ಮೋದಿ ಅವರು ರಾಜಿ ಮಾಡಿಕೊಂಡಿದ್ದಾರೆ. ಅವರು ಭಯ ಪಡುತ್ತಿದ್ದಾರೆ. ಸಂಸತ್ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರತಿಪಕ್ಷ ನಾಯಕನಿಗೆ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಲು ಅವಕಾಶ ನಿರಾಕರಣೆ ಮಾಡಲಾಗಿದೆ. ಇದು ಜನತಂತ್ರಕ್ಕೆ ಕಳಂಕ.
ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದೆ. ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾಡಿದ ಭಾಷಣದ ಮೇಲೆ ವಂದನಾ ಚರ್ಚೆಗಳು ನಡೆಯುತ್ತಿವೆ. ಸೋಮವಾರ, ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ರಾಷ್ಟ್ರಪತಿ ಭಾಷಣದ ಮೇಲೆ ಮಾತನಾಡಲಾರಂಭಿಸಿದ್ದರು. ಆದರೆ, ಅವರ ಭಾಷಣವನ್ನು ತಡೆಯಲಾಯಿತು. ಅವರಿಗೆ ಅವಕಾಶ ನಿರಾಕರಿಸಲಾಯಿತು. ವಿಪಕ್ಷ ನಾಯಕರಿಗೆ ಲೋಕಸಭೆಯಲ್ಲಿ ಅವಕಾಶ ನಿರಾಕರಿಸುವ ಲೋಕಸಭಾ ಸ್ಪೀಕರ್ ಮತ್ತು ಸರ್ಕಾರದ ಈ ಧೋರಣೆಯು ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಲಿದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ. ಇದು ಜನತಂತ್ರದ ಮೂಲಭೂತ ತತ್ವಗಳು, ವಿರೋಧ ಪಕ್ಷದ ಸ್ವತಂತ್ರ ಧ್ವನಿ ಹಾಗೂ ಸಂಸತ್ತಿನ ನಿಷ್ಪಕ್ಷತೆಗೆ ಹಾನಿಯೆಂದು ಬಣ್ಣಿಸಿದ್ದಾರೆ.
ಅಂದಹಾಗೆ, ಲೋಕಸಭೆಯಲ್ಲಿ ಭಾಷಣ ಆರಂಭಿಸಿದ ರಾಹುಲ್ ಗಾಂಧಿ, ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ Four stars of destiny’ಯನ್ನು ಉಲ್ಲೇಖಿಸಿ, 2020ರ ಭಾರತ-ಚೀನಾ ಗಡಿ ಸಂಘರ್ಷದ ವಿಷಯವನ್ನು ಎತ್ತಿದರು. ಇದರಲ್ಲಿ ಚೀನಾ ಸೈನಿಕರ ದಾಳಿ, ಚೀನಾದಿಂದ ಭಾರತದ ಭೂಮಿಯ ಅತಿಕ್ರಮಣ, ಭಾರತ ಸರ್ಕಾರದ ಪ್ರತಿಕ್ರಿಯೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರಗಳ ಬಗ್ಗೆ ಗಂಭೀರ ಆರೋಪಗಳನ್ನು ಚರ್ಚೆಗೆ ಎಳೆದರು. ಆದರೆ, ರಾಹುಲ್ ಗಾಂಧಿ ಅವರು ಭಾರತ-ಚೀನಾ ಗಡಿ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ, ಬಿಜೆಪಿ ಮತ್ತು ಎನ್‌ಡಿಎ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸ್ಪೀಕರ್ ಓಂ ಬಿರ್ಲಾ ಅವರು ಅಪ್ರಕಟಿತ ಪುಸ್ತಕದ ಉಲ್ಲೇಖಕ್ಕೆ ಅನುಮತಿ ನಿರಾಕರಿಸಿ ರೂಲಿಂಗ್ ನೀಡಿದರು.
ಮರುದಿನ ರಾಹುಲ್ ಗಾಂಧಿ ಅವರು ಆ ಲೇಖನವನ್ನು ಪ್ರಮಾಣೀಕರಿಸಿ ಸಲ್ಲಿಸಿದರೂ, ಅವರ ಭಾಷಣವನ್ನು ಮುಂದುವರಿಸಲು ಅವಕಾಶ ನೀಡಲಾಗಲಿಲ್ಲ. ಸರ್ಕಾರದ ನಡೆಯನ್ನು ವಿಪಕ್ಷ ನಾಯಕರು ಖಂಡಿಸಿದ್ದಾರೆ. “ಈ ನಕಲಿ ರಾಷ್ಟ್ರೀಯತಾವಾದಿ ಸರ್ಕಾರವು ತಮ್ಮ ಅಸಮರ್ಥತೆಯ ಸತ್ಯ ಹೊರಬರಬಹುದೆಂದು ಹೆದರುತ್ತಿದೆ. ವಿಪಕ್ಷ ನಾಯಕರ ಬಾಯಿ ಮುಚ್ಚಿಸಲು ಸಂಸತ್ ನಿಯಮಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ” ಎಂದು ಆರೋಪಿಸಿದ್ದಾರೆ.
