ಬಿಹಾರ ಚುನಾವಣೆಗೂ ಮುನ್ನ ‘ಶುದ್ಧೀಕರಣ’ ನೆಪದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿ ಸುಮಾರು 16,72,513 ಅಂದರೆ 16 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. 2020ರ ಮತದಾರರ ಪಟ್ಟಿಗೆ ಹೋಲಿಸಿದರೆ ಪಟ್ಟಿಯಲ್ಲಿ ಒಟ್ಟಾರೆಯಾಗಿ ಶೇಕಡ 1.60ರಷ್ಟು ಹೆಚ್ಚಳ ಕಂಡುಬಂದಿದೆ.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ(SIR) ನಂತರ ಹಲವು ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳು ಕಳವಳ ವ್ಯಕ್ತಪಡಿಸಿದ ಹಿನ್ನೆಲೆ ಸುಪ್ರೀಂ ಕೋರ್ಟ್ ಈ ಪ್ರಕ್ರಿಯೆಯ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು. ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗವು ಸೆಪ್ಟೆಂಬರ್ 30ರಂದು ಅಧಿಕೃತವಾಗಿ ಪ್ರಕಟಿಸಿದೆ. ಇನ್ನು ಮತದಾರರು ತಮ್ಮ ಹೆಸರನ್ನು ಅನ್ಯಾಯವಾಗಿ ತೆಗೆದುಹಾಕಲಾಗಿದೆ ಎಂದು ಭಾವಿಸಿದರೆ ಮೇಲ್ಮನವಿ ಸಲ್ಲಿಸಲೂ ಅವಕಾಶವಿದೆ.
ಇದನ್ನು ಓದಿದ್ದೀರಾ? ಬಿಹಾರ ಚುನಾವಣೆ | ಚಿರಾಗ್‌ರ ‘ಎಲ್‌ಜೆಪಿ’ – ಪ್ರಶಾಂತ್ ಕಿಶೋರ್‌ರ ‘ಜನ ಸುರಾಜ್’ ಮೈತ್ರಿ?
ಬಿಹಾರದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವಂತೆ ಕೋರಿ ಫಾರ್ಮ್ 6ರ ಮೂಲಕ ಒಟ್ಟು 30,98,228 ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಪೈಕಿ 28,95,191 ಅರ್ಜಿಗಳನ್ನು ಅನುಮೋದಿಸಲಾಗಿದೆ. ಅಂದರೆ ಸುಮಾರು ಶೇಕಡ 93.4ರಷ್ಟು ಅರ್ಜಿಗಳನ್ನು ಅನುಮೋದಿಸಲಾಗಿದೆ.
ಯಾವುದಾದರೂ ಮತದಾರರು ಮೃತಪಟ್ಟಿದ್ದರೆ ಅಥವಾ ಬೇರೆಡೆ ಸ್ಥಳಾಂತರಗೊಂಡಿದ್ದರೆ ಆಕ್ಷೇಪಣೆ ಸಲ್ಲಿಸಲು ಫಾರ್ಮ್ 7 ಅನ್ನು ಬಳಸಲಾಗುತ್ತದೆ. ಹೊಸದಾಗಿ ಮತದಾರರ ಸೇರ್ಪಡೆ ಸಂದರ್ಭದಲ್ಲೇ ಫಾರ್ಮ್ 7ರ ಅಡಿಯಲ್ಲಿ ಬರೋಬ್ಬರಿ 18,45,408 ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಈ ಪೈಕಿ 16,85,844 ಆಕ್ಷೇಪಣೆಗಳನ್ನು ಅಂದರೆ ಶೇಕಡ 91.3ರಷ್ಟು ಅರ್ಜಿಗಳನ್ನು ಮಾನ್ಯವೆಂದು ಗುರುತಿಸಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಹೇಳುವಂತೆ 22 ವರ್ಷಗಳ ನಂತರ ಬಿಹಾರದ ಮತದಾರರ ಪಟ್ಟಿಯನ್ನು SIR ಮೂಲಕ ಶುದ್ಧೀಕರಣ ಮಾಡಲಾಗಿದೆ. ಅಂದರೆ ಈ ಶುದ್ದೀಕರಣ ನೆಪದಲ್ಲಿ ಸುಮಾರು 16 ಲಕ್ಷಕ್ಕೂ ಅಧಿಕ ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗಿದೆ. 