ದೆಹಲಿಯಲ್ಲಿ ನಡೆದ AI ಶೃಂಗಸಭೆಯಲ್ಲಿ ಭಾರತ-ಅಮೆರಿಕ ವಾಣಿಜ್ಯ ಒಪ್ಪಂದದ ವಿರುದ್ಧವಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದು ಬಿಜೆಪಿ ಇದನ್ನು ತೀವ್ರವಾಗಿ ಖಂಡಿಸಿದೆ. ಶನಿವಾರ ಮುಂಬೈನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ್ದಾರೆ.
ರಾಹುಲ್ ಗಾಂಧಿ ಬೆಳಿಗ್ಗೆ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, 2014ರ ಮಾನನಷ್ಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ನೆರೆಯ ಥಾಣೆ ಜಿಲ್ಲೆಯ ಭಿವಾಂಡಿಗೆ ರಸ್ತೆ ಮೂಲಕ ಪ್ರಯಾಣಿಸಿದ್ದಾರೆ. ಈ ವೇಳೆ ಬಿಜೆಪಿ ಬೆಂಬಲಿಗರ ಗುಂಪೊಂದು ಮುಲುಂಡ್ ಟೋಲ್ ಬಳಿಕ ಪ್ರತಿಭಟನೆ ನಡೆಸಿ ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿದೆ. ಕಪ್ಪು ಬಾವುಟ ಪ್ರದರ್ಶಿಸಿದೆ. ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಇದನ್ನು ಓದಿದ್ದೀರಾ? ವಯನಾಡು | ಪ್ರಿಯಾಂಕಾ ಗಾಂಧಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಸಿಪಿಐಎಂ ಕಾರ್ಯಕರ್ತರು
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪ್ರತಿಭಟನಾಕಾರರು, “ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವನ್ನು ನಿರಂತರವಾಗಿ ವಿರೋಧಿಸುತ್ತಾರೆ. ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯವಾದರೂ ವಿರೋಧಿಸುತ್ತಾರೆ. ಈ ಮೂಲಕ ಅವರು ದೇಶದ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದ್ದಾರೆ. ಅದಕ್ಕಾಗಿಯೇ ನಾವು ಅವರ ವಿರುದ್ಧ ಪ್ರತಿಭಟಿಸಿದೆವು” ಎಂದು ಹೇಳಿಕೊಂಡಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ನಾಯಕ ಸಚಿನ್ ಸಾವಂತ್, “ಬಿಜೆಪಿ ನಡೆಸಿರುವ ಈ ಪ್ರತಿಭಟನೆಯು ಪ್ರಮುಖ ರಾಷ್ಟ್ರೀಯ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ. ಅಮೆರಿಕ-ಭಾರತ ಒಪ್ಪಂದದ ವಿಚಾರದಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡಲು ಆಗದ ಕಾರಣ ಈಗ ಆಡಳಿತ ಪಕ್ಷವು ಬೇರೆಯೇ ನಾಟಕವಾಡುತ್ತಿದೆ” ಎಂದು ದೂರಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂದೆ ಬಿಜೆಪಿಯ “ಶರಣಾಗತಿ” ಆಗಿದೆ ಎಂದು ಹೇಳಿದ ಅವರು, ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಸಂಬಂಧಿಸಿದ ವಿಚಾರಗಳ ಬಗ್ಗೆ ಸ್ಪಷ್ಟನೆಯನ್ನೂ ಕೋರಿದರು. “ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಮಹಾರಾಷ್ಟ್ರ ಮತ್ತು ದೇಶದ ರೈತರ ಹಿತಾಸಕ್ತಿಗಳನ್ನು ಪಣಕ್ಕಿಡುವ ಮೂಲಕ ಬಿಜೆಪಿ ರೈತರ ಭವಿಷ್ಯವನ್ನು ರಾಜಿ ಮಾಡಿಕೊಂಡಿದೆ” ಎಂದು ಆರೋಪಿಸಿದರು.
ಇನ್ನು ಎನ್‌ಸಿಪಿ(ಶರದ್ ಪವಾರ್ ಬಣ) ಕೂಡ ‘ಕಪ್ಪು ಧ್ವಜ’ ಪ್ರತಿಭಟನೆಯನ್ನು ಖಂಡಿಸಿದೆ. “ರಾಹುಲ್ ಗಾಂಧಿ ದೇಶದ ಅತ್ಯುನ್ನತ ಸದನದಲ್ಲಿ ವಿರೋಧ ಪಕ್ಷದ ನಾಯಕರಾಗಿ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು. ಅವರಿಗೆ ಈ ರೀತಿ ಕಪ್ಪು ಬಾವುಟಗಳನ್ನು ತೋರಿಸುವುದು ಮೂಲಭೂತವಾಗಿ ತಪ್ಪು. ಪ್ರಜಾಪ್ರಭುತ್ವವು ಈ ರೀತಿ ಕಾರ್ಯನಿರ್ವಹಿಸಬಾರದು” ಎಂದು ಎನ್‌ಸಿಪಿ ನಾಯಕ ಮನೋಜ್ ಪ್ರಧಾನ್ ಅಭಿಪ್ರಾಯಿಸಿದ್ದಾರೆ.