ಸಂಸತ್ತಿನ ಹೊರಗೆ ಮಾತನಾಡಿದ ರಾಹುಲ್ ಗಾಂಧಿ ಕೂಡ, “ಸಂಸತ್ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರತಿಪಕ್ಷ ನಾಯಕನಿಗೆ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಲು ಅವಕಾಶ ನಿರಾಕರಣೆ ಮಾಡಲಾಗಿದೆ. ಇದು ಸಂಸತ್ತಿನ ನೀತಿ-ನಿಯಮಗಳ ಉಲ್ಲಂಘಟನೆಯಾಗಿದೆ. ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ಮಾತನಾಡಲು ಉದ್ದೇಶಪೂರ್ವಕವಾಗಿ ತಡೆಯಲಾಗುತ್ತಿದೆ. ನರವಾಣೆ ಅವರ ಪುಸ್ತಕ, ಎಪ್ಸ್ಟೀನ್ ಫೈಲ್ಸ್ ಮತ್ತು ಸುಂಕಗಳ ವಿಷಯದಲ್ಲಿ ಭಾರತವು ಬಿಕ್ಕಟ್ಟಿಗೆ ಸಿಲುಕಿದೆ. ರೈತರ ಶ್ರಮವನ್ನು, ರಕ್ತವನ್ನು ಮಾರಾಟ ಮಾಡಲಾಗಿದೆ. ದೇಶವನ್ನೇ ಮಾರಲಾಗಿದೆ. ಅದನ್ನು ಚರ್ಚಿಸಲು ನನಗೆ ಅವಕಾಶ ಕೊಡುತ್ತಿಲ್ಲ. ಇದು ಜನತಂತ್ರಕ್ಕೆ ಕಳಂಕ. ಮೋದಿ ಅವರು ರಾಜಿ ಮಾಡಿಕೊಂಡಿದ್ದಾರೆ. ಅವರು ಭಯಪಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಸಂಸತ್ತಿನಲ್ಲಿ ಯಾವುದೇ ಒಂದು ವಿಚಾರ ಚರ್ಚೆಗೆ ಬಂದರೆ, ಪ್ರಶ್ನೆಗಳನ್ನು ಎತ್ತಿದರೆ, ಅದಕ್ಕೆ ಉತ್ತರಿಸಬೇಕಾದದ್ದು, ತಮ್ಮ ನಿಲುವುಗಳನ್ನು ಸ್ಪಷ್ಟವಾಗಿ ಹೇಳಬೇಕಾದ್ದು ಆಡಳಿತ ಪಕ್ಷ ಅಥವಾ ಸರ್ಕಾರದ ಕರ್ತವ್ಯ. ಆದರೆ, ಮೋದಿ ಸರ್ಕಾರವು ಪ್ರಶ್ನೆಗಳನ್ನೇ ಹತ್ತಿಕ್ಕುವ, ಪ್ರಶ್ನೆಗಳು ಮುಂದೆ ಬಾರದಂತೆ ಕಡೆಯುವ ದುಷ್ಕೃತ್ಯವನ್ನು ಕಳೆದ 11 ವರ್ಷಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಇಡೀ ದೇಶದ ನಾಗರಿಕರು ಮತ್ತು ವಿಪಕ್ಷಗಳನ್ನು ಪ್ರತಿನಿಧಿಸುವ ವಿರೋಧ ಪಕ್ಷದ ನಾಯಕನಿಗೇ ಮಾತನಾಡಲು ಅವಕಾಶ ಕೊಡದೆ, ವಿಪಕ್ಷಗಳ ಬಾಯಿ ಮುಚ್ಚಿಸುತ್ತಿದ್ದಾರೆ. ಪ್ರಶ್ನೆಗಳು ಮತ್ತು ಸತ್ಯಗಳನ್ನು ಮರೆಮಾಚಿ, ಆಳುವ ಪಕ್ಷದ ರಕ್ಷಣೆಗೆ ಇಳಿದಿದ್ದಾರೆ. ಇದು ನಿಜಕ್ಕೂ, ಸಂಸತ್ತಿನ ನಿಯಮಾವಳಿಗ ಸ್ಪಷ್ಟ ಉಲ್ಲಂಘನೆ.
