ್ದು ನೆಟ್ಟಿಗರು ಜಾತಿ ತಾರತಮ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ವೈರಲ್ ಆದ ನಂತರ ಎರಡೂ ಕಡೆಯವರು ನೆಟ್ಟಿಗರ ಆಕ್ರೋಶವನ್ನು ಶಮನಗೊಳಿಸುವ ಪ್ರಯತ್ನ ಮಾಡಿದ್ದಾರೆ.
जातिवाद की सड़न अब इतनी बढ़ गई है कि उसमें से बजबजाहट आने लगी है। अनुज पांडेय नामक व्यक्ति, पुरुषोत्तम कुशवाहा से जबरन पैर धुलवाकर वह पानी पीने पर मजबूर किया।
— Santosh Yadav, Ph.D. (@sky_phd) October 11, 2025
https://t.co/CZEJfhq3ji
“ನಾನು ತಪ್ಪು ಮಾಡಿದೆ, ಮತ್ತು ನಾನು ಕ್ಷಮೆಯಾಚಿಸಿದ್ದೇನೆ. ಅನ್ನು ಪಾಂಡೆ ನನ್ನ ಕುಟುಂಬದ ಗುರು. ದಯವಿಟ್ಟು ಇದನ್ನು ರಾಜಕೀಯಗೊಳಿಸಬೇಡಿ” ಎಂದು ಪರ್ಶೋತ್ತಮ್ ಹೇಳಿಕೊಂಡಿದ್ದಾರೆ. ಅನ್ನು ಪಾಂಡೆ “ಇದು ನಮ್ಮೊಳಗಿನ ವಿಷಯ. ಕೆಲವರು ಇದನ್ನು ರಾಜಕೀಯಗೊಳಿಸುತ್ತಿದ್ದಾರೆ. ನಮ್ಮ ನಡುವೆ ಗುರು-ಶಿಷ್ಯ ಸಂಬಂಧವಿದೆ. ನಾನು ಅವರನ್ನು ಅವಮಾನಿಸಲಿಲ್ಲ. ಸ್ವಯಂಪ್ರೇರಿತವಾಗಿ ಅವರು ಈ ರೀತಿ ಮಾಡಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.
ಎರಡೂ ಕಡೆಯವರೂ ಈ ಘಟನೆಯನ್ನು ಸಾಮಾನ್ಯೀಕರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ವಿಡಿಯೋ ಗ್ರಾಮೀಣ ಪ್ರದೇಶದಲ್ಲಿ ಜಾತಿ ತಾರತಮ್ಯ ಇಂದಿಗೂ ಬೇರೂರಿರುವುದನ್ನು ಸ್ಪಷ್ಟಪಡಿಸಿದೆ. ಬ್ರಾಹ್ಮಣೇತರರು ಎಷ್ಟು ಕೀಳಾಗಿ ಕಾಣಲಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಇದಾಗಿದೆ.





