ಮಂಗಳವಾರ ಒಡಿಶಾ ವಿಧಾನಸಭೆಯಲ್ಲಿ ಶಾಸಕರ ಮಾಸಿಕ ವೇತನವನ್ನು ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ. ವೇತನವು 1.11 ಲಕ್ಷ ರೂಪಾಯಿಯಿಂದ 3.45 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇಡೀ ದೇಶದಲ್ಲೇ ಶಾಸಕರಿಗೆ ನೀಡುವ ಅತ್ಯಧಿಕ ವೇತನ ಇದಾಗಿದೆ.
17ನೇ ವಿಧಾನಸಭೆ ರಚನೆಯಾದ 2024ರ ಜೂನ್ ತಿಂಗಳಿನಿಂದಲೇ ಈ ಹೆಚ್ಚಳವಾದ ವೇತನ ಜಾರಿಗೆ ಬರಲಿದೆ ಎಂದು ಸಂಸತ್ತಿನ ವ್ಯವಹಾರಗಳ ಸಚಿವ ಮುಖೇಶ್ ಮಹಾಲಿಂಗ್ ಹೇಳಿದ್ದಾರೆ. ಈ ಹೆಚ್ಚಳಕ್ಕೆ ಅವಕಾಶ ನೀಡುವ ನಾಲ್ಕು ಮಸೂದೆಗಳನ್ನು ಸದನವು ಸರ್ವಾನುಮತದಿಂದ ಅಂಗೀಕರಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಶಾಸಕರ ವೇತನ ಹೆಚ್ಚಳ: ಇವರಿಗೆ ಹೇಳೋರು ಕೇಳೋರು ಯಾರೂ ಇಲ್ಲವೇ?
ಮುಖ್ಯಮಂತ್ರಿ, ಸಚಿವರು, ಸ್ಪೀಕರ್, ಉಪ ಸ್ಪೀಕರ್, ವಿರೋಧ ಪಕ್ಷದ ನಾಯಕರ ವೇತನ ಮತ್ತು ಮಾಜಿ ಶಾಸಕರ ಪಿಂಚಣಿಯನ್ನು ಸಹ ಸುಮಾರು ಮೂರು ಪಟ್ಟು ಹೆಚ್ಚಿಸಲಾಗಿದೆ. ಯಾವುದೇ ಹಾಲಿ ಶಾಸಕರು ಮೃತರಾದರೆ ಅವರ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಸಹಾಯವನ್ನು ನೀಡಲಾಗುತ್ತದೆ. ಜತೆಗೆ ಪ್ರತಿ ಐದು ವರ್ಷಗಳಿಗೊಮ್ಮೆ ವೇತನ, ಭತ್ಯೆ ಮತ್ತು ಪಿಂಚಣಿಯನ್ನು ಹೆಚ್ಚಿಸುವ ನಿಬಂಧನೆಗಳನ್ನೂ ಮಸೂದೆಗಳು ಒಳಗೊಂಡಿವೆ. ಅಂಗೀಕರಿಸಲಾದ ಮಸೂದೆಗಳ ಪ್ರಕಾರ ಒಂದು ಹೊಸ ಮಸೂದೆಯ ಅಗತ್ಯವಿಲ್ಲದೆ ಸುಗ್ರೀವಾಜ್ಞೆಯ ಮೂಲಕ ಶಾಸಕರ ವೇತನ ಹೆಚ್ಚಳಕ್ಕೆ ಅವಕಾಶವಿದೆ.
ವೇತನ ಹೆಚ್ಚಳಕ್ಕೆ 2007ರಿಂದಲೇ ಒತ್ತಾಯಿಸಲಾಗುತ್ತಿತ್ತು. ಒಡಿಶಾ ವಿಧಾನಸಭೆಯ ಒಬ್ಬ ಶಾಸಕರು ಸಂಬಳ, ಭತ್ಯೆಗಳು ಮತ್ತು ಇತರ ಆರ್ಥಿಕ ಪ್ರಯೋಜನಗಳನ್ನು ಒಳಗೊಂಡಂತೆ ಮಾಸಿಕ ಸುಮಾರು 1.11 ಲಕ್ಷ ರೂ.ಗಳ ಪ್ಯಾಕೇಜ್ ಅನ್ನು ಪಡೆಯುತ್ತಾರೆ. ಈಗ, ಪ್ಯಾಕೇಜ್ 3,45,000 ರೂ.ಗಳಾಗಿರುತ್ತದೆ.
ಶಾಸಕರ ವೇತನ ಹೆಚ್ಚಳವು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಆರ್ಥಿಕ ಸಂಕಷ್ಟದ ನಡುವೆ ಶಾಸಕರು ತಮ್ಮ ವೇತನವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿರುವುದು ತೆರಿಗೆದಾರರ ಹಣದ ದುರುಪಯೋಗ ಎಂಬ ಆಕ್ರೋಶ ವ್ಯಕ್ತವಾಗಿದೆ. ಹಾಗೆಯೇ ಹಣದುಬ್ಬರದ ನೆಪದಲ್ಲಿ ಶಾಸಕರ ವೇತನ ಹೆಚ್ಚಿಸುವಾಗ ಅದೇ ಹಣದುಬ್ಬರದ ಸಂಕಷ್ಟದಲ್ಲಿರುವ ಜನರಿಗೆ ಮಾತ್ರ ವೇತನ ಹೆಚ್ಚಳ ಯಾಕಿಲ್ಲ ಎಂಬ ಪ್ರಶ್ನೆ ಹುಟ್ಟಿದೆ.