ಸ್ಪೀಕರ್ ಸಂಸತ್ತಿನ ನಿಷ್ಪಕ್ಷ ಅಧ್ಯಕ್ಷರಾಗಿರಬೇಕು. ಆದರೆ, ಅವರು ಆಡಳಿತ ಪಕ್ಷದ ಒತ್ತಡದಿಂದ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇದು, ಸಂಸತ್ತಿನ ವಿಶ್ವಾಸಾರ್ಹತೆಯನ್ನು ಕುಸಿಯುವಂತೆ ಮಾಡಿದೆ. ರಾಷ್ಟ್ರೀಯ ಭದ್ರತೆ ಪ್ರಮುಖ ಅಂಶದ ಕುರಿತ ಚರ್ಚೆಯನ್ನು ತಡೆಯುವುದು ಪಾರದರ್ಶಕತೆಯ ಕೊರತೆಯನ್ನು ತೋರಿಸುತ್ತದೆ.
ಅಕ್ಕ-ಪಕ್ಕದ ದೇಶಗಳನ್ನು ಒಳಗೊಂಡು ಅಖಂಡ ಭಾರತ ನಿರ್ಮಿಸುತ್ತೇವೆಂದು ಬೊಬ್ಬಿರಿಯುವ ಬಿಜೆಪಿಗರು ನಮ್ಮದೇ ದೇಶವನ್ನು ನೆರೆಯ ರಾಷ್ಟ್ರವೊಂದು ಅತಿಕ್ರಮಣ ಮಾಡಿದ್ದರೂ, ಮೌನವಾಗಿದ್ದಾರೆ. ನೆರೆಯ ರಾಷ್ಟ್ರದ ಅತಿಕ್ರಮಣ ಮತ್ತು ದೇಶದ ಭದ್ರತೆಯ ಕುರಿತಾದ ಪ್ರಶ್ನೆ ಮತ್ತು ಚರ್ಚೆಗೂ ಅವಕಾಶವಿಲ್ಲದಂತೆ ದಮನಿಸುತ್ತಿದ್ದಾರೆ. ಪ್ರಶ್ನೆಗಳನ್ನು ದಮನಿಸಿ, ಭಾರತವನ್ನು ‘ವಿಶ್ವಗುರು’ ಎನ್ನುತ್ತಿದ್ದಾರೆ.
ಪ್ರಧಾನಿ ಮೋದಿ ಅವರು ಭಾರತದ ವೇದಿಕೆಗಳಲ್ಲಿ ನಿಂತು ನಮ್ಮ ರಾಷ್ಟ್ರವು ‘ವಿಶ್ವಗುರು’ ಎಂದೂ, ವಿದೇಶಿ ವೇದಿಕೆಗಳಲ್ಲಿ ನಿಂತು ಭಾರತವು ‘ಜನತಂತ್ರದ ಜನನಿ’ ಎಂದು ಬಡಾಯಿ ಬಿಡುತ್ತಿದ್ದಾರೆ. ಆದರೆ, ಇದೇ ಮೋದಿ ಸರ್ಕಾರದ ಆಡಳಿತದಲ್ಲಿ ಭಾರತದ ಸಂಸತ್ತು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿತ ಕಾಣುತ್ತಿವೆ.
ಅಂತರರಾಷ್ಟ್ರೀಯ ಸಂಸ್ಥೆಗಳಾದ ಫ್ರೀಡಮ್ ಹೌಸ್ ಮತ್ತು ವಿ-ಡೆಮ್ ಇನ್‌ಸ್ಟಿಟ್ಯೂಟ್ ವಿಶ್ಲೇಷಣೆಯು, “ಮೋದಿ ಆಡಳಿತದಲ್ಲಿ ಭಾರತವು ‘ಎಲೆಕ್ಟೋರಲ್ ಆಟೋಕ್ರಸಿ’ಯಾಗಿ ಮಾರ್ಪಟ್ಟಿದೆ. ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ವಿರೋಧ ಪಕ್ಷದ ಹಕ್ಕುಗಳು ಹಾಗೂ ಪತ್ರಿಕಾ ಸ್ವತಂತ್ರ್ಯವು ಕುಸಿಯುತ್ತಿವೆ” ಎಂದು ಹೇಳಿದೆ.
ಈ ಲೇಖನ ಓದಿದ್ದೀರಾ?: ಮೋದಿ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕಾಯ್ದೆಗೆ ಹೆದರಿದ್ದೇಕೆ?
