- ವಿಧಾನಪರಿಷತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ
- ಅವಕಾಶ ವಂಚಿತರಿಗೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ
ಸಮಾಜದ ಎಲ್ಲ ವರ್ಗದ ಜನರು, ಅವಕಾಶ ವಂಚಿತರಿಗೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಕೈಗೆ ದುಡ್ಡು ನೀಡಲು ನಮ್ಮ ಸರ್ಕಾರ ಪಂಚ ಗ್ಯಾರಂಟಿಗಳನ್ನು ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅಧಿವೇಶನದ ಕೊನೆಯ ದಿನವಾದ ಇಂದು (ಜು.21) ವಿಧಾನಪರಿಷತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿ ಮಾತನಾಡಿದ ಅವರು, “ಜನಪರ, ಅಭಿವೃದ್ಧಿಪರ, ದೂರದೃಷ್ಟಿಯುಳ್ಳ, ರಾಜ್ಯ ಆರ್ಥಿಕತೆ ಬೆಳವಣಿಗೆಗೆ ಪೂರಕವಾದ ಬಜೆಟ್ ಮಂಡಿಸಲಾಗಿದೆ. ಬಜೆಟ್ ಚರ್ಚೆಯಲ್ಲಿ ಭಾಗವಹಿಸಿ, ಬಜೆಟ್ ಸ್ವಾಗತಿಸಿದವರು ಹಾಗೂ ಟೀಕಿಸಿದವರಿಗೂ ಧನ್ಯವಾದ ತಿಳಿಸುವೆ” ಎಂದರು.
“ಸಾಮಾಜಿಕ ಸ್ವಾತಂತ್ರ್ಯ ಇಲ್ಲದಿದ್ದರೆ, ದೇಶಕ್ಕೆ ಸ್ವಾತಂತ್ರ್ಯ ಬಂದರೂ ಪ್ರಯೋಜನವಿಲ್ಲ. ರಾಜಕೀಯ ಪ್ರಜಾಪ್ರಭುತ್ವಯಿದ್ದರೆ ಸಾಲದು, ಸಾಮಾಜಿಕ ಪ್ರಜಾಪ್ರಭುತ್ವವಿರಬೇಕು. ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಯಿಂದ ಕಷ್ಟದಲ್ಲಿರುವವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಡಾ. ಅಂಬೇಡ್ಕರ್ ಅವರು ಹೇಳಿದ್ದರು. ಆ ಪ್ರಕಾರ ನಾವು ನಡೆದುಕೊಳ್ಳುವ ಪ್ರಯತ್ನ ಮಾಡಿದ್ದೇವೆ” ಎಂದರು.
ಕೇಂದ್ರದ ಸಹಾಯಧನ ಕಡಿಮೆ
14 ಮತ್ತು 15 ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನ ಕಡಿಮೆಯಾಗಿದೆ. 5,495 ಕೋಟಿ ರೂ. ಮಧ್ಯಂತರ ಪರಿಹಾರ ನೀಡಲಿಲ್ಲ. ಬಿಜೆಪಿಯ 25 ಜನ ಸಂಸದರಿದ್ದರೂ ಇದರ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನಿಸಲಿಲ್ಲ. ರಾಜ್ಯಗಳಿಗೆ ನೀಡುವ ಸಬ್ಸಿಡಿಗಳು ಕಡಿಮೆಯಾಗಿದೆ. ಯೋಜನೆಯಲ್ಲಿ ಶೇ.80 ರಷ್ಟು ರಾಜ್ಯ ಹಾಗೂ ಶೇ.20ರಷ್ಟು ಕೇಂದ್ರ ಸರ್ಕಾರ ಹಾಕಿ, ಕೇಂದ್ರ ಪುರಸ್ಕೃತ ಯೋಜನೆ ಎನ್ನಲಾಗುತ್ತದೆ. ಈ ವರ್ಷ ರಾಜ್ಯದಿಂದ ವಿವಿಧ ತೆರಿಗೆಗಳ ರೂಪದಲ್ಲಿ ಕೇಂದ್ರಕ್ಕೆ 4 ಲಕ್ಷ ಕೋಟಿ ರೂ. ಹೋಗುತ್ತಿದ್ದು, ಅದರಲ್ಲಿ ತೆರಿಗೆ ಪಾಲು ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸೇರಿ ಕೇವಲ 50,257 ಕೋಟಿ ಬರುತ್ತದೆ. 2018 ಮಾರ್ಚ್ ಅಂತ್ಯಕ್ಕೆ 2,45,000 ಕೋಟಿ ಸಾಲ ಇತ್ತು. 2023ಕ್ಕೆ ಇದು 5,20,000 ಕೋಟಿ ರೂ.ಸಾಲವಿದೆ. ನಾವು ಬಡವರ ಪರವಾಗಿದ್ದೇವೆ. ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದ ತತ್ತರಿಸಿರುವ ಜನರ ಜೇಬಿಗೆ ಹಣ ತುಂಬುವ ಕೆಲಸ ಮಾಡಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸುವುದಕ್ಕೂ ಸಚಿವೆಯರಿಗೆ ಮೋದಿ ಅನುಮತಿ ಬೇಕೇ?
ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಗುರಿ
“ತೆರಿಗೆ ಸೋರಿಕೆಯನ್ನು ತಡೆದು, ತೆರಿಗೆ ಸಂಗ್ರಹಕ್ಕೆ ಪ್ರಮುಖ ಇಲಾಖೆಗಳಿಗೆ ಹೆಚ್ಚಿನ ಗುರಿಯನ್ನು ನೀಡಲಾಗಿದೆ. 13,500 ಕೋಟಿ ತೆರಿಗೆ ಬಾಬ್ತುಗಳಿಂದ ಸಂಗ್ರಹವಾಗುತ್ತದೆ. ನಮ್ಮ ಸರ್ಕಾರ 85,808 ಕೋಟಿ ಹೆಚ್ಚುವರಿ ಸಾಲ ಪಡೆಯುತ್ತಿದೆ. ಯೋಜನೆಗಳ ಆದ್ಯತೀಕರಣದಿಂದ ರೂ. 34,650 ಕೋಟಿ ಕ್ರೋಡೀಕರಣ ಮಾಡಲಾಗುತ್ತದೆ. ಇದು ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಾನದಂಡಗಳ ಮಿತಿಯೊಳಗೆ ಇದೆ. ಮುಂದೆಯೂ ಉಳಿತಾಯ ಬಜೆಟ್ ಮಾಡಲು ಪ್ರಯತ್ನಿಸಲಾಗುವುದು” ಎಂದು ಹೇಳಿದರು.
ಪಂಚ ಗ್ಯಾರಂಟಿ; 1.30 ಕೋಟಿ ಕುಟುಂಬಗಳಿಗೆ ಅನುಕೂಲ
“ಸಂಪನ್ಮೂಲ ಕ್ರೋಡೀಕರಣ, ಪಂಚ ಯೋಜನೆಗಳಿಗೆ ಅನುದಾನ ಮೀಸಲು ಮಾಡಲಾಗಿದೆ. ರಾಜ್ಯದ ಆರ್ಥಿಕತೆ ದಿವಾಳಿಯಾಗುತ್ತಿಲ್ಲ. 76 ಕಾರ್ಯಕ್ರಮಗಳ ಅನುಷ್ಠಾನ ಮಾಡುವ ಮೂಲಕ ನುಡಿದಂತೆ ನಡೆಯುತ್ತಿದ್ದೇವೆ. ಶಕ್ತಿ ಯೋಜನೆ ಮೂಲಕ ಪ್ರತಿ ದಿನ ಸುಮಾರು 50 ಲಕ್ಷ ಜನ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. 2800 ಕೋಟಿಯನ್ನು ಈ ಯೋಜನೆಗೆ ಈ ವರ್ಷ ಇಡಲಾಗಿದೆ” ಎಂದರು.
