ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಯಾವೆಲ್ಲ ಪಂಚಾಯತಿಗಳಲ್ಲಿ ಬಿಜೆಪಿ ಸೋಲುತ್ತದೆಯೋ, ಆ ಪಂಚಾಯತಿಗಳಿಗೆ ಸರ್ಕಾರಿ ಯೋಜನೆಗಳು ದೊರೆಯುವುದಿಲ್ಲ. ಎಲ್ಲ ರೀತಿಯ ಯೋಜನೆಗಳನ್ನು ತಡೆಹಿಡಿಯಲಾಗುತ್ತದೆ ಎಂದು ಮತದಾರರಿಗೆ ಬಿಜೆಪಿ ಸಚಿವ ಬೆದರಿಕೆ ಹಾಕಿದ್ದಾರೆ. ಅವರ ಹೇಳಿಕೆಯು ರಾಜಕೀಯ ವಿವಾದ ಹುಟ್ಟುಹಾಕಿದೆ.
ಅರುಣಾಚಲ ಪ್ರದೇಶದಲ್ಲಿ ಡಿಸೆಂಬರ್ 15ರಂದು ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿದೆ. ಅರುಣಾಚಲದ ಲೋವರ್ ದಿಬಾಂಗ್ ವ್ಯಾಲಿ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿರುವ ಅಲ್ಲಿನ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಓಜಿಂಗ್ ಟೇಸಿಂಗ್ ಅವರು ಮತದಾರರಿಗೆ ಬೆದರಿಕೆ ಹಾಕಿದ್ದಾರೆ.
“ನೆನಪಿರಲಿ, ನಾನು ಹೇಳಿದ್ದನ್ನೇ ಮಾಡುತ್ತೇನೆ. ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಸೋತರೆ, ಸೋತ ಪಂಚಾಯತಿಗಳಿಗೆ ಸರ್ಕಾರಿ ಯೋಜನೆಗಳು ದೊರೆಯುವುದಿಲ್ಲ” ಎಂದಿದ್ದಾರೆ. ಅವರ ಹೇಳಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅವರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್, ‘ಸಚಿವರ ಹೇಳಿಕೆ ಅಸಂಬದ್ಧ ಮತ್ತು ಕಾನೂನುಬಾಹಿರ’ ಎಂದು ಕಿಡಿಕಾರಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
“ಸಚಿವರ ಹೇಳಿಕೆಯು ಮತದಾರರಿಗೆ ನೇರ ಬೆದರಿಕೆವೊಡ್ಡುತ್ತದೆ. ಅಧಿಕಾರ ದುರುಪಯೋಗ ಮತ್ತು ಬೆದರಿಕೆಯ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಸಚಿವರು ಯತ್ನಿಸಿದ್ದಾರೆ. ಅವರ ಹೇಳಿಕೆಯು ಮಾದರಿ ನೀತಿ ಸಂಹಿತೆ ಮತ್ತು 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123ಅನ್ನು ಉಲ್ಲಂಘಿಸುತ್ತದೆ” ಎಂದು ಕಾಂಗ್ರೆಸ್ ಹೇಳಿದೆ.