243 ವಿಧಾನಸಭಾ ಸ್ಥಾನಗಳಲ್ಲಿ ಮತದಾರರ ಪಟ್ಟಿಯಲ್ಲಿ ಬದಲಾವಣೆ ಕಂಡುಬಂದಿದೆ. ಅದರಲ್ಲೂ 14 ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಹೆಚ್ಚು ಹೆಸರುಗಳನ್ನು ಅಳಿಸಲಾಗಿದೆ. 229 ಸ್ಥಾನಗಳಲ್ಲಿ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಕಂಡುಬಂದಿದೆ. ಮತದಾರರ ಸಾವು, ಸ್ಥಳಾಂತರ ಮತ್ತು ನಮೂದುಗಳ ನಕಲು ಎಂಬುದು ಮತದಾರರ ಹೆಸರು ಅಳಿಸಲು ಮೂಲ ಕಾರಣಗಳಾಗಿವೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ: 64 ಲಕ್ಷಕ್ಕೂ ಅಧಿಕ ಮತದಾರರ ಹೆಸರು ‘ಡಿಲೀಟ್’
ಸಾವಿನ ಕಾರಣದಿಂದಾಗಿ 631,195 ಹೆಸರುಗಳನ್ನು ಅಳಿಸಲಾಗಿದೆ. ಇತರ ಸ್ಥಳಗಳಿಗೆ ಸ್ಥಳಾಂತರಗೊಂಡ ಕಾರಣ 809,948 ಮತ್ತು ಪಟ್ಟಿಯಲ್ಲಿರುವ ಹೆಸರುಗಳ ನಕಲು ಮಾಡಿದ ಕಾರಣ ನೀಡಿ 231,370 ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ಪರಿಹಾರ್ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರ ಹೆಸರನ್ನು ಅಳಿಸಲಾಗಿದೆ. ಚಕೈನಲ್ಲಿ ಹೆಚ್ಚು ಮತದಾರರು ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಲಾಗಿದೆ. ಡೆಹ್ರಿಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ನಕಲಿ ಹೆಸರುಗಳನ್ನು ಅಳಿಸಿಹಾಕಲಾಗಿದೆ.
ಎಲ್ಲಾ 243 ಸ್ಥಾನಗಳ ಪೈಕಿ ಪ್ರತಿ ಸ್ಥಾನದಲ್ಲಿ ಸರಾಸರಿ 6,882.77 ಮತದಾರರನ್ನು ಅಳಿಸಲಾಗಿದೆ. ಮಹಾಘಟಬಂಧನ ಹಿಡಿತದಲ್ಲಿರುವ ಸ್ಥಾನಗಳಲ್ಲಿ ಸರಾಸರಿ 6,660.36 ಮತ್ತು ಬಿಜೆಪಿಯ ಮಿತ್ರ ಪಕ್ಷ ಜೆಡಿ(ಯು) ಹಿಡಿತದಲ್ಲಿರುವ ಕ್ಷೇತ್ರಗಳಲ್ಲಿ ಸರಾಸರಿ 7,130.95 ಮತದಾರರ ಹೆಸರುಗಳನ್ನು ಅಳಿಸಲಾಗಿದೆ. 65 ಕ್ಷೇತ್ರಗಳಲ್ಲಿ, ಕಳೆದ ಚುನಾವಣೆಯಲ್ಲಿನ ಗೆಲುವಿನ ಅಂತರಕ್ಕಿಂತ ಅಧಿಕ ಮತದಾರರ ಹೆಸರನ್ನು ಅಳಿಸಿಹಾಕಲಾಗಿದೆ.