“ಗೃಹಜ್ಯೋತಿ ಯೋಜನೆ ಜುಲೈ ತಿಂಗಳಿನಿಂದ ಜಾರಿ ಮಾಡಿ, ಫಲಾನುಭವಿಗಳು ಆಗಸ್ಟ್ ತಿಂಗಳಿನಿಂದ ಬಿಲ್ಲು ಪಾವತಿಸುವ ಅಗತ್ಯವಿಲ್ಲ. ರಾಜ್ಯದಲ್ಲಿ ಜನರ ಗೃಹಬಳಕೆಯ ವಿದ್ಯುತ್ ಸರಾಸರಿ 53 ಯೂನಿಟ್ 12 ತಿಂಗಳ ಸರಾಸರಿಗೆ ಶೇ.10 ರಷ್ಟು ಸೇರಿಸಿ, ಉಚಿತ ವಿದ್ಯುತ್ ನೀಡಲಾಗುವುದು. ರಾಜ್ಯಕ್ಕೆ ಅನ್ನಭಾಗ್ಯ ಯೋಜನೆಗೆ 2,29,000 ಮೆ.ಟನ್ ಅಕ್ಕಿ ಬೇಕಾಗುತ್ತದೆ. ಅಕ್ಕಿ ಸರಬರಾಜಿಗೆ ಕೇಂದ್ರ ನಿರಾಕರಿಸಿದ್ದರಿಂದ 5 ಕೆಜಿ ಬದಲು 170 ರೂ. ವೆಚ್ಚವನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದ್ದು, ಈ ಯೋಜನೆಗೆ ಸುಮಾರು 10 ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ” ಎಂದು ವಿವರಿಸಿದರು.
“ಈವರೆಗೆ 57.51 ಲಕ್ಷ ಕುಟುಂಬಗಳಿಗೆ 337.08 ಕೋಟಿ ಬ್ಯಾಂಕ್ ಖಾತೆಗೆ ತಲುಪಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ 34,000 ಕೋಟಿ ರೂ ಈ ವರ್ಷ 18,000 ಕೋಟಿ ರೂ. ಮೀಸಲಿರಿಸಲಾಗಿದೆ. ಯುವನಿಧಿ ಯೋಜನೆಯಡಿ 2022-23 ರಲ್ಲಿ ಪಾಸಾದ ಪದವೀಧರರು ಹಾಗೂ ಡಿಪ್ಲೋಮಾ ಪಡೆದಿರುವವರಿಗೆ 3000 ರೂ. ಹಾಗೂ 1500 ರೂ. ಅನುಕ್ರಮವಾಗಿ 24 ತಿಂಗಳವರಗೆ ನೀಡಲಾಗುವುದು. ಪಂಚ ಗ್ಯಾರಂಟಿಗಳಿಂದ 1.30 ಕೋಟಿ ಕುಟುಂಬಗಳಿಗೆ ಅನುಕೂಲವಾಗುತ್ತಿದೆ” ಎಂದರು.
ಗ್ಯಾರಂಟಿಗಳಿಂದ ಜನ ಸಂತುಷ್ಟರಾಗಿದ್ದಾರೆ
ನಮ್ಮ ಸರ್ಕಾರ ನೀಡಿರುವ ಎಲ್ಲ ಗ್ಯಾರಂಟಿ ಯೋಜನೆಗಳನ್ನು ತಪ್ಪದೆ ಜಾರಿ ಮಾಡುತ್ತಿದ್ದು, ಜನರೂ ಸಂತುಷ್ಟರಾಗಿದ್ದಾರೆ. ನಮ್ಮ ಬಜೆಟ್ ಗಾತ್ರ 3,27,747 ಕೋಟಿ ರೂ. ಕಳೆದ ಸರ್ಕಾರದ ಬಜೆಟ್ ಗಿಂತ 62027 ಕೋಟಿ ರೂ. ಶೇ.23 ರಷ್ಟು ಅಭಿವೃದ್ಧಿಯನ್ನು ಸೂಚಿಸುತ್ತಿದೆ. ಈ ವರ್ಷದ ಬಜೆಟ್ ನಲ್ಲಿ ನಮ್ಮ ಸರ್ಕಾರ ಎಸ್ ಸಿಎಸ್ ಪಿ / ಟಿಎಸ್ ಪಿ ಯೋಜನೆಗಳಿಗೆ 34,294 ಕೋಟಿ ರೂ. ಮೀಸಲಿಡಲಾಗಿದೆ. ನಮ್ಮದು ಬಡವರ ಪರ ಹಾಗೂ ದಲಿತಪರವಾದ ಸರ್ಕಾರ” ಎಂದು ತಿಳಿಸಿದರು.