ಸಂಸತ್ತಿನಲ್ಲಿ ಮೋದಿ ಸರ್ಕಾರವು ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸುತ್ತಿದೆ. ಸಂಸತ್ತಿನ ಕಾರ್ಯ-ಕಲಾಪಗಳೇ ಸರ್ವಾಧಿಕಾರಿ ಧೋರಣೆಗೆ ಕನ್ನಡಿಯನ್ನೂ ಹಿಡಿದಿವೆ. 2014ರಲ್ಲಿ ಮೋದಿ ಪ್ರಧಾನಿಯಾಗುವ ಮೊದಲು, ಸಂಸತ್ತಿನಲ್ಲಿ ಮಂಡನೆಯಾಗುತ್ತಿದ್ದ ಮಸೂದೆಗಳ ಪೈಕಿ, ಸರಾಸರಿ 71%ಗೂ ಹೆಚ್ಚು ಮಸೂದೆಗಳು ಸಂಸದೀಯ ಸಮಿತಿಯ ಪರಿಶೀಲನೆಗೆ ಒಳಗಾಗುತ್ತಿದ್ದವು. ಆದರೆ, ಮೋದಿ ಆಡಳಿತದ ಮೊದಲ ಅವಧಿಯಲ್ಲಿ ಇದು 25%ಗೂ, ಎರಡನೇ ಅವಧಿಯಲ್ಲಿ 13%ಗೂ ಇಳಿದಿದೆ. ಮೂರನೇ ಅವಧಿಯಲ್ಲಿ ಕೇಂದ್ರ ಸರ್ಕಾರವು ಮತ್ತಷ್ಟು ಸರ್ವಾಧಿಕಾರಿಯಾಗಿ ವರ್ತಿಸುತ್ತಿದೆ. ಪರಿಣಾಮ, ಮಸೂದೆಗಳ ಕುರಿತು ಸಂಸತ್ತಿನ ಚರ್ಚೆಗಳು ಕಡಿಮೆಯಾಗಿವೆ. ಸರ್ಕಾರದ ನಿರ್ಧಾರಗಳು ಏಕಪಕ್ಷೀಯವಾಗಿ ಹೊರಬರುತ್ತಿವೆ. ಬಿಜೆಪಿ ಆಡಳಿತವು ಸಂಸತ್ತನ್ನು ದುರ್ಬಲಗೊಳಿಸಿ, ಕಾರ್ಯಾಂಗದ ಕೇಂದ್ರೀಕರಣವನ್ನು ಹೆಚ್ಚಿಸಿದೆ.
ಆದ್ದರಿಂದಲೇ, ವಿಮರ್ಶಕರು, ಸಾಮಾಜಿಕ ಕಾರ್ಯಕರ್ತರು ಮೋದಿ ಆಡಳಿತವನ್ನು ‘ಅಘೋಷಿತ ತುರ್ತುಪರಿಸ್ಥಿತಿ’ ಎಂದು ಕರೆದಿದ್ದಾರೆ. ಕೇಂದ್ರ ಸರ್ಕಾರವು ಬುಲ್ಡೋಜರ್ ರಾಜಕೀಯ ಮತ್ತು ದ್ವೇಷ ಭಾಷಣವನ್ನು ಹೆಚ್ಚಿಸಿದೆ. ಈ ಕಾರಣಕ್ಕಾಗಿಯೇ, ಮೋದಿ ಆಡಳಿತವನ್ನು ‘ಪ್ರಜಾತಾಂತ್ರಿಕ ಸರ್ವಾಧಿಕಾರ’ ಎಂದು ಬಣ್ಣಿಸಲಾಗಿದೆ.
ಸಂಸತ್ತಿನಲ್ಲಿ ವಿರೋಧ ಪಕ್ಷವನ್ನು ಮೌನಗೊಳಿಸುವ ಪ್ರಯತ್ನಗಳು, ಸಂಸದರ ಅಮಾನತುಗಳು ಸಂಸತ್ತನ್ನು ಕೇವಲ ಆಡಳಿತ ಪಕ್ಷದ ಧ್ವನಿಯಾಗಿ ಪರಿವರ್ತಿಸುವ ಕೃತ್ಯವಾಗಿ ಕಾಣುತ್ತಿವೆ. ನಿಜವಾದ ಜನತಂತ್ರದಲ್ಲಿ ವಿರೋಧ ಪಕ್ಷಕ್ಕೆ ಸ್ವತಂತ್ರವಾಗಿ ಮಾತನಾಡುವ ಹಕ್ಕು ಮತ್ತು ಸ್ವಾತಂತ್ರ್ಯವಿರಬೇಕು. ಆದರೆ, ಮೋದಿ ಮತ್ತು ಬಿಜೆಪಿಗರು ಸಂಸತ್ತಿನ ಮೂಲಭೂತ ನಿಯಮಗಳನ್ನೇ ಬಡುಮೇಲು ಮಾಡಿದ್ದಾರೆ. ಹೀಗಿರುವಾಗ ‘ವಿಶ್ವಗುರು’ ಮತ್ತು ‘ಜನತಂತ್ರದ ಜನನಿ’ ಎಂದು ಬಡಾಯಿ ಬಿಡುವ ಅವರ ಹೆಗ್ಗಳಿಕೆಗೆ ಅರ್ಥವುಂಟೇ?





