ಹಾಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ‘ಅಖಿಲ ಕರ್ನಾಟಕ ಡಾ. ಜಿ ಪರಮೇಶ್ವರ್ ಯುವ ಸೇನೆ’ ಕಾರ್ಯಕರ್ತರು ರಕ್ತದಲ್ಲಿ ಪತ್ರ ಬರೆದಿದ್ದಾರೆ. ಪತ್ರವನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ಕಳಿಸಿದ್ದಾರೆ.
ಅಖಿಲ ಕರ್ನಾಟಕ ಡಾ.ಜಿ ಪರಮೇಶ್ವರ್ ಯುವ ಸೇನೆ ರಾಜ್ಯಾಧ್ಯಕ್ಷ ನಗುತಾ ರಂಗನಾಥ ನೇತೃತ್ವದಲ್ಲಿ ಸಂಘಟನೆಯ ಕಾರ್ಯಕರ್ತರು ರಕ್ತದಲ್ಲಿ ಪತ್ರ ಬರೆದಿದ್ದಾರೆ. ಪತ್ರಕ್ಕೆ ನೂರಾರು ಕಾರ್ಯಕರ್ತರು ರಕ್ತದಲ್ಲಿಯೇ ಸಹಿ ಹಾಕಿದ್ದಾರೆ. ತುಮಕೂರಿನ ಟೌನ್‌ಹಾಲ್ ಬಳಿಯ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ, ಪತ್ರವನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ಪೋಸ್ಟ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಗುತಾ ರಂಗನಾಥ್, “ಪರಮೇಶ್ವರ್ ಅವರು 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಎರಡು ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಉಪಮುಖ್ಯಮಂತ್ರಿ, ಗೃಹ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ರೇಷ್ಮೆ ಇನ್ನಿತರ ಇಲಾಖೆಗಳನ್ನು ನಿಭಾಯಿಸಿದ್ದಾರೆ. ಅವರ ಪಕ್ಷ ನಿಷ್ಠೆ ಮತ್ತು ಕಾರ್ಯವೈಖರಿಯನ್ನು ಗುರುತಿಸಿ, ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
“ಭಾರತ ಸ್ವಾತಂತ್ರ್ಯಗೊಂಡು 76 ವರ್ಷ ಕಳೆದಿವೆ. ಆದರೂ, ಕರ್ನಾಟಕದಲ್ಲಿ ಈವರೆಗೆ ದಲಿತ ಸಮುದಾಯದಿಂದ ಯಾರೊಬ್ಬರು ಮುಖ್ಯಮಂತ್ರಿ ಆಗಲು ಸಾಧ್ಯವಾಗಿಲ್ಲ.ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಲಭಿಸಿಲ್ಲ. 2013ರಲ್ಲಿ ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಹುದ್ದೆಯನ್ನು ಪರಮೇಶ್ವರ್ ತ್ಯಾಗ ಮಾಡಿದ್ದಾರೆ. ಅವರ ನಿಷ್ಠೆ, ಬದ್ದತೆ, ಕೊಡುಗೆಗಳನ್ನು ಗೌರವಿಸಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ನಮ್ಮ ಆಗ್ರಹವನ್ನು ನಿರ್ಲಕ್ಷಿಸಿದರೆ, ಮುಂದಿನ ದಿನಗಳಲ್ಲಿ ದಲಿತ ಸಮುದಾಯವು ಕಾಂಗ್ರೆಸ್ ವಿರುದ್ಧ ನಿಲ್ಲುತ್ತದೆ” ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ, ನಗರಸಭೆ ಮಾಜಿ ಉಪಾಧ್ಯಕ್ಷ ವಾಲೆ ಚಂದ್ರಯ್ಯ, ಕೆಪಿಸಿಸಿ ಯುವ ಕಾಂಗ್ರೆಸ್ ಘಟಕದ ತುಮಕೂರು ಜಿಲ್ಲಾ ಕಾನೂನು ವಿಭಾಗದ ಮುಖ್ಯಸ್ಥ ಕೋಕಿಲ್ ಸಂದೀಪ, ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೇನೆ ಉಪಾಧ್ಯಕ್ಷ ಭೀಮಸಂದ್ರ ಮಹೇಶ್, ರಾಜ್ಯ ಕಾರ್ಯಾಧ್ಯಕ್ಷ ಆದೇಶ್ ಸಿ.ಎಂ., ಗುಲ್ಬರ್ಗ ಜಿಲ್ಲಾಧ್ಯಕ್ಷ ಶ್ರೀಧರ್ಡಿ .ಇಂಗನಕಲ್ಲು, ತುಮಕೂರು ಜಿಲ್ಲಾ ಉಪಾಧ್ಯಕ್ಷ ಗೋವಿಂದರಾಜು, ಕಾಂಗ್ರೆಸ್ ಮುಖಂಡರಾದ ಅರಕೆರೆ ಶಂಕರ್, ಕೊರಟಗೆರೆ ಮಲ್ಲಿಕಾರ್ಜುನ್, ಮೋಹನಕುಮಾರ್, ಹೆಗ್ಗೆರೆ ಕೃಷ್ಣಮೂರ್ತಿ, ಸಿ.ಭಾನುಪ್ರಕಾಶ್, ಛಲವಾದಿ ಶೇಖರ್, ಬಂಡೆಕುಮಾರ್, ನಾಗಮಣಿ, ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ನಾಗಣ್ಣ, ಎನ್.ಕೆ.ನಿಧಿಕುಮಾರ್, ಧರಣೇಂದ್ರ ಕುಮಾರ್ ಸೇರಿದಂತೆ ಹಲವರು ಇದ್ದರು.




